ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ರಜ ತಂತು ಮಜಾ

Last Updated 4 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಸೆಪ್ಟೆಂಬರ್ ಅಂತ್ಯದ ವೇಳೆಗೆ ಅರ್ಧ ವಾರ್ಷಿಕ ಪರೀಕ್ಷೆಗಳು ಮುಗಿದು, ಯಾವಾಗ  ಉಪಾಧ್ಯಾಯರಿಂದ ‘ಇನ್ನೊಂದು ತಿಂಗಳು ಪೂರ್ತಿ ನಿಮಗೆಲ್ಲ ದಸರಾ ರಜೆ’ ಎಂದು ಘೋಷಣೆಯಾಗುತ್ತಿತ್ತೋ ಅಂದೇ ಪಾಟಿ ಚೀಲಗಳು ನಮ್ಮ ಹೆಗಲಿನಿಂದ ಬಂಧಮುಕ್ತವಾಗಿ, ಮನೆಯ ಮೂಲೆ ಸೇರುತ್ತಿದ್ದವು. ನಮ್ಮ ಎಳೆಯ ಮನಸ್ಸು ನಿರಾತಂಕವಾಗುತ್ತಿತ್ತು. ಮೂವರು ಅಣ್ಣಂದಿರು, ನಾನು ಮತ್ತು ತಂಗಿ ಅಜ್ಜನ ಮನೆಗೆ (ಅಮ್ಮನ ತವರಿಗೆ) ಹೋಗಲು ಸಂಭ್ರಮಿಸುತ್ತಿದ್ದೆವು.  ‘ದಸರಾ ರಜೆಗೆ ಬನ್ನಿ’ ಎಂದು ಅಜ್ಜನಿಂದ ಪತ್ರವೂ ಬಂದಿರುತ್ತಿತ್ತು. 

ಶಾಲೆಯಲ್ಲಿ ಗಾಂಧಿ ಜಯಂತಿ ಆಚರಿಸಿ ಮರುದಿನವೇ ಅಜ್ಜನ ಊರಿಗೆ ನಮ್ಮ ‘ಬಾಲ ಪಡೆ’ಯ ಪಯಣ.  ಸಾಗರದಿಂದ ಹೊರಡುತ್ತಿದ್ದ ಗಜಾನನ ಕಂಪೆನಿಯ ಬಸ್ಸು ಹತ್ತಿ ನಾವು ಕೂತರೆ, ಅದು ತಾಳಗುಪ್ಪ–  ಕಾರ್ಗಲ್– ಜೋಗ ಮಾರ್ಗದಲ್ಲಿ ಹಾದು ನನ್ನ ಅಜ್ಜನ ಊರಿನ ಹತ್ತಿರದ ಅರಲಗೋಡು ಎಂಬಲ್ಲಿ ನಮ್ಮನ್ನಿಳಿಸಿ ಮುಂದೆ ಭಟ್ಕಳಕ್ಕೆ ಹೋಗುತ್ತಿತ್ತು.

ಬಸ್ಸಿನಿಂದ ಇಳಿದ ಕೂಡಲೇ, ನಮ್ಮ ಬರವನ್ನೇ ಕಾಯುತ್ತಿದ್ದ ಅಜ್ಜನ ಮನೆಯಾಳು ಮಾಚ ‘ಎಲ್ಲಾ ಬಂದ್ರಾ ಹುಡುಗ್ರಾ?  ಪ್ರಯಾಣ ಆರಾಮಾಯ್ತಾ?  ವಾಂತಿಗೀಂತಿ ಮಾಡ್ಕಂಡ್ರಾ?’ ಎಂದೆಲ್ಲಾ ಪ್ರೀತಿಯಿಂದ ವಿಚಾರಿಸಿ ತಾನು ತಂದಿದ್ದ ಎತ್ತಿನ ಗಾಡಿಯಲ್ಲಿ ನಮ್ಮನ್ನೆಲ್ಲ ಕೂರಲು ಹೇಳುತ್ತಿದ್ದ.  ಅರಲಗೋಡಿನಿಂದ ಕಾಡುದಾರಿಯಲ್ಲಿ ಸಾಗಿ ಮೂರ್ನಾಲ್ಕು ಕಿಲೊ ಮೀಟರ್ ದೂರದಲ್ಲಿದ್ದ ಅಜ್ಜನ ಮನೆಗೆ ಎತ್ತಿನ ಗಾಡಿಯಲ್ಲಿ ಹೋಗುವಾಗ ನಮಗೆಲ್ಲ ಖುಷಿಯೋ ಖುಷಿ.  ದಾರಿಯುದ್ದಕ್ಕೂ ಆಚೆ ಈಚೆ ದಟ್ಟ ಕಾಡು.  ಪಕ್ಷಿಗಳ ಕಲರವ.  ಆಕಾಶ ಮುಟ್ಟುವಂತಿದ್ದ ಎತ್ತರೆತ್ತರದ ದೈತ್ಯಾಕಾರದ ಮರಗಳು.  ಸುತ್ತೆಲ್ಲ ಹಸಿರೋ ಹಸಿರು.  ಅಂಕುಡೊಂಕಾಗಿ ಮಲಗಿದ್ದ ಮಣ್ಣಿನ ರಸ್ತೆ. ಎದುರುಗಡೆಯಿಂದ ಬರುತ್ತಿದ್ದ  ಪರಿಚಿತರು, ‘ಏನು ರಜಕ್ಕೆ ಬಂದ್ರಾ?’ ಎಂದು ಕೇಳುತ್ತಿದ್ದ ನೆಂಟರಿಷ್ಟರು.  ಹೀಗೆ ಹತ್ತು ಹಲವು ಸಂತಸದ ದೃಶ್ಯಗಳು.

‘ಈ ಕಾಡಿನಲ್ಲಿ ಕಾಡುಕೋಣ,  ಕಾಡೆಮ್ಮೆ, ಹುಲಿ ಇದೆಯಂತಲ್ವಾ?  ನಿಮಗೆಲ್ಲ ಭಯ ಇಲ್ವಾ?’ ನನ್ನ ದೊಡ್ಡಣ್ಣ ಮಾಚನನ್ನು ಪ್ರಶ್ನೆ ಮಾಡುತ್ತಿದ್ದ.

‘ಇದ್ದೇ ಇರ್ತವೆ, ಅವುಗಳ ಪಾಡಿಗೆ ಅವು.  ಅವಕ್ಕೆಲ್ಲ ಹೆದ್ರಕಂಡ್ರೆ ಹ್ಯಾಂಗೆ?  ಅವು ಕಾಣ್ಸಿಕಂಡ್ರೆ ಇದೇ ಬಾರುಕೋಲಲ್ಲಿ ಒಂದು ಬಿಟ್ಟಾ ಅಂದ್ರೆ ಅವು ಹಂಗೇ ಕಾಡಿನ ಕಡೆಗೇ ಓಡ್ಬೇಕು’ ಅಂತೆಲ್ಲಾ ಮಾಚ ಮಾತಿನ ಬಾಣ ಬಿಡುತ್ತಿದ್ದ.  ಅವನು ಆ ಕ್ಷಣಕ್ಕೆ ನಮ್ಮ ಜೀವರಕ್ಷಕನಂತೆ ನಮಗೆ ತೋರುತ್ತಿತ್ತು.

ನಿಧಾನಗತಿಯ ಎತ್ತಿನ ಗಾಡಿಯ ಪ್ರಯಾಣದಲ್ಲಿ ಎಷ್ಟು ಹೊತ್ತಾದರೂ ಅಜ್ಜನ ಮನೆ ಕಾಣಿಸದೇ ಇದ್ದಾಗ ನಾನು, ನನ್ನ ತಂಗಿ ‘ಮಾಚ, ಅಜ್ಜನ ಮನೆ ಇನ್ನೂ ಬರ್ಲಿಲ್ವಾ?  ಛೆ! ಇನ್ನೂ ಎಷ್ಟು ದೂರ?’ ಎಂದು ಕೇಳುತ್ತಲೇ ಇರುತ್ತಿದ್ದೆವು.

‘ಬಂತು ಬಂತು ಇನ್ನೇನು ಬಂದೇಬಿಡ್ತು ಮಗಾ, ಅವತ್ತು ಭಾನುವಾರ ಕಾರ್ಗಲ್ ಸಂತೆಗೆ ಹೋಗಿದ್ದೆ, ಎಂಥೆಂಥಾ ತರಕಾರಿ, ಎಂಥೆಂಥಾ ಮೀನು, ಅಬ್ಬಾ ಗರಂ ಗರಂ ಮೀನು’ ಅಂತೆಲ್ಲಾ ಏನೇನೋ ಹೇಳಿ ತಮಾಷೆ ಮಾಡುತ್ತಾ ಪ್ರಯಾಣದ ಬೇಸರವನ್ನು ಹಗುರ ಮಾಡುತ್ತಿದ್ದ.

ದೂರದಲ್ಲಿ ಅಜ್ಜನ ಮನೆ ಕಂಡ ಕೂಡಲೇ ಗಾಡಿ ನಿಧಾನವಾದಾಗ ನಾವೆಲ್ಲಾ ಗಾಡಿಯೊಳಗೇ ಎದ್ದು ನಿಂತು, ಸಂತೋಷ ತಡೆಯಲಾರದೆ ಕುಣಿದು ಕುಪ್ಪಳಿಸುತ್ತಿದ್ದೆವು.  ನಮ್ಮ ಬಟ್ಟೆ ಬರೆ ತುಂಬಿದ ಕೈ ಚೀಲಗಳನ್ನು ಗಾಡಿಯಲ್ಲೇ ಬಿಟ್ಟು  ಹಿಂಬದಿಯಿಂದಲೇ ಹಾರಿ ಮನೆಯಂಗಳಕ್ಕೆ ನಾ ಮುಂದು ತಾ ಮುಂದು ಎಂದು ಓಡುತ್ತಿದ್ದೆವು.  ಮಾಚ ಗಾಡಿಯನ್ನು ನಿಲ್ಲಿಸಿ, ನೊಗ ಕಳಚಿ, ಎತ್ತುಗಳ ಕೊರಳ ಹಗ್ಗ ಬಿಡಿಸಿ ‘ಅರೇ, ಅಜ್ಜನ ಮನೆ ಕಂಡಕೂಡ್ಲೆ ಕೈ ಚೀಲನೂ ಮರ್ತು ಓಡ್ತೀರಲ್ಲಾ,  ನಾನು ತಗಂಡು ಹೋಗ್ತೇನೆ ನೋಡಿ ನಮ್ಮ ಮನೆಗೆ’ ಎನ್ನುತ್ತಿದ್ದ.  ನಂತರ ಕೈ ಚೀಲಗಳನ್ನು  ಜಗಲಿಯಲ್ಲಿ ತಂದಿರಿಸಿ ‘ಹೆಗಡೇರೆ ಅಂತೂ ನಿಮ್ಮ ಮೊಮ್ಮಕ್ಕಳನ್ನು ನಿಮ್ಮ ಕೈಗೆ ಒಪ್ಪಿಸಿದ್ದೀನಿ ನೋಡಿ.  ನನ್‌ ಕೆಲ್ಸ ಮುಗೀತು.  ನಾನು ತ್ವಾಟಕ್ಕೆ ಹೋಗ್ಲಾ?’ ಎಂದು ತನ್ನ ಕೆಲಸಕ್ಕೆ ಹೊರಡುತ್ತಿದ್ದ.

ಅಜ್ಜನ ಮನೆಯಂಗಳದಲ್ಲಿ ಜನಜಾತ್ರೆ! ಅಜ್ಜ– ಅಜ್ಜಿ ಮನೆಯೊಳಗಿಂದ ಬಂದು ‘ಅರೆರೇ, ಬಂದ್ರಾ?  ಎಲ್ಲ ಹುಷಾರಾ?  ಅಪ್ಪ, ಅಮ್ಮ ಯಾವಾಗ ಬರ್ತಾರಂತೆ?  ಅವರೆಲ್ಲ ಆರಾಮಿದಾರಾ? ಒಳಗೆ ಬನ್ನಿ.  ಕಾಫಿ  ತಿಂಡಿ ತಿನ್ನಬಹುದು, ಸುಸ್ತಾಗಿರಬೇಕಲ್ವಾ?’ ಅಂತೆಲ್ಲಾ ಕೇಳಿದರೆ, ಸೋದರ ಮಾವ, ಅತ್ತೆ, ಅವರ ಮಕ್ಕಳಾದ ಸುಲೋಚನಾ, ಸುಭದ್ರಾ, ರಾಜು, ಜಗದೀಶ ನಮ್ಮನ್ನೆಲ್ಲ ಸುತ್ತುವರಿದು ‘ನೀವು ಈ ರಜಾ ಪೂರ್ತಿ ಇಲ್ಲೇ ಇರ್ಬೇಕು, ತಿನ್ಲಿಕ್ಕೆ ತಿರುಗಾಡ್ಲಿಕ್ಕೆ ಭರ್ಜರಿ ಪ್ಲಾನ್ ಹಾಕಿಟ್ಟಿದ್ದೀವಿ’ ಅಂತ ಹೇಳಿ ಕುಣಿದಾಡುತ್ತಿದ್ದರು.  ಅದೇ ಕೇರಿಯ ನಮ್ಮ ಓರಿಗೆ ಮಕ್ಕಳು ಅಲ್ಲಿ ಜಮಾಯಿಸುತ್ತಿದ್ದರು. 

ನಾವು ಕೈ ಕಾಲು ತೊಳೆದು ಅಜ್ಜಿ ಕೊಟ್ಟ ಬಿಸಿ ಬಿಸಿ ಕಾಫಿ, ಮಗೇಕಾಯಿ ದೋಸೆ, ಬೆಲ್ಲ, ತುಪ್ಪ ತಿಂದು ಅದು ಇದು ಹರಟುತ್ತಾ ಎಲ್ಲಾ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಅಜ್ಜನ ಮನೆಯ ಹಿತ್ತಲಲ್ಲಿ ಅವರೆಕಾಯಿ, ಹೀರೇಕಾಯಿ, ಗೆಣಸು, ಸೌತೆ ಬಳ್ಳಿ, ಹೂವಿನ ಗಿಡಗಳದೇ ಸಂತೆ.  ಉಪ್ಪು ಖಾರ ಹಚ್ಚಿದ ಸೌತೆಕಾಯಿಯ ಬಿಲ್ಲೆ, ಕೆಂಪನೆ ಕೆಂಡದಲ್ಲಿ ಬೇಯಿಸಿದ ಗೆಣಸು ತಿನ್ನಲು ಬಲು ರುಚಿಯಾಗಿರುತ್ತಿತ್ತು.  ಅಂಗಳದ ಪಕ್ಕದಲ್ಲೇ ಇದ್ದ ದೊಡ್ಡ ಕೊಟ್ಟಿಗೆಯಲ್ಲಿ ಹತ್ತೋ ಹನ್ನೆರಡೋ ದನ ಕರುಗಳು.  ಅತ್ತೆ ಮಾವ ತಂಬಿಗೆಗಟ್ಟಲೆ ಹಾಲು ಕರೆಯುತ್ತಿದ್ದರು.  ಗಿಣ್ಣು  ಗಿಣ್ಣದ ಹಾಲು, ಗಟ್ಟಿ ಮೊಸರು ಯಥೇಚ್ಛ.

ಅಜ್ಜನ ಮನೆಯಲ್ಲಿ ನವರಾತ್ರಿ ಪೂಜೆ ಜೋರು.  ಒಂಬತ್ತು ದಿನಗಳಲ್ಲಿ ಪ್ರತಿ ರಾತ್ರಿ ದೇವಿಗೆ ವಿಶೇಷ ಪೂಜೆ,- ಹೂವಿನ ಅಲಂಕಾರ,- ನೈವೇದ್ಯ, ಮಂಗಳಾರತಿ, ಗಂಟೆ ಜಾಗಟೆಗಳ ಸಂಭ್ರಮ.  ಪ್ರತಿ ದಿನ ಬೆಳಿಗ್ಗೆ ನಾವೆಲ್ಲರೂ ಕೈಯಲ್ಲಿ ಬುಟ್ಟಿ  ಕೊಕ್ಕೆ ಹಿಡಿದು ಹಿತ್ತಲಲ್ಲಿದ್ದ ಕರವೀರ, ಮಂದಾರ, ತುಂಬೆ, ಮಲ್ಲಿಗೆ, ದಾಸವಾಳ, ಡೇರೆ, -ಸೇವಂತಿಗೆ,- ಶಂಖಪುಷ್ಪ, ರತ್ನಗೆಂಟಿಗೆ,- ಶ್ರಾವಣ ಗೆಂಟಿಗೆ,- ಪುನ್ನಾಗ ಹೂವುಗಳನ್ನು ಕೊಯ್ಯಲು ಹೋಗುತ್ತಿದ್ದೆವು. ಮಾಲೆಗಳನ್ನು ಕಟ್ಟುತ್ತಿದ್ದೆವು.

ಸಂಜೆ ಪೂಜೆಯ ಹೊತ್ತಿಗೆ ಅಜ್ಜ -ಅಜ್ಜಿ, ಮಾವ, ಅತ್ತೆ ಎಲ್ಲರೂ ಮಡಿ ಬಟ್ಟೆ ಉಟ್ಟು  ಪೂಜೆಗೆ ತಯಾರಿ ಮಾಡುತ್ತಿದ್ದರು.  ಅಜ್ಜನ ಊರ ಕಡೆ ಕರೆಂಟ್ ಇರಲಿಲ್ಲ.  ವಿದ್ಯುತ್ ಉತ್ಪಾದಿಸಿ ನಾಡಿನೆಲ್ಲೆಡೆ ಕಳಿಸುವ ಜೋಗದ ಹತ್ತಿರದ ಎಷ್ಟೋ ಊರುಗಳಲ್ಲಿ ಆಗ ರಾತ್ರಿ ಚಿಮಣಿ ದೀಪವೇ ಕರೆಂಟು.

ನವರಾತ್ರಿ ಪೂಜೆಯಲ್ಲಿ ಎರಡು ಮೂರು ಗ್ಯಾಸ್ ಲೈಟ್‌ಗಳನ್ನು ಹಚ್ಚುತ್ತಿದ್ದರು.  ದೇವರ ಕೋಣೆಯಲ್ಲಿ ದೇವಿಗೆ ಭರ್ಜರಿ ಪೂಜೆ.  ಸುತ್ತಲೂ ಕುಳಿತ ಮಹಿಳೆಯರು ಭಕ್ತಿ ಭಾವದಿಂದ ಭಜನೆ, ದೇವಿಯ ಸ್ತುತಿ, ಶ್ಲೋಕಗಳನ್ನು ಹಾಡುತ್ತಿದ್ದರು.  ಹೀಗೆ ಒಮ್ಮೆ ರಜಕ್ಕೆ ಹೋದಾಗ ಪೂಜೆಯ ಸಮಯದಲ್ಲಿ ಮಾವನ ಮಕ್ಕಳು ‘ನನ್ನ ಕಂಠ ಚೆನ್ನಾಗಿದೆ’ ಎಂದು ಹಾಡು ಹೇಳಲು ಒತ್ತಾಯಿಸಿದರು.  ನಾನಾಗ ಮೂರನೇ ತರಗತಿಯಲ್ಲಿದ್ದೆ.  ನಮ್ಮ ಶಾಲೆಯಲ್ಲಿ ಪ್ರತಿದಿನ ಬೆಳಿಗ್ಗೆ ಹೇಳುತ್ತಿದ್ದ ‘ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ’ ಎಂಬ ಪ್ರಾರ್ಥನಾ ಗೀತೆಯನ್ನು ಹೇಳಲು ಶುರುಮಾಡಿದೆ. 

ತಕ್ಷಣ ಅಲ್ಲಿದ್ದ ಹಿರಿಯ ಮಹಿಳೆಯೊಬ್ಬರು ‘ಅಯ್ಯೋ, ಅದು ಗಂಡು ದೇವರ ಹಾಡು, ಈಗ ಹೆಣ್ಣು ದೇವರ ಪೂಜೆ, ದೇವಿ ಸ್ತುತಿಯನ್ನು ಹೇಳಬೇಕು’ ಎಂದರು.  ಯಾವ ಹೆಣ್ಣು ದೇವರ ಹಾಡು ಹೇಳಬೇಕು ಎಂಬ ಗೊಂದಲಕ್ಕೆ ಬಿದ್ದೆ.  ನಮ್ಮ ಮನೆಯಲ್ಲಿದ್ದ ಚಿತ್ರಗೀತೆ ಪುಸ್ತಕಗಳ ಸಂಗ್ರಹದಲ್ಲಿದ್ದ ಹಾಡುಗಳೆಲ್ಲವನ್ನೂ ನೆನಪಿಗೆ ತಂದುಕೊಳ್ಳಲು ಯತ್ನಿಸಿದೆ.  (ಸಾಗರಕ್ಕೆ ಹೊಸ ಸಿನಿಮಾ ಬಂದಾಗ ನೋಡಲು ನಮ್ಮನ್ನೆಲ್ಲ ಕರೆದುಕೊಂಡು ಹೋಗುತ್ತಿದ್ದ ಅಪ್ಪ, ಟಾಕೀಸಿನ ಹೊರ ಆವರಣದಲ್ಲಿ ಮಾರಾಟವಾಗುತ್ತಿದ್ದ ಚಿತ್ರಗೀತೆ ಪುಸ್ತಕಗಳನ್ನು ಖರೀದಿಸುತ್ತಿದ್ದರು.  ನಮ್ಮ ಮನೆಯಲ್ಲಿ ಆ ಪುಸ್ತಕಗಳ ಸಂಗ್ರಹವೇ ಇತ್ತು)  ಥಟ್ ಅಂತ ಎತ್ತರದ ದನಿಯಲ್ಲಿ ‘ರಾಧಾ ಮಾಧವ ವಿನೋದ ಹಾಸ. ಯಾರೂ ಮರೆಯದ ಪ್ರೇಮ ವಿಲಾಸ’ ಎಂದು ಹಾಡಲು ಪ್ರಾರಂಭಿಸಿದೆ.  ನನ್ನ ಹಿಂದೆ ಕೂತಿದ್ದ ಸಣ್ಣಣ್ಣ ‘ಶ್ಯೀ ಸಿನೆಮಾ ಹಾಡು ಯಾಕೆ ಈಗ’ ಎಂದು ಕೈ ಚಿವುಟಿದ.

ಯಾವ ಹಾಡು ಹೇಳಿದರೂ ಅಡ್ಡಿಪಡಿಸಿದ್ದಕ್ಕೆ ಕೆಟ್ಟ ಕೋಪ ಬಂತು. ಒಂಥರಾ ಅವಮಾನವಾಗಿ ಸಣ್ಣಗೆ ಅಳುವೂ ಬಂತು.  ಒಂದು ಕ್ಷಣ ಸುಮ್ಮನಾದೆ.  ಅಜ್ಜ ದೇವರಿಗೆ ದೀಪ ಬೆಳಗುತ್ತಾ, ಗಂಟೆ ತೂಗುತ್ತಾ, ಮಂತ್ರ ಹೇಳುತ್ತಾ ಆರತಿ ಮಾಡುತ್ತಿದ್ದರು.  ಅಲ್ಲೇ ಇದ್ದ ಅಜ್ಜಿ ನನ್ನತ್ತ ತಿರುಗಿ ‘ಒಂದು ಆರತಿ ಹಾಡು ಹೇಳು ಕೂಸೆ’ ಎಂದರು.  ಅಜ್ಜ ಕರ್ಪೂರದ ಆರತಿ ಮಾಡುತ್ತಿದ್ದರು.   ನಾನು ನಾಗರ ಹಾವು ಚಿತ್ರದ ‘ಕರ್ಪೂರದಾ ಗೊಂಬೆ ನಾನು.  ಮಿಂಚಂತೆ ಬಳಿ ಬಂದೆ ನೀನು!’ ಎಂಬ ಹಾಡನ್ನು ಹಾಡಿಬಿಟ್ಟೆ.  ನೆರೆದವರೆಲ್ಲ ಗೊಳ್ಳೆಂದು ಬಿದ್ದು ಬಿದ್ದು ನಕ್ಕರು.   ‘ನೀನು ಹಾಡು ಹೇಳುವುದು ಬೇಡ ಮಾರಾಯ್ತಿ’ ಎಂದು ಅತ್ತೆಯ ಮಗಳು ಹೇಳಿದಳು.  ಬೇಜಾರಾಗಿ ಸುಮ್ಮನಾದೆ. 


ಮರುವರ್ಷ ನವರಾತ್ರಿ ಪೂಜೆಗೆ ಬರುವಾಗ ನಮ್ಮ ಸಂಗೀತದ ಮಾಸ್ತರರು ಕಳಿಸಿದ ‘ವರವೀಣಾ ಮೃದು ಪಾಣಿ’ ‘ಹಿಮಗಿರಿ ತನಯೇ ಹೇಮಲತೇ ಅಂಬಾ’ ‘ಕೊಡು ಬೇಗ ದಿವ್ಯಮತಿ ಸರಸ್ವತಿ’ ಎಂಬಿತ್ಯಾದಿ ಗೀತೆಗಳನ್ನು ಸರಿಯಾಗಿ ಕಂಠ­ಪಾಠ ಮಾಡಿಕೊಂಡು ಬಂದಿದ್ದೆ.  ಆದರೆ, ಆ ಬಾರಿ ಅಜ್ಜನ ಮನೆಯಲ್ಲಿ ನವರಾತ್ರಿ ಪೂಜೆ ನಡೆಯಲೇ ಇಲ್ಲ.  ಅಜ್ಜನ ದಾಯಾದಿಯೊಬ್ಬರು ತೀರಿಕೊಂಡಿದ್ದರಿಂದ ಸೂತಕ ಬಂದಿತ್ತು.  ಹಾಡುಗಳೆಲ್ಲ ನನ್ನ ಗಂಟಲಲ್ಲೇ ಉಳಿದವು.

ಬಾಲ್ಯದಲ್ಲೇ ನಮ್ಮೆಲ್ಲರ ಬದುಕಿನಲ್ಲಿ ದೇವರು, ಗುರುಹಿರಿಯರಲ್ಲಿ ನಂಬಿಕೆ, ಧರ್ಮದಲ್ಲಿ ವಿಶ್ವಾಸ, ಜೀವನದಲ್ಲಿ ಶ್ರದ್ಧೆ, ಶಿಸ್ತು, ಸಂಯಮ ಮುಂತಾದ ಸದ್ಗುಣಗಳು ಮೂಡಲೆಂದು ದಿನನಿತ್ಯ ಪಠಿಸುವ ಹಲವು ಶ್ಲೋಕ, ಸ್ತೋತ್ರಗಳನ್ನು ಅಜ್ಜ ನಮಗೆ ಹೇಳಿಕೊಡುತ್ತಿದ್ದರು. 
ನೋಡ ನೋಡುತ್ತಾ ನಮಗರಿವಿಲ್ಲದಂತೆಯೇ ದಸರೆಯ ರಜೆ ಕಳೆದುಹೋಗುತ್ತಿತ್ತು.  ಯಾಕಾದರೂ ಸ್ಕೂಲು ಶುರುವಾಗುತ್ತದೋ, ವರ್ಷಪೂರ್ತಿ ಅಜ್ಜನ ಮನೆಯಲ್ಲೇ ಇರಬಹುದಿತ್ತು ಎಂದು ನಾವು ಅಂದುಕೊಳ್ಳುತ್ತಿದ್ದೆವು.  ‘ರಜೆ ಮುಗಿಯಿತಲ್ಲಾ ಅಜ್ಜಾ, ನಾವು ನಾಳೆ ಊರಿಗೆ ಹೊರಡುತ್ತೇವೆ’ ಎಂದು ಹೇಳುವಾಗ ದುಃಖದಲ್ಲಿ ನಮ್ಮ ಗಂಟಲು ಉಬ್ಬಿ ಬರುತ್ತಿತ್ತು.  ‘ಹೇಗಿದ್ದರೂ ಮೊದಲ ದಿನ ಮೇಷ್ಟ್ರು ಬರುವುದಿಲ್ಲ.  ಯಾವ ಹುಡುಗರೂ ಬರೋದಿಲ್ಲ,  ನೀವು ಇನ್ನೊಂದು ನಾಲ್ಕು ದಿನ ಇದ್ದು ಹೋಗಿ’ ಎಂದು ಮನೆಯವರು ಹೇಳಿದರೂ, ಮೇಷ್ಟ್ರ ಕೆಂಗಣ್ಣು,- ಬೆತ್ತದ ಭಯದಿಂದ ಊರಿಗೆ ಹೊರಡಲು ಸಜ್ಜಾಗುತ್ತಿದ್ದೆವು.

ಎತ್ತಿನ ಗಾಡಿ ಹತ್ತುವಾಗ, ಅಜ್ಜನ ಮನೆಯತ್ತ ಕೈ ಬೀಸುವಾಗ, ‘ನೀವೆಲ್ಲಾ ನಮ್ಮೂರಿಗೆ ಬನ್ನಿ’ ಎನ್ನುವಾಗ ವಿಪರೀತ ಅಳು ಬರುತ್ತಿತ್ತು. ‘ಮತ್ತೆ ಬೇಸಿಗೆ ರಜೆಗೆ ಬನ್ನಿ, ಆಗ ಖುಷಿಯಿಂದ ಎರಡು ತಿಂಗಳು ಇಲ್ಲೇ ಇರಬಹುದು.  ಈಗ ಹೋಗಿ ಬನ್ನಿ’ ಎಂದು ಅಜ್ಜ, ಅಜ್ಜಿ ನಮ್ಮನ್ನಪ್ಪಿ ಕಣ್ಣೀರನ್ನೊರೆಸಿ ಬೀಳ್ಕೊಡುವಾಗ ಹೃದಯ ಭಾರವಾಗುತ್ತಿತ್ತು. ಸೋದರ ಮಾವನ ಮಕ್ಕಳು ಗಾಡಿ ಹತ್ತಿ ಬಸ್ ಸ್ಟ್ಯಾಂಡಿನ ತನಕ ಕಳಿಸಲು ಬರುತ್ತಿದ್ದರು. 

ಇಂದು ನೆನಪುಗಳ ಗಾಲಿ ಗುರುತುಗಳನ್ನೊತ್ತಿ ಕಾಲಚಕ್ರ ಉರುಳಿ ಹೋಗಿದೆ.  ಮಮತೆಯ ಸುಧೆ ಹರಿಸಿದ ನನ್ನಜ್ಜ ಈಗಿಲ್ಲ.  ಅಜ್ಜಿಯೂ ಇಲ್ಲ.  ಮಾಚನೂ ಇಲ್ಲ, ಆದರೆ ಅಜ್ಜನ ಮನೆಗೆ ದಸರೆಯ ರಜೆಗೆ ಹೋಗುತ್ತಿದ್ದ ನೆನಪು ಮಾತ್ರ ಮಾಸಿಲ್ಲ.  ಅವೆಲ್ಲವೂ ಈಗ ಸವಿ ಸವಿ ನೆನಪು, ಸಾವಿರ ನೆನಪುಗಳ ತಿಜೋರಿ.
                                                          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT