ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ಎಂಬ ಅಮೃತಗಾನ...

Last Updated 8 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಪ್ರೀತಿ, ಪ್ರೇಮ, ಒಲುಮೆ ಯಾವಾಗ ಮತ್ತು ಹೇಗೆ ಪ್ರಾರಂಭವಾಗುತ್ತವೆ ಎಂಬುದನ್ನು ಖಚಿತವಾಗಿ ಹೇಗೆ ಹೇಳಲಾಗುವುದಿಲ್ಲವೋ ಹಾಗೆಯೇ ಅದರ ಅಂತ್ಯವೂ ಹೇಳಲಾಗದ್ದು! ಪ್ರೀತಿ ಎಂಬುದು ಕಾಳಗ, ಸಮರ! ಹಾಗೆಯೇ ಅದು ಅಭಿವೃದ್ಧಿಯ ಸಂಕೇತ ಕೂಡಾ!

`ಲೋಕೋ ಭಿನ್ನ ರುಚಿಃ' ಎಂಬ ಉಕ್ತಿಯಂತೆ ಪ್ರೀತಿಯ ಭಾಷೆಯೂ ವಿಭಿನ್ನ. ಕೆಲವರಿಗೆ ಪ್ರೀತಿಯು ಜೀವನದ ಯಶಸ್ಸಿಗೆ ಮೆಟ್ಟಿಲಾದರೆ, ಭಗ್ನ ಪ್ರೇಮಿಗಳಿಗೆ ಮೃತ್ಯುರೂಪವೂ ಆಗಬಹುದು. ತನ್ನ ಹಾಗೂ ತನ್ನ ಪ್ರೇಮಿಯ ಒಲುಮೆಯಲ್ಲಿ ದೃಢ ವಿಶ್ವಾಸ ಇರುವ ಸಂಗಾತಿಗಳಿಗೆ ಪ್ರೀತಿ ಎಂದಿಗೂ ಹೋರಾಟವಾಗದೆ ಆನಂದದಾಯಕವಾದ ವಿಹಾರ ಎನಿಸುತ್ತದೆ. ಆದರೆ ಅದೃಷ್ಟವಿಲ್ಲದ ಜೀವಿಗಳಿಗೆ ಎಷ್ಟೇ ಹೋರಾಡಿದರೂ ಜೀವನ ಅಂಧಕಾರ ಮಯವಾಗಿ, ಪಯಣಿಸುವ ದಿಕ್ಕೇ ತಿಳಿಯದಂತೆ ಆಗಬಹುದು.

ಪ್ರೀತಿಯನ್ನು ಆರೈಕೆ ಮಾಡಿ ಬೆಳೆಸಿದರೂ ಅದರ ಮೂಲಭೂತ ಗುಣವಾದ `ಆಕರ್ಷಣೆ' ಎಂಬ ಸುಮಧುರವಾದ ಭಾವನೆ ಕೆಲವೊಮ್ಮೆ `ವಿಕರ್ಷಿತ'ಗೊಳ್ಳುವುದೇಕೆ? ಆಸೆ, ನಂಬಿಕೆ, ನಿರಾಳ ಭಾವ ಅನುಭವಿಸಬೇಕಾದ ಜೀವಿಗಳು ಒಬ್ಬರಿಂದ ಮತ್ತೊಬ್ಬರು ತಿರಸ್ಕೃತರಾಗುವುದೇಕೆ? ಮಧುರವಾದ ಭಾವನೆಗಳನ್ನು ಕೆರಳಿಸಬೇಕಾದ ಪ್ರೀತಿ ಕೆಲವೊಮ್ಮೆ ಇಬ್ಬರೂ ವ್ಯಕ್ತಿಗಳಲ್ಲಿ `ಮಾನಸಿಕ ಗಾಯ'ವನ್ನು (ಸೈಕಲಾಜಿಕಲ್ ವೂಂಡ್) ಉಂಟು ಮಾಡಿ ನರಳಿಸುವುದೇಕೆ? ಪ್ರೀತಿಯ ವಿಕರ್ಷಣೆ ತರುವ ಈ ಯಾತನೆಯು ಒಬ್ಬ ವ್ಯಕ್ತಿಯಲ್ಲಿ ಒಲುಮೆಯನ್ನು ಅನುಭವಿಸುವ, ಅದರಲ್ಲಿ ತಾದಾತ್ಮ್ಯವನ್ನು ಹೊಂದುವ, ಅದರ ಕಟ್ಟುನಿಟ್ಟುಗಳಿಗೆ ತನ್ನನ್ನು ಬಂಧಿಸಿಕೊಳ್ಳುವ ಮತ್ತು ಪ್ರೀತಿಗೆ ಪ್ರತಿಯಾಗಿ ಪ್ರೀತಿಸುವ ಸಾಮರ್ಥ್ಯವನ್ನು ಕುಂದಿಸಿ `ಬಂಧನಗಳನ್ನು ದಿಗ್ಬಂಧಿಸುವ' (ಬಾಂಡಿಂಗ್ ಬ್ಲಾಕೇಜ್) ಗುಣವನ್ನು ಬೆಳೆಸುವುದೇಕೆ? ಇಂತಹ ಪ್ರಕ್ರಿಯೆಗೆ ಪ್ರಚೋದನೆ ಏನು ಮತ್ತು ಕಾರಣಗಳಾವುವು ಎಂಬ ಪ್ರಶ್ನೆಗಳಿಗೆ ಮನೋವಿಜ್ಞಾನದ ಸಮೀಕ್ಷೆಗಳು ಹಲವಾರು ಉತ್ತರಗಳನ್ನು ಹುಡುಕಿವೆ.

ಸೋಜಿಗದ ಸಂಗತಿ ಎಂದರೆ ಈ ಕಾರಣ/ ಪ್ರಚೋದನೆಗಳು ಹಲವು ಪ್ರೇಮಿಗಳ 'ಭಗ್ನಪ್ರೇಮ'ದ ಹಿಂದೆ ಕೆಲಸ ಮಾಡಿವೆಯಾದರೂ ಅದೇ ಕಾರಣ/ ಪ್ರಚೋದನೆಗಳು ಧನಾತ್ಮಕ ಪ್ರೇಮಿಗಳ `ಯಶಸ್ವಿ ಪ್ರೇಮ'ಕ್ಕೂ ಕಾರಣ ಆಗಿವೆ ಎಂಬ ವಿಚಾರ! ಅಂತಹ ಕಾರಣಗಳೆಂದರೆ, ದೇಹದ ಒಳಗೆ ಕೆಲಸ ಮಾಡುವ ರಸಾಯನಿಕಗಳು (ಅಂತಃಸ್ರಾವ/ ಹಾರ್ಮೋನು), ಆನುವಂಶೀಯತೆ ಮತ್ತು ಪ್ರೀತಿಯನ್ನು ಸ್ವೀಕರಿಸಿ ಬೆಳೆಸುವ ಸಂಗಾತಿಯ ಮನೋಧರ್ಮ.

ಪ್ರೀತಿಯ ತಿರಸ್ಕಾರ- ಏಕೆ?
1. ನಮ್ಮ ದೇಹದಲ್ಲಿ ನೈಸರ್ಗಿಕವಾಗಿ ಪ್ರವಹಿಸುವ `ಪ್ರೀತಿಯನ್ನು ಪುರಸ್ಕರಿಸಲು ಸಹಾಯ ಮಾಡುವ ಅಂತಃಸ್ರಾವಗಳು' (ಡೊಪಮೈನ್, ಆಕ್ಸಿಟೋಸಿನ್...) ದಿನಗಳೆದಂತೆ ತನ್ನ ಗಾಢತೆಯನ್ನು ಕಳೆದುಕೊಳ್ಳುತ್ತವೆ. ಇದನ್ನು ಮಾನವ ದೇಹದ ರಸಾಯನ ಶಾಸ್ತ್ರದ ಅಧ್ಯಯನಗಳು ಕಂಡುಹಿಡಿದಿವೆ. ಹೀಗಾದಾಗ ಪ್ರೇಮಿಗಳು ತಮ್ಮ ದೇಹದ ಕ್ರಿಯೆಯ ಬಗ್ಗೆ, ಅದರಿಂದಾಗುವ ಭಾವನೆಗಳ ಏರುಪೇರಿನ ಬಗ್ಗೆ ಹಾಗೂ ಈ ಕಾರಣದಿಂದ ವ್ಯತ್ಯಾಸವಾಗುವ ತಮ್ಮ ನಡವಳಿಕೆಗಳ ಬಗ್ಗೆ ಮರುಚಿಂತನೆ ಮಾಡುವ ಕ್ಷಮತೆಯನ್ನು ಕಳೆದುಕೊಳ್ಳುತ್ತಾರೆ. ಅಂತಹವರು ತಮ್ಮಿಬ್ಬರ ನಡುವಿನ ಒಲುಮೆಯ ಆಳವನ್ನು ಸಂಶಯಿಸಿ ಕಡೆಗೆ ಆ ಒಲುಮೆಯನ್ನೇ ರದ್ದುಗೊಳಿಸಬಹುದು.

2. ದಾಂಪತ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಪೋಷಕರ ಮಕ್ಕಳು ಪ್ರೀತಿಯ ಕೊರತೆ ಇರುವ ವಾತಾವರಣದಲ್ಲಿ ತಮ್ಮ ಬಾಲ್ಯವನ್ನು ಕಳೆಯುತ್ತಾರೆ. ಅಂತಹವರು ಪ್ರಾಯಕ್ಕೆ ಬಂದಾಗ `ಗಾಯಗೊಂಡ ವಯಸ್ಕ ಮಕ್ಕಳು'ಗಳಾಗಿ (ಗ್ರೋನ್ ವೂಂಡೆಡ್ ಚಿಲ್ಡ್ರನ್) ಪರಿವರ್ತನೆ ಆಗುವ ಸಂದರ್ಭಗಳು ಹೆಚ್ಚಾಗಿರುತ್ತವೆ. ಇಂತಹ ಮಕ್ಕಳು ಬಾಹ್ಯದಲ್ಲಿ ಸಂತೋಷದಿಂದ ಇರುವಂತೆ ಕಂಡರೂ, ದಿಟವಾದ ಪ್ರೀತಿಯನ್ನು ಗುರುತಿಸುವ ಮತ್ತು ಸ್ವೀಕರಿಸುವ ಗುಣಗಳಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಂತಹವರು ಭಗ್ನ ಪ್ರೇಮಿಗಳಾಗಬಹುದು.

3. `ಬಂಧನಗಳನ್ನು ದಿಗ್ಬಂಧಿಸುವ' ಕಾರಣಗಳಲ್ಲಿ ಅತ್ಯಂತ ಪ್ರಮುಖವಾದದ್ದು ತನ್ನ ಪ್ರೇಮಿಯನ್ನು `ಸಂಪೂರ್ಣ ವ್ಯಕ್ತಿ' ಎಂದು ಸ್ವೀಕರಿಸದ ಮತ್ತೊಬ್ಬ ವ್ಯಕ್ತಿಯ ಮನೋಧರ್ಮ. ದಿಟವಾದ ಒಲುಮೆಯು ಬಯಸುವ `ಉಪಾಧಿಗಳಿಲ್ಲದ ಪ್ರೀತಿ'ಯ ಬಗ್ಗೆ ಅಪನಂಬಿಕೆ ಇರುವ ಪ್ರೇಮಿಯು ಒಲುಮೆಯ ಆಧ್ಯಾತ್ಮಿಕತೆಯನ್ನು ಅರಿಯುವುದಿಲ್ಲ. ಇದರಿಂದ ಮತ್ತೊಬ್ಬ ವ್ಯಕ್ತಿಗೆ ಅವರ ಸಖ್ಯ ಸಹಿಸಲು ಅಸಾಧ್ಯ ಆಗುವುದರಿಂದ ಅವರ ನಡುವಿನ ಪ್ರೇಮ ರದ್ದಾಗಬಹುದು.

ಪ್ರೀತಿಯ ಸ್ವೀಕಾರ- ಹೇಗೆ?
1. ಡೊಪಮೈನ್, ಆಕ್ಸಿಟೋಸಿನ್... ಮುಂತಾದ ಅಂತಃಸ್ರಾವಗಳು ದೇಹದೊಳಗೆ ನಮ್ಮ ಅರಿವಿಗೇ ಬಾರದಂತೆ ಕಾರ್ಯ ನಿರ್ವಹಿಸುತ್ತಿದ್ದರೂ ಬಾಹ್ಯದಲ್ಲಿ ಪ್ರೀತಿ ಎಂದರೆ ಸುಖ, ಸಂತೋಷ ಎಂಬ ಅರಿವನ್ನು ಅವು ಮೂಡಿಸುತ್ತವೆ.

ಅಲ್ಲದೆ ವ್ಯಕ್ತಿಗತ ಗುಣಗಳಾದ ಶಾಂತತೆ, ಸಹನಶೀಲತೆ, ಸ್ನೇಹ ಭಾವಗಳನ್ನೂ ಬೆಳೆಸುತ್ತವೆ. ಒಲುಮೆಯನ್ನು ಕೇವಲ ದೈಹಿಕ ಸಂತೃಪ್ತಿಯ ನೆಲೆಯಲ್ಲಿ ನೋಡದೆ ಅದರಲ್ಲಿ ಗಾಂಭೀರ್ಯವನ್ನು, ತೃಪ್ತಿಯನ್ನು, ಆಧ್ಯಾತ್ಮಿಕತೆಯನ್ನು ಕಾಣುವ ಸಂಗಾತಿಗಳಲ್ಲಿ ಅಂತಃಸ್ರಾವದ ತೀಕ್ಷ್ಣತೆಯ ಕೊರತೆ ಎಂದೂ ಕಂಡುಬರುವುದಿಲ್ಲ. ಹೀಗಾಗಿ ಮೇಲುನೋಟದ `ಸೆಳೆತ'ವು ಕಾಲ ಸಂದಂತೆ ಗಾಢವಾದ `ಅನ್ಯೋನ್ಯತೆ'ಯಾಗಿ ಮಾರ್ಪಾಟಾಗುತ್ತದೆ.
  
2. ಜೀವನವನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುವುದೇ ಅಲ್ಲದೆ ತಮ್ಮ ಮಕ್ಕಳನ್ನು ಒಲುಮೆಯಿಂದ ಸಲಹುವ ಪೋಷಕರು ಅವರನ್ನು `ಪ್ರೀತಿ ನೀಡುವ ಮಹಾನ್ ವ್ಯಕ್ತಿ'ಗಳನ್ನಾಗಿ ಮಾಡುವುದರ ಜೊತೆಗೆ `ಪ್ರೀತಿಯನ್ನು ಸ್ವೀಕರಿಸುವ ಸಾಧಾರಣ ವ್ಯಕ್ತಿ'ಗಳನ್ನಾಗಿಯೂ ಬೆಳೆಯಲು ಅವಕಾಶ ನೀಡಬಲ್ಲರು. ಇದರಿಂದ ಯುವ ಪ್ರೇಮಿಗಳ ಸ್ನೇಹವೆಂಬ ಕೊಂಡಿಯು ಕೊಳು-ಕೊಡುಗಳಲ್ಲಿ ದೃಢವಾಗಿ ಬೆಸೆದುಕೊಳ್ಳಲು ಸಹಾಯವಾಗುತ್ತದೆ.

3. ಪ್ರೀತಿಸುವ ವ್ಯಕ್ತಿಯನ್ನು `ಸಂಪೂರ್ಣ ವ್ಯಕ್ತಿ'ಯಾಗಿ ಸ್ವೀಕರಿಸುವ ಗುಣ ಇರಬೇಕು. ಪ್ರೀತಿಸುತ್ತಿರುವ ಇಬ್ಬರ ನಡುವೆ ಕೇವಲ ಮಧುರವಾದ ಭಾವನೆಗಳ ಬಗ್ಗೆಯೇ ಅಲ್ಲದೆ ಪರಸ್ಪರ ನೋವು- ನಲಿವು, ಮಾತು- ಮೌನ, ಅವಿಶ್ರಾಂತ- ವಿರಾಮ ಸಮಯಗಳ ಬಗ್ಗೆಯೂ ಗೌರವ ಇರಬೇಕು. ಇದರಿಂದ ಭವಿಷ್ಯದಲ್ಲಿ ಪ್ರೇಮವು ಆಧ್ಯಾತ್ಮಿಕ ನೆಲೆಯಲ್ಲಿ ಯಶಸ್ಸನ್ನು ಹೊಂದುತ್ತದೆ.

ಖ್ಯಾತ ದಾರ್ಶನಿಕ ಅರಿಸ್ಟಾಟಲ್ `ಪ್ರೀತಿ ಎಂಬುದು ಒಂದೇ ಆತ್ಮದಲ್ಲಿ ರಚಿತವಾದ, ಆದರೆ ಎರಡು ಜೀವಗಳಲ್ಲಿ ನೆಲೆಸಿರುವ ಭಾವನೆ' ಎಂದು ಹೇಳಿದ್ದಾರೆ. ಇದನ್ನೇ ನಾವು ಆಡುಮಾತಿನಲ್ಲಿ `ಎರಡು ಜೀವ ಒಂದು ಆತ್ಮ' ಎಂದು ಹೇಳುವುದು. ಪ್ರಾಯೋಗಿಕವಾಗಿ ಯೋಚಿಸಿದಾಗ ಪ್ರೀತಿಯ ಬಂಧನದಲ್ಲಿ ಎರಡು ಜೀವಗಳು ಒಂದೇ ಆಗುವುದು ಸುಲಭವಲ್ಲ! ಅದಕ್ಕೆ ಹಲವಾರು ವರ್ಷಗಳ ನಿರಂತರ ಪ್ರಯತ್ನ ಹಾಗೂ ಪರೋಕ್ಷ/ ಅಪರೋಕ್ಷ ಪ್ರಚೋದನೆಗಳ ಸಹಾಯ ಬೇಕಾಗುತ್ತದೆ.

ಪ್ರೀತಿಸುವ ಗುಣವು ದೇಹದ ರಾಸಾಯನಿಕ ಕ್ರಿಯೆಯಾದರೂ ಅದನ್ನು ಅಭಿವ್ಯಕ್ತಿಸುವುದು ಆ ದೇಹದ ಒಡೆಯನ ಮನೋಭಾವಗಳು. ಆ ಮನೋಭಾವಗಳ ಹಲವಾರು ಮುಖಗಳನ್ನು ಪೋಷಿಸುವುದು ಅವರ ಪೋಷಕರು ಹಾಗೂ ಹೀಗೆ ಪೋಷಿಸಿದ ಒಲುಮೆಯನ್ನು ಸ್ವೀಕರಿಸುವುದು ಅವರ ಪ್ರೇಮಿ. ಪ್ರೀತಿ ಎಂಬುದು `ಸಮರ'ವಾದರೆ ಅದು ದ್ವೇಷ, ನಿರಾಸೆ, ವಿಶ್ವಾಸಘಾತಕತನ, ಅಪನಂಬಿಕೆಯ ಮನೋಧರ್ಮ. ಆದರೆ ಅದು ಅಭಿವೃದ್ಧಿಯಾದಲ್ಲಿ ಸ್ನೇಹ, ಆಸೆ, ಕೃತಜ್ಞತೆ, ನಂಬಿಕೆಯ ಆಧ್ಯಾತ್ಮಿಕ ಬಂಧನ. ಒಟ್ಟಿನಲ್ಲಿ ಪ್ರೀತಿಯ ಸಾಕ್ಷಾತ್ಕಾರ `ಸವಿಯನ್ನು ತರುವ ಅಮೃತಗಾನ'.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT