ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿಗೆ ನಾಂದಿ ಹಾಡುವ ಮಿನಿಮಲಿಸಮ್‌

Last Updated 3 ಆಗಸ್ಟ್ 2019, 7:15 IST
ಅಕ್ಷರ ಗಾತ್ರ

ಆಕೆ ಅದಿತಿ ರಾವ್‌. ಕಂಪನಿಯೊಂದರಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ. ಮಾಧ್ಯಮ ಸಂಸ್ಥೆಗೆ ಕೆಲಸದ ನಿಮಿತ್ತ ಭೇಟಿ ನೀಡಿದಾಗಲೆಲ್ಲ ಅದೇ ಮಾಸಲು ಜೀನ್ಸ್‌ ಮತ್ತು ಬಿಳಿ ಕುರ್ತಾ. ಕುತೂಹಲಕ್ಕೆ ಇಷ್ಟದ ಉಡುಪೇ ಎಂದು ಕೇಳಿದರೆ, ‘ನನ್ನ ಬಳಿ ಇರುವುದೇ ಮೂರು ಜೊತೆ ಜೀನ್ಸ್‌, ಐದು ಬಿಳಿ ಕುರ್ತಾಗಳು’ ಎಂದು ನಕ್ಕರು. ‘ಹೌದು, ನಾನು ಮಿನಿಮಲಿಸ್ಟ್‌. ಅವಶ್ಯವಿರುವ ಕನಿಷ್ಠ ವಸ್ತುಗಳಿಂದ ಗರಿಷ್ಠ ಬಳಕೆ ತೆಗೆದುಕೊಳ್ಳುವುದನ್ನು ರೂಢಿಸಿಕೊಂಡಿದ್ದೇನೆ’ ಎನ್ನುವ ಅವರ ಮಾತೂ ಕೂಡ ಸರಳವಾಗಿತ್ತು.

ಇದನ್ನು ಕನಿಷ್ಠ ಎನ್ನಿ, ಸರಳತೆ ಎನ್ನಿ... ಒಟ್ಟಿನಲ್ಲಿ ಐಷಾರಾಮಿ, ಅನವಶ್ಯಕ ವಸ್ತುಗಳಿಂದ ದೂರವಾಗಿ ಆರಾಮದ ಬದುಕು ಸಾಗಿಸುವ ಈ ಕ್ರಮ ಇತ್ತೀಚಿನ ಟ್ರೆಂಡ್‌. ಹಾಗಂತ ಇದೇನೂ ಹೊಸದಲ್ಲ. ಜಗತ್ತಿಗೆ ಸರಳತೆಯನ್ನು ಪರಿಚಯಿಸಿದ, ತಾವೇ ಚರಕದಿಂದ ತೆಗೆದ ನೂಲಿನಿಂದ ಮಾಡಿದ ಕನಿಷ್ಠ ಉಡುಪು, ಸರಳ ಆಹಾರದಿಂದ ಇಡೀ ವಿಶ್ವದ ಮನಗೆದ್ದ ಮಹಾತ್ಮಗಾಂಧಿ ಅವರನ್ನು ನೆನಪಿಸಿಕೊಳ್ಳದಿದ್ದರೆ ಹೇಗೆ? ಮಹಾತ್ಮಗಾಂಧಿ ಅವರ ಸರಳ ಉಡುಪು, ಹಣ್ಣು, ಕಡಲೆಕಾಯಿ, ಆಡಿನ ಹಾಲಿನಂತಹ ಆಹಾರ ಬಹುತೇಕರಿಗೆ ಮಾದರಿಯಾಗಿತ್ತು. ಅಂದು ಅವರು ಪರಿಚಯಿಸಿದ ಕೈಮಗ್ಗದ ಬಟ್ಟೆ ಈಗ ಹೇಗೆ ಉಡುಪಿನ ಮಾರುಕಟ್ಟೆಗೆ ಲಗ್ಗೆ ಹಾಕಿದೆಯೋ ಹಾಗೆ ಅವರ ಸರಳ ಬದುಕು ಕೂಡ ಹಲವರಿಗೆ ಮಾದರಿಯಾಗಿದೆ. ಇತ್ತೀಚಿಗೆ ಜನಪ್ರಿಯಗೊಂಡಿರುವ ಈ ಮಿನಿಮಲಿಸಮ್‌ ಅಥವಾ ಕನಿಷ್ಠ ವಸ್ತುಗಳಲ್ಲಿ ನಡೆಸುವ ಬದುಕು ಸರಳತೆಯ ಮುಂದು
ವರಿದ ಭಾಗ ಎನ್ನಬಹುದು.

ಹಲವು ವರ್ಷಗಳಿಂದ ಇಂತಹ ಸರಳ ಬದುಕು ಅನುಸರಿಸುತ್ತಿರುವ, ಸದ್ಯ ಪ್ಯಾರಿಸ್‌ನಲ್ಲಿರುವ ಬೆಂಗಳೂರು ಮೂಲದ ಚರ್ಮ ತಜ್ಞೆ ಡಾ. ಎನ್‌. ಅನಿಷಾ ಮೂರ್ತಿ, ‘ನಾನು ಮತ್ತು ನನ್ನ ಪತಿ ಇಬ್ಬರೂ ಸೈಕಲ್‌ನಲ್ಲೇ ಓಡಾಡುವುದು. ಮನೆಯಲ್ಲಿ ಕೂಡ ಕನಿಷ್ಠ ಸಾಮಗ್ರಿಗಳು, ಅದೂ ಝೀರೊ ತ್ಯಾಜ್ಯ. ಅಂಗಡಿಯಿಂದ ಬಟ್ಟೆಯ ಚೀಲದಲ್ಲಿ ತರಕಾರಿ– ಹಣ್ಣು ತರುವ ಪದ್ಧತಿ. ಸ್ನಾನಕ್ಕೆ ಕೂಡ ಅಜ್ಜಿ ರೂಢಿಸಿದ ಸೀಗೆಕಾಯಿ, ಅಂಟುವಾಳಕಾಯಿ ಪುಡಿ. ನನ್ನ ಬಳಿ ಬರುವ ರೋಗಿಗಳಿಗೆ ಹೇಳುವುದೂ ಇಂತಹ ಹರ್ಬಲ್‌ ಉತ್ಪನ್ನಗಳನ್ನೇ’ ಎನ್ನುತ್ತಾರೆ.

ಕನಿಷ್ಠವೇ ಗರಿಷ್ಠ

ಹಲವರಿಗೆ ಈ ಸರಳ ಬದುಕು ಉಳ್ಳವರ ಇನ್ನೊಂದು ರೀತಿಯ ಜೀವನಶೈಲಿ ಎಂಬ ತಪ್ಪು ಗ್ರಹಿಕೆಯಿದೆ. ಆದರೆ ನೂರಾರು ವರ್ಷಗಳಿಂದ ಬಂದಿರುವ ಈ ಜೀವನಕ್ರಮ ಕೊಳ್ಳುಬಾಕ ಸಂಸ್ಕೃತಿಯ ಭರಾಟೆಯಲ್ಲಿ ಕೊಚ್ಚಿ ಹೋಗಿತ್ತು. ಸದ್ಯ ‘ನನ್ನಲ್ಲಿ ಏನೇನಿವೆ?’ ಎನ್ನುವುದಕ್ಕಿಂತ ‘ನಾನು ಯಾರು?’ ಎಂಬುದು ಮುಂಚೂಣಿಗೆ ಬಂದಿರುವುದರಿಂದ ಈ ಕನಿಷ್ಠ ಅಥವಾ ಸರಳ ಬದುಕು ಕೂಡ ಮುಂಚೂಣಿಗೆ ಬಂದಿದೆ. ಅದು ಉಡುಪು ಅಥವಾ ಫ್ಯಾಷನ್‌ ಇರಬಹುದು, ಗೃಹೋಪಯೋಗಿ ಉಪಕರಣಗಳಿರಬಹುದು, ವಾಹನಗಳು, ಮನೆ, ತಂತ್ರಜ್ಞಾನ, ಗ್ಯಾಜೆಟ್‌... ಹೀಗೆ ಎಲ್ಲಡೆಯೂ ಕನಿಷ್ಠವೆಂದರೆ ಗರಿಷ್ಠ ಎಂಬುದು ಎದ್ದು ಕಾಣುತ್ತಿದೆ.

ಈ ಕನಿಷ್ಠ ಜೀವನ ಎಂಬುದು ಚೀನಾದ ಝೆನ್‌ ಸಂಪ್ರದಾಯದಲ್ಲಿ ಹೆಚ್ಚಾಗಿ ಕಾಣಬಹುದು. ಅದು ಅಲ್ಲಿಂದ ಜಪಾನ್‌, ಕೊರಿಯಾ ಮೊದಲಾದ ಕಡೆ ಹರಡಿದೆ. 2008ರ ಸುಮಾರಿಗೆ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಶುರುವಾದಾಗ ಅಲ್ಲಿಯೂ ಸಣ್ಣ ಮನೆ, ಸರಳ ಬದುಕು ವ್ಯಾಪಕವಾಗಿ ಪ್ರಚಾರ ಪಡೆಯಿತು. ರ‍್ಯಾನ್‌ ನಿಕೊಡೆಮಸ್‌ ಮತ್ತು ಜೋಶುವ ಮಿಲ್‌ಬರ್ನ್‌ ಅವರ ಕಾರ್ಪೊರೇಟ್‌ ಸಿರಿವಂತಿಕೆಯಿಂದ ಸರಳ ಬದುಕಿನವರೆಗಿನ ಪಯಣ ಈಗ ಪುಸ್ತಕ, ಸಾಕ್ಷ್ಯಚಿತ್ರದ ರೂಪದಲ್ಲಿ ಅಪಾರ ಜನಪ್ರಿಯತೆ ಪಡೆದಿದೆ.

ಭಾರತದಲ್ಲಿ 1991ರ ನಂತರ ಬೀಸಿದ ಜಾಗತೀಕರಣದ ಬಿರುಗಾಳಿಯ ಅಡಿಯಲ್ಲಿ ಈ ಕನಿಷ್ಠ ಜೀವನದ ತತ್ವ ತೂರಿಕೊಂಡು ಹೋಯಿತು. ನಮ್ಮ ಬಹುತೇಕ ಧರ್ಮಗಳು ಸರಳ ಜೀವನದ ಬಗ್ಗೆ ಬೋಧಿಸಿದರೂ ಅದು ಕೇಳಲು ಅಷ್ಟೆ, ವಾಸ್ತವಕ್ಕೆ ಅಲ್ಲ ಎಂಬ ತೀರ್ಮಾನಕ್ಕೆ ಬಹುತೇಕರು ಬಂದುಬಿಟ್ಟಿದ್ದರು. ಹಲವರಿಗೆ ಈ ಕನಿಷ್ಠ ಜೀವನ ತತ್ವ ಎಂಬುದು ಎಲ್ಲವನ್ನೂ ತ್ಯಾಗ ಮಾಡುವುದು ಎಂಬ ಅಪನಂಬಿಕೆಯಿದೆ. ಆದರೆ ನಮ್ಮ ಸುತ್ತ ಚೆಲ್ಲಾಪಿಲ್ಲಿಯಾಗಿ ತುಂಬಿಕೊಂಡಿರುವ ಭೌತಿಕ, ಎಲ್ಲಕ್ಕಿಂತ ಹೆಚ್ಚಾಗಿ ಡಿಜಿಟಲ್‌ ಸಾಮಗ್ರಿಗಳು ನಮ್ಮ ಮಾನಸಿಕ ಸ್ಥಿತಿಯ ಗೊಂದಲದ ಪ್ರತೀಕಗಳು ಎನ್ನಬಹುದು.

ಕೊಳ್ಳುಬಾಕ ಸಂಸ್ಕೃತಿಗೆ ಬೈ

ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ಈ ಕನಿಷ್ಠ ವಸ್ತುಗಳಿಂದ ಬದುಕು ನಡೆಸುವವರ ಸಂಖ್ಯೆ ಜಾಸ್ತಿಯಾಗಿದೆ. ಎಲ್ಲವೂ ಬೇಕು ಎಂಬ ‘ಕೊಳ್ಳುಬಾಕ’ ಪದ್ಧತಿಗೆ ವಿರುದ್ಧವಾದ, ಬಹು ಎಚ್ಚರಿಕೆಯಿಂದ ಜೀವನ ನಡೆಸುವವರಲ್ಲಿ ಬಹುತೇಕರು ಮಹಿಳೆಯರು ಎಂಬುದು ವಿಶೇಷ. ಈ ಮಹಿಳೆಯರು ತಮ್ಮ ಕುಟುಂಬದವರ ಮೇಲೂ ಪ್ರಭಾವ ಬೀರಿದ್ದಾರೆ.

‘ಮನೆಯಲ್ಲಿ ಎಷ್ಟೊಂದು ಸಾಮಗ್ರಿಗಳು ತುಂಬಿಕೊಂಡಿದ್ದವೆಂದರೆ ನನಗೆ ಕಿರಿಕಿರಿಯಾಗಲು ಶುರುವಾಗಿತ್ತು. ಮನೆಯವರ ಜೊತೆ ಕಾಲ ಕಳೆಯುವ, ಲಾಂಗ್‌ ವಾಕ್‌ ಹೋಗುವ, ನನ್ನ ಅಚ್ಚುಮೆಚ್ಚಿನ ಚಿತ್ರಕಲೆಯಲ್ಲಿ ಸಮಯ ಕಳೆಯುವಂತಹ ಅಮೂಲ್ಯ ಕ್ಷಣಗಳನ್ನೇ ಕಳೆದುಕೊಂಡಿದ್ದೆ. ವಾರ್ಡ್‌ರೋಬ್‌ನಲ್ಲಿ ತುಂಬಿಕೊಂಡಿದ್ದ ಉಡುಪುಗಳು, ಅಡುಗೆಕೋಣೆಯಲ್ಲಿ ಸೇರಿಕೊಂಡಿದ್ದ ಗೃಹೋಪಯೋಗಿ ಉಪಕರಣಗಳನ್ನು ನೋಡಿದರೆ ನನಗೆ ಒತ್ತಡ ಎನಿಸುತ್ತಿತ್ತು’ ಎನ್ನುವ ಮುಂಬೈನಿಂದ ಬೆಂಗಳೂರಿಗೆ ವಸತಿ ಬದಲಿಸಿದ ಕಲಾವಿದೆ ಮನಿಷಾ ದೇಶಪಾಂಡೆ, ‘ಎಷ್ಟೋ ಉಡುಪುಗಳನ್ನು ನಾನು ತೊಟ್ಟಿರಲೇ ಇಲ್ಲ. ಗ್ಯಾಜೆಟ್‌ಗಳನ್ನು ಕೂಡ ಬಳಸುತ್ತಿರಲಿಲ್ಲ. ಹೀಗಾಗಿ ಬಹುತೇಕ ಉಡುಪುಗಳನ್ನು ಅನಾಥಾಶ್ರಮಕ್ಕೆ ಕೊಟ್ಟೆ. ಗ್ಯಾಜೆಟ್‌ಗಳನ್ನು ಕೂಡ ಸ್ನೇಹಿತೆಯರಿಗೆ ಹಂಚಿದೆ. ಈಗ ನಿರಾಳವಾಗಿದ್ದೇನೆ’ ಎನ್ನುತ್ತಾರೆ.

ಕಾನ್‌ಮರಿ ಜೀವನಶೈಲಿ

ಜಪಾನ್‌ ಮೂಲದ ಮೇರಿ ಕೊಂಡೊ ಹಲವರ ಸರಳ ಜೀವನಕ್ಕೆ ಸ್ಫೂರ್ತಿ. ಆಕೆ ಬರೆದ ‘ದಿ ಲೈಫ್‌ ಚೇಂಜಿಂಗ್‌ ಮ್ಯಾಜಿಕ್‌ ಆಫ್‌ ಟೈಡಿಯಿಂಗ್‌ ಅಪ್‌’ ಹಾಗೂ ನೆಟ್‌ಫ್ಲಿಕ್ಸ್‌ನ ಷೋ ‘ಟೈಡಿಯಿಂಗ್‌ ಅಪ್‌’ ಹೇಗೆ ಕನಿಷ್ಠ ಸೌಲಭ್ಯಗಳಿಂದ ಗರಿಷ್ಠ ಖುಷಿ ಪಡೆಯಬಹುದು ಎಂಬುದನ್ನು ಹೇಳಿವೆ. ಎಲ್ಲವನ್ನೂ ತ್ಯಾಗ ಮಾಡಬೇಕಾಗಿಲ್ಲ. ಆದರೆ ಇದ್ದ ವಸ್ತುಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ‘ಕಾನ್‌ಮರಿ’ ಶೈಲಿಯು ಹೇಳುತ್ತದೆ. ಮನೆಯನ್ನು ಒಪ್ಪ– ಓರಣಗೊಳಿಸಿದರೆ ನಿಮ್ಮ ಮಾನಸಿಕ ಸ್ಥಿತಿಯೂ ಓರಣವಾಗುತ್ತದೆ.

ಈ ಸರಳ ಬದುಕಿನ ತತ್ವವೇ ‘ಇನ್ನೂ ಬೇಕು’ ಎಂಬ ವೈರಸ್‌ಗೆ ಕಡಿವಾಣ ಹಾಕುವುದು. ನಮ್ಮ ಬದುಕಿಗೆ ಏನು ಅಗತ್ಯ ಎಂಬುದಕ್ಕೆ ಒತ್ತು ನೀಡಿ, ಖುಷಿಗೆ ಪೂರಕವಾದ ಕನಿಷ್ಠ ವಸ್ತುಗಳಲ್ಲಿ ಜೀವನ ಸಾಗಿಸುವುದು.

ಹೀಗೆ ಮಾಡಿ...

* ಈಗಾಗಲೇ ನಿಮ್ಮ ಮನೆ ಅಗತ್ಯಕ್ಕಿಂತ ಹೆಚ್ಚು ವಸ್ತುಗಳು, ಬಟ್ಟೆ, ಶೂ, ಬ್ಯಾಗ್‌ಗಳಿಂದ ತುಂಬಿ ತುಳುಕುತ್ತಿದ್ದರೆ ಬೇಕಾದಷ್ಟೇ ಇಟ್ಟುಕೊಂಡು ಉಳಿದವುಗಳನ್ನು ದಾನ ಮಾಡಿ. ಆ ವಸ್ತುಗಳ ಬಗ್ಗೆ ಮೋಹ ಇಟ್ಟುಕೊಳ್ಳಬೇಡಿ.

* ಒಂದು ವಸ್ತುವನ್ನು ಖರೀದಿಸಬೇಕಾದರೆ ಅದು ನಿಮಗೆ ಎಷ್ಟು ಅಗತ್ಯ ಎಂದು ಯೋಚಿಸಿ.

*ಆಹಾರದಂತಹ ಅಗತ್ಯ ಸಾಮಗ್ರಿಗೂ ಕ್ರೆಡಿಟ್‌ ಕಾರ್ಡ್‌ ಬಳಸದೆ ಆದಷ್ಟು ಡೆಬಿಟ್‌ ಕಾರ್ಡ್‌, ನಗದು ಬಳಸಿ.

* ನಿಮ್ಮ ಬಳಿ ಮೊಬೈಲ್‌ ಇದ್ದರೆ ಅದರಲ್ಲಿ ಸಾಮಾಜಿಕ ಜಾಲತಾಣಗಳ ಆ್ಯಪ್‌ಗಳನ್ನು ತೆಗೆದು ಹಾಕಿ. ನಿಮ್ಮ ಹೆಚ್ಚಿನ ಸಮಯವನ್ನು ನುಂಗಿ ಹಾಕುವುದು ಈ ಆ್ಯಪ್‌ಗಳೇ.

*ನಿತ್ಯ ಊಟ– ಉಪಾಹಾರಗಳಲ್ಲಿ ಆರೋಗ್ಯಕ್ಕೆ ಒತ್ತು ಕೊಡಿ.

*ಪುಸ್ತಕಗಳನ್ನು ಕಿಂಡಲ್‌ನಲ್ಲಿ ಓದಿ.

* ಫೋಟೊ, ವಿಡಿಯೊ, ದಾಖಲೆಗಳು, ಮನರಂಜನೆ ಸಾಧನಗಳನ್ನು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿ.

* ಆರೋಗ್ಯ, ಹವ್ಯಾಸಗಳಿಗೆ ಒತ್ತು ಕೊಡಿ. ನಿಮ್ಮ ಕುಟುಂಬ, ಸ್ನೇಹಿತರ ಜೊತೆ ಕಾಲ ಕಳೆಯಿರಿ.

* ಮೂರು ಆರ್‌, ಅಂದರೆ ರಿಸೈಕ್ಲಿಂಗ್‌ (ಮರು ಸಂಸ್ಕರಣೆ), ರೆಫ್ಯೂಸಿಂಗ್‌ (ನಿರಾಕರಣೆ), ರೆಡ್ಯೂಸಿಂಗ್‌ (ಕಡಿಮೆ ಮಾಡುವುದು)ಕಡೆ ಗಮನಹರಿಸಿ.

**

''ನನ್ನ ಮನೆಯಲ್ಲಿ, ಅಗತ್ಯಕ್ಕಿಂತ ಹೆಚ್ಚಿದ್ದ ಬಟ್ಟೆ, ಪಾತ್ರೆಗಳು, ಆಟಿಕೆಗಳು ಇತ್ಯಾದಿ ಸಾಮಗ್ರಿಗಳನ್ನೆಲ್ಲ ಬೆಂಗಳೂರಿನ ದೇವನಹಳ್ಳಿ ಬಳಿ ಜ್ಯೋತಿ ಎಂಬ ಹುಡುಗಿ ನಡೆಸುತ್ತಿರುವ ಅನಾಥ ಮಕ್ಕಳ ‘ತಾಯಿಮನೆ’ಗೆ ನೀಡಿಬಂದೆ. ಅಂತೆಯೇ ನನ್ನ ಕೃತಿಯೊಂದಕ್ಕೆ ಪ್ರಶಸ್ತಿಯಾಗಿ ಬಂದ ₹ 3 ಲಕ್ಷ ಅಲ್ಲಿಗೇ ನೀಡಿದೆ. ವೃತ್ತಿಯಲ್ಲಿದ್ದಾಗ (ಈಗ ನಿವೃತ್ತಿ) ಕಂಪನಿಯೇ ಕಾರು ನೀಡಿತ್ತು. ನನ್ನಲ್ಲಿಯೂ ಒಂದು ಕಾರಿತ್ತು. ಎರಡೆರಡು ಕಾರುಗಳು ಅಗತ್ಯ ಮೀರಿದ್ದವು. ಅದನ್ನೂ ಅಲ್ಲಿಗೇ ನೀಡಿದೆ. ಇದರಿಂದ ಧನ್ಯತಾ ಭಾವ ಮೂಡಿದೆ.''

– ನೇಮಿಚಂದ್ರ, ಲೇಖಕಿ, ಎಚ್‌ಎಎಲ್‌ ಮ್ಯಾನೇಜ್‌ಮೆಂಟ್ ಅಕಾಡೆಮಿಯ
ನಿವೃತ್ತ ಪ್ರಧಾನ ವ್ಯವಸ್ಥಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT