ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಹಮ್ಮಿನ ಗೋಡೆಯಲಿ

ಸುಮಾವೀಣಾ
Published 25 ಮೇ 2024, 0:40 IST
Last Updated 25 ಮೇ 2024, 0:40 IST
ಅಕ್ಷರ ಗಾತ್ರ
ಮಕ್ಕಳ ಮೇಲಿನ ಹಿಡಿತ ಕೈ ತಪ್ಪಿ ಹೋಗುವುದಕ್ಕೆ ಅಪ್ಪ ಅಮ್ಮಂದಿರ ಅಹಂ ಕೂಡ ಮುಖ್ಯ ಕಾರಣ. ಕಾರಣಾಂತರಗಳಿಂದ ಅತ್ತೆ –ಮಾವಂದಿರಿಂದ ನೋವಾಗಿರುವ ಪೋಷಕರು ತಮ್ಮ ಮಕ್ಕಳನ್ನು ಅವರಿಂದ ದೂರವಿಡಲು ಪ್ರಯತ್ನಿಸುತ್ತಾರೆ.

ಭಾರತೀಯ ಪರಂಪರೆಯಲ್ಲಿ ಷೋಡಶ ಸಂಸ್ಕಾರಗಳಿಗೆ ಬಹಳ ಆದ್ಯತೆ. ಮಗುವಿನ ನಾಮಕರಣದಿಂದ ಮೊದಲುಗೊಂಡು ಕರ್ಣಛೇದನ, ಅನ್ನಪ್ರಾಶನ,ಅಕ್ಷರಾಭ್ಯಾಸ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಪದಗಳೆಲ್ಲಾ ಮಗುವಿನ ಬೆಳವಣಿಗೆಯನ್ನು ಸೂಚಿಸುತ್ತದೆ. ವಿದ್ಯೆ ತಂದೆ -ತಾಯಿಯಾದರೆ, ಬುದ್ಧಿ ಸೋದರ ಮಾವ ಎಂದು ಕರೆಯುವುದಿದೆ. ಅಂದರೆ ಮಗುವಿನ ಬೆಳವಣಿಗೆಯಲ್ಲಿ ಸಂಬಂಧಿಕರ ಪಾತ್ರವೂ ಇರುತ್ತಿತ್ತು ಎಂದು ತಿಳಿಯುತ್ತದೆ. ಆದರೆ ಇಂದು ಮಕ್ಕಳಿಗೆ ಸಂಬಂಧಗಳ ಮೌಲ್ಯ, ನೈತಿಕ ಮೌಲ್ಯಗಳ ತಿಳಿವಳಿಕೆಯೇ ಇಲ್ಲವಾಗಿದೆ.

ಈಗ ಹೆಚ್ಚಿನವರು ಯಾರೂ ಮನೆಯಲ್ಲಿ ಕೂರುವುದಿಲ್ಲ. ದುಡಿಮೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಮೇಲಧಿಕಾರಿಗೆ ಹೊಂದಿಕೊಂಡು ಹೋಗಲೋ, ಇಲ್ಲವೆ ಒಂದು ದಿನ ರಜೆ ಹಾಕಿದರೆ ಇಷ್ಟು ಹಣ ನಷ್ಟ ಎಂತಲೋ ಯಾವಾಗಲೂ ವ್ಯಸ್ತರಾಗಿರುತ್ತಾರೆ. ಆ ಸಂದರ್ಭದಲ್ಲಿ ಮಕ್ಕಳನ್ನು ಹತೋಟಿಗೆ ತರಲು ಮಕ್ಕಳು ಏನೇ ಕೇಳಿದರೂ ಅವರ ಕೋರಿಕೆಯನ್ನು ಈಡೇರಿಸಿ ಬಿಡುತ್ತಾರೆ. ತಮ್ಮ ಕೆಲಸ ಕಾರ್ಯಗಳನ್ನು ನಿಭಾಯಿಸಿಕೊಳ್ಳಲು ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿರಿಸಿ ಒಂದಷ್ಟು ಆಹಾರ ಬೇಯಿಸಿ ಟೇಬಲ್ ಮೇಲಿಟ್ಟು ಹೋಗುತ್ತಾರೆ. ಇದು ಮಕ್ಕಳ ಮೇಲೆ ಅವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಾಕಬೇಕಲ್ಲೋ ಎಂದೋ, ಖರ್ಚಿನ ಬಾಬ್ತು ಎಂದೋ ಎರಡು ಮಕ್ಕಳಿರುವ ಮನೆಗಳು ತೀರಾ ಕಡಿಮೆಯಾಗುತ್ತಿವೆ. ಒಂದು ಮಗು ಇರುವ ಮನೆಗಳೇ ಅಧಿಕ. ಹೀಗೆ ಒಂಟಿಯಾಗಿ ಬೆಳೆದ ಮಕ್ಕಳಿಗೆ ಹೊಂದಿಕೊಂಡು ಹೋಗುವ ಸ್ವಭಾವವಿರುವುದಿಲ್ಲ. ಎಲ್ಲಾ ಬೇಕುಗಳನ್ನು ಕೋರಿಕೆಯಿಲ್ಲದೆ ಈಡೇರಿಸಿಕೊಳ್ಳುವ ಇವರ ಜೀವನ ಶೈಲಿಯಲ್ಲಿ, ಭಾವನೆಗಳಲ್ಲಿ ಬಾಂಧವ್ಯದ ಆರ್ದ್ರತೆ ಇರುವುದಿಲ್ಲ . ಸಮಾಜದಲ್ಲಿ ಮಕ್ಕಳಿಂದ ನಡೆಯುವ ಆಗಂತುಕ ಘಟನೆಗಳಿಗೆ ಇದೂ ಒಂದು ಕಾರಣವೆನ್ನಬಹುದು.

ಮಕ್ಕಳ ಮೇಲಿನ ಹಿಡಿತ ತಪ್ಪಿ ಹೋಗುವುದಕ್ಕೆ ಅಪ್ಪ ಅಮ್ಮಂದಿರ ಅಹಂ ಕೂಡ ಮುಖ್ಯ ಕಾರಣ. ಅತ್ತೆ –ಮಾವಂದಿರಿಂದ ನೋವಾಗಿದ್ದರೆ ಮಕ್ಕಳನ್ನು ಅವರಿಂದ ದೂರವಿಡಲು ಪ್ರಯತ್ನಿಸುತ್ತಾರೆ. ಚಿಕ್ಕ ಚಿಕ್ಕ ಕಾರಣಗಳಿಗೆ ಅವರ ಮನಸ್ಸು ಮುದುಡಿ ಹೋಗಿರುತ್ತದೆ. ಹೀಗಾದಾಗ ಜವಾಬ್ದಾರಿಯ ಮಹತ್ವ ಕಳೆದುಕೊಳ್ಳುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಸರಿದು ಹೇಳಬೇಕೆಂದರೆ ‘ಏಕಪೋಷಕತ್ವ’ ಎಂಬ ಪದ ಈಗ ಬಹಳ ಪ್ರಚಾರಕ್ಕೆ ಬರುತ್ತಿದೆ. ಅಷ್ಟೇ ಏಕೆ ಶಾಲಾ ಅರ್ಜಿಗಳಲ್ಲಿ ಅಂಕಪಟ್ಟಿಗಳಲ್ಲಿ ಡೈರಿಗಳಲ್ಲಿ ‘ಸಿಂಗಲ್ ಪೇರೆಂಟ್’ ಎಂಬ ಪದ ನುಸುಳಿ, ಪೋಷಕರು, ಪಾಲಕರು ಎಂಬ ಪದವನ್ನು ತಳ್ಳಿ ತನ್ನ ಸ್ಥಾನ ಕಂಡುಕೊಂಡಿದೆ. ಇದಂತೂ ಮಕ್ಕಳ ಬೌದ್ಧಿಕ, ಮಾನಸಿಕ ಬೆಳವಣಿಗೆಗೆ ಮಾರಕವಾದದ್ದು.

ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಿದ್ದೇವೆ; ನಮ್ಮ ಮಕ್ಕಳು ಇತರೆ ನೆರೆಹೊರೆಯ ಮಕ್ಕಳೊಡನೆ, ಕೆಲವೊಮ್ಮೆ ಸಂಬಂಧಿಕರ ಮಕ್ಕಳೊಡನೆಯೂ ಬೆರೆಯಬಾರದು, ಅವರಿಂದ ಏನನ್ನೂ ಪಡೆಯಬಾರದು ಇತ್ಯಾದಿ ನಿರ್ಬಂಧಗಳನ್ನು ಹೇರಲಾಗುತ್ತಿದೆ. ನಮ್ಮ ಘನತೆಗೆ ಅದು ಕುತ್ತು ಎಂದು ತಿಳಿದ ಕಾರಣದಿಂದ ಇಂಥ ಆಲೋಚನೆಗಳು ಮೂಡುತ್ತಿವೆ.

ಮಕ್ಕಳ ಬೆಳವಣಿಗೆಯ ವಿಷಯದಲ್ಲಿ ಯಾರೊಂದಿಗೂ ಚರ್ಚಿಸದೆ ಇರುವುದು, ಯಾರ ಮಾತನ್ನೂ ಕೇಳದೆ ಇರುವುದು ಪೋಷಕರಲ್ಲಿನ ಅಹಂ ಅನ್ನು ತೃಪ್ತಿಪಡಿಸಲು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು ಅಹಂ ಬಿಟ್ಟು, ಮುನ್ನಡೆಯಬೇಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT