ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಭಯ ಬಿಟ್ಟು ಸ್ಕೂಟರ್‌ ಓಡಿಸಿ

Last Updated 29 ಅಕ್ಟೋಬರ್ 2020, 7:24 IST
ಅಕ್ಷರ ಗಾತ್ರ

ಶ್ರೀಕಲಾ ಅವರ ಪತಿ ಶಿವಶರಣು ಅವರಿಗೆ ಕಲ್ಯಾಣ ಕರ್ನಾಟಕದ ಸಣ್ಣ ಪಟ್ಟಣದಿಂದ ಬೆಂಗಳೂರಿಗೆ ವರ್ಗವಾಯಿತು. ಶ್ರೀಕಲಾ ಅವರಿಗೆ ಮಹಾನಗರ ಅಪರಿಚಿತವಾಗಿತ್ತು. ಅಲ್ಲಿನ ಟ್ರಾಫಿಕ್‌ ನೋಡಿ ಭಯಗೊಂಡಿದ್ದರು. ರಸ್ತೆದಾಟಲು ಹಿಂದುಮುಂದು ನೋಡುತ್ತಿದ್ದರು. ಒಬ್ಬರೇ ಹೊರಗೆ ಬರಲು ಗಾಬರಿ ಆಗುತ್ತಿದ್ದರು. ಮನೆಗೆ ಬೇಕಾದ ತರಕಾರಿಯನ್ನೂ ಪತಿಯೇ ತಂದುಕೊಡಬೇಕಿತ್ತು. ಶ್ರೀಕಲಾ ಬೆಂಗಳೂರಿಗೆ ಬಂದ ಮೇಲೆ ಸಂಪೂರ್ಣವಾಗಿ ಪತಿಯನ್ನೇ ಅವಲಂಬಿಸಿದ್ದರು. ಎಷ್ಟೇ ಮುಖ್ಯವಾದ ಕೆಲಸವಿದ್ದರೂ ಮಗಳ ಶಾಲೆಯಲ್ಲಿನ ಪೋಷಕರ ಸಭೆಗೂ ಪತಿಯೇ ಹೋಗಬೇಕಿತ್ತು. ದಿನಗಳು ಕಳೆದಂತೆ ಪತಿಗೂ ದೊಡ್ಡ ತಲೆನೋವು ಅನಿಸತೊಡಗಿತು.

ಈ ಸಮಸ್ಯೆಯನ್ನು ಶಿವಶರಣು ಸ್ನೇಹಿತರ ಬಳಿ ಹೇಳಿಕೊಂಡರು. ಆಗ ಅವರು ‘ನಿಮ್ಮ ಪತ್ನಿಗೆ ಸ್ಕೂಟರ್‌ ಕಲಿಸಿಕೊಡಿ, ಎಲ್ಲವೂ ಸರಿ ಹೋಗುತ್ತದೆ’ ಎನ್ನುವ ಸಲಹೆ ನೀಡಿದರು. ರಸ್ತೆ ದಾಟಲು ಕಾಯುತ್ತಾ ನಿಲ್ಲುವ ಪತ್ನಿ ಸ್ಕೂಟರ್‌ ಓಡಿಸುವುದು ಅಸಾಧ್ಯ ಎಂದುಕೊಂಡ ಪತಿ, ಪತ್ನಿಯೊಂದಿಗೆ ವಿಷಯ ಪ್ರಸ್ತಾಪಿಸಿದಾಗ, ಆಕೆಯೂ ತಲೆ ಅಲ್ಲಾಡಿಸಿಬಿಟ್ಟಳು. ಪತಿಯ ಆತಂಕ ಮತ್ತಷ್ಟು ಹೆಚ್ಚಾಯಿತು. ಮತ್ತೆ ಸ್ನೇಹಿತರ ಸಲಹೆ ಕೇಳಿದರು. ಅವರು ನೀವೇ ಪುಸಲಾಯಿಸಿ ಸ್ಕೂಟರ್‌ ಓಡಿಸುವುದನ್ನು ಕಲಿಸಿಕೊಡಿ‘ ಎಂದು ಹೇಳಿದರು. ಶಿವಶರಣು ಹಾಗೆಯೇ ಮಾಡಿದರು.

ತಿಂಗಳ ನಂತರ ಶ್ರೀಕಲಾ ಸ್ಕೂಟರ್‌ ಏರಿ ರಸ್ತೆಗೆ ಇಳಿದರು. ತಮಗೆ ಬೇಕಾದ ವಸ್ತುಗಳನ್ನು ಖದೀರಿಸತೊಡಗಿದರು. ಮಗಳ ಶಾಲೆಯ ಪೋಷಕರ ಸಭೆಗೆ ತಾವೇ ಹೋದರು. ಮಗಳ ಗೆಳತಿಯರ ಬರ್ತ್‌ಡೇ ಗೂ ತಾವೇ ಕಳೆದುಕೊಂಡು ಹೋಗಿ ಬಂದರು. ಮನೆಯಲ್ಲಿ ಮಗಳಿಗೆ ಇನ್ನಿಲ್ಲದ ಖುಷಿ. ಪತಿಗೆ ತನ್ನ ಮೇಲೆ ಇದ್ದ ದೊಡ್ಡ ಭಾರ ಇಳಿದಂತಹ ಅನುಭವ. ಶ್ರೀಕಲಾ ಅವರಿಗೆ ರೆಕ್ಕೆಬಿಚ್ಚಿ ಹಕ್ಕಿ ಹಾರಿದಂತಹ ಅನುಭವ.

ಶ್ರೀಕಲಾ ಅವರ ಮಗಳ ಗೆಳತಿಯ ತಾಯಿ ಹೇಮಾ ಅವರದೂ ಇಂತಹದೇ ಸಮಸ್ಯೆ. ಅವರು ಸಹ ಸ್ಕೂಟರ್‌ ಕಲಿಯುವ ಆಸೆಯನ್ನು ಪದೇಪದೇ ವ್ಯಕ್ತಪಡಿಸುತ್ತಲೇ ಇದ್ದರು. ಆದರೆ, ಹೇಮಾ ಅವರು ಶ್ರೀಕಲಾ ರೀತಿ ಭಯದಿಂದ ಮುಕ್ತಿಪಡೆಯಲಿಲ್ಲ. ಸ್ಕೂಟರ್‌ ಕಲಿಯಲಿಲ್ಲ. ಎಲ್ಲದಕ್ಕೂ ಗಂಡನನ್ನು ಕಾಯಬೇಕು, ಇಲ್ಲವೇ ಆಟೊ, ಕ್ಯಾಬ್‌ ಹಿಡಿಯಬೇಕು.

ಮಹಿಳೆಯರು, ಅದರಲ್ಲೂ ಮೂವತ್ತೈದು ವರ್ಷ ದಾಟಿದವರು ಸ್ಕೂಟರ್‌ ಕಲಿಯಲು ಹೆದರುತ್ತಾರೆ. ಇದು ತೀರಾ ಸಾಮಾನ್ಯ. ಒಂದು ವೇಳೆ ಈ ಭಯದಿಂದ ಹೊರಬರದೇ ಹೋದರೆ ಸ್ಕೂಟರ್‌ ಕಲಿಯಲು ಸಾಧ್ಯವಾಗುವುದಿಲ್ಲ. ಇಂತಹ ಭಯಕ್ಕೆ ಕಾರಣಗಳೂ ಇವೆ. ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅವುಗಳ ವರದಿ ಪತ್ರಿಕೆಗಳಲ್ಲಿ, ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತವೆ. ಮೊದಲೇ ಭಯ ಇರುವ ಮಹಿಳೆಯರು ಮತ್ತಷ್ಟು ಆತಂಕಗೊಂಡು ಕಲಿಕೆಯನ್ನೇ ಬಿಟ್ಟುಬಿಡುತ್ತಾರೆ.

ಹೆಚ್ಚಿನವರು ವಾಹನ ಚಾಲನೆ ಕಲಿಯುವಾಗ ಭಯ ಹೊಂದಿರುತ್ತಾರೆ. ಸೈಕಲ್‌ ಕಲಿಯುವಾಗ ಮಕ್ಕಳೂ ಕೂಡ ಬೀಳುವ, ಗಾಯವಾಗುವ, ಕೈ, ಕಾಲು ಮುರಿದುಕೊಳ್ಳುವ ಭಯವನ್ನು ಹೊಂದಿರುತ್ತಾರೆ. ಆದರೆ, ಹ್ಯಾಂಡಲ್‌ ಹಿಡಿದು, ಬ್ಯಾಲೆನ್ಸ್‌ ಮಾಡುತ್ತಾ, ಪೆಡಲ್‌ ಮಾಡುತ್ತಾ ಮುಂದೆ, ಮುಂದೆ ಸಾಗುತ್ತಾ ಹೋಗುತ್ತಾರೆ. ಆಗಾಗ ಹ್ಯಾಂಡಲ್‌ ಅತ್ತಿತ್ತ ಆಡಿದರೂ ಬ್ಯಾಲೆನ್ಸ್ ಮಾಡಿ, ಅಭ್ಯಾಸ ಮುಂದುವರೆಸುತ್ತಾರೆ. ಅವರೇ ಮುಂದೆ ಸರವೇಗದಲ್ಲಿ ಸೈಕಲ್‌ ತುಳಿದುಕೊಂಡು ನಿಮ್ಮ ಮುಂದೆಯೇ ಸಾಗುತ್ತಾರೆ.

ಅದೇ ರೀತಿ ಸ್ಕೂಟರ್‌ ಕೂಡ. ಮನೆಯವರ ಇಲ್ಲವೇ ಸ್ನೇಹಿತೆಯರ ಸಹಾಯ ಪಡೆದು ಹದಿನೈದು ದಿನಗಳಲ್ಲಿ ಕಲಿಯಬಹುದು. ಆದರೆ, ಇದಕ್ಕೆ ಮನೋಬಲ ಮುಖ್ಯ. ಬೀಳು, ಏಳುವ ಭಯವನ್ನು ಮೊದಲು ಬಿಡಬೇಕು. ಮನಸ್ಸಿನಲ್ಲಿ ಭಯವನ್ನು ತುಂಬಿಕೊಂಡು ಸ್ಕೂಟರ್‌ ಮೇಲೆ ಕುಳಿತರೆ, ಗಾಬರಿ ಆಗುತ್ತದೆ. ಆಗ ಎಕ್ಸಲೇಟರ್‌ ಅನ್ನು ಜೋರಾಗಿ ಒತ್ತಿ, ಸ್ಕೂಟರ್‌ ಜಿಗಿದು ಬಿದ್ದು ದೊಡ್ಡ ಅಪಾಯವೇ ಆಗುವ ಸಾಧ್ಯತೆ ಇರುತ್ತದೆ. ಆರಂಭದಲ್ಲಿ ಎರಡೂ ಕಾಲುಗಳನ್ನು ಅಕ್ಕಪಕ್ಕ ಇಳಿಬಿಟ್ಟುಕೊಂಡು ನಿಧಾನಕ್ಕೆ ಮುಂದೆ ಸಾಗುತ್ತಿರಬೇಕು. ಭಯವಾದರೆ, ಹಿಂದೆ ಹಿಡಿದುಕೊಳ್ಳುವಂತೆ ಸೂಚಿಸಬೇಕು. ಅವರ ಮಾರ್ಗದರ್ಶನದಲ್ಲಿ ಸ್ಕೂಟರ್‌ ಮುಂದೆ ಓಡಿಸುತ್ತಿರಬೇಕು. ಸ್ವಲ್ಪ ಧೈರ್ಯ ಬಂದ ನಂತರ ಹಿಂದೆ ಹಿಡಿದುಕೊಳ್ಳದಂತೆ ಸೂಚಿಸಬೇಕು. ಹೀಗೆ ಅಭ್ಯಾಸ ಮಾಡುತ್ತಾ ಹೋದರೆ, ನಿಧಾನವಾಗಿ ಬ್ಯಾಲೆನ್ಸ್‌ ಜೊತೆಗೆ ಧೈರ್ಯವೂ ಬರುತ್ತದೆ. ನಿಮಗೆ ಭಯ ಹೋದ ಮೇಲೆ ರಜೆ ದಿನಗಳಲ್ಲಿ ರಸ್ತೆಗೆ ಇಳಿಯಬೇಕು. ವಾಹನಗಳ ಸಂಖ್ಯೆ ಕಡಿಮೆ ಇರುತ್ತವೆ. ನಿಧಾನವಾಗಿಯೇ ಹೋಗಬೇಕು. ಕೆಲವೊಮ್ಮೆ ಗಾಬರಿಗೆ ಗಾಡಿ ಆಫ್‌ ಆಗಬಹುದು. ಕೆಲವರು ಹಾರ್ನ್‌ ಮಾಡಬಹುದು. ಇವುಗಳಿಗೆ ಗಾಬರಿ ಆಗುವುದೇ ಬೇಡ. ಹಿಂದೆ, ಮುಂದೆ ನೋಡದೆ ಗಾಡಿಯನ್ನು ಚಾಲು ಮಾಡಿ ಮುಂದೆ ಹೋಗಲು ಗಮನ ಹರಿಸಬೇಕು. ಗಾಬರಿ ಆದರೆ ಎದೆಬಡಿತ ಹೆಚ್ಚಾಗುತ್ತದೆ. ಉಸಿರಾಟ ಏರುಪೇರಾಗುತ್ತದೆ. ಮೈ, ಕೈ ಬೆವರುತ್ತದೆ.ಇಂತಹ ಭಯವನ್ನು ಶ್ರೀಕಲಾ ಅವರು ಗೆದ್ದರು. ಆದರೆ, ಹೇಮಾ ಅವರು ಸೋತರು. ಶ್ರೀಕಲಾ ಆತ್ಮವಿಶ್ವಾಸದಿಂದಲೇ ಪತಿಯ ಅವಲಂಬನೆಯನ್ನು ಬಿಟ್ಟು ಸ್ವತಂತ್ರವಾಗಿ ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳುತ್ತಾ ಆತಂಕ, ಭಯದಿಂದ ದೂರವಾಗಿದ್ದಾರೆ. ಆದರೆ, ಹೇಮಾ ಮಾತ್ರ ಇಂದಿಗೂ ಪತಿಯನ್ನೇ ಅವಲಂಬಿಸಿದ್ದಾರೆ. ಸ್ವಲ್ಪ ತಡವಾದರೂ ಉದ್ವೇಗ, ಆತಂಕ, ಕೋಪ, ಮನೆಯಲ್ಲಿ ಆಗಾಗ ಜಗಳ, ಮನಸ್ತಾಪ.

ಹೀಗಾಗಿ ಒತ್ತಡದ ನಗರದ ಜೀವನದಲ್ಲಿ ಮಹಿಳೆಯರು ಸ್ಕೂಟರ್‌ ಕಲಿಯುವುದೂ ಕೂಡ ಒಂದು ರೀತಿಯ ಬಿಡುಗಡೆಯೇ ಸರಿ.

ಹೀಗೆ ಮಾಡಿ...

* ಖಾಲಿ ಮೈದಾನವನ್ನು ಆಯ್ಕೆ ಮಾಡಿಕೊಳ್ಳಿ.

* ಮುಂಜಾನೆ/ರಾತ್ರಿ ಸೂಕ್ತ ಸಮಯ.

* ಭಾನುವಾರ/ರಜಾ ದಿನಗಳಲ್ಲಿ ಟ್ರಾಫಿಕ್‌ ಕಡಿಮೆ ಇರುತ್ತದೆ. ಅಂದು ರಸ್ತೆಗೆ ಇಳಿಯಿರಿ.

* ವಾಹನ ಓಡಿಸುತ್ತಾ ಹೋದಂತೆ ಭಯ ಮಾಯವಾಗುತ್ತದೆ.

* ಕಲಿಕೆಯತ್ತ ಗಮನವನ್ನು ಕೇಂದ್ರೀಕರಿಸಿ.

* ವಾಹನದ ಮೇಲೆ ಕುಳಿತಾಗ ದೀರ್ಘವಾಗಿ ಉಸಿರು ಎಳೆದು ಬಿಡಿ. ಶಾಂತವಾಗಿರಿ.

* ಯೋಚನೆಗಳು ಭಯವನ್ನು ಹುಟ್ಟಿಸುತ್ತವೆ. ಆದ್ದರಿಂದ ಕೆಟ್ಟ ಕಲ್ಪನೆಗಳಿಂದ ದೂರವಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT