ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಷಾಡ: ಸೇಲ್‌ನಲ್ಲಿ ಸೀರೆ ಸಿರಿ– ಯಾವ ಸೀರೆಗೆ ಎಷ್ಟು ಆದ್ಯತೆ?

ಯಾವ ಸೀರೆಗೆ ಎಷ್ಟು ಆದ್ಯತೆ ಕೊಡಬೇಕು ಎಂಬ ಮಾಹಿತಿ ಇಲ್ಲಿದೆ..
ಸೌಮ್ಯ ರಾಜಗುರು
Published 21 ಜೂನ್ 2024, 15:45 IST
Last Updated 21 ಜೂನ್ 2024, 15:45 IST
ಅಕ್ಷರ ಗಾತ್ರ

ಹಬ್ಬಗಳ ಸಾಲು ಸಾಲಿಗೆ ಮುನ್ನ ಬರುವ ಈ ಆಷಾಢ ಸೇಲ್‌ ಹೆಂಗಳೆಯರು ಸೀರೆ ಸಂಗ್ರಹಕ್ಕೂ, ಉಡುಗೊರೆಯಾಗಿ ಕೊಡಲೂ ಹೇಳಿ ಮಾಡಿಸಿದ ಅವಕಾಶವಾಗಿದೆ. ಯಾವ ಸೀರೆಗೆ ಎಷ್ಟು ಆದ್ಯತೆ ಕೊಡಬೇಕು ಎಂಬ ಮಾಹಿತಿ ಇಲ್ಲಿದೆ..

ಈ ಸಲ, ಆಶಾಢದ ಸೇಲ್‌ನಲ್ಲಿ ಬನಾರಸಿ ತೊಗೊಬೇಕು, ಕಳೆದ ಸಲ ಪಟೋಲಾ ತೊಗೊಂಡಿದ್ದೆ. ಸಾಧ್ಯವಾದರೆ ಒಂದು ಇಕತ್‌ ಸಹ.. ಹೀಗೆ ಮೇ ತಿಂಗಳಿನಿಂದಲೇ ಆಷಾಢದ ಸೇಲ್‌ನಲ್ಲಿ ತೊಗೊಬೇಕಿರುವ ಸೀರೆಗಳ ಪಟ್ಟಿ ಶುರುವಾಗುತ್ತದೆ.

ಈ ಸೇಲ್‌ ಸಂಸ್ಕೃತಿ ಶುರುವಾಗಿದ್ದೇ ಈ ಸಹಸ್ರಮಾನದ ಈಚೆಯಿಂದ. ಅದಕ್ಕೆ ಮೊದಲೆಲ್ಲ ಆಷಾಢ ಮಾಸದಲ್ಲಿ ಮಳೆಯದ್ದೇ ಸಂಭ್ರಮ ಇರುತ್ತಿತ್ತು. ಆಷಾಢದಲ್ಲಿ ಏನೇನೂ ಕೊಡುಕೊಳ್ಳುವ ಸಂಭ್ರಮ ಇರುತ್ತಿರಲಿಲ್ಲ. ಈ ತಿಂಗಳು ಕೊಟ್ಟಿದ್ದು ಮರಳುವುದಿಲ್ಲ ಎಂಬ ನಂಬಿಕೆ ಬೇರೆ ಇತ್ತು. ಬಹುಶಃ ಅದು ಕೊಡೆಗೆ ಸಂಬಂಧಪಟ್ಟ ಮಾತಿರಬೇಕು. ‘ಕೊಡೆ‘ ಪದವೇ ಏನನ್ನೂ ಕೊಡೆ ಎಂಬುದಾಗಿ ಬದಲಾಗಿರಬಹುದು. 

ಈಗ ವಿಷಯ ಅದಲ್ಲ. ಆಷಾಢ ಮಾಸ ಬಂದರೇನೆ ಸೀರೆಗಳನ್ನ ಕೊಳ್ಳಲು ಎಂದು ಬದಲಾಗಿದೆ. ಆಷಾಢದ ಸೇಲ್‌ ಬರುವ ಮೊದಲೇ ನಿಮ್ಮ ಅಗತ್ಯಗಳ ಬಗ್ಗೆ ಸ್ಪಷ್ಟ ನಿಲುವು ಇದ್ದರೆ, ನಿಮ್ಮ ಒಲವುಗಳ ಬಗ್ಗೆ ಪುಟ್ಟದೊಂದು ಪಟ್ಟಿ ಇದ್ದರೆ, ಈ ಸೇಲ್‌ನಲ್ಲಿಯೂ ಖರ್ಚುವೆಚ್ಚಗಳನ್ನು ಸರಿದೂಗಿಸಬಹುದು. 

ಸೀರೆಗಳನ್ನ ಸೇಲ್‌ನಲ್ಲಿ ಕೊಳ್ಳಬಹುದೆ? ದರ ಏರಿಕೆ ಮಾಡಿ, ಮತ್ತೆ ತಗ್ಗಿಸಿ ಕೊಡುತ್ತಾರೆಯೇ ಎಂಬ ಅನುಮಾನ ಬಹುತೇಕರಿಗೆ ಇದ್ದೇ ಇರುತ್ತದೆ. ಈ ಋತುವಿನಲ್ಲಿ ಮಗ್ಗಗಳಲ್ಲಿ ವಿನ್ಯಾಸಗಳನ್ನು ಬದಲಿಸಲಾಗುತ್ತದೆ. ಟ್ರೆಂಡ್‌ ಬದಲಿಯಾಗುವಾಗ ಈ ಸ್ಟಾಕ್‌ ಖಾಲಿ ಮಾಡಲೆಂದೇ ಈ ಸೇಲ್‌ ಇರಿಸಲಾಗುತ್ತದೆ.

ಇನ್ನೊಂದು ಲೆಕ್ಕಾಚಾರ, ಈ ಹಿಂದೆಯೆಲ್ಲ ಆಷಾಢ ಮಾಸದಲ್ಲಿ ಯಾವ ಶುಭಕಾರ್ಯಗಳನ್ನೂ ಮಾಡುತ್ತಿರಲಿಲ್ಲ. ಆಗ ಮಾರುಕಟ್ಟೆಗಳೆಲ್ಲವೂ ತಣ್ಣಗಿರುತ್ತಿದ್ದವು. ಇದೇ ಮಾಸದಲ್ಲಿ ಚಿನ್ನದ ಬೆಲೆಯೂ ಇಳಿಕೆಯಾಗುತ್ತಿತ್ತು. ಇದೇ ಸಮಯವನ್ನು ವಸ್ತ್ರಮಳಿಗೆಯವರು ಮಾರಾಟಕ್ಕೆ ಬಳಸಿಕೊಂಡರು. ಶೇ 50 ರ ಮಾರಾಟದ ಟ್ರೆಂಡ್‌ ಸೃಷ್ಟಿಸಿದರು. 

ಮಾರಾಟವಾಗದೇ ಉಳಿದ ಸೀರೆಗಳ ಸಂಗ್ರಹವನ್ನೆಲ್ಲ ಶೇ 50ರ ರಿಯಾಯ್ತಿ ನೀಡಿ, ಹಳೆಯ ಸಂಗ್ರಹವನ್ನೆಲ್ಲ ಖಾಲಿ ಮಾಡುವ ತಂತ್ರಗಾರಿಕೆ ಜೊತೆಗೆ ವ್ಯಾಪಾರವಿಲ್ಲದ ತಿಂಗಳಿನಲ್ಲಿ  ಹಣಕಾಸಿನ ಕೊಡುಕೊಳ್ಳುವ ವ್ಯವಹಾರವಾಗುವಂತೆ ನೋಡಿಕೊಂಡರು. ಆದರೆ ಈಗ ಕೊಳ್ಳುವವರು ಪ್ರತಿಯೊಂದಕ್ಕೂ ಆಷಾಢದ ಸೇಲ್‌ ಕಾಯುವಂತಾಗಿದೆ.

ಈ ಸೇಲ್‌ನಲ್ಲಿ ಬಟ್ಟೆ ಕೊಳ್ಳುವ ಮೊದಲು ಈ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಿ.

ಹೇಗಿದ್ದೀರಿ ನೀವು? ಹೇಗಿರಬೇಕು ಸೀರೆ?

ನೀವು ಸಪೂರ ಮತ್ತು ಎತ್ತರ ಮೈಕಟ್ಟಿನವರಾಗಿದ್ದರೆ ಸಾಕಷ್ಟು ಅಗಲದ ಅಂಚಿರುವ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಿ ಸ್ಥೂಲಕಾಯ ಅಥವಾ ದುಂಡುದುಂಡಕ್ಕೆ ಇದ್ದರೆ, ಉದ್ದುದ್ದ ಗೆರೆಗಳಿರುವ, ಸಣ್ಣ ಅಂಚಿನ, ಪುಟ್ಟ ಹೂಗಳಿರುವ ವಿನ್ಯಾಸದ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಿ. ನಿಮಗಿಷ್ಟ ಆಗುವ ಸೀರೆ ಕೊಳ್ಳುವುದಕ್ಕಿಂತಲೂ, ನಿಮಗೆ ಚಂದ ಕಾಣುವ ಸೀರೆಯ ಬದಲು, ಉಟ್ಟಾಗ ನೀವು ಚಂದ ಕಾಣುವಂಥ ಸೀರೆಯನ್ನು ಆಯ್ಕೆ ಮಾಡಿಕೊಳ್ಳಿ. ಪ್ರತಿಸಲ ಸೇಲ್‌ ಇದ್ದಾಗಲೂ ಭಾರತೀಯವ ವಸ್ತ್ರವೈಭವ ಸಾರುವ ಸಂಗ್ರಹದಲ್ಲಿ ಒಂದೊಂದನ್ನು ಆಯ್ಕೆ ಮಾಡುತ್ತ, ಸೇರ್ಪಡೆ ಮಾಡುತ್ತ ಬನ್ನಿ. ಸೀರೆಯಸಿರಿ ಹೆಚ್ಚಾಗುವುದೇ ಈ ಕಾಲದಲ್ಲಿ.

ಯಾವ ಸೀರೆ ಕೊಳ್ಳಬೇಕಿದೆ? ಯಾಕೆ ಕೊಳ್ಳಬೇಕಿದೆ?

ಯಾವ ಸಮಾರಂಭಕ್ಕೆ ಸೀರೆ ಕೊಳ್ಳಬೇಕು ಎಂಬುದನ್ನು ನಿರ್ಧರಿಸಿ. ಬಹುತೇಕ ಜನರು ಶ್ರಾವಣಮಾಸದಲ್ಲಿ ಬರುವ ಮಂಗಳಗೌರಿ, ವರಮಹಾಲಕ್ಷ್ಮಿಗಾಗಿ ಸೀರೆಗಳನ್ನು ಕೊಳ್ಳುತ್ತಾರೆ. ಕೆಂಪು, ಹಸಿರು ಹಾಗೂ ಹಳದಿ ಬಣ್ಣದ ಸೀರೆಗಳು ಹೆಚ್ಚು ಮಾರಾಟವಾಗುತ್ತವೆ.

ಹಿರಿಯರ ಪೂಜೆಗಾಗಿ ಬಿಳಿ ಮತ್ತು ಶ್ವೇತವರ್ಣದ ವಿಶೇಷ ಸೀರೆಗಳನ್ನೂ ಹೆಚ್ಚುಕೊಳ್ಳುತ್ತಾರೆ.

ನಿಮ್ಮ ಬಜೆಟ್‌ ನಿರ್ಧರಿಸಿ. ಆ ಸೀರೆಯಲ್ಲಿ ಒಂದು ಗ್ರ್ಯಾಂಡ್‌ ಆಗಿರುವ ಸೀರೆ ಕೊಳ್ಳಬೇಕೋ, ಅದೇ ಬಜೆಟ್‌ನಲ್ಲಿ ಕೆಲವು ಸರಳ ಸೀರೆಗಳನ್ನು ಕೊಳ್ಳಬೇಕೊ ಎಂಬುದನ್ನು ನಿರ್ಧರಿಸಿ ಈ ಸೇಲ್‌ನಲ್ಲಿ ಬರುವ ಸಂಗ್ರಹ ಮತ್ತೆ ಮತ್ತೆ ಪುನರಾವರ್ತನೆ ಆಗದು. ಏನಾದರೂ ಇಷ್ಟವಾದಲ್ಲಿ ಮತ್ತೊಮ್ಮೆ ಕೊಂಡರಾಯಿತು ಎಂಬ ತೀರ್ಮಾನಕ್ಕೆ ಬರುವ ಮುನ್ನ ಯೋಚಿಸಿ.

ಆಷಾಢದ ನಂತರ ಹಬ್ಬಗಳ ಸಾಲೇ ಬರುತ್ತದೆ. ಎಲ್ಲ ಹಬ್ಬಕ್ಕೂ ಈಗಲೇ ಕೊಳ್ಳಬೇಕೆ ಎಂಬ ಪ್ರಶ್ನೆಯೂ ನಿಮ್ಮೆದುರಿಗಿರುತ್ತದೆ. ಹಬ್ಬಕ್ಕೆ ಬರುವ ಹೊಸ ಸಂಗ್ರಹ ಕೊಳ್ಳಬೇಕೆ ಅಥವಾ ಈ ಸಂಗ್ರಹದಲ್ಲಿಯೂ ತೃಪ್ತಿಪಡಬೇಕೆ ಎಂಬುದು ನಿಮ್ಮ ವಿವೇಚನೆಗೇ ಬಿಟ್ಟಿದ್ದು..

ಮನೆಯಲ್ಲಿ ಸಮಾರಂಭಗಳಿದ್ದರೆ ಕಂಜೀವರಂ, ಬನಾರಸಿ, ಈಕತ್‌, ಪಟೋಲಾ, ಢಾಕಾ ಸಿಲ್ಕ್‌ ಸೀರೆಗಳತ್ತ ಹೆಚ್ಚು ಗಮನಕೊಡಿ. ದಕ್ಷಿಣ ಭಾರತೀಯ ಮಹಿಳೆಯರು ಹೆಚ್ಚಾಗಿ ಈ ಸೇಲ್‌ನಲ್ಲಿ ಮಂಗಳಗಿರಿ, ವೆಂಕಟಗಿರಿ, ಗದ್ವಾಲ್‌, ಕೊಯಮತ್ತೂರು, ಧರ್ಮಾವರಂ, ಕಂಜೀವರಂ ಸೀರೆಗಳನ್ನೇ ಕೊಳ್ಳುತ್ತಾರಂತೆ. 

ಉತ್ತರ ಭಾರತದ ಬನಾರಸ್‌, ಟಸ್ಸರ್‌, ಮಾಹೇಶ್ವರಿ, ಢಕೈ, ಜಾಮ್ದಾನಿ, ಬಾಂಧನಿ, ಸೀರೆಗಳನ್ನೂ ಪರಿಗಣಿಸಬಹುದಾಗಿದೆ. ಈ ಸೀರೆಗಳಲ್ಲಿ ಜರಿಗಳಿರಬೇಕೆ, ರೇಷಿಮೆ ನೂಲಿನದ್ದಿರಬೇಕೆ ಎಂಬ ನಿರ್ಧಾರ ನಿಮ್ಮ ನಿಮ್ಮ ಅನುಕೂಲಕ್ಕೆ ಬಿಟ್ಟಿದ್ದು. ಜರಿ ಮಾಸುವ ಭಯವಿದ್ದಲ್ಲಿ, ಜರಿ ಚುಚ್ಚುವ ಆತಂಕವಿದ್ದಲ್ಲಿ, ಜರಿಯಿಂದ ಕಿರಿಕಿರಿಯಾಗುವಂತಿದ್ದಲ್ಲಿ ಸಣ್ಣ ಅಂಚಿರುವ ಸೀರೆಗಳಿಗೆ ಹೆಚ್ಚು ಮಾನ್ಯತೆ ನೀಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT