ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಅವಶ್ಯ

ಮಹಿಳೆಯರು ದುರ್ಬಲರಲ್ಲ, ಸಬಲೆಯರು...
Published 16 ಮಾರ್ಚ್ 2024, 23:39 IST
Last Updated 16 ಮಾರ್ಚ್ 2024, 23:39 IST
ಅಕ್ಷರ ಗಾತ್ರ

‘ಮಹಿಳೆ ಅಶಕ್ತೆ, ಸಾಮರ್ಥ್ಯ ಕಡಿಮೆ ಎಂಬ ಕಾರಣಕ್ಕೆ ಮೀಸಲಾತಿ ನೀಡುವುದಕ್ಕಿಂತ ಆಕೆ ಸಮರ್ಥಳು, ಎಲ್ಲವನ್ನೂ ನಿಭಾಯಿಸುವ ಛಲಗಾತಿ ಎಂಬುದನ್ನು ಅರಿತು ರಾಜಕೀಯದಲ್ಲಿ ಅವಕಾಶ ಕಲ್ಪಿಸಬೇಕು. ಇಲ್ಲಸಲ್ಲದ ಕಾರಣಗಳನ್ನು ಹೇಳಿ, ಹೀಯಾಳಿಸುವ ಬದಲು ಆಕೆಯ ಜಾಣ್ಮೆ, ಪ್ರತಿಭೆ, ಸಹನೆ ಮತ್ತು ಚಾಕಚಕ್ಯತೆಯನ್ನು ಪ್ರೋತ್ಸಾಹಿಸುವ ಗುಣ ಬೆಳೆಸಿಕೊಳ್ಳಬೇಕು’ 

ಸಾಧಕಿಯರ ಸನ್ಮಾನ ಸಮಾರಂಭದಲ್ಲಿ ಶನಿವಾರ ಏರ್ಪಡಿಸಿದ್ದ ಮಹಿಳೆ, ರಾಜಕೀಯ ಮೀಸಲಾತಿ ಮತ್ತು ಸಾಮ‌ರ್ಥ್ಯದ ಕುರಿತ ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯವಿದು. ಪತ್ರಕರ್ತೆ ಪ್ರೀತಿ ನಾಗರಾಜ ಅವರು ನಡೆಸಿಕೊಟ್ಟ ಸಂವಾದದಲ್ಲಿ ಹಲವು ವಿಷಯಗಳು ಚಿಂತನೆಗೆ ಆಸ್ಪದ ಮಾಡಿಕೊಟ್ಟವು. ಮಹಿಳೆಯ ಸ್ಥಿತಿ ಮತ್ತು ಸಮಾಜದ ವಾಸ್ತವಾಂಶ ಕಳವಳ ಮೂಡಿಸಿತು. ರಾಜಕೀಯ ಮೀಸಲಾತಿಯ ಸಂಕಷ್ಟ, ಸವಾಲುಗಳ ಬಗ್ಗೆ ಚರ್ಚೆಯಾಯಿತು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಸಾಹಿತಿ ವಿನಯಾ ಒಕ್ಕುಂದ ಚರ್ಚೆಯಲ್ಲಿ ಪಾಲ್ಗೊಂಡರು.

‘ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಮಹಿಳೆ ಮುಖದ ಮೇಲೆ ಪರದೆ ಹಾಕಿಕೊಂಡಿದ್ದಳು. ರಾಜಕೀಯದಲ್ಲಿ ಸ್ಥಾನಮಾನ ಇರಲಿಲ್ಲ. ಕುಟುಂಬ ವ್ಯವಸ್ಥೆ, ವಿವಾಹ ಪದ್ಧತಿ ಆಕೆಯನ್ನು ಮನೆಯಲ್ಲಿ ಬಂಧಿಸಿತ್ತು. ಈಗ ಚೌಕಟ್ಟು ಮೀರಿ ಹೊರಗೆ ಬಂದಿದ್ದಾಳೆ. ಆದರೆ, ರಾಜಕೀಯದಲ್ಲಿ ಮಾತ್ರ ಸೂಕ್ತ ಸ್ಥಾನ ಸಿಕ್ಕಿಲ್ಲ. ರಾಜಕೀಯವಾಗಿ ನಾವು ಹಿಂದೆ ಇದ್ದೇವೆ. ರಾಜಕೀಯದಲ್ಲಿ ಕಾನೂನು ಆಗುವವರಿಗೂ ಮಹಿಳೆಯರಿಗೆ ಸಮಾನ ಸ್ಥಾನ ಸಿಗುವುದು ಕಷ್ಟ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಕಳವಳ ವ್ಯಕ್ತಪಡಿಸಿದರು.

‘ಮಹಿಳೆ ಯಾವ ಕ್ಷೇತ್ರದಲ್ಲೂ ಕಡಿಮೆಯಿಲ್ಲ. ಆದರೂ ಸಮಾನತೆಯಿಲ್ಲ ಎಂಬ ಕೊರಗು ಇದೆ. ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ಅಗತ್ಯವಿದೆ. ಮೀಸಲಾತಿ ಸೌಲಭ್ಯ ಕಲ್ಪಿಸಿದ್ದಲ್ಲಿ, ಮಹಿಳೆಗೆ ರಾಜಕೀಯದಲ್ಲಿ ಪ್ರಾತಿನಿಧ್ಯ ಸಿಗುತ್ತದೆ. ಉತ್ತಮ ಕೆಲಸ ಮಾಡಲು ಸಾಧ್ಯವಾಗುತ್ತದೆ. ರಾಜಕೀಯದಲ್ಲಿ ಆರೋಪಗಳು ಸಾಮಾನ್ಯ. ಬೇಸರವಾದರೂ ಎಲ್ಲವನ್ನೂ ದಿಟ್ಟವಾಗಿ ಎದುರಿಸಬೇಕು. ಆರೋಪ ಬಂದಾಗ ಧೈರ್ಯವಾಗಿ ಮುನ್ನಡೆಯಬೇಕು. ಸತ್ಯಕ್ಕೆ ಸೋಲಿಲ್ಲ ಎಂಬುದು ನೆನಪಿನಲ್ಲಿ ಇರಬೇಕು. ಎಲ್ಲವನ್ನೂ ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು’ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.

‘ರಾಜಕೀಯ ಪ್ರಾತಿನಿಧ್ಯ ಸಿಗದಿದ್ದರೆ, ಮಹಿಳೆಗೆ ಸೂಕ್ತ ಸ್ಥಾನ ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕೆ ನಮ್ಮ ಪರಂಪರೆಯೇ ಸಾಕ್ಷಿ. ಭಾರತೀಯ ಸಂವಿಧಾನ ಮಹಿಳೆಗೆ ದೊಡ್ಡ ಹಕ್ಕು, ಗೌರವ ನೀಡಿದೆ. ಅಂಬೇಡ್ಕರ್ ಅವರ ಸ್ತ್ರೀ ಪರವಾದ ನಿಲುವು ನಮಗೆ ಇಲ್ಲಿವರೆಗೆ ತಂದು ನಿಲ್ಲಿಸಿದೆ.  ಮಹಿಳೆ ದುರ್ಬಲೆ ಎಂದು ಭಾವಿಸುವುದು ತಪ್ಪು. ಮಹಿಳೆ ಸಬಲೆಯಾಗಿದ್ದಾಳೆ. ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಶೇ 14ರಷ್ಟು ಮಾತ್ರ ಇದೆ. ನಿರ್ಣಾಯಕದ ಸ್ಥಿತಿಯಲ್ಲಿ ಹೆಣ್ಣನ್ನು ಉದ್ದೇಶಪೂರ್ವಕವಾಗಿ ದೂರ ಇಡಲಾಗುತ್ತಿದೆ ಎಂಬುದೇ ಬೇಸರದ ಸಂಗತಿ’ ಎಂದು ಸಾಹಿತಿ ವಿನಯಾ ಒಕ್ಕುಂದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT