ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಸಂಭ್ರಮಕೆ ಮೇಕಪ್‌ ಆರ್ಟ್‌

Published 21 ಅಕ್ಟೋಬರ್ 2023, 0:17 IST
Last Updated 21 ಅಕ್ಟೋಬರ್ 2023, 0:17 IST
ಅಕ್ಷರ ಗಾತ್ರ

ದಸರಾ-ವಿಜಯದಶಮಿ ಭಾರತೀಯ ಮಹಿಳೆಯರು ಸಡಗರದಿಂದ ಪಾಲ್ಗೊಳ್ಳುವ ಹಬ್ಬ. ಆಡಂಬರಕ್ಕಿಂತ ಸಂಭ್ರಮವೇ ಪ್ರಧಾನ. ಹೆಣ್ಣುಮಕ್ಕಳ ಸಂಭ್ರಮ ಎಂದರೆ ಮೊದಲು ವ್ಯಕ್ತವಾಗುವುದೇ ಅವರ ಉಡುಗೆ–ತೊಡುಗೆ ಮತ್ತು ಅಲಂಕಾರದಲ್ಲಿ. ನಿಮಗೆ ಸಹಾಯಕವಾಗಬಲ್ಲ ಕೆಲವು ಸರಳ ದಸರಾ ಮೇಕಪ್ ಸಲಹೆಗಳು ಇಲ್ಲಿವೆ:

ಮೊದಲ ಹೆಜ್ಜೆಯಾಗಿ ಮುಖಾರವಿಂದವನ್ನು ಸ್ವಚ್ಛಗೊಳಿಸಿ, ಮಾಯಿಶ್ಚರೈಸರ್‌ ಮತ್ತು ಪ್ರೈಮರ್‌ನಿಂದ ಮುಖವನ್ನು ಟೋನಿಂಗ್‌ ಮಾಡಿ ವಿಮೇಕಪ್‌ಗೆ ಅಣಿಗೊಳಿಸಿ. ಇದು ಮೇಕ್ಅಪ್ ಹೊಂದಿಕೊಳ್ಳಲು ಮತ್ತು ದಿನವಿಡೀ ಉಳಿಯಲು ಸಹಾಯ ಮಾಡುತ್ತದೆ. 

ಎರಡನೇ ಹೆಜ್ಜೆಯಾಗಿ ಮುಖದ ಕಾಂತಿಯನ್ನು ಹೆಚ್ಚಿಸುವ ಫೌಂಡೇಶನ್‌ ಆಯ್ಕೆ. ಅದು ನಿಮ್ಮ ಮೈಬಣ್ಣಕ್ಕೆ ಹೊಂದುವಂತಿರಬೇಕು. ನಿಮಗೆ ಆಯ್ಕೆ ಕಷ್ಟವೆನಿಸಿದಲ್ಲಿ ಮೇಕಪ್‌ ಆರ್ಟಿಸ್ಟ್‌ ಸಹಾಯ ಪಡೆಯಬಹುದು. ಆನ್‌ಲೈನ್‌ನಲ್ಲಿಯೂ, ಸ್ಟೋರ್‌ಗಳಲ್ಲಿಯೂ ನಿಮಗೆ ಫೌಂಡೇಶನ್‌ ಆಯ್ಕೆ ಮಾಡಿಕೊಡುವ ಸೌಲಭ್ಯಗಳಿರುತ್ತವೆ. ಫೌಂಡೇಶನ್‌ ಅನ್ನು ಬಿಬಿ ಕ್ರೀಮ್‌ ಅಥವಾ ಮಾಯಿಶ್ಚರೈಸರ್ ಜೊತೆಗೆ ಚೆನ್ನಾಗಿ ಮಿಕ್ಸ್‌ ಮಾಡಿ ಒಂದೇ ಪ್ರಮಾಣದಲ್ಲಿ ಹಚ್ಚಿಕೊಳ್ಳಿ.

ಮೇಕಪ್‌ನ ಜಾದೂ ಅಡಗಿರುವುದೇ ಲಿಪ್‌ಸ್ಟಿಕ್‌ನಲ್ಲಿ. ನಿಮ್ಮ ಇಡೀ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುವ ಗಮ್ಮತ್ತು ಲಿಪ್‌ಸ್ಟಿಕ್‌ನಲ್ಲಿದೆ. ನಿಮ್ಮ ಆಸಕ್ತಿ, ಅಭಿರುಚಿ, ದಿರಿಸು ಮತ್ತು ವೈಯಕ್ತಿಕ ಶೈಲಿಯನ್ನು ಅವಲಂಬಿಸಿ ಲಿಪ್‌ಸ್ಟಿಕ್‌ ಆಯ್ದುಕೊಳ್ಳಿ. ಗಾಢ ಕೆಂಪು ಬಣ್ಣದ ಲಿಪ್‌ಸ್ಟಿಕ್‌ ಕಾಲಾತೀತವಾಗಿದ್ದು, ಆತ್ಮವಿಶ್ವಾಸವನ್ನು ಸಂಕೇತಿಸುತ್ತದೆ. ಇದು ಸಾಂಪ್ರದಾಯಿಕ ಭಾರತೀಯ ಉಡುಗೆಯೊಂದಿಗೆ ಅದ್ಭುತ ಸಾತ್‌ ನೀಡುತ್ತದೆ. ತೆಳುಗುಲಾಬಿ ಲಿಪ್‌ಸ್ಟಿಕ್‌ ಎಲ್ಲಾ ತರದ ದಿರಿಸಿಗೂ, ಎಲ್ಲಾ ವರ್ಣದ ಮಹಿಳೆಯರಿಗೂ ಹೊಂದುತ್ತದೆ. ಲಿಪ್‌ಸ್ಟಿಕ್‌ ಆಯ್ಕೆಯ ಗೊಂದಲವಿರುವವರು ತೆಳುಗುಲಾಬಿ ಲಿಪ್‌ಸ್ಟಿಕ್‌ ಆಯ್ದುಕೊಳ್ಳಬಹುದು. ಕಿತ್ತಳೆ ಬಣ್ಣದ ಲಿಪ್‌ಸ್ಟಿಕ್‌ ಲವಲವಿಕೆಯ ಸಂಕೇತವಾಗಿದ್ದು, ತಿಳಿ ಬಣ್ಣದ ತೊಡುಗೆಗಳ ಜೊತೆಗೂ ಹೊಂದಿಕೊಳ್ಳುತ್ತದೆ. ಹಬ್ಬದ ಉತ್ಸಾಹವನ್ನು ಸಂಕೇತಿಸಲು ಗಾಢ ಕೆಂಪು, ಗಾಢ ಕಂದು, ರಾಯಲ್ ಬ್ಲೂ ಮತ್ತು ಗೋಲ್ಡ್‌ ಬಣ್ಣಗಳನ್ನು ಬಳಸಬಹುದು. ಡಾರ್ಕ್‌ಶೇಡ್‌ನ ಲಿಪ್‌ಸ್ಟಿಕ್‌ ಆದರೆ ಕಂದು ಬಣ್ಣದ ಲಿಪ್‌ ಲೈನರ್‌ ಸೂಕ್ತ.

 ಸಂಜೆ ಅಥವಾ ರಾತ್ರಿಯ ಪೂಜಾ ಕಾರ್ಯಕ್ರಮವಾಗಿರಲಿ ಅಥವಾ ದಾಂಡಿಯಾ ತರದ ಮನರಂಜನಾ ಕಾರ್ಯಕ್ರಮವೇ ಆಗಿರಲಿ. ಹೆಚ್ಚು ಹೆಂಗಳೆಯರು ಸ್ಮೋಕಿ ಐಸ್‌ ಮೇಕಪ್‌ ಇಷ್ಟಪಡುತ್ತಾರೆ. ಇದು ಸಾಂಪ್ರದಾಯಿಕ ಅಥವಾ ಮಾಡರ್ನ್‌ ಎರಡೂ ಉಡುಗೆಗಳಿಗೂ ಮೆರುಗು ನೀಡುವುದು. ಸ್ಮೋಕಿ ಐಸ್‌ ಅಲಂಕಾರ ಆಯ್ದುಕೊಳ್ಳುವಿರಾದರೆ ಲಿಪ್‌ಸ್ಟಿಕ್‌  ತಿಳಿ ಬಣ್ಣದ್ದಾಗಿರಲಿ. 

ಸಾಂಪ್ರದಾಯಿಕ ಉಡುಗೆಗೆ ಐಲೈನರ್‌ ತುಸು ದಪ್ಪವಾಗಿರಲಿ. ರೆಪ್ಪೆಗಳಿಗೆ ಮಸ್ಕರಾದ ಎರಡು ಕೋಟ್‌ ಕೊಡುವುದನ್ನು ಮರೆಯದಿರಿ. ಇಷ್ಟವಿದ್ದರೆ ಕೃತಕ  ಐಲ್ಯಾಶ್‌ಗಳನ್ನೂ ಬಳಸಬಹುದು.

ಇದೆಲ್ಲದರ ಜೊತೆಗೆ ಹುಬ್ಬಿನ ಬಗ್ಗೆ ಗಮನವಿರಲಿ. ಪೆನ್ಸಿಲ್‌ ಸಹಾಯದಿಂದ ನಿಮ್ಮ ಮುಖಕ್ಕೆ ಹೊಂದುವಷ್ಟು ದಪ್ಪ ಹಾಗೂ ಆಕಾರದ ಹುಬ್ಬುಗಳನ್ನು ತೀಡಿಕೊಳ್ಳಿ. 

 ದಸರಾ ಮೇಕಪ್‌ ಪೂರ್ಣವೆನಿಸುವುದು ಹೈಲೈಟರ್‌ನಿಂದ. ರಾತ್ರಿಯ ಕಾರ್ಯಕ್ರಮಗಳಿಗೆ ಮುಖದ ಕಾಂತಿಯನ್ನು ಪ್ರಜ್ವಲಿಸುವಂತೆ ಮಾಡಲು ಹೈಲೈಟರ್‌ ಸಹಾಯ ಮಾಡುತ್ತದೆ. 

ರಾತ್ರಿ ತುಂಬಾ ಹೊತ್ತಿನತನಕ ಮೇಕಪ್‌ ಅದೇ ತಾಜಾತನವನ್ನು ಹೊಂದಿರಬೇಕು ಎನ್ನುವಂತಿದ್ದರೆ ಮೇಕಪ್‌ ಸ್ಪ್ರೇ ಬಳಸುವುದನ್ನು ಮರೆಯಬೇಡಿ. ಇದು ಮೇಕಪ್‌ ಅನ್ನು ಲಾಕ್‌ ಮಾಡುವ ಜೊತೆಗೆ ಹಬ್ಬದ ಸದ್ದುಗದ್ದಲದ ನಡುವೆಯೂ ಮಂಕಾಗದಂತೆ ನೋಡಿಕೊಳ್ಳುತ್ತದೆ. ಊಟ, ಹಾಡು, ಹರಟೆ, ನೃತ್ಯದ ನಂತರ ಮತ್ತೆ ಮತ್ತೆ ತಾಜಾತನವನ್ನು ಪಡೆಯಲು ಆಗಾಗ ಮೇಕಪ್‌ ಸ್ಪ್ರೇ ಬಳಸಬಹುದು. ಮುತುವರ್ಜಿಯಿಂದ ಮೇಕಪ್‌ ಮಾಡಿಕೊಂಡರೆ ಮುಗಿಯಿತು ಎನ್ನುವ ಹಾಗಿಲ್ಲ. ಇದೆಲ್ಲ ಮುಗಿದ ಮೇಲೆ ಕೊನೆಯದಾಗಿ ಮುಖದ ಮೇಲೆ ಆತ್ಮವಿಶ್ವಾಸದ ಟಚಪ್‌ ಕೊಡುವುದನ್ನು ಮರೆಯದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT