ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಲಸೂತ್ರ ಕತ್ತಿಗಲ್ಲ ಕೈಗೆ

Last Updated 3 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಮಂಗಲಸೂತ್ರವನ್ನು ಕತ್ತಿಗೇ ಧರಿಸಬೇಕೇ, ಕೈಗೂ ಧರಿಸಬಹುದು... ಹೌದಲ್ಲ ಎಂದು ನಿಮಗೂ ಅನಿಸಿದರೆ ಆಗೊಮ್ಮೆ ಈಗೊಮ್ಮೆ ಈ ಬದಲಾವಣೆ ಮಾಡಿಕೊಳ್ಳಬಹುದು. ಅದೇ ನನಗಿಷ್ಟ ಎನ್ನುವವರು ಬ್ರೇಸ್‌ಲೆಟ್‌ ರೂಪದಲ್ಲಿ ನಿತ್ಯ ಧರಿಸಬಹುದು! ಕೊರಳಿಗೆ ಮ್ಯಾಚಿಂಗ್‌ ಹಾರ ಧರಿಸುವವರಿಗೆ ಐಡಿಯಾ ಆಹಾ ಎನ್ನುವಂತಿದೆ

ಅನಿಲ್‌ ಕಪೂರ್‌ ಮಗಳು ಸೋನಂ ಕಪೂರ್‌ ಮದುವೆಯಾದ ಹೊಸತರಲ್ಲೇ ಮಂಗಲಸೂತ್ರ ಧರಿಸಿದ ರೀತಿಗಾಗಿ ಟ್ರೋಲ್‌ ಆಗಿದ್ದುದು ನಿಮಗೂ ನೆನಪಿರಬಹುದು. ಮಂಗಲಸೂತ್ರವನ್ನು ಒಂದಷ್ಟು ದಿನ ಕೊರಳಲ್ಲಿ ಧರಿಸಿದ ಸೋನಂ ಇದ್ದಕ್ಕಿದ್ದಂತೆ ಕೈಗೆ ಬ್ರೇಸ್‌ಲೆಟ್‌ನಂತೆ ಧರಿಸಿದ್ದರು! ನೆಟಿಜನರಲ್ಲಿ ಕೆಲವರು ಕೆಂಡಾಮಂಡಲರಾಗಿ, ಮತ್ತೊಂದಷ್ಟು ಮಂದಿ ಹೊಸ ಸ್ಟೈಲ್‌ ಪರಿಚಯಿಸಿದ್ದಕ್ಕೆ ಸಂಪ್ರೀತರಾಗಿ ಪ್ರತಿಕ್ರಿಯಿಸಿದ್ದರು.

ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಯೋಗ ದಿನಾಚರಣೆಯಂದು ಸೂರ್ಯ ನಮಸ್ಕಾರದ ಆಸನ ಮಾಡುವಾಗ ಅವರ ಕೈಲಿದ್ದ ಕರಿಮಣಿ ಬ್ರೇಸ್‌ಲೆಟ್‌ ಎಲ್ಲರ ಗಮನ ಸೆಳೆದಿತ್ತು.ಮಂಗಲಸೂತ್ರವನ್ನು ಕೈಗೂ ಧರಿಸಬಹುದು, ಅದಕ್ಕೆ ಬ್ರೇಸ್‌ಲೆಟ್‌ ರೂಪವನ್ನೂ ನೀಡಬಹುದು ಎಂಬ ಟ್ರೆಂಡ್‌ ಶುರು ಮಾಡಿದ ಹೆಗ್ಗಳಿಕೆ ಈ ಇಬ್ಬರು ನಟಿಯರಿಗೇ ಸಲ್ಲಬೇಕು.

ಇದು ಹೊಸ ಟ್ರೆಂಡ್

ಬ್ರೇಸ್‌ಲೆಟ್‌ ಮಂಗಲಸೂತ್ರ ಈಗ ಹೆಚ್ಚು ಬೇಡಿಕೆಯಲ್ಲಿರುವ ಟ್ರೆಂಡ್‌. ಮಂಗಲಸೂತ್ರ, ಕರಿಮಣಿ, ತಾಳಿಸರ ಎಂದು ಕರೆಸಿಕೊಳ್ಳುವ ಈ ಒಡವೆ ಮದುವೆಯಾದ ಹೆಣ್ಣುಮಕ್ಕಳ ಕೊರಳಿನಲ್ಲಿ ಕಡ್ಡಾಯವಾಗಿ ಇರುತ್ತದೆ. ಮದುವೆಯಾದುದನ್ನು ಒಂದು ಒಡವೆಯ ಮೂಲಕ ಹೇಳಿಕೊಳ್ಳುವ ಕಟ್ಟುಪಾಡು ನಮಗಿಷ್ಟವಿಲ್ಲ ಎನ್ನುವವರು ಮಂಗಲಸೂತ್ರವನ್ನು ಮದುವೆಯಾದ ಮರುದಿನವೇ ಎತ್ತಿಡುವುದೂ ಇದೆ. ‘ಮನೆಯವರ ಖುಷಿಗೆ’ ಎಂಬ ಸಬೂಬು ಹೇಳಿ ತಾಳಿ ಕಾಣಿಸದಂತೆ ಕಾಳಜಿಯಿಂದ ಧರಿಸುವವರೂ ಇದ್ದಾರೆ. ಮದುವೆ ಮಂಟಪದಲ್ಲಿ ಕಟ್ಟಿದ ಮಂಗಲಸೂತ್ರವನ್ನು ಎತ್ತಿಟ್ಟು ಸರಳ ವಿನ್ಯಾಸದ ಮಂಗಲಸೂತ್ರವನ್ನು ಸಾಮಾನ್ಯ ಒಡವೆಯಂತೆ ಧರಿಸುವುದು ಉದ್ಯೋಗಸ್ಥ ಹೆಣ್ಣುಮಕ್ಕಳು ಕಂಡುಕೊಂಡ ರಾಜಿಸೂತ್ರ. ಇದೆಲ್ಲ ವೈಯಕ್ತಿಕ ಭಾವಗಳು.

ಅದೇನೇ ಇದ್ದರೂ ಮಂಗಲಸೂತ್ರ ಕೊರಳಿಗೆ ಧರಿಸುವ ಒಡವೆಯಾಗಿ ಜನಜನಿತ. ಕರಿಮಣಿ ಇರುವ ಬಳೆಗಳು ನೂರಾರು ವರ್ಷಗಳಿಂದ ಚಾಲ್ತಿಯಲ್ಲಿವೆ. ಆದರೆ ತಾಳಿ ಸಹಿತ ಬ್ರೇಸ್‌ಲೆಟ್‌ ಮಂಗಲಸೂತ್ರ ಇತ್ತೀಚೆಗೆ ಹೆಚ್ಚುತ್ತಿರುವ ಟ್ರೆಂಡ್‌.

ಧರಿಸಿದ ಉಡುಗೆಗೆ ಹೊಂದುವ ಬಣ್ಣ ಮತ್ತು ವಿನ್ಯಾಸದ ಹಾರ ಧರಿಸಲು ಬಯಸುವ ಹೆಣ್ಣು ಮಕ್ಕಳಿಗೆ ಬ್ರೇಸ್‌ಲೆಟ್‌ಮಂಗಲಸೂತ್ರ ವರದಾನದಂತಿದೆ. ಸಮಕಾಲೀನ ಫ್ಯಾಷನ್‌ಗೆ ಅಪ್‌ಡೇಟ್‌ ಆಗಿದ್ದುಕೊಂಡೇ ಸಂಪ್ರದಾಯಕ್ಕೂ ಜೈ ಅನ್ನುವ ಅವಕಾಶವಿದು.

ಅಸಲಿ, ನಕಲಿ ಚಿನ್ನದಲ್ಲೂ ಲಭ್ಯ

ಬ್ರೇಸ್‌ಲೆಟ್‌ ಮಂಗಲಸೂತ್ರ ಹೆಣ್ಣುಮಕ್ಕಳ ಮೆಚ್ಚುಗೆ ಗಳಿಸುತ್ತಿದ್ದಂತೆ ಚಿನ್ನ ಮತ್ತು ವಜ್ರಾಭರಣದ ಬ್ರ್ಯಾಂಡ್‌ಗಳು ಹಾಗೂ ನಕಲಿ ಒಡವೆಗಳ ಬ್ರ್ಯಾಂಡ್‌ಗಳು ಸ್ಪರ್ಧೆಗೆ ಬಿದ್ದಂತೆ ವಿನ್ಯಾಸಗಳನ್ನು ಪರಿಚಯಿಸುತ್ತಿವೆ.

ಆಭರಣ ಬ್ರ್ಯಾಂಡ್‌ ತನಿಷ್ಕ್‌ನ ಸಹಸಂಸ್ಥೆಯಾದ ಕಾರಟ್‌ಲೇನ್‌ ಸರಳ ವಿನ್ಯಾಸದ ಕಡಿಮೆ ತೂಕ ಮತ್ತು ಬೆಲೆಯ ಬ್ರೇಸ್‌ಲೆಟ್‌ ಮಂಗಲಸೂತ್ರಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. 18 ಕ್ಯಾರಟ್‌ ಚಿನ್ನದ ಬ್ರೇಸ್‌ಲೆಟ್‌ಗಳನ್ನು ಕಾರಟ್‌ಲೇನ್‌ ಪರಿಚಯಿಸಿದೆ. ಬರಿಯ ತಾಳಿಯೊಂದಿಗೆ, ಸರಳವಾದ ಕರಿ ಮಣಿಯ ವಿನ್ಯಾಸದೊಂದಿಗೆ ಇವು ಲಭ್ಯ. ರತ್ನಾಭರಣಗಳನ್ನು ಅವಳಡಿಸಿದವುಗಳೂ ಸಿಗುತ್ತವೆ.

ನಕಲಿ ಆಭರಣ ತಯಾರಕರು ಮತ್ತು ಮಾರಾಟಗಾರ ಬ್ರ್ಯಾಂಡ್‌ಗಳೂ ಈ ಟ್ರೆಂಡ್‌ನ್ನು ಪ್ರಚುರಪಡಿಸುವಲ್ಲಿ ಹಿಂದೆ ಬಿದ್ದಿಲ್ಲ. ಅಸಲಿ ಮತ್ತು ನಕಲಿ ಚಿನ್ನದಿಂದ ಮಾಡಿದ ಬ್ರೇಸ್‌ಲೆಟ್‌ ಮಂಗಲಸೂತ್ರಗಳ ನೂರಾರು ವಿನ್ಯಾಸಗಳುಆನ್‌ಲೈನ್‌ನಲ್ಲಿ ಸಿಗುತ್ತವೆ.

ಮಂಗಲಸೂತ್ರ ಅಥವಾ ಕರಿಮಣಿ ಸರಕ್ಕೆ ಅನ್ವಯವಾಗುವ ಎಲ್ಲಾ ವಿನ್ಯಾಸಗಳೂ ಬ್ರೇಸ್‌ಲೆಟ್‌ಗೂ ಒಪ್ಪುತ್ತವೆ. ಇತ್ತೀಚೆಗೆ, ತಾಳಿಯನ್ನೂ ಬ್ರೇಸ್‌ಲೆಟ್‌ಗೇ ಅಳವಡಿಸಿ ಶಾಶ್ವತವಾಗಿ ಕೈಯಲ್ಲೇ ಧರಿಸುವ ಫ್ಯಾಷನ್‌ ಕೂಡಾ ಜಾಸ್ತಿಯಾಗುತ್ತಿದೆ.

ಹೀಗೆ, ಮದುವೆಯಾದ ಹೆಣ್ಣು ಮಕ್ಕಳ ಕೊರಳಿನ ಆಭರಣವಾಗಿದ್ದ ಮಂಗಲಸೂತ್ರ ಕೈಗೆ ಇಳಿದಿದೆ. ಸೋನಂ ಕಪೂರ್‌ ಬ್ರೇಸ್‌ಲೆಟ್‌ ಮಂಗಲಸೂತ್ರ ಧರಿಸಿ ಟ್ರೋಲ್‌ ಆದಾಗ ಮುಂಬೈನ ಹೆಣ್ಣುಮಗಳೊಬ್ಬಳು ಹೀಗೆ ಟ್ವೀಟ್ ಮಾಡಿದ್ದಳು– ‘ಆಕೆ ಇವತ್ತು ಮಂಗಲಸೂತ್ರವನ್ನು ಕೈಗೆ ಧರಿಸಿದ್ದಾಳೆ, ನಾಳೆ ಕಾಲ್ಗೆಜ್ಜೆಯಂತೆ ಧರಿಸಿದರೂ ಅಚ್ಚರಿಯಿಲ್ಲ’ ಎಂದು. ಅಂತಹ ದಿನ ಬರಬಹುದೇ?

(ಬ್ರೇಸ್‌ಲೆಟ್‌ ಚಿತ್ರಗಳು: ಕಾರಟ್‌ಲೇನ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT