ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕಂಟಕ | ಉದ್ಯೋಗ ನಷ್ಟ; ಮಹಿಳೆಯರಿಗೆ ಸಂಕಷ್ಟ

Last Updated 9 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಕೋವಿಡ್‌–19ನಿಂದ ಹಲವು ಉದ್ಯಮಗಳು ನಷ್ಟ ಅನುಭವಿಸಿದ್ದು, ಉದ್ಯೋಗಿಗಳು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಸುಧಾರಿಸಿ ಮತ್ತೆ ಉದ್ಯೋಗಕ್ಕೆ ಸೇರುವ ನಿರೀಕ್ಷೆಯಲ್ಲಿದ್ದಾರೆ ಈ ಮಹಿಳೆಯರು.

ಆಕೆ 24ರ ಹರೆಯದ ವರ್ಷಾ ಮುಖ್ಯೋಪಾಧ್ಯಾಯ. ನೂರಾರು ಕನಸು ಹೊತ್ತು ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದ ವರ್ಷಾ ಖಾಸಗಿ ಕಂಪನಿಯೊಂದರಲ್ಲಿ ಸ್ವಾಗತಕಾರಿಣಿಯಾಗಿ ಉದ್ಯೋಗಕ್ಕೆ ಸೇರಿಕೊಂಡಳು. ಭವಿಷ್ಯದ ಬಗ್ಗೆ ಯೋಜನೆ ರೂಪಿಸುವ ಹೊತ್ತಿನಲ್ಲೇ ಕೋವಿಡ್‌–19 ಪಿಡುಗು ನಿಯಂತ್ರಿಸಲು ಹೇರಲಾದ ಲಾಕ್‌ಡೌನ್‌ ಆಕೆಯ ಉದ್ಯೋಗ ಕಸಿದುಕೊಂಡು ಕನಸನ್ನೆಲ್ಲ ನುಚ್ಚುನೂರು ಮಾಡಿತು.

ಇದು ಒಬ್ಬಳು ವರ್ಷಾಳ ಸಂಕಟವಲ್ಲ, ಏಪ್ರಿಲ್‌– ಮೇ ಹೊತ್ತಿಗಾಗಲೇ ಭಾರತದಲ್ಲಿ ಕೋಟ್ಯಂತರ ಮಂದಿ ಉದ್ಯೋಗ ವಂಚಿತರಾಗಿದ್ದರು. ಕೊರೊನಾ ಸೋಂಕು ಹರಡುವಿಕೆ ಹೆಚ್ಚುತ್ತಿದ್ದಂತೆ ಉದ್ಯಮಗಳು ಅನುಭವಿಸುತ್ತಿರುವ ನಷ್ಟವೂ ಜಾಸ್ತಿಯಾಗಿ ಕೆಲಸ ಕಳೆದುಕೊಳ್ಳುತ್ತಿರುವ ಉದ್ಯೋಗಿಗಳು ಅದರಲ್ಲೂ ಮಹಿಳಾ ಉದ್ಯೋಗಿಗಳ ಸಂಖ್ಯೆಯೂ ಏರುತ್ತಿದೆ. ಇದು ಲಿಂಗ ಅಸಮಾನತೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ವಿಶ್ವಸಂಸ್ಥೆಯೇ ಎಚ್ಚರಿಕೆ ನೀಡಿದೆ.

ಉದ್ಯೋಗ ಕಳೆದುಕೊಂಡವರು..: ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ)ಯ ಪ್ರಕಾರ, ಅಸಂಘಟಿತ ವಲಯದಲ್ಲಿ ಶೇ 70ರಷ್ಟು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಕಳೆದುಕೊಳ್ಳುವವರಲ್ಲಿ ಅಸಂಘಟಿತ ವಲಯದವರೇ ಜಾಸ್ತಿ. ಭಾರತದಲ್ಲೂ ಕೂಡ ಈ ವಲಯದಲ್ಲಿ ದುಡಿಯುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚು. ಹಾಗೆಯೇ ಉದ್ಯೋಗ ಕಳೆದುಕೊಂಡು ಪರದಾಡುತ್ತಿರುವ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಹಿಂದೆ ಕುಟುಂಬದ ಹೊಟ್ಟೆ– ಬಟ್ಟೆ ನೋಡಿಕೊಳ್ಳುವವನು ಪುರುಷ ಎಂಬ ಮಾತಿತ್ತು. ಆದರೆ ಈಗ ಬಹುತೇಕ ಮಹಿಳೆಯರು ಕುಟುಂಬದ ಹಣಕಾಸು ಪರಿಸ್ಥಿತಿ ಸುಧಾರಿಸಲು ಹೆಗಲುಗೊಡುತ್ತಿದ್ದಾರೆ. ಪುರುಷ (ಶೇ 32ರಷ್ಟು) ರಿಗೆ ಹೋಲಿಸಿದರೆ ಸುಮಾರು ಶೇ 40ರಷ್ಟು ಉದ್ಯೋಗಸ್ಥ ಮಹಿಳೆಯರು ಕೆಲಸ ಮಾಡುವುದು ಆಹಾರ, ಆತಿಥ್ಯ, ಕಟ್ಟಡ ನಿರ್ಮಾಣ, ರಿಟೇಲ್‌ ವಲಯಗಳಲ್ಲಿ. ಕೋವಿಡ್‌ನಿಂದಾಗಿ ನಷ್ಟ ಅನುಭವಿಸಿದ್ದು ಕೂಡ ಈ ಉದ್ಯಮಗಳೇ. ಅಂತಹ ಕಡೆ ಉದ್ಯೋಗ ಭದ್ರತೆಯೂ ಇಲ್ಲ. ಯಾವಾಗ ಬೇಕಾದರೂ ಕೆಲಸದಿಂದ ತೆಗೆದುಹಾಕುವ ಸಾಧ್ಯತೆ ಹೆಚ್ಚು. ಹೀಗಾಗಿ ಬಹಳಷ್ಟು ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದಾರೆ, ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

‘ಗಂಡ ಆಟೊ ಚಾಲಕ. ನಾನು ಸಿದ್ಧ ಉಡುಪಿನ ಕಾರ್ಖಾನೆಯಲ್ಲಿ ದುಡಿಯುತ್ತಿದ್ದೆ. ಇಬ್ಬರು ಮಕ್ಕಳ ಓದಿಗೂ ಅಂತಹ ತೊಂದರೆಯಿರಲಿಲ್ಲ’ ಎನ್ನುವ ಸೊರಬ ಮೂಲದ ಅನಿತಾ ಲೋಕಯ್ಯ, ‘ಆದರೆ ಲಾಕ್‌ಡೌನ್‌ ಶುರುವಾದ ಕೆಲವೇ ದಿನಗಳಲ್ಲಿ ಕೆಲಸ ಕಳೆದುಕೊಳ್ಳಬೇಕಾಯಿತು. ಕಂಪನಿಯವರು ಕೈಗೆ ಒಂದಿಷ್ಟು ಹಣ ಕೊಟ್ಟರು. ಆದರೆ ಅದು ಎಷ್ಟು ದಿನ ಸಾಕಾಗುತ್ತದೆ? ಗಂಡನಿಗೂ ಅಂತಹ ದುಡಿಮೆ ಇಲ್ಲ’ ಎಂದು ಅಳಲು ತೋಡಿಕೊಳ್ಳುತ್ತಾಳೆ.

ಪರಿಸ್ಥಿತಿ ಸುಧಾರಿಸುವುದೇ?: ಸದ್ಯ ಬಹುತೇಕ ಕಡೆ ಲಾಕ್‌ಡೌನ್‌ ತೆಗೆದು ಹಾಕಲಾಗಿದೆ. ನಿರ್ಬಂಧಗಳನ್ನು ಹಂತ
ಹಂತವಾಗಿ ತೆಗೆದುಹಾಕಲಾಗಿದೆ. ಆದರೂ ನಿರುದ್ಯೋಗ ಪ್ರಮಾಣ ಜಾಸ್ತಿಯೇ ಇದೆ. ಔದ್ಯೋಗಿಕ ಕ್ಷೇತ್ರದಲ್ಲಿ ಕೆಲವು ಕಡೆ ಉದ್ಯೋಗಿಗಳನ್ನು ಮರು ಸೇರ್ಪಡೆ ಮಾಡಿಕೊಳ್ಳಲಾಗಿದ್ದರೂ, ಮಹಿಳಾ ಉದ್ಯೋಗಿಗಳ ಪರಿಸ್ಥಿತಿ ಸುಧಾರಿಸಿಲ್ಲ. ಇದಕ್ಕೆ ಕಾರಣವೂ ಇದೆ. ಹಿಂದೆ ಈ ರೀತಿ ಉದ್ಯೋಗ ಮಾರುಕಟ್ಟೆ ಕುಸಿದಾಗ, ಕೆಲಸ ಕಳೆದುಕೊಂಡವರಲ್ಲಿ ಮಹಿಳೆಯರೇ ಅಧಿಕ. ಅಂದರೆ ಅಸಂಘಟಿತ ವಲಯಗಳಲ್ಲಿ. ಆದರೆ ಪರಿಸ್ಥಿತಿ ಸುಧಾರಿಸಿದಾಗ ಅಂತಹ ಕೆಲಸಗಳಿಗೆ ಪುರುಷರನ್ನು ನೇಮಿಸಿಕೊಂಡ ಉದಾಹರಣೆಗಳಿವೆ.

ಈಗ ವರ್ಷಾಳ ವಿಷಯಕ್ಕೆ ಬರೋಣ. ಆಕೆ ಲಾಕ್‌ಡೌನ್‌ನಲ್ಲಿ ತಾನಿದ್ದ ಪಿ.ಜಿಯನ್ನು ತೊರೆಯ ಬೇಕಾಯಿತು. ಕೋಲ್ಕತ್ತಾದಿಂದ ವಲಸೆ ಬಂದಿದ್ದ ಇತರ ಮಹಿಳೆಯರ ಜೊತೆ ಶೆಡ್‌ನಲ್ಲಿದ್ದ ಆಕೆ ಲಾಕ್‌ಡೌನ್‌ ತೆರವಾಗಿ ಅಂತರರಾಜ್ಯ ವಾಹನ ಓಡಾಟ ಶುರುವಾಗುತ್ತಿದ್ದಂತೆ ಪಶ್ಚಿಮ ಬಂಗಾಳದ ತನ್ನೂರಿಗೆ ತೆರಳಿದ್ದಾಳೆ, ಬರಿಗೈಯಲ್ಲಿ. ಪರಿಸ್ಥಿತಿ ಸುಧಾರಿಸಿದರೆ ಮತ್ತೆ ಬೆಂಗಳೂರಿಗೆ ಆಕೆ ಕೆಲಸ ಹುಡುಕಿಕೊಂಡು ಬರಲೂ ಬಹುದು. ಬದುಕಿನ ಬಂಡಿ ಸಾಗಬೇಕಲ್ಲ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT