ದಾವಣಗೆರೆ: ಬೆಣ್ಣೆನಗರಿಯಲ್ಲಿ ಮಧ್ಯಾಹ್ನದ ಉರಿ ಬಿಸಿಲು ತಗ್ಗಿ ಮುಸ್ಸಂಜೆ ತಂಪೇರುವ ಹೊತ್ತಿಗೆ ‘ಛಲಗಾತಿಯರ ಕತೆ’ಗಳು ಎಳೆಎಳೆಯಾಗಿ ತೆರೆದುಕೊಂಡವು. ‘ಸಾಮಾನ್ಯ’ ಮಹಿಳೆಯರ ‘ಅಸಾಮಾನ್ಯ’ ಹೆಜ್ಜೆ ಗುರುತುಗಳು ಸಭಾಂಗಣದಲ್ಲಿ ಸೇರಿದ್ದ ನೂರಾರು ಪ್ರೇಕ್ಷಕರನ್ನು ಭಾವುಕತೆಯ ಉತ್ತುಂಗಕ್ಕೆ ಕೊಂಡೊಯ್ದವು.

ರಾಜ್ಯದ ವಿವಿಧೆಡೆಯಿಂದ ಹೆಕ್ಕಿ ತೆಗೆದು ತಂದಿದ್ದ 10 ಜನ ಸಾಧಕಿಯರ ಸ್ಫೂರ್ತಿಯ ಸಂಗತಿಗಳು ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ರೋಮಾಂಚನದ ಘಳಿಗೆ ಸೃಷ್ಟಿಸಿದವು. ಅವರು ಸಾಗಿಬಂದ ಸವಾಲು ಪ್ರೇಕ್ಷಕರ ಕಣ್ಣಾಲಿಗಳನ್ನು ತುಂಬಿಸಿತು. ಕಡುಕಷ್ಟಗಳನ್ನು ಮೀರಿ ಸಾಧನೆಯ ವೇದಿಕೆ ಹತ್ತಿ ನಿಂತ ಕ್ಷಣವು ಪ್ರಶಸ್ತಿ ಪುರಸ್ಕೃತರಲ್ಲೂ ಆನಂದ ಭಾಷ್ಪ ಉಕ್ಕಿಸಿತು.

ಊರ ಸ್ವಚ್ಛತೆಗಾಗಿ ತರಿಸಿದ್ದ ಕಸ ಸಂಗ್ರಹಿಸುವ ವಾಹನ ಓಡಿಸಲು ಚಾಲಕರೇ ಸಿಗದಿದ್ದಾಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿದ್ದ ನಫೀಸಾ ಅವರೇ ಸ್ಟೇರಿಂಗ್ ಹಿಡಿದು ಕೂತ ಕತೆ ಪ್ರೇಕ್ಷಕರ ಕಣ್ಣರಳಿಸಿತು. ‘ಕಸದ ವಾಹನವಲ್ಲೋ ಅಣ್ಣ, ಅದು ಸ್ವಚ್ಛತೆಯ ತೇರು’ ಎನ್ನುವ ಅವರ ಮಾತುಗಳು ಮಹಿಳಾ ಶಕ್ತಿಯನ್ನು ಅನಾವರಣಗೊಳಿಸಿತು.

ಕಣ್ಣಲ್ಲಿ ಬೆಳಕಿಲ್ಲದಿದ್ದರೂ ಕಾಲಿನಲ್ಲಿದ್ದ ಶಕ್ತಿಯನ್ನೇ ನಂಬಿ ಓಡಿದ, ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಚಿನ್ನ ಗೆದ್ದ ರಕ್ಷಿತಾ ರಾಜು ಅವರ ಬದುಕು ವಿಶ್ವಾಸದ ಅಲೆ ಸೃಷ್ಟಿಸಿತು. ಪ್ರಶಸ್ತಿ ಸ್ವೀಕಾರ ಮುಗಿದರೂ ವೇದಿಕೆಯಿಂದ ಕೆಳಗಿಳಿಯದೇ ತಾನು ಮಾತನಾಡಲೇಬೇಕು ಎನ್ನುತ್ತಾ ಅವಕಾಶದ ಹಕ್ಕಿ ಎಂಬಂತೆ ಮೈಕ್ ಹಿಡಿದ ರಕ್ಷಿತಾ ಅವರ ಉತ್ಸಾಹ ವಿದ್ಯುತ್ ಸಂಚಾರದಂತೆ ಹರಡಿತು. ಸಾಧನೆಗೆ ಸಹಾಯ ಮಾಡಿದವರನ್ನು ಮನಸಾರೆ ಸ್ಮರಿಸಿದ ಅವರು ಕೃತಜ್ಞತೆಯ ಮಾತುಗಳನ್ನಾಡಿದರು. ಆಕೆಯ ಮಾತು ಕೇಳಿದ ಪ್ರೇಕ್ಷಕರು ಮೇಲೆದ್ದು ಕರತಾಡನದ ಮಳೆಗರೆದರು.

ಬರೀ ವೇದನೆಗಳನ್ನೇ ಮೈದುಂಬಿಕೊಂಡಿದ್ದ ಜಯಶ್ರೀ ಗುಳಗಣ್ಣನವರ ಅವರು ತಮ್ಮ ಕಷ್ಟ ಹೇಳಿಕೊಳ್ಳಲಿಲ್ಲ. ‘ನನ್ನ ಬದುಕು ಮ್ಯೂಸಿಕ್ ಪ್ಲೇಯರ್ ಅಲ್ಲ, ಬರೀ ರೇಡಿಯೊ. ರೇಡಿಯೊದಲ್ಲಿ ಪ್ರಸಾರವಾದುದನ್ನು ಕೇಳಲೇಬೇಕು. ಹಾಗೆಯೇ ಬಂದಂತೆಯೇ ಬದುಕು’ ಎನ್ನುತ್ತಾ ವಾಸ್ತವವನ್ನು ತೆರೆದಿಟ್ಟಾಗ ಕೇಳುವ ಮನಸ್ಸುಗಳು ಅಹುದಹುದು ಎಂದವು. ‘ನನ್ನ ಕಷ್ಟ ಹೇಳಿದರೆ ನೀವು ಅಳುತ್ತೀರಿ, ಅದೆಲ್ಲಾ ಬೇಡವೇ ಬೇಡ, ಈ ಕ್ಷಣವನ್ನು ಅನುಭವಿಸುತ್ತೇನೆ’ ಎನ್ನುವಾಗಲೂ ಪ್ರೇಕ್ಷಕರ ಕಣ್ಣಂಚು ಜಿನುಗಿತು.

ವಿಜ್ಞಾನಿ ಎಂ.ವಿ.ರೂಪಾ ಅವರು ಹೇಳಿದ ‘ಇಸ್ರೋ ಕುಟುಂಬದ ಕತೆ’ ನೋಡುಗರನ್ನು ಕುತೂಹಲದ ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಯಿತು. ಚಂದ್ರಯಾನ, ಮಂಗಳಯಾನ ಕಾರ್ಯಾಚರಣೆಯ ಕಾಲದಲ್ಲಿ ಬಸುರಿ, ಬಾಣಂತಿಯರಾಗಿದ್ದ ವಿಜ್ಞಾನಿಗಳು ತೋರಿದ ಕರ್ತವ್ಯ ಪ್ರಜ್ಞೆಯನ್ನು ತೆರೆದಿಟ್ಟಿತು. ನಿಗದಿತ ಕರ್ತವ್ಯ ಸಮಯಕ್ಕೆ ಸೀಮಿತಗೊಳ್ಳದ ಮಹಿಳಾ ವಿಜ್ಞಾನಿಗಳು ಹಗಲು–ರಾತ್ರಿ ತೊಡಗಿಸಿಕೊಂಡ ಪರಿ, ಹೆಣ್ಣು– ಗಂಡೆಂಬ ತಾರತಮ್ಯವಿಲ್ಲದ ಭಾವ, ಸಹೋದ್ಯೋಗಿಗಳ ಪರಸ್ಪರ ಸಹಾಯ ಎಲ್ಲವೂ ಮಹಿಳಾ ಶಕ್ತಿಯನ್ನು ಅನಾವರಣಗೊಳಿಸಿದವು.

ಮೀನುಗಾರಿಕೆಯ ದೋಣಿ ಏರಿ ನಿಂತ ಪ್ರಾಪ್ತಿ ಮೆಂಡನ್ ಅವರ ದೃಷ್ಟಿಕೋನ ಹೊಸ ದಾರಿ ತೋರಿಸಿತು. ಕಿತ್ತುತಿನ್ನುವ ಬಡತನದ ನಡುವೆಯೂ ಶಿಕ್ಷಣದ ಏಣಿ ಹತ್ತಿ ನಿಂತ ಪಣಿಯನ್ ಬುಡಕಟ್ಟು ಸಮುದಾಯದ ದಿವ್ಯಾ ಅವರ ಕತೆ ನೋಡುಗರಲ್ಲಿ ‘ಹೆಮ್ಮೆಯ ಭಾವ’ ತರಿಸಿತು. ಜಾತಿಯ ಸಂಕೋಲೆ ಕಳಚಿ ಕೊರಗ ಸಮುದಾಯಕ್ಕೆ ಶಕ್ತಿಯಾದ ಸಬಿತಾ ಗುಂಡ್ಮಿ ಅವರ ಕತೆಯೂ ಕೇಳುಗರ ಹೃದಯ ತುಂಬಿಸಿತು.

ಪ್ರಶಸ್ತಿ ಪ್ರದಾನ ಸಮಾರಂಭದ ನಡುವೆ ನಡೆದ ‘ಹೊಸ ತಲೆಮಾರಿನ ಸ್ವತಂತ್ರ’ ಮಹಿಳೆ ಸಂವಾದ ಮಹಿಳೆಯ ಅಸ್ತಿತ್ವದ ದರ್ಶನ ಮಾಡಿಸಿತು. ತಾರಕ್ ಡಾನ್ಸ್ ಅಕಾಡೆಮಿ ಕಲಾವಿದರು ಪ್ರದರ್ಶಿಸಿದ ನೃತ್ಯ ಮಗಳಾಗಿ, ಅಕ್ಕ– ತಂಗಿಯಾಗಿ, ಪತ್ನಿಯಾಗಿ, ತಾಯಿಯಾಗಿ ವಿವಿಧ ಪಾತ್ರ ನಿರ್ವಹಿಸುವ ಮಹಿಳಾ ಶಕ್ತಿಯನ್ನು ತೋರಿಸಿತು.

ನಫೀಸಾ ಪೆರುವಾಯಿ, ರಕ್ಷಿತಾ ರಾಜು ಹಾಗೂ ಕೆ.ಡಿ.ಜಲಜಾಕ್ಷಿ ಅವರಿಗೆ ನಿವೃತ್ತ ನ್ಯಾಯಮೂರ್ತಿ ರತ್ನಕಲಾ ಮತ್ತು ಬಿ.ಎಸ್.ಚನ್ನಬಸಪ್ಪ ಜವಳಿ ಮಳಿಗೆಯ ಮಾಲೀಕ ಬಿ.ಸಿ. ಶಿವಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಜಯಶ್ರೀ ಗುಳಗಣ್ಣನವರ, ಎಂ.ವಿ.ರೂಪಾ ಹಾಗೂ ಪ್ರಾಪ್ತಿ ಮೆಂಡನ್ ಅವರಿಗೆ ಕಲಾವಿದೆ ಮಾಳವಿಕಾ ಅವಿನಾಶ್ ಮತ್ತು ಜಿ.ಎಂ.ವಿಶ್ವವಿದ್ಯಾಲಯದ ಸಹ ಕುಲಪತಿ ಪ್ರೊ. ಎಚ್.ಡಿ.ಮಹೇಶಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಸಂಗಮ್ಮ ಸಾಣಕ, ಲಲಿತಾ ರಘುನಾಥ್, ಸಬಿತಾ ಗುಂಡ್ಮಿ, ದಿವ್ಯಾ ಎಸ್.ಆರ್. ಅವರಿಗೆ ಐಪಿಎಸ್ ಅಧಿಕಾರಿ ಧರಣಿದೇವಿ ಮಾಲಗತ್ತಿ ಪ್ರದಾನ ಮಾಡಿದರು.

‘ಸುಧಾ’ ವಾರಪತ್ರಿಕೆಯ ಯುಗಾದಿ ವಿಶೇಷಾಂಕವನ್ನು ಲೇಖಕಿ ಬಾನು ಮುಷ್ತಾಕ್ ಬಿಡುಗಡೆ ಮಾಡಿದರು. ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಸ್ವಾಗತಿಸಿದರು. ಟಿಪಿಎಂಎಲ್ ಸಿಎಒ ಕಿರಣ್ ಸುಂದರರಾಜನ್, ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಎ.ರವಿ, ಜಾಹೀರಾತು ವಿಭಾಗದ ನ್ಯಾಷನಲ್ ಸೇಲ್ಸ್ ಹೆಡ್ ಆನಂದ್ ಬಿಲ್ದಿಕರ್, ಡಿಜಿಎಂ ಅನಂತ್ ವಿ., ‘ಪ್ರಜಾವಾಣಿ’ ಸುದ್ದಿ ಸಂಪಾದಕ ಪ್ರವೀಣ್ ಕುಲಕರ್ಣಿ, ಬ್ಯೂರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಇದ್ದರು. ಆರ್.ಜೆ.ನಿಖಿತಾ ಕಾರ್ಯಕ್ರಮ ನಿರೂಪಿಸಿದರು.

ಬಾಯಲ್ಲಿ ನೀರು ತರಿಸಿದ ಬೆಣ್ಣೆ ದೋಸೆ

‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ದಾವಣಗೆರೆಯ ವೈಶಿಷ್ಟ್ಯಗಳನ್ನು ಹೇಳುತ್ತಾ ‘ಇದು ದಾನಿಗಳ ಊರು’ ಎಂದಾಗ ದೇವನಗರಿಯ ಜನರ ಕಣ್ಣುಗಳು ಹೂವಿನಂತೆ ಅರಳಿದವು. ನಂತರ ಮಾತಿಗೆ ಬಂದ ನಟಿ ಮಾಳವಿಕಾ ‘ದಾವಣಗೆರೆ ದಾನಿಗಳ ಊರು ಇರಬಹುದು ಆದರೆ ನಮಗಿದು ಬೆಣ್ಣೆ ದೋಸೆಯ ತವರು’ ಎಂದಾಗ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಜನರ ಬಾಯಿಯಲ್ಲಿ ನೀರು ಬಂತು.

ಸಂಸದೆ ಡಾ.ಪ್ರಭಾ ಶ್ಲಾಘನೆ

ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಬೇಕಿದ್ದ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಆದರೂ ಕಾರ್ಯಕ್ರಮಕ್ಕೆ ಶುಭಕೋರಿ ಸಾಧಕಿಯರನ್ನು ಅಭಿನಂದಿಸಿ ಸಂದೇಶ ಕಳುಹಿಸಿದ್ದರು. ಅದರಲ್ಲಿ ‘ಪ್ರಜಾವಾಣಿ’ ಪತ್ರಿಕೆಯ ಇತಿಹಾಸ ಮಹತ್ವ ವಿಶ್ವಾಸಾರ್ಹತೆ ಹಾಗೂ ಎಲೆಮರೆಕಾಯಿಯಂತೆ ಇರುವವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದನ್ನು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.