ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಣಂತಿಯರ ಬವಣೆ...ಪ್ರಸವೋತ್ತರ ಮನೋಬೇನೆ!

Last Updated 4 ಫೆಬ್ರುವರಿ 2022, 20:30 IST
ಅಕ್ಷರ ಗಾತ್ರ

ಹೆಣ್ಣೊಬ್ಬಳು ತಾಯಿಯಾಗುವ ಆ ಅಭೂತಪೂರ್ವ ಕಾಲಘಟ್ಟ ಅವರ್ಣೀಯ ಆನಂದವನ್ನೂ, ಸಾರ್ಥಕತೆಯನ್ನೂ ತಂದುಕೊಡುವುದು ನಿಜ. ಆದರೆ ಒಮ್ಮೊಮ್ಮೆ ಮಗು ಹುಟ್ಟಿದ ಸಂಭ್ರಮದ ಜೊತೆಗೆ ಆತಂಕ, ಬೇಸರ, ಭಯ, ಚಿಂತೆ, ಗೊಂದಲ, ಸಂಕಟಗಳೂ... ಧುತ್ತೆಂದು ಎದುರಾಗಿ ಕಾಡಬಹುದು. ಪ್ರಸವ(ಹೆರಿಗೆ) ಕಾಲದ ಆಸುಪಾಸಿನಲ್ಲಿ ಶುರುವಾಗುವ ಈ ಮನೋವ್ಯಾಕುಲತೆಗಳು, ಒಂದಿಷ್ಟು ಬೇಸರದಿಂದ ಹಿಡಿದು ತೀವ್ರ ಖಿನ್ನತೆ/ಆತಂಕ/ ಗೀಳು ಕಾಯಿಲೆಯಾಗಿಯೂ, ತೀರಾ ವಿರಳವಾಗಿ ಭ್ರಮೆ ಭ್ರಾಂತಿಯಂತೆಯೂ ಕಾಡಿ, ಕೆಲವೊಮ್ಮೆ ಆತ್ಮಹತ್ಯೆಗೆ, ಇನ್ನೂ ಕೆಲವೊಮ್ಮೆ ಅಪಾಯಕಾರಿ ಯೋಚನೆ - ಯೋಜನೆಗಳತ್ತ ಹೊರಳಿ, ತಾಯಿ ಹಾಗೂ ಮಗುವಿನ ಜೀವಕ್ಕೇ ಅಪಾಯವಾಗಬಹುದು!

ಬಾಣಂತಿ ಬೇಸರ (postpartum blues)

ಮೊದಲ ಹೆರಿಗೆ ಸಮಯದಲ್ಲಿ, ಹಲವರಿಗೆ (ಶೇ 70 ರಿಂದ 85), ಪ್ರಸವನಂತರ ಬದಲಾಗಿರುವ ಪರಿಸ್ಥಿತಿ, ಮಗುವಿನ ಲಾಲನೆ ಪೋಷಣೆಯ ಹೊಸ ಜವಾಬ್ದಾರಿ - ಇವನ್ನು ಮೊದಲ ಸಲ ಎದುರಿಸಿದಾಗ, ಸಹಜವಾಗಿ ಒಂದಿಷ್ಟು ಬೇಸರ, ಆತಂಕ, ಭಯ ಆಗುತ್ತದೆ. ಇದನ್ನೇ ‘ಬಾಣಂತಿ ಬೇಸರ’ ಎನ್ನುತ್ತಾರೆ. ಇದು ಆರೋಗ್ಯವಂತ ತಾಯಂದಿರಲ್ಲೂ ಕಂಡುಬರಬಹುದು. ಇದು ಪ್ರಸವನಂತರದ ಎರಡು–ಮೂರು ದಿನಗಳಿಂದ ಹಿಡಿದು ಎರಡು ವಾರದವರೆಗೂ ಕಾಡುತ್ತಾ, ತನ್ನಷ್ಟಕ್ಕೇ ತಾನೇ, ಸರಿ ಹೋಗುತ್ತದೆ. ಜೈವಿಕ ಹಾಗೂ ಪರಿಸರದಲ್ಲಿನ ಬದಲಾವಣೆಯಿಂದ ಹೀಗೆ ಆಗುತ್ತದೆ. ಆದ್ದರಿಂದ ಯಾವುದೇ ಚಿಕಿತ್ಸೆ ಇಲ್ಲದೆಯೂ ಇಂಥ ವ್ಯಾಕುಲತೆ ಸರಿಯಾಗುತ್ತದೆ. ಒಳ್ಳೆಯ ನಿದ್ದೆ, ಒತ್ತಡ ನಿವಾರಣೆ, ಮಗುವಿನ ಲಾಲನೆಪಾಲನೆಯಲ್ಲಿ ಸಹಾಯ - ಇವನ್ನು ನೀಡಿದರೆ ಬಾಣಂತಿಯರು ಇದರಿಂದ ಸುಲಭವಾಗಿ ಚೇತರಿಸಿಕೊಳ್ಳುತ್ತಾರೆ!

ಪ್ರಸವೋತ್ತರ ಖಿನ್ನತೆ (postpartum depression)

ಬಾಣಂತಿಯರಲ್ಲಿ ಸಣ್ಣದಾಗಿ ಮೂಡುವ ಬೇಸರಕ್ಕೆ ಸಕಾಲದಲ್ಲಿ ಚಿಕಿತ್ಸೆ ಸಿಗದಿದ್ದರೆ, ಮುಂದೆ ಅದು ಬೆಳೆದು ಖಿನ್ನತೆಯತ್ತ ತಿರುಗುತ್ತದೆ. ಈ ಬೇಸರ ಎರಡು ವಾರವಾದರೂ ಕಡಿಮೆಯಾಗದಿದ್ದರೆ, ಖಿನ್ನತೆ ಗಂಭೀರವಾಗಿದೆ ಎಂದು ಪರಿಗಣಿಸಬೇಕಾಗುತ್ತದೆ. ಇದು ಪ್ರಸವಪೂರ್ವದಲ್ಲೇ ಕಾಣಿಸಿಕೊಳ್ಳಬಹುದು. ಆದರೆ, ಹೆಚ್ಚಾಗಿ ಕಾಣಿಸಿಕೊಳ್ಳುವುದು ಪ್ರಸವದ ನಂತರವೇ. ಹೆರಿಗೆಯಾಗಿ ನಾಲ್ಕು ವಾರದೊಳಗೆ ಶುರುವಾಗುವ ಖಿನ್ನತೆ ಸಮಸ್ಯೆ ಕೆಲವೊಮ್ಮೆ 2ರಿಂದ 3 ತಿಂಗಳವರೆಗೂ, ಇನ್ನೂ ಕೆಲವೊಮ್ಮೆ ಒಂದು ವರ್ಷದವರೆಗೂ ಬಿಡದೇ ಕಾಡಬಹುದು. ಇದು ಶೇ 11 ರಿಂದ 20 ಬಾಣಂತಿಯರನ್ನು ಬಾಧಿಸುತ್ತದೆ.

ಖಿನ್ನತೆಯಿರುವವರಲ್ಲಿ ಅತಿಯಾಗಿ ಅಳುವುದು, ಬಂಧು - ಬಾಂಧವರಿಂದ/ಮಗುವಿನಿಂದ ದೂರವಿರುವುದು, ನಿದ್ದೆ- ಹಸಿವಿನಲ್ಲಿ ತೀವ್ರ ಏರುಪೇರು, ಅತೀ ನಿರುತ್ಸಾಹ, ಚಡಪಡಿಕೆ, ನಿಸ್ಸಹಾಯಕತೆ, ತಪ್ಪಿತಸ್ಥ ಭಾವನೆ, ಯೋಚನೆ –ನಿರ್ಧಾರ ತೆಗೆದುಕೊಳ್ಳಲು ನಿಧಾನಿಸುವುದು, ತೀರ ಆತಂಕ - ಗೊಂದಲ, ಪದೇ ಪದೇ ಕಾಡುವ ಸಾವು - ಆತ್ಮಹತ್ಯೆ - ಮಗುವಿನ ಹತ್ಯೆಯ ಯೋಚನೆಗಳು ಮೂಡುತ್ತವೆ. ಇವೆಲ್ಲವೂ ಬಾಣಂತಿಯರ ಜೀವವನ್ನೇ ನುಂಗಿಬಿಡುವಂತೆ ಕಾಡುತ್ತದೆ. ಹೀಗಾದಾಗ, ತುರ್ತಾಗಿ ತಜ್ಞವೈದ್ಯರ ನೆರವು - ಸಲಹೆ ಪಡೆಯುವುದು ಅತ್ಯಗತ್ಯ. ಖಿನ್ನತೆ ನಿವಾರಕ ಔಷಧಗಳು, ಮನಸ್ಸನ್ನು ಸ್ಥಿಮಿತಕ್ಕೆ ತರುವ ಮದ್ದುಗಳ ಜೊತೆ, ವಿದ್ಯುತ್ ಕಂಪನಾ ಚಿಕಿತ್ಸೆ(electro convulsive therapy, ECT) ಹಾಗೂ ಆಪ್ತ ಸಮಾಲೋಚಕರಿಂದ ಚಿಕಿತ್ಸೆಯನ್ನು ಸರಿಯಾದ ಸಮಯಕ್ಕೆ ನೀಡಿದರೆ, ಪೂರ್ತಿ ಗುಣಮುಖರಾಗುವ ಸಾಧ್ಯತೆಗಳು ಅತಿ ಹೆಚ್ಚು. ಕುಟುಂಬ - ಸಮಾಜದ ಪ್ರೀತಿ ಆಸರೆಯೂ ಇಲ್ಲಿ ಬಹುಮುಖ್ಯ.

ಪ್ರಸವನಂತರದ ಮತಿಭ್ರಮಣೆ/ಬುದ್ಧಿ ವಿಕಲ್ಪ(postpartum psychosis)

ಸಾವಿರದಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಈ ತೀವ್ರತರವಾದ ಮಾನಸಿಕ ಕ್ಷೋಭೆ, ಅತಿವೇಗವಾಗಿ ಬಂದು ಹೆರಿಗೆ ನಂತರದ ಒಂದೆರಡು ದಿನಗಳಿಂದ ಒಂದೆರಡು ವಾರದೊಳಗೆ ಅತಿಯಾಗುತ್ತದೆ. ಈ ಕಾಯಿಲೆಯಲ್ಲಿ - ತೀವ್ರ ಗೊಂದಲ, ಮಗುವಿನ ಬಗೆಗಿನ ಪುನಃ ಪುನಃ ಬರುವ ಯೋಚನೆಗಳು, ಭ್ರಮೆ - ಭ್ರಾಂತಿ, ನಿದ್ರಾಹೀನತೆ, ಅತಿ ಉತ್ಸಾಹ - ಉದ್ವೇಗ, ಸಂಶಯ ಹಾಗೂ ತಮ್ಮನ್ನೇ ತಾವು ಅಥವಾ ಮಗುವಿಗೆ ಹಾನಿ ಮಾಡುವ ಯೋಚನೆ ಕಾಣಿಸಿಕೊಂಡು, ಬಾಣಂತಿಯರನ್ನೂ, ಮನೆಯವರನ್ನೂ, ತೀರಾ ದಿಗಿಲಿಗೆ ದೂಡುತ್ತದೆ. ಇದರಿಂದ ತಾಯಿ - ಮಗುವಿನ ಜೀವಕ್ಕೇ ಸಂಚಕಾರ ಉಂಟಾಗಬಹುದು. ಇಂಥ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗಾಗಿ, ಆಸ್ಪತ್ರೆಗೆ ದಾಖಲಿಸಿ ತಜ್ಞ ವೈದ್ಯರಿಂದ ಚಿಕಿತ್ಸೆಕೊಡಿಸಿ.

ಎಚ್ಚರವಿರಲಿ!

ಈ ಮಾನಸಿಕ ಕ್ಷೋಭೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಅನಾಹುತಗಳಿಗೆ ಆಹ್ವಾನವಿತ್ತಂತೆಯೇ ಸರಿ. ಇದರಿಂದ ತಾಯಿ - ಮಗು ಇಬ್ಬರ ಜೀವಕ್ಕೂ ಅಪಾಯ ತಪ್ಪಿದ್ದಲ್ಲ. ಹಾಗಾಗಿ,ಪ್ರಸವಪೂರ್ವ ಮತ್ತು ಪ್ರಸವೋತ್ತರ ಸಮಯದಲ್ಲಿ ತಲೆದೋರಬಹುದಾದ ಈ ಮಾನಸಿಕ ಕ್ಷೋಬೆಗಳ ಬಗ್ಗೆ ಕುಟುಂಬದವರು ಅರಿತಿರಬೇಕು.‌ ಗರ್ಭವತಿಯಾದಾಗಿನಿಂದಲೇ ಜಾಗ್ರತೆ ವಹಿಸಬೇಕು. ಬಾಣಂತಿಯಾದಾಗ ತೊಂದರೆ ಕಂಡರೆ, ಚಿಕಿತ್ಸೆ ಪಡೆಯಬೇಕು. ಗುಣಲಕ್ಷಣಗಳು ತೀವ್ರವಾಗಿ, ಎರಡು ವಾರಕ್ಕೂ ಮೀರಿ ಮುಂದುವರಿದರೆ, ಪರಿಸ್ಥಿತಿ ಹದಗೆಡುತ್ತಲೇ ಹೋದರೆ, ಮಗುವಿನ ಲಾಲನೆ ಪೋಷಣೆ / ತಮ್ಮ ದೈನಂದಿನ ಕೆಲಸವೂ ಮಾಡಿಕೊಳ್ಳಲಾಗುತ್ತಿಲ್ಲ ಎಂದು ಗೊತ್ತಾದರೆ ತುರ್ತು ಚಿಕಿತ್ಸೆಗಾಗಿ ಮುಂದುವರಿಯಬೇಕು.

ತಾಯಿ - ಮಗು - ಕುಟುಂಬ - ಅವಳ ಸುತ್ತಲಿನ ಸಮಾಜ - ಇವೆಲ್ಲವೂ ಚೆನ್ನಾಗಿರಬೇಕೆಂದರೆ, ಆ ತಾಯಿಯ ಮಾನಸಿಕ ಆರೋಗ್ಯವೂ ಚೆನ್ನಾಗಿರೋದು ಅತ್ಯಾವಶ್ಯಕ. ಈ ನಿಟ್ಟಿನಲ್ಲಿ ಅರಿವು, ಎಚ್ಚರ ಅತಿ ಪ್ರಸ್ತುತ!

ಯಾಕೆ ಹೀಗಾಗುತ್ತದೆ?

ಬಾಣಂತಿಯರಲ್ಲಾಗುವ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬದಲಾವಣೆಗಳಿಂದ, ಮಿದುಳಿನ ಮೇಲೆ ಪ್ರಭಾವ ಉಂಟಾಗಿ ಹೀಗಾಗುವ ಸಾಧ್ಯತೆಯಿದೆ. ನಿದ್ರಾಹೀನತೆ, ಹೊಸ ಜವಾಬ್ದಾರಿಯ ಒತ್ತಡ, ಹೊಸ ಪಾತ್ರದಲ್ಲಿನ ತಲ್ಲಣ - ಗೊಂದಲ, ದೇಹದಲ್ಲಾಗುತ್ತಿರುವ ಬದಲಾವಣೆ/ ನೋವುಗಳ ಅನುಭವ - ಹೀಗೆಯೇ ನಾನಾ ಭಾವನೆಗಳ ತಿಕ್ಕಾಟದಲ್ಲಿ ಬಾಣಂತಿ ಮನಸ್ಸು ಹೈರಾಣಾಗಬಹುದು.

ಪ್ರಸವ / ಬಸುರಿಯಾಗುವ ಮುನ್ನವೇ ಖಿನ್ನತೆ / ದ್ವಿಧ್ರುವ ಮನೋವ್ಯಾಕುಲತೆ ಇರುವವರಲ್ಲಿ, ಹಿಂದಿನ ಬಾಣಂತನದಲ್ಲೂ ಖಿನ್ನತೆ ಇದ್ದವರಲ್ಲಿ, ಕುಟುಂಬದಲ್ಲಿ ಹತ್ತಿರದವರಿಗೆ ಮಾನಸಿಕ ಸಮಸ್ಯೆ ಇದ್ದಲ್ಲಿ, ಪ್ರಸವ /ಬಸಿರು/ಬಾಣಂತನ ಕ್ಲಿಷ್ಟವಾಗಿ ದ್ದಲ್ಲಿ, ಮಗುವಿನಲ್ಲಿ ಅಂಗವೈಕಲ್ಯವಿದ್ದರೆ, ಅವಳಿ - ತ್ರಿವಳಿಗಳ ಜನನದಲ್ಲಿ, ಹಾಲುಣಿಸುವಲ್ಲಿ ತೊಂದರೆಗಳಿದ್ದಲ್ಲಿ, ಸಂಗಾತಿಯೊಡನೆ ಗಂಭೀರ ಸಮಸ್ಯೆಗಳಿದ್ದಲ್ಲಿ, ಬೇಡವಾದ ಬಸಿರು / ಬಾಣಂತನದಲ್ಲಿ, ಕುಟುಂಬ - ಸಮಾಜದ ಬೆಂಬಲವಿಲ್ಲದಲ್ಲಿ, ಆರ್ಥಿಕ ಕಷ್ಟಗಳಿದ್ದಲ್ಲಿ, - ಈ ರೀತಿಯ ಮನೋವ್ಯಾಕುಲತೆಗಳ ಸಂಭವ ಜಾಸ್ತಿ.

(ಲೇಖಕಿ: ಮನೋವೈದ್ಯೆ, ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT