ಶನಿವಾರ, 28 ಫೆಬ್ರುವರಿ 2026
×
ADVERTISEMENT

ಅಕ್ಷರ ದಾಮ್ಲೆ ಅವರ ಅಂತರಂಗ ಅಂಕಣ: ಒಳ್ಳೆಯವಳಾಗಿ ಇರುವುದೇ ತಪ್ಪೇ?

Published : 28 ಫೆಬ್ರುವರಿ 2026, 0:11 IST
Last Updated : 28 ಫೆಬ್ರುವರಿ 2026, 0:11 IST
ADVERTISEMENT
ಫಾಲೋ ಮಾಡಿ
Comments
ಪ್ರ

ನಾನೊಬ್ಬ ಸಾಮಾನ್ಯ ಗೃಹಿಣಿ. ತವರುಮನೆ ಹಾಗೂ ಗಂಡನ ಮನೆಯಲ್ಲಿ ನಾನಾ ತರಹದ ಕೌಟುಂಬಿಕ ಸಮಸ್ಯೆಗಳಿವೆ. ಆದರೆ, ಒಳ್ಳೆಯದು ಮಾಡಿದರೆ ಒಳ್ಳೆಯದೇ ಆಗುತ್ತದೆ ಎನ್ನುವುದರಲ್ಲಿ ನನಗೆ ನಂಬಿಕೆ. ಬಾಲ್ಯದಿಂದಲೂ ಇದೇ ನೈತಿಕ ಮೌಲ್ಯವನ್ನು ಹೇಳಲಾಗಿತ್ತು. ಈಗೀಗ ನನ್ನ ಸುತ್ತಲಿನ ವಿದ್ಯಮಾನಗಳನ್ನು ಗಮನಿಸಿದರೆ, ಹಾಗೇನೂ ಅನಿಸುತ್ತಿಲ್ಲ. ನಾನು ಒಳ್ಳೆಯ ಮನಸ್ಸಿನಿಂದ ಇದ್ದರೂ ಎಲ್ಲವೂ ನನಗೆ ಒಳ್ಳೆಯದೇ ಆಗಬೇಕಿತ್ತಲ್ಲ. ಯಾಕೆ ಇಷ್ಟೊಂದು ಸಂಕಟಗಳು ಒಂದರಮೇಲೊಂದು ಎದುರಾಗುತ್ತವೆ? ಒಳ್ಳೆಯವಳಾಗಿರುವುದೇ ಕೆಟ್ಟದ್ದೇ?

ADVERTISEMENT

ಕೆಲವು ಬಾರಿ ಜೀವನದಲ್ಲಿ ಈ ರೀತಿಯ ಜಿಜ್ಞಾಸೆ ಬರುವುದು ಸಹಜ. ಯಾಕೆಂದರೆ, ಹೊರ ಪ್ರಪಂಚ ನಾವು ಅಂದುಕೊಂಡಿರುವಷ್ಟು ಸುಂದರವಾಗಿಲ್ಲ. ಸಾಮಾನ್ಯವಾಗಿ ಇತರರು ನಮಗೆ ಒಳ್ಳೆಯದನ್ನೇ ಮಾಡಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ ನಿಜ ಪ್ರಪಂಚದಲ್ಲಿ ಮೋಸಗಾರರು, ಕಿರುಕುಳ ಕೊಡುವವರು, ಹಿಂಸಿಸುವವರು ಹೀಗೆ ಅನೇಕ ರೀತಿಯ ಕೆಟ್ಟ ಮನಃಸ್ಥಿತಿಯ ವ್ಯಕ್ತಿಗಳಿರುತ್ತಾರೆ.

ಈಗ ಇಲ್ಲಿ ಎರಡು ಅಂಶಗಳನ್ನು ಗಮನಿಸಬೇಕು. ಅವೆಂದರೆ, ನಾವು ಒಳ್ಳೆಯದನ್ನು ಮಾಡುವುದರ ಜೊತೆಗೆ, ಪ್ರಪಂಚದ ವಾಸ್ತವಗಳ ಕುರಿತು ಕುರುಡಾಗಬಾರದು. ವಾಸ್ತವ ಪ್ರಪಂಚದಲ್ಲಿ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ನೀವು ಒಳ್ಳೆಯದನ್ನು ಮಾಡುವುದರಿಂದ ಅವರನ್ನೂ ಒಳ್ಳೆಯವರನ್ನಾಗಿಸಲು ಸಾಧ್ಯವಿದೆ. ಆ ದಿಸೆಯಲ್ಲಿ ಪ್ರಯತ್ನ ಪಡಬಹುದು. ಆ ಕಾರಣದಿಂದಲೇ, ನಾವು ಇತರರಿಗೆ ಒಳ್ಳೆಯದನ್ನೇ ಮಾಡಬೇಕು. ಆದರೆ, ಅವರು ಎಂಥವರು ಅನ್ನುವುದನ್ನೂ ಸ್ವಲ್ಪ ಗಮನದಲ್ಲಿ ಇಟ್ಟುಕೊಳ್ಳಬೇಕು. ನೀವು ಅವರಿಗೆ ಮಾಡಿದ ಸಹಾಯ ಇರಬಹುದು ಅಥವಾ ಕೊಡುಗೆ ಆಗಿರಬಹುದು, ಅದನ್ನು ಮುಂದೆ ಅವರು ಯಾವುದಕ್ಕೆ ಬಳಸಿಕೊಳ್ಳುತ್ತಾರೆ ಎಂಬುದನ್ನು ನೋಡುವುದು ಕೂಡ ಅಷ್ಟೇ ಮುಖ್ಯ. ಮಾತ್ರವಲ್ಲ, ಅವರಿಂದ ನಿಮಗೆ ಹಾನಿಯಾಗದಂತೆಯೂ ಗಮನಿಸಿಕೊಳ್ಳಬೇಕು.

ಹಾಗಿದ್ದರೆ, ಹಿಂದಿನಿಂದಲೂ ಹೇಳಿಕೊಂಡು ಬಂದ ಮಾತನ್ನು ಹೇಗೆ ಅರ್ಥೈಸಿಕೊಳ್ಳುವುದು? ಮೊದಲನೆಯದ್ದು, ಆ ಮಾತುಗಳು ನೈಜ ಜಗತ್ತಿನಲ್ಲಿ ನಿಜವಲ್ಲದೇ ಹೋದರೂ, ಒಂದು ವೇಳೆ ಎಲ್ಲರೂ ಪಾಲಿಸಿದರೆ, ಅವು ನಿಜವಾಗಬಹುದು, ಅಲ್ಲವೇ? ಆ ಆಶಾಭಾವನೆಯೊಂದಿಗೇ ಹಿರಿಯರು ಬಹುಶಃ ಹಾಗೆ ಹೇಳಿರಬೇಕು. ಒಂದು ವೇಳೆ ಎಲ್ಲರೂ ತಮ್ಮ ಸ್ವಾರ್ಥಕ್ಕೋಸ್ಕರವಾದರೂ ಇತರರಿಗೆ ಒಳ್ಳೆಯದನ್ನು ಮಾಡಲು ಆರಂಭಿಸಿದರೆ, ಎಲ್ಲರಿಗೂ ಒಳಿತಾಗುತ್ತದೆ. ಆಗ ಸಂಪೂರ್ಣ ಸಮಾಜವೇ ಸುಂದರವಾಗುತ್ತದೆ. ಈಗಿರುವ ಸಮಸ್ಯೆ ಏನೆಂದರೆ, ಈ ಮಾತುಗಳನ್ನು ಕೆಲವರಷ್ಟೇ ಪಾಲಿಸುತ್ತಿರುವುದು. ಹಾಗಾದಾಗ ನಾವು ವಾಸ್ತವಾಂಶವನ್ನು ಗಮನಿಸಿಕೊಂಡು ವ್ಯವಹರಿಸಬೇಕು.

ನಾವು ಗಮನಿಸಬೇಕಾದ ಇನ್ನೊಂದು ಮಾತೆಂದರೆ, ನಮಗೆ ಕೆಡುಕಾಗಲು ಅನುವು ಮಾಡಿಕೊಡುವುದು ಯಾರು? ನಾವೇ! ಒಂದು ವೇಳೆ ನಾವು ಅನುವು ಮಾಡಿಕೊಡದಿದ್ದರೆ, ಅವು ಘಟಿಸಲು ಸಾಧ್ಯವೇ ಇಲ್ಲ. ಹಾಗಿದ್ದ ಮೇಲೆ, ನಮ್ಮ ಜೀವನದಲ್ಲಿ ಏನೆಲ್ಲ ನಡೆಯುತ್ತಿದೆಯೋ ಅವೆಲ್ಲವೂ ನಮ್ಮ ಕಾರಣದಿಂದಲೇ ನಡೆಯುತ್ತಿರುತ್ತವೆ. ಹಾಗಾಗಿ, ಬಲಿಪಶುತ್ವವನ್ನು ಬೆಳೆಸಿಕೊಳ್ಳುವ ಬದಲು, ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಆಗ ನಿಮ್ಮ ಜೀವನದಲ್ಲಿ ಹೊಸ ಮಜಲುಗಳನ್ನು ಹತ್ತಲು ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT