ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣೆಂದರೆ ಕೆಲಸ ಮಾಡುವ ಯಂತ್ರವಲ್ಲ, ಅವಳಿಗೂ ಒಂದು ಮನಸ್ಸಿದೆ…

Last Updated 11 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಕೆಲವು ತಿಂಗಳುಗಳಹಿಂದೆ ಬೆಂಗಳೂರಿನಲ್ಲೊಂದು ಘಟನೆ ನಡೆಯಿತು. ಪ್ರೇಮಿಗಳ ಜೋಡಿಯೊಂದು ಕುಡಿದ ಮತ್ತಿನಲ್ಲಿ ಕಟ್ಟಡದಿಂದ ಬಿದ್ದು ದುರಂತ ಅಂತ್ಯ ಕಂಡಿತು. ಪ್ರಕರಣ ಬಹಿರಂಗವಾಗುತ್ತಿದ್ದಂತೆ, ನಾನಾ ರೀತಿಯ ಅಭಿಪ್ರಾಯಗಳ ಜೊತೆ ಟೀಕೆಗಳೂ ಕೇಳಿ ಬಂದವು. ‘ಆಕೆಗೆ ಮದುವೆಯಾಗಿ ಮಗಳೂ ಇದ್ದಾಳೆ. ಬೇರೆಯವನ ಜೊತೆ ಸ್ನೇಹ ಇಟ್ಟುಕೊಳ್ಳೋಕೆ ನಾಚಿಕೆ ಇಲ್ಲ’ ಎಂದು ಮೂತಿ ತಿರುವಿದವರೂ ಇದ್ದರು. ಅಸಲಿ ವಿಷಯವೆಂದರೆ ಆತನೂ ಮದುವೆಯಾಗಿ ಪತ್ನಿ ಇದ್ದಾತ. ಸಂಸಾರ ಇದ್ದರೂ ಬೇರೆಯವರ ಜೊತೆಗಿನ ಅಕ್ರಮ ಸಂಬಂಧ ನಮ್ಮ ಸಮಾಜದ ದೃಷ್ಟಿಯಲ್ಲಿ ತಪ್ಪು. ಆದರೆ ತಪ್ಪಿತಸ್ಥೆ ಆಕೆ ಮಾತ್ರ ಯಾಕೆ, ಹೆಣ್ಣೆಂತಲೇ ಎಂಬ ಮಾತುಗಳೂ ಕೇಳಿ ಬಂದಿದ್ದವು.

ಸಂಚಾರ ದಟ್ಟಣೆಯಿರುವ ರಸ್ತೆಯಲ್ಲಿ ಇನ್ನೂ ಸಿಗ್ನಲ್‌ ಬಿದ್ದಿರಲ್ಲ. ಕಾರಿನ ಹಿಂದೆ ನಿಂತಿದ್ದ ಬೈಕ್‌ ಸವಾರನಿಗೆ ಎಲ್ಲಿಲ್ಲದ ಅವಸರ. ಕಾರಿನ ಡ್ರೈವರ್‌ಗೆ ‘ಡ್ರೈವಿಂಗ್‌ ಗೊತ್ತಿರಲ್ಲ. ಕಾರ್‌ ತಗೊಂಡ್ ಬಿಡ್ತಾರೆ’ ಎಂದು ಬೈದುಕೊಳ್ಳುತ್ತ ಒಂದೇ ಸಮನೆ ಕರ್ಕಶ ಹಾರ್ನ್‌ ಒತ್ತುವ ಗಡಿಬಿಡಿ. ಏಕೆಂದರೆ ಆ ಕಾರ್‌ನ ಡ್ರೈವರ್‌ ಮಹಿಳೆ!

ಇದ್ಯಾಕೆ ಹೀಗೆ ಎಂದು ಪದೇ ಪದೇ ಏಳುವ ಪ್ರಶ್ನೆಗಳ ಹಿಂದೆ ಹೊರಟರೆ ಸಿಗುವ ಕಹಿಯಾದ, ಅರಗಿಸಿಕೊಳ್ಳಲು ಅಸಾಧ್ಯವಾದ ಉತ್ತರ ಸ್ತ್ರೀದ್ವೇಷ (ಮಿಸೊಗೈನಿ). ಅಂದರೆ ಆಕೆಯೇನಾದರೂ ಪುರುಷನಿಗೆ ಪ್ರತಿಸ್ಪರ್ಧಿ ಎಂದಾಕ್ಷಣ ಮಹಿಳೆಯರ ಕುರಿತ ಪೂರ್ವಗ್ರಹಪೀಡಿತ ಭಾವನೆ ಮೆಲ್ಲನೆ ಹೆಡೆ ಎತ್ತಲು ಶುರು.

ಬದಲಾದ ಕಾಲಘಟ್ಟ ಮತ್ತು ಹೆಣ್ಣು ಮಕ್ಕಳು ಎಲ್ಲ ರಂಗಗಳಲ್ಲೂ ತಮ್ಮ ಇರುವಿಕೆಯನ್ನು ಪ್ರಚುರಪಡಿಸುತ್ತಾ ಬಂದ ಈ ಸಂದರ್ಭದಲ್ಲೂ ಕೂಡ, ಒಂದು ಘಟನೆಯ ಸುತ್ತ ಹೆಣ್ಣನ್ನು ನೋಡುವ ರೀತಿ ಇಂದಿಗೂ ಬೇರೆಯದೇ ಆದ ಟ್ರ್ಯಾಕ್‌ನಲ್ಲೇ ಇದೆ. ನಮ್ಮ ಅವಲೋಕನದ ದೃಷ್ಟಿಕೋನ ಅಂದಿಗೂ ಇಂದಿಗೂ ಹಾಗೆಯೇ ಇದೆ, ಕಾಲ ಚಕ್ರ ಉರುಳಿದರೂ ನಮ್ಮ ಮನಸ್ಸು ಮಾಗಿಲ್ಲ!

ಸಮಾಜದಲ್ಲಿ ಮಡಿವಂತ ಹೆಣ್ಣುಮಕ್ಕಳಿಂದ ಹಿಡಿದು ಆಧುನಿಕ ಎನಿಸಿಕೊಳ್ಳುವ ತರಹೇವಾರಿ ಅಭಿರುಚಿಯುಳ್ಳ ಮಹಿಳೆಯರಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆ ಜೊತೆಗೆ ಬೆಳೆದವರೂ ಇದ್ದಾರೆ, ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋದವರೂ ಇದ್ದಾರೆ, ಇವುಗಳ ಜೊತೆಗೆ ತನ್ನನ್ನು ತಾನು ಹುಡುಕಿಕೊಳ್ಳುವ, ತನ್ನ ಅಸ್ಮಿತೆಯನ್ನು ಬಿಂಬಿಸುತ್ತಾ ಯಾರ ಹಂಗಿಲ್ಲದೆ ಬದುಕು ನಡೆಸುತ್ತಿರುವ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಿನಿಮಾ, ರಾಜಕೀಯ, ಕ್ರೀಡೆ ಹೀಗೆ ಎಲ್ಲ ರಂಗಗಳಲ್ಲೂ ಮಿಂಚುತ್ತಿರುವ ಅನೇಕ ಸಾಧಕರನ್ನೂ ನಾವು ನೋಡುತ್ತಿದ್ದೇವೆ. ಇಷ್ಟರ ನಡುವೆಯೂ ಇನ್ನೊಂದು ಮಗ್ಗಲಿನಲ್ಲಿ ಹೆಣ್ಣನ್ನು ನೋಡುವವರ ದೃಷ್ಟಿಕೋನ ಹೇಗಿರುತ್ತದೆ ಎನ್ನುವುದನ್ನು ಕೆದಕುತ್ತ ಹೋದರೆ ಇನ್ನೂ ನಾವು 20ನೇ ಶತಮಾನದಲ್ಲೇ ಇದ್ದೇವೆ ಎನಿಸಿಬಿಡುತ್ತದೆ.

ಒಂದು ಕಚೇರಿಯಲ್ಲಿ ಒಬ್ಬ ಹುಡುಗಿ ಕೆಲಸ ಮಾಡುತ್ತಿದ್ದಾಳೆ ಎಂದುಕೊಳ್ಳಿ. ಕಚೇರಿಯ ಪುರುಷ ಸಿಬ್ಬಂದಿಯಲ್ಲಿ ಯಾರಿಗಾದರೂ ಆಕೆ ಇಷ್ಟವಾಗುತ್ತಾಳೆ ಎಂದರೆ ‘ತನ್ನಷ್ಟಕ್ಕೆ ತಾನು ಹೇಳಿದ ಕೆಲಸ ಮಾಡುತ್ತಾಳೆ’ ಎಂಬ ಕಾರಣ ಹೇಳುವುದು ಖಚಿತ. ಆಕೆಯೇನಾದರೂ ಉನ್ನತ ಸ್ಥಾನಕ್ಕೆ ಪೈಪೋಟಿ ನೀಡುತ್ತಾಳೆ ಎನ್ನುವುದು ಗೊತ್ತಾದರೆ ಆಕೆಯ ನೈತಿಕತೆಯಿಂದ ಹಿಡಿದು ಎಲ್ಲವೂ ಮರಣೋತ್ತರ ಪರೀಕ್ಷೆಗೆ ಒಳಗಾಗಿಬಿಡುತ್ತವೆ ಎನ್ನುತ್ತಾರೆ ಈ ವಿಷಯದಲ್ಲಿ ಸಾಕಷ್ಟು ಲೇಖನಗಳನ್ನು ಬರೆದ ಲೇಖಕಿ ಅನುರಾಧಾ ಭರ್ವೆ.

ಹೆಣ್ಣುಮಕ್ಕಳ ಮೇಲೆ ಜೋಕ್‌ಗಳ ಸುರಿಮಳೆ

ಒಂದು ಸಣ್ಣ ಉದಾಹರಣೆ. ಹೆಣ್ಣುಮಕ್ಕಳ ಬಗ್ಗೆ ಎಷ್ಟೊಂದು ಜೋಕ್‌ಗಳು, ಕೆಲವಂತೂ ನಗು ಹೋಗಲಿ, ಸಿಟ್ಟಿನಿಂದ ಹಣೆಯ ಮೇಲೆ ನೆರಿಗೆ ಮೂಡಿಸುವುದು ಖಂಡಿತ. ಇಂತಹ ಜೋಕ್‌ಗಳು (ಪುರುಷರ ದೃಷ್ಟಿಯಲ್ಲಿ) ವಾಟ್ಸ್‌ಆ್ಯಪ್‌ನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಟೂನ್‌ ಸಮೇತ ಹರಿದಾಡುತ್ತಿರುತ್ತವೆ. ಕೆಲವರು ಕೀಟಲೆಗೆ ಹುಡುಗಿಯರಿಗೆ ರವಾನಿಸುವುದೂ ಇದೆ. ‘ಇದನ್ನು ಅಲಕ್ಷಿಸಿದಿರೋ, ನಿಮ್ಮ ಸಹನೆ ಪರೀಕ್ಷಿಸಲು ಮತ್ತೆ ಮತ್ತೆ ಕಣ್ಮುಂದೆ ಕುಣಿಸಲು ಶುರು ಮಾಡುತ್ತಾರೆ. ಹೀಗಾಗಿ ಅದಕ್ಕೆ ಪ್ರತಿಯಾಗಿ ಪುರುಷರ ಬಗ್ಗೆ ಜೋಕ್‌ಗಳ ಸಂಗ್ರಹ ಇಟ್ಟುಕೊಂಡು ಆಗಾಗ ಒಂದೊಂದೇ ಬಾಣ ಬಿಡುತ್ತ ಇರಿ’ ಎನ್ನುತ್ತಾರೆ ಅನುರಾಧಾ.

ಇನ್ನು ಸಂಜೆಯವರೆಗೂ ಕಚೇರಿಯಲ್ಲೇ ಕೆಲಸ ಮಾಡುತ್ತ ಕೂತಿರುತ್ತೀರಿ ಎಂದಿಟ್ಟುಕೊಳ್ಳಿ. ‘ಏನಮ್ಮಾ ಇಷ್ಟು ಹೊತ್ತಿನವರೆಗೂ ಕೂತಿದ್ದೀರಾ? ಹೊರಡಿ ಕತ್ತಲಾಗುತ್ತಿದೆ’ ಎಂಬ ಉಪದೇಶ. ಹಿಂದಿನಿಂದ ‘ಎಷ್ಟೆಂದರೂ ಹೆಣ್ಣುಮಕ್ಕಳೇ ಹಾಗೆ. ಕೆಲಸ ನಿಧಾನ. ಟೆನ್ಶನ್‌ ಬೇರೆ ಮಾಡ್ಕೊಳ್ತಾರೆ’ ಎಂಬ ಲೇವಡಿಯ ಜೊತೆ ಹೆಣ್ಣುಮಕ್ಕಳ ಸ್ವಭಾವವನ್ನು ವಿಶ್ಲೇಷಣೆ ಮಾಡುವ ಹುಕಿ. ಆಕೆ ಹೋಗುವುದೂ ಮೆಟ್ರೊ ರೈಲಿನಲ್ಲಿ, ಆಕೆಯ ಸಹೋದ್ಯೋಗಿ ಹೋಗುವುದೂ ಅದೇ ರೈಲಿನಲ್ಲೇ. ಆದರೆ ಆತ ಮಾತ್ರ ಕೆಲಸ ನಿಧಾನಕ್ಕೆ ಮುಗಿಸಿ ಒಂದಿಷ್ಟು ಪಬ್‌, ರಸ್ತೆಯಲ್ಲಿ ಅಲೆದಾಟ ಎಂದು ಮುಗಿಸಿಕೊಂಡೇ ಮನೆಗೆ ಹೋದರೂ ನಡೆಯುತ್ತದೆ. ಆಕೆ ಮಾತ್ರ ಕತ್ತಲಿಗೆ ಹೆದರುವ ಅಂಜುಬುರುಕಿಯಂತಿರಬೇಕು.

ಎಲ್ಲವೂ ಅತಿ!

ಒಟ್ಟಾರೆ ಎಲ್ಲ ಆಯಾಮಗಳಲ್ಲೂ ಹೆಣ್ಣುಮಕ್ಕಳನ್ನು ಅತಿ ಅನ್ನುವ ಹಾಗೆ ನೋಡುವುದನ್ನು ಗಮನಿಸಬಹುದು. ಅತಿಯಾದ ಗೌರವ, ಸಲುಗೆ, ತಾತ್ಸಾರ, ಪ್ರಾಮುಖ್ಯತೆ, ಅನುಕಂಪ.. ಹೀಗೆ ಎಲ್ಲವೂ ಅತಿಯೇ.

ಇದು ಮೇಲ್ನೋಟಕ್ಕೆ ಹೌದು ಎನಿಸಿದರೂ ಇದರೊಳಗೊಂದು ಒಳನೋಟವೂ ಇದೆ, ಅದೇನೆಂದರೆ, ಕೆಲಸ ಮಾಡುವ ಸ್ಥಳದಲ್ಲಿ ಒಬ್ಬ ಉದ್ಯೋಗಿ ತಪ್ಪು ಮಾಡಿದರೆ ದಂಡಿಸುವ ರೀತಿಯನ್ನು ಗಮನಿಸಿ, ಅದೇ ಸ್ಥಳದಲ್ಲಿ ಅದೇ ತಪ್ಪನ್ನು ಗಂಡು ಮಾಡುವ ಸಂದರ್ಭದಲ್ಲಿ ಬರುವ ಅಭಿಪ್ರಾಯವನ್ನೂ ಗಮನಿಸಿದರೆ ಅಲ್ಲಿ ಹೆಣ್ಣಿಗೊಂದು ಅನುಕಂಪದ ಲೇಬಲ್ ಹಚ್ಚುವುದು ಸರ್ವೇ ಸಾಮಾನ್ಯ! ಇದು ಬರೀ ತಪ್ಪುಗಳ ವಿಷಯವಲ್ಲ ಸಾಧನೆಯ ವಿಷಯದಲ್ಲೂ ಇಂತಹದ್ದೇ ಪ್ರತ್ಯೇಕತೆ ಇದೆ.

ಮೆಚ್ಚುಗೆ ಸೌಂದರ್ಯಕ್ಕೆ ಮಾತ್ರವೇ?

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಓದಿದ ನೆನಪು. ಸಾಧಕ ಮಹಿಳೆಯೊಬ್ಬರು ಒಂದು ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಿ ಕೆಳಗಿಳಿದಾಗ ಬಂದ ಮೆಚ್ಚುಗೆಗಳು ಅವರ ಉಡುಗೆ– ತೊಡುಗೆ, ಹೇರ್ ಸ್ಟೈಲ್, ಅವರ ಅಂದ– ಚೆಂದದ ಬಗ್ಗೆ ಅನ್ನೋದು ಗಮನಿಸಬೇಕಾದ ವಿಷಯ. ಯಾರೊಬ್ಬರೂ ಅವರು ಮಂಡಿಸಿದ ಪ್ರಬಂಧದ ಬಗ್ಗೆ ಮಾತನಾಡದೇ ಇದ್ದದ್ದು ಬೇಸರ ತರಿಸಿತು ಎನ್ನುವ ವಿಚಾರ ನಿಜಕ್ಕೂ ಅವರ ಮಾತಿನಲ್ಲಿ ವ್ಯಕ್ತವಾಗಿದ್ದು, ನಾವು ನೋಡುವ ದೃಷ್ಟಿಕೋನ ಯಾವುದು ಎನ್ನುವುದರ ಬಗ್ಗೆ ಬೆಳಕು ಚೆಲ್ಲುತ್ತದೆ.

ಇದು ಕೇವಲ ಒಂದು ಕಚೇರಿಗೋ, ಸಂಸ್ಥೆಗೋ ಸೀಮಿತವಲ್ಲ, ಅನೇಕ ಮನೆಗಳಲ್ಲೂ ಇದೇ ಪರಿಸ್ಥಿತಿ. ಬಾಲ್ಯದಿಂದಲೇ ಹೆಣ್ಣುಮಕ್ಕಳನ್ನು ಟ್ಯೂನ್ ಮಾಡುವ ಪರಿಪಾಠ ಆರಂಭವಾಗುತ್ತದೆ, ಆದರೆ ಗಂಡುಮಕ್ಕಳಿಗೆ ಅದು ಅನ್ವಯ ಆಗುವುದೇ ಇಲ್ಲ. ಇದರಿಂದ ಹೆಣ್ಣು ಮತ್ತು ಗಂಡಿನ ನಡುವಿನ ಅಸಹನೆ ಅಕ್ಕ –ತಮ್ಮನಿಂದಲೂ ಶುರುವಾಗಿ ಮುಂದುವರೆಯುತ್ತಲೇ ಇರುತ್ತದೆ. ಎಲ್ಲಿಯವರೆಗೂ ಇದು ಮುಂದುವರೆಯುತ್ತದೆ ಅಂದರೆ ಹೆಣ್ಣಿಗೆ ಮದುವೆಯಾಗಿ ಮಕ್ಕಳಾದರೂ ಅಣ್ಣ ಅಥವಾ ತಮ್ಮ ಮಾತನಾಡಿಸದೇ ಇರುವಷ್ಟರ ಮಟ್ಟಿಗೂ ಇದು ಬೆಳೆದ ಉದಾಹರಣೆಗಳೂ ಉಂಟು.

ಇಂತಹ ಟೀಕೆಗೆ, ಕುಹಕಕ್ಕೆ ಅಂಜುವ ಅವಶ್ಯಕತೆಯೂ ಇಲ್ಲ, ದ್ವೇಷ ಬೆಳೆಸಿಕೊಳ್ಳುವ ಅಗತ್ಯವೂ ಇಲ್ಲ. ಎಲ್ಲವನ್ನೂ ಸಮರ್ಥವಾಗಿ ಎದುರಿಸುವ ಬಾಣಗಳು ನಿಮ್ಮ ಬತ್ತಳಿಕೆಯಲ್ಲಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT