ಮಹಿಳೆ ಆರೋಗ್ಯದ ದ್ಯೋತಕವೂ ಹೌದು...
‘ಕೃಷಿಯಲ್ಲಿ ಮೊದಲು ತೊಡಗಿಸಿಕೊಂಡವಳು ಮಹಿಳೆ ಎಂಬ ಮಾತೊಂದಿದೆ. ಕೃಷಿ ಆಕೆಯ ಮೇಲ್ವಿಚಾರಣೆಯಲ್ಲಿದ್ದಾಗ ವಿಷಮಯ ಆಹಾರ ಇರಲಿಲ್ಲ. ಅಡುಗೆ ಮನೆಯಲ್ಲಿ ಚಾಕು, ಚೂರಿ, ಖಾರದ ಪುಡಿ, ಲಟ್ಟಣಿಗೆಯಂತಹ ‘ಶಸ್ತ್ರಾಸ್ತ್ರ’ಗಳನ್ನು ಬಳಸಿ, ಹವಾಮಾನಕ್ಕೆ ತಕ್ಕಂತೆ ರುಚಿ ರುಚಿಯಾದ ಅಡುಗೆ ಮಾಡುತ್ತಾ ಎಲ್ಲರನ್ನೂ ಪೋಷಿಸಿಕೊಂಡು, ಬೆಳೆಸಿಕೊಂಡು ಬಂದವಳು ಮಹಿಳೆ’ ಎಂದು ಸಂವಾದ ನಡೆಸಿಕೊಟ್ಟ ತರೀಕೆರೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಸಬಿತಾ ಬನ್ನಾಡಿ ಮಾರ್ಮಿಕವಾಗಿ ಹೇಳಿದರು. ‘ಆಕೆಯ ಕೈಯಲ್ಲಿ ಅಡುಗೆ ಮನೆ ಇದ್ದಾಗ ಜಂಕ್ ಫುಡ್ ಇರಲಿಲ್ಲ. ಅಡುಗೆ ಇಂದು ಲಾಭದ ಉದ್ಯಮ ಆದ ತಕ್ಷಣ ಅದು ಗಂಡಿನ ಕೈಗೆ ಹೋಗಿದೆ. ಆತನ ಮೇಲ್ವಿಚಾರಣೆಯ ಕೃಷಿಯಲ್ಲಿ ಆಹಾರ ವಿಷಮಯವಾಗಿ ಮಾರ್ಪಟ್ಟಿದೆ. ಮಹಿಳೆಯ ಸ್ವಾತಂತ್ರ್ಯದಲ್ಲಿ ಜೀವಸಂಕುಲದ ಆರೋಗ್ಯವೂ ಅಡಗಿದೆ ಎಂಬುದರ ದ್ಯೋತಕವಿದು’ ಎಂದರು.