‘ಡೋಲೊ 650 ಮಾತ್ರೆ, ಬಿಸಿ ರಾಗಿ ಹಿಟ್ಟು..ಕೊರೊನಾದೋರಿಗೆ ಅದೇಯಾ..’ ಎಂದು ಹೇಳಿದ್ದ ಮೈಸೂರಿನ ಶಶಿರೇಖಾ ಅವರ ವಿಡಿಯೊ ವೈರಲ್ ಆಗಿತ್ತು. ರಸ್ತೆಬದಿಯಲ್ಲಿ ಬಿದಿರಿನಬುಟ್ಟಿ ಹೆಣೆಯುತ್ತಾ ಸ್ಥಳೀಯ ಸುದ್ದಿವಾಹಿನಿಯೊಂದಿಗೆ ಮಾತನಾಡಿದ್ದ ಶಶಿರೇಖಾ, ಬಡವರಿಗೆ ಕೊರೊನಾ ಬಂದರೆ ಅವರು ಏನು ಮಾಡುತ್ತಾರೆ, ಸರ್ಕಾರ ಬಡವರನ್ನು ಲಾಕ್‌ಡೌನ್ ಸಂದರ್ಭದಲ್ಲಿ ಹೇಗೆ ನೋಡಿಕೊಳ್ಳುತ್ತಿದೆ ಎಂದು ಆ ವಿಡಿಯೊದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ‘ಹೊದವರ್ಷ ಎಲ್ಲಾ ಆಂಟಿದೀರ್ಗೆ ಬಂತು, ಈ ವರ್ಷ ಎಲ್ಲಾ ಹುಡುಗ್ರುಗೆ ಬಂತು, ಈಗ ಹೈಕ್ಲುಗೆ. ಆಮೇಲೆ ಎಲ್ಲಾ ಹೊಟ್ಟೆಯೊಳಗೆ ಇರುತ್ತಲ ಆ ಕೂಸ್ಗೆ; ಅದು ನಾಲ್ಕನೇ ಅಲೆ...’ ಎಂದೂ ಹೇಳಿದ್ದರು. ವಿಡಿಯೊ ವೈರಲ್ ಆದ ಬಳಿಕ ಕೆಲವು ಟಿ.ವಿ ಚಾನೆಲ್ ಅವರೂ ಶಶಿರೇಖಾ ಅವರನ್ನು ಸಂದರ್ಶನ ಕೂಡ ಮಾಡಿದ್ದವು.
ಕೆಲವು ಸಮಯದ ನಂತರ ಇದೇ ವಿಡಿಯೊ ತುಣುಕುಗಳು ಟ್ರೋಲರ್ಸ್‌ಗೆ ಆಹಾರವಾದವು. ಹಿನ್ನೆಲೆ ಸಂಗೀತ ನೀಡಿದರು, ಇದಕ್ಕೆ ಕೆಲವರು ಡ್ಯಾನ್ಸ್ ಮಾಡಿ ವಿಡಿಯೊ ಮಾಡಿದರು, ಕೆಲವರು ಕಾಲರ್ ಟ್ಯೂನ್ ಮಾಡಿಕೊಂಡರು, ಶಶಿರೇಖಾ ಅವರಂತೆ ನಟನೆ ಮಾಡಿ ವಿಡಿಯೊಗಳನ್ನು ಶೇರ್ ಮಾಡಿಕೊಂಡರು... ಹೀಗೆ ನಾನಾ ರೀತಿಯಲ್ಲಿ ಅವರನ್ನು, ಅವರ ಮಾತುಗಳನ್ನು ಟ್ರೋಲ್ ಮಾಡಲಾಯಿತು. ಆದರೆ, ಈ ಯಾವ ಟ್ರೋಲ್‌ಗಳಿಂದಲೂ ಧೈರ್ಯಗೆಡದ ಶಶಿರೇಖಾ ತಮ್ಮನ್ನು ಟ್ರೋಲ್ ಮಾಡುತ್ತಿರುವವರಿಗೆ ದಿಟ್ಟವಾಗಿಯೇ ಇಲ್ಲಿ ಉತ್ತರಿಸಿದ್ದಾರೆ.
‘ಈಗೆಲ್ಲಾ ಸೋಷಿಯಲ್ ಮೀಡಿಯಾ ಅಂದ್ರೆ ಅಷ್ಟೆ, ಟ್ರೋಲ್ ಮಾಡ್ತಾರೆ ಅಲ್ವಾ ಮೇಡಮ್. ನಮ್ಮಿಂದ ಅವರ ಹೊಟ್ಟೆ ತುಂಬತ್ತೆ, ಲೈಕ್ಸ್ ಬರತ್ತೆ, ಶೇರ್ ಆಗತ್ತೆ ಅಂದ್ರೆ ಆಗ್ಲಿ ಬಿಡಿ. ಸಾಯೋನಿಗೆ ಹುಲ್ಲು ಕಡ್ಡಿನೂ ಸಹಾಯ ಮಾಡುತ್ತೆ ಅನ್ನೋ ಹಾಗೆ, ಇಂಥ ಟ್ರೋಲ್‌ಗಳು ಕೂಡ ನನ್ನ ಸಹಾಯಕ್ಕೆ ಬಂದ್ವು. ನನ್ನ ಕಷ್ಟ ನೋಡಿ, ಹಲವರು ನನ್ನ ಸಹಾಯಕ್ಕೆ ಬಂದ್ರು’.
‘ನನ್ನ ಅಭಿಪ್ರಾಯ ಹಂಚಿಕೊಂಡ ವಿಡಿಯೊ ವೈರಲ್ ಆದಾಗ ಒಂದು ರೀತಿ ಖುಷಿಯೂ ಆಗಿತ್ತು, ಬೇಸರವೂ ಆಗಿತ್ತು. ಬಸ್‌ನಲ್ಲಿ ಹೋಗಲಿ, ರಸ್ತೆನಲ್ಲಿ ನಡೆದುಕೊಂಡು ಹೋಗಲಿ ಎಲ್ಲರೂ ನನ್ನನ್ನು ಮಾತನಾಡಿಸಿ ‘ಮೇಡಮ್ ವಿಡಿಯೊ ನೋಡಿದೆವು. ತುಂಬಾ ಚೆನ್ನಾಗಿ ಮಾತನಾಡಿದ್ದೀರಿ, ಬಡವರ ಧ್ವನಿ ಆಗಿದ್ದೀರಿ. ಹೀಗೆ ಮಾತನಾಡುತ್ತಾ ಇರಿ’ ಅಂತಲ್ಲಾ ಹೇಳ್ತಿದ್ರು; ಖುಷಿ ಆಗ್ತಿತ್ತು. ಸಂಘ–ಸಂಸ್ಥೆ ಅವ್ರು, ಕೆಲವು ಮೇಡಮ್, ಸರ್‌ಗಳೆಲ್ಲ ನನ್ನ ಹುಡುಕಿಕೊಂಡು ಬಂದು ಸಹಾಯ ಮಾಡಿದ್ರು. ನಮ್ಮದು ಅಲೆಮಾರಿ ಸಮುದಾಯ. ಆಧಾರ್ ಕಾರ್ಡ್, ರೇಷನ್ ಕಾರ್ಡು ಎಂಥದು ಇಲ್ಲ ನಮ್ಮ ಹತ್ರ. ಒಬ್ರು ಸರ್ ಬಂದು ಅದನೆಲ್ಲಾ ಮಾಡಿಸಿಕೊಡ್ತೀನಿ ಅಂತ ಓಡಾಡ್ತಾ ಇದಾರೆ’.
‘ನನ್ನ ಟ್ರೋಲ್ ಮಾಡ್ತಾ ಇದಾರೆ ಅಂತ ನಂಗೆ ಗೊತ್ತಾಗಿದ್ದು ನನ್ನ ಗಂಡನ ಫ್ರೆಂಡ್ಸ್‌ನಿಂದ. ಅಕ್ಕ ನೋಡು ಯಾವ ಯಾವ ರೀತಿ ಟ್ರೋಲ್ ಮಾಡ್ತಾ ಇದಾರೆ ಅಂತ ಬಂದು ತೋರ್ಸಕೆ ಶುರು ಮಾಡಿದ್ರು. ಮೊದಲಿಗೆ ಬೇಸರ ಆಯ್ತು ನಿಜ. ಆದರೆ ಈಗ, ಮಾಡಿಕೊಂಡು ಹೋಗ್ಲಿ ಅಂತ ಬಿಟ್ಟಿದೀನಿ. ದೊಡ್ಡ ದೊಡ್ಡ ಮನುಷ್ಯರನ್ನೇ ಟ್ರೋಲ್ ಮಾಡ್ತಾರಂತೆ, ಸಿನಿಮಾದೋರ್‍ನ ಟ್ರೋಲ್ ಮಾಡ್ತಾರಂತೆ ನಾನೇನು ದೊಡ್ಡವಳಾ ಅಂತ ತಲೆಕೆಡ್ಸಿಕೊಳ್ಳಲ್ಲ. ಬೆಳೆಯೋರ್‍ನ ಕಂಡ್ರೆ ಕಾಲು ಎಳೆಯೋರು ತುಂಬಾ ಜನ ಇರ್‍ತಾರೆ ಅಲ್ವಾ’.
‘ಆದರೆ, ಯಾವಾಗ ನನ್ನ ಟ್ರೋಲ್ ಮಾಡಕೆ ಶುರು ಮಾಡಿದ್ರೊ ಆಗ ಜನ ನನ್ನನ್ನ ನೋಡೊ ರೀತೀನೇ ಚೇಂಜ್ ಆಯ್ತು. ಮನೆಯೊಳಗೆ ಕೂತ್ರೆ ನಮ್ಮ ಹೊಟ್ಟೆ ತುಂಬಲ್ಲ. ಬಸ್‌ನಲ್ಲಿ ಹೋಗ್ತಾ ಇದ್ರೆ, ನನ್ನ ನೋಡಿದ್ಕೂಡ್ಲೆ ನನ್ನ ಟ್ರೋಲ್ ಮಾಡಿರೊ ವಿಡಿಯೊನ ಹಾಕ್ತಾರೆ. ಒಂಥರಾ ಆಗುತ್ತೆ; ಅದಕ್ಕೆ ಎರಡು ಕಣ್ಣು ಬಿಟ್ಟು ಪೂರ್ತಿ ಮುಖ ಮುಚ್ಚಿಕೊಂಡು ಬಿಡ್ತೇನೆ. ಇಲ್ಲ ಅಂದ್ರೆ, ಏನಮ್ಮ ಚೆಕ್ ಬಂದಿರ್‌ಬೇಕು ಅಲ. ಡೋಲೋ ಕಂಪನಿಯಿಂದಲೂ ಸುಮಾರು ದುಡ್ಡು ಬಂದಿರ್‌ಬೇಕು ಅಂತ ಕೇಳೋಕೆ ಶುರು ಮಾಡಿದಾರೆ. ಟ್ರೋಲ್ ಮಾಡೋರು ಕೂಡ ನಂಗೆ ದುಡ್ಡು ಕೊಟ್ಟಿದಾರೆ ಅಂತ ಮಾತಾಡ್ತಾರೆ. ನಾನೇನೊ ಐಶಾರಾಮಿ ಜೀವನ ನಡಸ್ತಾ ಇದಿನಿ ಅನ್ನೋಥರ ಮಾತಾಡ್ತಾರೆ.’
‘ದೊಡ್ಡೋರು ಬಿಡಿ, ಸಣ್ಣ ಸಣ್ಣ ಮಕ್ಕಳು ಸಹ, ನೀರು ತರೋಕೆ ಹೋದ್ರೆ ಡೋಲೊ 650 ಆಂಟಿ ಬಂದ್ರು ಅಂತಾರೆ. ಬೈದ್ರೆ ಓಡಿ ಹೋಗ್ತಾರೆ. ಯಾರದ್ದಾದ್ರೂ ಮನೆಗೆ ಹೋದ್ರೆ, ‘ಅಮ್ಮ.. ಡೋಲೊ 650 ಆಂಟಿ ಬಂದಿದಾರೆ ಬಾರಮ್ಮ’ ಅಂತ ಮಕ್ಕಳು ಕೂಗ್ತಾರೆ. ಆಗಯೆಲ್ಲಾ ತುಂಬಾ ಬೇಸರ ಆಗತ್ತೆ’.
‘ನನ್ನ ಬದುಕು ಏನು ಬದಲಾಗಿಲ್ಲ. ಈಗಂತು ಲಾಕ್‌ಡೌನ್ ಮಾಡಿ ನಮ್ಮ ಕೆಲಸ ಹೋಯ್ತು. ಬಿದಿರು ಬುಟ್ಟಿ ಮಾಡಿಕೊಂಡು ಜೀವನ ಮಾಡೋರು ನಾವು. ಈಗ ಬಿದಿರು ಇಲ್ಲ. ಬೇರೆ ಕೆಲಸನೂ ಇಲ್ಲ. ಗಂಡ ತೆಂಗಿನಕಾಯಿ ಲೋಡ್ ಮಾಡದು, ಇಳಿಸದು ಮಾಡ್ತಾನೆ. ನಾನು ಮಾತಾಡಿದ ವಿಡಿಯೊ ವೈರಲ್ ಆದ್ರು, ನನ್ನ ಟ್ರೋಲ್ ಮಾಡಿದ್ರು ನನ್ನ ಬದುಕು ಬದ್ಲಾಗ್ಲಿಲ್ಲ. ಇದ್ದಲ್ಲೆ ಇದಿನಿ. ನನ್ನ ಇಟ್ಕೊಂಡು ಹಾಸ್ಯ ಮಾಡ್ಕೊಂಡು ಕೆಲವರು ಹೆಚ್ಚು ಲೈಕ್ಸ್, ಫಾಲೋವರ್ಸ್‌ನ ಜಾಸ್ತಿ ಮಾಡಿಕೊಂಡ್ರು ಅಷ್ಟೆ. ನನ್ನ ಮಕ್ಕಳನ್ನ ಓದಿಸ್ಬೇಕು. ಕೆಲಸನೂ ಇಲ್ಲ. ಜೀವನ ನಡೆಸೋದು ತುಂಬಾ ಕಷ್ಟ ಇದೆ.’
‘ಎಷ್ಟೇ ಟ್ರೋಲ್ ಮಾಡಿದ್ರು ನನ್ ಕುಟುಂಬ ನನ್ನ ಸಪೋರ್ಟ್‌ಗೆ ಇತ್ತು. ನಾನು ಧೈರ್ಯವಾಗಿ ಎದ್ರುಸ್ದೆ. ಪಾಪಾ, ಬೇರೆ ಹೆಣ್ಣುಮಕ್ಕಳು ಏನ್ ಮಾಡ್ಬೇಕು ಮೇಡಮ್. ಹಾಗಿದ್ರೆ ಬಡವರು ಮಾತಾಡ್ಬಾರ್ದಾ? ತಮ್ಮ ಕಷ್ಟ ಹೇಳ್ಕೋಬಾರ್ದಾ? ಈ ತರ ಟ್ರೋಲ್ ಮಾಡಿದ್ರೆ ನಾಳೆ ಯಾರು ಮುಂದೆ ಬಂದು ಮಾತಾಡ್ತಾರೆ. ಅದ್ರಲ್ಲೂ ಹೆಣ್ಣುಮಕ್ಕಳು; ಯಾರೂ ಬರಲ್ಲ. ನಾನು ಹೆದರಲ್ಲ. ಮುಂದೆನೂ ಮಾತಾಡ್ತೀನಿ. ನಾನೇನು ತಪ್ಪು ಕೆಲಸ ಮಾಡಿಲ್ಲ, ಯಾರದ್ದೋ ಮನೆ ಕಳ್ಳತನ ಮಾಡಿಲ್ಲ, ನಮ್ಮ ಕಷ್ಟ ಹೇಳಿಕೊಂಡಿದೀನಿ ಅಷ್ಟೆ. ಎಷ್ಟೆ ಟ್ರೋಲ್ ಮಾಡಿದ್ರು ನಾನು ಮಾತಾಡೋದ್ನ ನಿಲ್ಸಲ್ಲ’.
ಈ ಹಿಂದೆಯೂ ‘ಯಾಕಣ್ಣ..’ ಎಂದು ಹೇಳಿದ್ದ ಒಬ್ಬ ಹೆಣ್ಣುಮಗಳನ್ನು ಟ್ರೋಲ್ ಮಾಡಿ, ಆಕೆಯ ಬದುಕೇ ದುಸ್ತರವಾಗುವಂತೆ ಮಾಡಿತ್ತು ಈ ಸಮಾಜ. ಹೆಣ್ಣು ಮಕ್ಕಳ ಕುರಿತ ಟ್ರೋಲ್‌ಗಳ ಅಭಿರುಚಿ ತೀರಾ ಕೆಳಮಟ್ಟದ್ದು; ಆಶ್ಲೀಲವಾದುದು. ನಮ್ಮ ಮನೋರಂಜನೆಗಾಗಿ ಬೇರೆಯವರ ಬದುಕನ್ನ ದುಸ್ತರ ಮಾಡುವುದು ಸಮಾಜ ಸಾಗುತ್ತಿರುವ ದಿಕ್ಕಿನ ಸೂಚನೆ. ಇಂಥ ಟ್ರೋಲರ್ಸ್‌ಗೆ ಹೆಣ್ಣುಮಕ್ಕಳೇ ಗುರಿ. ಶಶಿರೇಖಾ ಅವರ ಉದಾಹರಣೆ ನೋಡಿದರೆ, ಹೆಣ್ಣುಮಕ್ಕಳು ಈಗ ಇಂಥ ಟ್ರೋಲ್‌ಗಳಿಗೆ ಹೆದರುತ್ತಿಲ್ಲ; ಸೊಪ್ಪು ಹಾಕುತ್ತಿಲ್ಲ. ಬದಲಿಗೆ ಧೈರ್ಯದಿಂದ ಎದುರಿಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.