ಮದುವೆಯ ಸಂದರ್ಭವೋ, ಎಂದೋ ನಡೆದ ವಿಷಮ ಘಟನೆಗಳನ್ನೋ ಕೆಲವರು ಜೀವನಪೂರ್ತಿ ಮನಸ್ಸಿನಲ್ಲೇ ಇಟ್ಟುಕೊಂಡು ತಾವೂ ಕೊರಗಿ, ಜತೆಗಾರ/ಗಾರ್ತಿಯನ್ನೂ ಹೀಯಾಳಿಸಿ ಮಾತನಾಡುವುದುಂಟು. ವರ್ಷಗಟ್ಟಲೇ ಹೀಯಾಳಿಕೆ, ಮೂದಲಿಕೆ, ಅವಮಾನ, ಹಿಂಸೆಯನ್ನು ತಾಳಿಕೊಂಡವರೂ ವೃದ್ಧಾಪ್ಯದಲ್ಲಿ ದಾಂಪತ್ಯದಿಂದ ವಿಮುಖವಾಗುವುದುಂಟು.
ಗಂಡ ಹೆಂಡತಿ ಇಬ್ಬರೂ ಪರಸ್ಪರ ಅರ್ಥ ಮಾಡಿಕೊಳ್ಳುವುದು ಮುಖ್ಯ. ನಮ್ಮಲ್ಲಿನ ಧನಾತ್ಮಕ ಗುಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಅದನ್ನು ನಿವಾರಿಸಿಕೊಳ್ಳುವುದು ಮುಖ್ಯ. ನಿರ್ಲಕ್ಷಿಸಿದಷ್ಟೂ ಅದು ಸಮಸ್ಯೆಯಾಗಿ ಬೆಳೆಯುತ್ತದೆ. ಹಿಂದೆ ಗಂಡ ಹೆಂಡತಿ ನಡುವೆ ವಯಸ್ಸಿನ ಅಂತರ ಜಾಸ್ತಿ ಇರುತ್ತಿತ್ತು. ಆಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಆದರೆ ಈಗ ವಯಸ್ಸಿನ ಅಂತರ ಕಡಿಮೆಯಾಗಿರುವುದರಿಂದ ಇಬ್ಬರೂ ಅರ್ಥ ಮಾಡಿಕೊಳ್ಳಲು ಸುಲಭವಾಗಿದೆ. ಹಂ ಇಬ್ಬರ ನಡುವೆ ಸುಳಿಯದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಅಗತ್ಯಬಿದ್ದರೆ ಕೌನ್ಸೆಲಿಂಗ್ ಮಾಡಿಸಿಕೊಳ್ಳುವುದು ಒಳ್ಳೆಯದು. ಸಾಧ್ಯವಾದಷ್ಟೂ ಇಬ್ಬರೂ ತಾಳ್ಮೆ ವಹಿಸಿ ತಿದ್ದಿಕೊಳ್ಳಲು ಅವಕಾಶ ನೀಡಬೇಕು. ಇನ್ನು ಹೊಂದಾಣಿಕೆ ಸಾಧ್ಯವೇ ಇಲ್ಲ ಅನ್ನುವಂಥ ಸಂದರ್ಭದಲ್ಲಿ ದೂರವಾಗುವುದೇ ಲೇಸು.–ಸಮುದ್ಯತಾ ಕಂಜರ್ಪಣೆ ಲೇಖಕಿ
ಮದುವೆಯಾದ ಹೊಸತರಲ್ಲಿ ಚಂದ್ರು ದಿನಕ್ಕೆ ಮೂರು ಸಿನಿಮಾದಲ್ಲಿ ನಟಿಸುತ್ತಿದ್ದರು. ಆಗೆಲ್ಲ ಜೀವನವೇ ಇಷ್ಟೇ ಅಂದುಕೊಂಡಿದ್ದೆ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗೆ ಸಿಟಿ ಜೀವನ ಹೊಸದಾಗಿತ್ತು. ಆದರೆ ಗಂಡನ ಪ್ರೀತಿ ಗೌರವ ನನ್ನನ್ನು ಬೆಳೆಸಿತು. ಮನೆಗೇ ಸೀಮಿತವಾಗಬೇಡ. ಹೊರಗೆ ಪ್ರಪಂಚ ನೋಡು ಅಂತ ಅವರು ಪ್ರೋತ್ಸಾಹಿಸಿದರು. ಹಾಗಾಗಿ ಇಂದು ರಂಗಭೂಮಿ ಸಿನಿಮಾ ರಾಜಕಾರಣದಲ್ಲಿ ನನಗೂ ಒಡನಾಟವಿದೆ. 42 ವರ್ಷಗಳ ನಮ್ಮ ದಾಂಪತ್ಯದಲ್ಲಿ ಇಬ್ಬರೂ ಅನುಸರಿಸಿಕೊಂಡು ಹೋಗಿದ್ದೇವೆ. ಏಳುಬೀಳು ಕಂಡಿದ್ದೇವೆ. ಆದರೆ ಯಾವುದಕ್ಕೂ ಧೈರ್ಯಗೆಟ್ಟಿಲ್ಲ. ಪರಸ್ಪರ ಗೌರವ ಪ್ರೀತಿಯೇ ನಮ್ಮನ್ನು ಕಾಪಾಡಿದೆ. ಮುಖ್ಯವಾಗಿ ಸಣ್ಣಪುಟ್ಟ ವಿಷಯಕ್ಕೆ ಮನಸ್ತಾಪ ಮಾಡಿಕೊಳ್ಳಬಾರದು. ಇರುವಷ್ಟು ದಿನ ಇದ್ದುದ್ದರಲ್ಲೇ ಸಂತಸದಿಂದ ಇರಬೇಕು ಎಂಬುದನ್ನು ಕಲಿತಿದ್ದೇವೆ.ಪದ್ಮಾ ಚಂದ್ರು ‘ಮುಖ್ಯಮಂತ್ರಿ’ ಚಂದ್ರು ಪತ್ನಿ
ಹೆಂಡತಿ ಗಂಡನ ಗುಲಾಮಳಲ್ಲ ಎಂಬುದನ್ನು ಮೊದಲು ಅರಿಯಬೇಕು. ಜೀವನ ಸಂವಿಧಾನಕ್ಕೆ ಉನ್ನತ ಶಿಕ್ಷಣ ಬೇಕಿಲ್ಲ. ಸಾಮಾನ್ಯ ಜ್ಞಾನವಿದ್ದರೆ ಸಾಕು. ಗಂಡ–ಹೆಂಡತಿ ಜಗಳ ಆಡಲೇಬೇಕು. ಎಲ್ಲರೆದುರು ಜಗಳವಾಗಬೇಡಿ. ಜಗಳ ಆಡದಿದ್ದರೆ ಪ್ರೀತಿಗೆ ಅರ್ಥವಿರುವುದಿಲ್ಲ. ಆ ಜಗಳ ಉಲ್ಪಣವಾಗಬಾರದು ಅಹಂಗೆ ಕಾರಣವಾಗಬಾರದು. ಅತಿರೇಕಕ್ಕೆ ಹೋದಾಗ ಆ ವಿಷಯವನ್ನು ಬಿಟ್ಟು ಬೇರೆಯತ್ತ ಗಮನ ಹರಿಸಿ ಆಮೇಲೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಸಂಸಾರದಲ್ಲಿ ಏನೇ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ನಿಮ್ಮಾಕೆಗೆ ಒಂದು ಮಾತು ಕೇಳಿ. ದುಡ್ಡೇ ಮುಖ್ಯವಲ್ಲ ಸಾಮರಸ್ಯ ಪ್ರೀತಿ ಅವರ ಇಷ್ಟಾನಿಷ್ಟಗಳ ಕಡೆಗೆ ಗಮನವಿರಲಿ. ಕೆಲವೊಮ್ಮೆ ಅಂತಿಮ ನಿರ್ಧಾರ ಕೈಗೊಳ್ಳುವುದನ್ನು ಅವರಿಗೇ ಬಿಡುವೆ. ಹೆಣ್ಣುಮಕ್ಕಳಿಗೆ ಗೌರವ ಕೊಟ್ಟರೆ ದಾಂಪತ್ಯದಲ್ಲಿ ಪ್ರೀತಿ ತಾನಾಗಿಯೇ ಹೆಚ್ಚುತ್ತದೆ.‘ಮುಖ್ಯಮಂತ್ರಿ’ ಚಂದ್ರು
ಗಂಡ–ಹೆಂಡತಿ ಇಬ್ಬರೂ ತಮ್ಮ ಜೀವನದಲ್ಲಿ ಮೂರನೆಯವರನ್ನು ಆದಷ್ಟು ದೂರವಿಡುವುದು ಕ್ಷೇಮಕರ. ಊಟದಲ್ಲಿ ಉಪ್ಪಿನಕಾಯಿ, ಪಲ್ಯದಂತೆ ನಿಮ್ಮ ಪೋಷಕರು, ಸ್ನೇಹಿತರು, ಸಂಬಂಧಿಕರು ಇರಬೇಕು. ಆದರೆ, ಅವರೇ ನಿಮ್ಮಿಬ್ಬರ ಮೇಲೆ ಮೇಲುಗೈ ಸಾಧಿಸುವಂತಿರಬಾರದು. ಆಪ್ತ ಸಮಾಲೋಚಕಿವೇದಾವತಿ ಹಿರೇಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.