ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ | ನೈಸರ್ಗಿಕ ವಸ್ತ್ರ ಸ್ವಾವಲಂಬನೆಯ ಅಸ್ತ್ರ

Last Updated 21 ಜನವರಿ 2022, 19:30 IST
ಅಕ್ಷರ ಗಾತ್ರ

ಆ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಎಳೆ ಮಕ್ಕಳಿಗೆ ತೊಡಿಸುವ ಬಟ್ಟೆಗಳನ್ನು ಹೊಲಿಯುತ್ತಾರೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಸಾವಿರಾರು ಮಾಸ್ಕ್‌ಗಳನ್ನು ಹೊಲಿದುಕೊಟ್ಟಿದ್ದಾರೆ. ಬಿತ್ತನೆ ಬೀಜ ತುಂಬುವ ಚೀಲಗಳು, ಫೈಲ್‌ಗಳು, ಅಂದದ ಪರ್ಸ್‌, ಮೊಬೈಲ್ ಪೌಚ್‌.. ಹೀಗೆ ಬಟ್ಟೆಯಿಂದ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಪ್ರತಿ ತಿಂಗಳು, ಮನೆ ಬಾಗಿಲಲ್ಲೇ ₹ 6 ಸಾವಿರದಿಂದ ₹10 ಸಾವಿರದವರೆಗೂ ಸಂಪಾದಿಸುತ್ತಾ, ಸ್ವಾವಲಂಬನೆಯ ಬದುಕು ನಡೆಸುತ್ತಿದ್ದಾರೆ..!

ಇದು ಬೈಲಹೊಂಗಲ ತಾಲ್ಲೂಕಿನ ಸುತುಗಟ್ಟಿಯ ಕೃಷಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಪುಟ್ಟ ಯಶಸ್ಸಿನ ಕಥೆ. ಈ ಸಂಘದವರು ಎಳೆ ಮಕ್ಕಳಿಗೆ ಹೊಲಿದು ಕೊಡುವ ಬಟ್ಟೆಗಳು ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ್ದು ಎಂಬುದು ವಿಶೇಷ. ಈ ವಸ್ತ್ರಗಳು ಮಹಿಳೆಯರ ಸ್ವಾವಲಂಬನೆ ಬದುಕಿನ ಅಸ್ತ್ರವಾಗಿವೆ. ಮಹಿಳೆಯರ ಈ ಸ್ವಯಂ ಉದ್ಯೋಗದ ಸಾಹಸಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ಕಾಲೇಜಿನ ಜವಳಿ ವಿಭಾಗ ಬೆನ್ನೆಲುಬಾಗಿ ನಿಂತಿದೆ. ಸುತಗಟ್ಟಿ ಕೃಷಿ ವಿಜ್ಞಾನ ಕೇಂದ್ರವೂ ಸಾಥ್ ನೀಡಿದೆ.

ವಿವಿಯ ಜವಳಿ ವಿಭಾಗದ ವಿಜ್ಞಾನಿಗಳು ನೈಸರ್ಗಿಕ ಬಣ್ಣಗಳ ತಯಾರಿಕೆಯ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನದಿಂದ ತಯಾರಾದ ಬಣ್ಣದ ಬಟ್ಟೆಗಳಿಗೆ ಈ ಸಂಘದ ಮಹಿಳೆಯರು ಉಡುಪಿನ ರೂಪ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ಬಟ್ಟೆಗೆ ಬಣ್ಣ ಹಾಕುವ ಪ್ರಕ್ರಿಯೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದು, ಈ ಬಟ್ಟೆಗಳಿಂದ ಸೀರೆ, ಎಳೆ ಮಕ್ಕಳಿಗೆ ಶರ್ಟ್‌, ನ್ಯಾಪಿ, ಟೋಪಿ ಸಿದ್ಧಪಡಿಸುತ್ತಿದ್ದಾರೆ.

ಸುತುಗಟ್ಟಿ ಕೆವಿಕೆ ಆವರಣದಲ್ಲೇ ಈ ಉಡುಪುಗಳ ತಯಾರಿ ನಡೆಯುತ್ತದೆ. ಪ್ರತಿ ಸದಸ್ಯೆಗೆ, ಒಂದು ಬಟ್ಟೆ ಹೊಲಿದುಕೊಡಲು ಕೆವಿಕೆ ₹200 ನೀಡುತ್ತದೆ. ಗಾಢ ಬಣ್ಣ ಮತ್ತು ತೊಡಲು ಹಿತಕರವಾಗಿರುವ ಈ ವಸ್ತ್ರಗಳಿಗೆ ಉತ್ತಮ ಬೇಡಿಕೆ ಇದೆ. ಈ ಉಡುಪುಗಳನ್ನು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆಯಲ್ಲಿ ‘ತಾಯಿಯ ಮಡಿಲು’ ಕಿಟ್‌ ಜೊತೆ ನೀಡಲಾಗುತ್ತಿದೆ.

ಮಾಸ್ಕ್‌, ಬೀಜ ತುಂಬವ ಚೀಲ

ಇತ್ತ ಧಾರವಾಡ ಕೃಷಿ ವಿವಿಯ ಸಮುದಾಯ ವಿಜ್ಞಾನ ಕಾಲೇಜಿನಲ್ಲಿ ಕೋವಿಡ್–19 ಸಂದರ್ಭದಲ್ಲಿ 35 ಸಾವಿರ ಮಾಸ್ಕ್‌ಗಳನ್ನು ಮಹಿಳೆಯರು ಸಿದ್ಧಪಡಿಸಿದ್ದಾರೆ. ಇದರಲ್ಲಿ ಎರಡು ಹಾಗೂ ಮೂರು ಪದರಗಳ ಮಾಸ್ಕ್ ಸೇರಿದಂತೆ ಹಲವು ಬಗೆಯ ವಿನ್ಯಾಸಗಳ ಮಾಸ್ಕ್‌ಗಳನ್ನು ಸಿದ್ಧಪಡಿಸಿದ್ದಾರೆ. ಪ್ರತಿ ಮಾಸ್ಕ್‌ ತಯಾರಿಕೆಗಾಗಿ ವಿಶ್ವವಿದ್ಯಾಲಯ ₹3 ದರ ನಿಗದಿಪಡಿಸಿದೆ.

ಕೃಷಿ ವಿವಿ ಬೀಜ ಘಟಕಕ್ಕೆ ಅಗತ್ಯವಿರುವ ಬೀಜ ಹಾಕುವ ಚೀಲಗಳನ್ನೂ ಈ ಮಹಿಳೆಯರೇ ಸಿದ್ಧಪಡಿಸುತ್ತಿದ್ದಾರೆ. 200 ಗ್ರಾಂಗಳಿಂದ 15 ಕೆ.ಜಿ ತೂಕ ಬೀಜ ಹಿಡಿಸುವ ಚೀಲದವರೆಗೂ ತಯಾರಿಸುತ್ತಾರೆ. ಇದಕ್ಕಾಗಿ ವಿ.ವಿ ಅಗತ್ಯವಾದ ಬಟ್ಟೆಯನ್ನು ಪೂರೈಸುತ್ತದೆ. ಈ ವರ್ಷ ಸುಮಾರು 60 ಸಾವಿರ ಚೀಲಗಳನ್ನು ಹೊಲಿದುಕೊಟ್ಟಿದ್ದಾರೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ‘ಕಣ’ದ ಬಟ್ಟೆ ಬಳಸಿ ಅಂದದ ಫೈಲ್‌ಗಳು, ಮೊಬೈಲ್ ಪೌಚ್‌, ಪರ್ಸ್‌ ಸೇರಿದಂತೆ ಹಲವು ಬಗೆಯ ವಸ್ತುಗಳನ್ನು ಮಹಿಳೆಯರು ಸಿದ್ಧಪಡಿಸುತ್ತಿದ್ದಾರೆ.

ವಿನ್ಯಾಸಕ್ಕೆ ತಕ್ಕಂತೆ ದರ ನಿಗದಿ

ವಸ್ತ್ರ, ನೂಲು ಸೇರಿದಂತೆ ಹಲವು ಪರಿಕರಗಳನ್ನು ಮಹಿಳೆಯರಿಗೆ ಜವಳಿ ವಿಭಾಗದಿಂದಲೇ ನೀಡಲಾಗುತ್ತಿದೆ. ತರಬೇತಿ ಪಡೆದ ಹಲವು ಮಹಿಳೆಯರಲ್ಲಿ ಕೆಲವರು ವಿಶ್ವವಿದ್ಯಾಲಯದಲ್ಲೇ ಈ ವಸ್ತ್ರಗಳನ್ನು ಸಿದ್ಧಪಡಿಸುತ್ತಾರೆ. ಇನ್ನೂ ಕೆಲವರು ಕಚ್ಚಾ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಬಟ್ಟೆಗಳನ್ನು ಹೊಲಿದುಕೊಡುತ್ತಿದ್ದಾರೆ. ಒಂದು ಫೈಲ್ ತಯಾರಿಸಿದರೆ ₹25, ಪೌಚ್‌ಗೆ ₹15 ಹೀಗೆ,ಆಯಾ ವಿನ್ಯಾಸಗಳಿಗೆ ತಕ್ಕಂತೆ ವಿಶ್ವವಿದ್ಯಾಲಯ ದರ ನಿಗದಿಪಡಿಸಿದೆ.

ಕೃಷಿ ವಿಶ್ವ ವಿದ್ಯಾಲಯದ ಬೇರೆ ಬೇರೆ ವಿಭಾಗಗಳಲ್ಲಿ ಹಾಗೂ ತಾಕುಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮನೆಯ ಹೆಣ್ಣುಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಆ ಮೂಲಕ ಆರ್ಥಿಕ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದ್ದಾರೆ.

‘ಮಾಸ್ಕ್, ಪೌಚ್‌ಗಳ ಜೊತೆಗೆ ಕೃಷಿ ವಿಭಾಗದ ವಿದ್ಯಾರ್ಥಿಗಳ ಯೋಜನೆಗೆ(ಪ್ರಾಜೆಕ್ಟ್‌) ಅಗತ್ಯವಿರುವ ಕೀಟಬಲೆಗಳು ಹಾಗೂ ವಿವಿಧ ಬಗೆಯ ವಸ್ತ್ರಗಳನ್ನು ಸಿದ್ಧಪಡಿಸುತ್ತೇವೆ. ಇದು ಒಂದಷ್ಟು ಗಳಿಕೆಗೆ ದಾರಿಯಾಗಿದೆ’ ಎನ್ನುವುದು ಸಂಘದ ಸದಸ್ಯೆ ಪಾರವ್ವ ಗೋಟಡಕಿ ಅವರ ಅಭಿಪ್ರಾಯ.

ಹೀಗೆ ಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ಕಾಲೇಜಿನ ಜವಳಿ ವಿಭಾಗದ ಯೋಜನೆಗಳು ಹಲವು ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಮೂಲಕ ಆರ್ಥಿಕವಾಗಿ ಸಶಕ್ತರನ್ನಾಗಿಸಲು ನೆರವಾಗಿವೆ.

ಸೀರೆಗೆ ನೈಸರ್ಗಿಕ ಬಣ್ಣದ ಮೆರುಗು

ಧಾರವಾಡ ಕೃಷಿ ವಿವಿಯ ಜವಳಿ ವಿಭಾಗದ ಸಂಶೋಧಕರುಮೂರು ವರ್ಷಗಳ ಹಿಂದೆ ಚೆಂಡುಹೂವು, ಅಡಿಕೆ ಚೊಗರು, ತುಳಸಿ, ಮಂಜಿಷ್ಠದ ಬೇರು, ಸಾಗುವಾನಿ ಎಲೆ, ದಾಳಿಂಬೆಯ ಸಿಪ್ಪೆಯಿಂದ ಬಟ್ಟೆಗೆ ಹಾಕುವ ನೈಸರ್ಗಿಕ ಬಣ್ಣಗಳ ಉತ್ಪಾದನಾ ತಂತ್ರಜ್ಞಾನದ ಅಭಿವೃದ್ಧಿ ಆರಂಭಿಸಿದ್ದರು.

ಇದರ ಭಾಗವಾಗಿ ಅಡಿಕೆ ಚೊಗರಿನಿಂದ ಕಂದು ಬಣ್ಣ ಹಾಗೂ ಚೆಂಡು ಹೂವಿನಿಂದ ಹಳದಿ ಬಣ್ಣವನ್ನು ಸಿದ್ಧಪಡಿಸಿ, ಹತ್ತಿ ನೂಲಿನ ಲಡಿಗೆ ಲೇಪಿಸಿ, ಅದರಿಂದ ಸುಂದರವಾದ ಸೀರೆ ತಯಾರಿಸಿದರು. ಹತ್ತಿಯಷ್ಟೇ ಅಲ್ಲದೇ, ರೇಷ್ಮೆ ವಸ್ತ್ರಗಳಿಗೂ ಈ ನೈಸರ್ಗಿಕ ಬಣ್ಣವನ್ನು ಪ್ರಯೋಗಿಸಿ, ಯಶಸ್ವಿಯಾದರು.

ನೈಸರ್ಗಿಕ ಬಣ್ಣಗಳನ್ನು ಲೇಪಿಸಿದ ಹಾಗೂ ಅದೇ ಬಣ್ಣದ ದಾರಗಳಿಂದ ನೇಯ್ದಬಟ್ಟೆಗಳು ರಾಸಾಯನಿಕ ಮುಕ್ತ ಹಾಗೂ ಬ್ಯಾಕ್ಟೀರಿಯಾ ಸೋಂಕು ನಿರೋಧಕ ಹಾಗೂ ಅತಿನೇರಳೆ ಕಿರಣಗಳಿಂದ ರಕ್ಷಣೆ ನೀಡಬಲ್ಲ ವಸ್ತ್ರಗಳಾಗಿರುತ್ತವೆ ಎಂಬುದು ಸಂಶೋಧಕರ ಅಭಿಪ್ರಾಯ.

‌‘ಲಡ್ಡು ತಳಿಯ ಚೆಂಡು ಹೂವಿನಿಂದ ಹಳದಿ ಬಣ್ಣ ತೆಗೆದಿದ್ದೇವೆ. ಸುಮಾರು ಒಂದು ಕೆ.ಜಿ. ಬಟ್ಟೆಗೆ ಬೇಕಾದ ಬಣ್ಣ ತಯಾರಿಕೆಗೆ ಸುಮಾರು 15 ಕೆ.ಜಿ. ಚೆಂಡುಹೂವಿನ ದಳಗಳು ಬೇಕು. ಆ ಚೆಂಡು ಹೂವನ್ನು ವಿವಿಯ ತಾಕುಗಳಲ್ಲೇ ಬೆಳೆಸಿದ್ದೇವೆ. ಸ್ವಲ್ಪ ಪ್ರಮಾಣದಲ್ಲಿ ರೈತರಿಂದಲೂ ಖರೀದಿಸುತ್ತೇವೆ. ಮಲೆನಾಡು ಭಾಗದ ರೈತರಿಂದ ಅಡಿಕೆ ಬೇಯಿಸಿದ ಚೊಗರು ಖರೀದಿಸಿ, ಅದರಿಂದ ಬಣ್ಣ ಉತ್ಪಾದಿಸುತ್ತೇವೆ’ ಎಂದು ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ವಸ್ತ್ರದ ವಿವರಿಸುತ್ತಾರೆ.

‘ಹೂವು, ಚೊಗರಿನಿಂದ ತಯಾರಿಸಿ ಬಣ್ಣಗಳನ್ನು ಕೆಲವು ಗಂಟೆಗಳ ಕಾಲ ಕುದಿಸಿ, ಅದರಲ್ಲಿ ವಸ್ತ್ರವನ್ನು ಅದ್ದಿ, ಪುನಃ ಕೆಲ ಹೊತ್ತು ಕುದಿಸುತ್ತೇವೆ. ನಂತರ ವಸ್ತ್ರವನ್ನು ಒಣಗಿಸುತ್ತೇವೆ. ಈ ಎಲ್ಲಾ ಪ್ರಕ್ರಿಯೆಗಳಲ್ಲೂ ಸ್ವಸಹಾಯ ಗುಂಪಿನ ಮಹಿಳೆಯರು ಪಾಲ್ಗೊಳ್ಳುತ್ತಾರೆ. ಇವರಿಗೆ ವಿಭಾಗದ ತಜ್ಞರು ನೆರವಾಗುತ್ತಿದ್ದಾರೆ‘ ಎಂದು ಜ್ಯೋತಿ ವಿವರಿಸಿದರು.

ಈ ಬಣ್ಣಗಳಿಂದ ಸಾಮಾನ್ಯ ವಸ್ತ್ರಗಳ ಮೇಲೆ ಬಗೆಬಗೆಯ ಚಿತ್ತಾರ ಬಿಡಿಸುವ ಪ್ರಯೋಗ ಯಶಸ್ವಿಯಾಗಿದೆ. ಇದೇವಸ್ತ್ರಗಳನ್ನು ಸ್ವಸಹಾಯ ಸಂಘದ ಮಹಿಳೆಯರಿಗೆ ನೀಡಿ, ಅವುಗಳಿಂದ ಎಳೆ ಮಕ್ಕಳಿಗೆ ಬೇಕಾದ ಉಡುಪುಗಳನ್ನು ಹೊಲಿಸಲಾಗುತ್ತಿದೆ. ಎಲ್ಲಾ ಹಂತಗಳಲ್ಲೂ ಈ ಪ್ರಯೋಗ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಈ ತಂತ್ರಜ್ಞಾನವನ್ನು ವಾಣಿಜ್ಯೀಕರಣ ಗೊಳಿಸಲು ವಿಶ್ವವಿದ್ಯಾಲಯ ಸಿದ್ಧತೆ ನಡೆಸಿದೆ ಎನ್ನುತ್ತಾರೆ ಜ್ಯೋತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT