ಭಾನುವಾರ, ಮಾರ್ಚ್ 29, 2020
19 °C

ಸೀರೆಗೆ ಅಂದ.. ಕುಚ್ಚಿನ ಚೆಂದ..

ವಿದ್ಯಾಶ್ರೀ ಗಾಣೀಗೇರ Updated:

ಅಕ್ಷರ ಗಾತ್ರ : | |

Prajavani

ಸೀರೆಗೆ ಕುಚ್ಚು ಇದ್ದರೇನೇ ಆಕರ್ಷಣೆ ಎನ್ನುವುದನ್ನು ಫ್ಯಾಷನ್ ಲೋಕ ಅರಿತುಕೊಂಡಿದೆ. ಸಾಂಪ್ರದಾಯಕ ರೇಷ್ಮೆ ಸೀರೆಯೋ, ಹೊಸ ವಿನ್ಯಾಸದ ಫ್ಯಾನ್ಸಿ ಸೀರೆಯೋ... ಯಾವುದೋ ಒಂದು, ಇದಕ್ಕೆ ಕಲಾತ್ಮಕ ಕುಚ್ಚೊಂದು ಇರಲೇಬೇಕು ಎನ್ನುವುದೀಗ ಹೆಂಗಳೆಯರ ಗಟ್ಟಿ ನಂಬಿಕೆ. ಈಗಂತೂ ರೇಷ್ಮೆ ಸೀರೆಯ ಸೆರಗಿಗೆ ಬಣ್ಣ ಬಣ್ಣದ ರೇಷ್ಮೆ ದಾರದ ಕುಚ್ಚು, ಟ್ಯಾಸೆಲ್, ಗೊಂಡೆ ಎಂದೆಲ್ಲಾ ಕರೆಸಿಕೊಳ್ಳುವ ಈ ಅದ್ಭುತ ಕಲಾಕೃತಿ ಇದ್ದರೆ ಮಾತ್ರ ಸೀರೆಯ ಸೆರಗಿನ ಅಂದ ಹೆಚ್ಚಿಸುವುದು ಎನ್ನುವ ಭಾವನೆ ಆವರಿಸಿದೆ.

ಮೊದಲೆಲ್ಲ ಸೀರೆಗೆ ಸಾಧಾರಣವಾಗಿ ಬಣ್ಣದ ರೇಷ್ಮೆ ದಾರದಲ್ಲಿ ಕುಚ್ಚು ಹಾಕುತ್ತಿದ್ದರು. ಈಗ ಬೇರೆ ಬೇರೆ ಬಣ್ಣದ ದಾರಗಳಿಂದ, ಸೀರೆಯಲ್ಲಿರುವ ಬಣ್ಣಗಳ ಜೊತೆ ಹೊಂದಿಸಿ ಕಲಾತ್ಮಕವಾಗಿ ಹೆಣೆಯುವುದು, ಕ್ರೋಶಾದಲ್ಲಿ ವಿಧವಿಧ ವಿನ್ಯಾಸದಲ್ಲಿ ಹೊಲಿಯುವುದು ಚಾಲ್ತಿಯಲ್ಲಿದೆ. ಸೀರೆಗೆ ಹೊಂದುವ ಕ್ರಿಸ್ಟಲ್ ಮಣಿಗಳು, ಬೆಳ್ಳಿ, ಬಂಗಾರವಲ್ಲದೇ ಬಣ್ಣ ಬಣ್ಣದ ಪುಟ್ಟ ಪುಟ್ಟ ಕೊಳವೆಗಳು, ಮುತ್ತುಗಳು, ಕೊಳವೆಯಾಕಾರದ ಮಣಿ, ಹೂವಿನಾಕಾರದ ಬಿಲ್ಲೆಗಳು... ಹೀಗೆ ವಿಧವಿಧದ ಅಲಂಕಾರಿಕ ವಸ್ತುಗಳನ್ನು ಅವರವರ ಅಭಿರುಚಿಗೆ ತಕ್ಕಂತೆ ಕಲಾತ್ಮಕವಾಗಿ ಹೆಣೆದ ಕುಚ್ಚುಗಳನ್ನು ನೋಡುವುದೇ ಒಂದು ಸೊಗಸು.

ಸೀರೆಗೆ ಹೊಂದುವ ಬಣ್ಣ ಬಣ್ಣದ ದಾರ, ಅದಕ್ಕೆ ಹೊಂದುವ ಮಣಿಗಳನ್ನು ಹೊಂದಿಸಿಕೊಂಡು ಹೆಣೆಯುವ ಕಲೆ ಅನನ್ಯ. ಎಲ್ಲರಿಗೂ ಸುಲಭದಲ್ಲಿ ಒಲಿಯದು ಈ ಕಲೆ. ತಾಳ್ಮೆ, ಪರಿಶ್ರಮ, ತಪ್ಪಿಲ್ಲದಂತೆ ಕೆಲಸ ಮಾಡುವ ಉತ್ಸಾಹ ಇದ್ದರಷ್ಟೇ ಈ ಕಲೆ ಒಲಿಯುವುದು. ಪ್ರತಿ ಸೀರೆಯಲ್ಲೂ ವಿಭಿನ್ನತೆ ಮೆರೆಯುವ ಕಲಾತ್ಮಕತೆ, ಸೃಜನಶೀಲತೆ ಮೆಚ್ಚುಗೆಗೆ ಪಾತ್ರವಾಗುತ್ತದೆ. ಸ್ವಲ್ಪ ಶ್ರಮವಹಿಸಿ ಮಾಡುವ ಕಲೆಯಿಂದ ಆತ್ಮತೃಪ್ತಿ, ಸಾಕಷ್ಟು ಗಳಿಕೆ ಎರಡೂ ಸಿಗುತ್ತದೆ.

ಕುಚ್ಚು ಮನಸ್ಸಿನ ಹತ್ತು ಮುಖಗಳು

ಜಂಬದ ಚೀಲವೆಂದು ಕರೆಸಿಕೊಳ್ಳುವ ಹ್ಯಾಂಡ್‌ಬ್ಯಾಗ್‌ನಲ್ಲೂ ಕುಚ್ಚಗಳ ವಿನ್ಯಾಸ ಮಿಂಚುತ್ತಿದೆ. ಬಣ್ಣದ ಕುಚ್ಚಿರುವ ಪಾದರಕ್ಷೆಗಳೂ ಮಾರ್ಕೆಟ್‌ಗೆ ಕಾಲಿಟ್ಟಿವೆ, ಸೀರೆ, ಸಲ್ವಾರ್, ಜೀನ್ಸ್... ಹೀಗೆ ಎಲ್ಲದಕ್ಕೂ ಹೊಂದುವ ಕುಚ್ಚು ಇರುವ ಚಪ್ಪಲಿಗಳು ಸದ್ಯಕ್ಕೆ ಚಾಲ್ತಿಯಲ್ಲಿರುವ ಫ್ಯಾಷನ್. ಮನೆಯ ಪರದೆಗಳಿಗೆ, ಒರಗು ದಿಂಬುಗಳಿಗೆ ಕುಚ್ಚು ಸೇರಿಸಿ ಹೊಲಿದರೆ ಮತ್ತಷ್ಟು ಸೊಬಗು.

ಕುಚ್ಚಿನ ಆಭರಣ

ಕುಚ್ಚು ಅಥವಾ ಟ್ಯಾಸಲ್ ಎಂಬ, ನೇತಾಡುವ ರೇಶಿಮೆ ದಾರಗಳ ಗುಂಪು, ಹಿಂದೆಲ್ಲಾ ನಾರಿಮಣಿಯರ ಸೀರೆಯ ಸೆರಗನ್ನು ಅಲಂಕರಿಸುತ್ತಿತ್ತು. ಅದೀಗ ಆಧುನಿಕ ಫ್ಯಾಷನ್ ಜಗತ್ತಿಗೂ ಲಗ್ಗೆ ಇಟ್ಟು, ಎಲ್ಲಾ ವಸ್ತುಗಳ ಮೇಲೂ ಮೋಡಿ ಮಾಡಿದೆ. ಹೇಗೆನ್ನುವಿರಾ? ಹಗುರವಾದ ತಂತಿಯೊಂದಿಗೆ ಹೆಣೆದುಕೊಂಡ ಬಣ್ಣ ಬಣ್ಣದ ಕುಚ್ಚು ಕಿವಿಯ ಆಭರಣವಾಗುತ್ತದೆ. ಕೈ ಬಳೆಯಲ್ಲಿ ನೇತಾಡುವ ಕುಚ್ಚಗಳು ಬಳೆಯ ಅಂದ ಹೆಚ್ಚಿಸುತ್ತವೆ. ಉದ್ದದ ಸರಕ್ಕೆ ಕುಚ್ಚುಗಳ ಪದಕ ಇರುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು