ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನ ಗೊಜ್ಜು, ಖಿಲ್ಸ, ಗುಳ್‌ಪೌಟೆ

ನಮ್ಮೂರ ಊಟ
Last Updated 5 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಗುಳ್‌ಪೌಟೆ (ಗುಳ್‌ಪವಟೆ)

ಬೇಕಾಗುವ ಸಾಮಗ್ರಿ: ಗೋಧಿಹಿಟ್ಟು 1 ಪಾವು, ಬೆಲ್ಲ 3 ಉಂಡೆ (ಮಧ್ಯಮಗಾತ್ರದ್ದು), ಏಲಕ್ಕಿ 4-5, ತುಪ್ಪ 50 ಗ್ರಾಂ, ದ್ರಾಕ್ಷಿ ಗೋಡಂಬಿ 50 ಗ್ರಾಂ.
ವಿಧಾನ: ಒಂದು ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ಮೊದಲು ಗೋಡಂಬಿ ದ್ರಾಕ್ಷಿಯನ್ನು ಹುರಿದಿಟ್ಟುಕೊಳ್ಳಿ. ನಂತರ ದ್ರಾಕ್ಷಿ ಗೋಡಂಬಿಯನ್ನು ತೆಗೆದು ಅದೆ ಬಾಣಲೆಗೆ ಗೋಧಿಹಿಟ್ಟನ್ನು ಹಾಕಿ ಇನ್ನೊಂದು ಚಮಚ ತುಪ್ಪ ಹಾಕಿ ಚೆನ್ನಾಗಿ ಸ್ವಲ್ಪ ಕೆಂಪಾಗಿ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಟ್ಟುಕೊಳ್ಳಿರಿ. ಇನ್ನೊಂದು ಬಾಣಲೆಯಲ್ಲಿ (ನಾನ್ ಸ್ಟಿಕ್ ಉಪಯೋಗಿಸಿದರೆ ಒಳ್ಳೆಯದು) 3 ಕಪ್ ನೀರು ಹಾಕಿ ಅದಕ್ಕೆ 3ಉಂಡೆ ಬೆಲ್ಲವನ್ನು ಪುಡಿ ಮಾಡಿ ಹಾಕಿ ಕೈ ಆಡಿಸುತ್ತಾ ಇರಬೇಕು. ಬೆಲ್ಲ ಪೂರ್ತಿ ಕರಗಿದ ಮೇಲೆ ನೀರನ್ನ ಸೋಸಿ ಮತ್ತೆ ಬಾಣಲೆಗೆ ಹಾಕಿ ಎಳೆಪಾಕ ಬರುವವರೆಗೂ ಕೈ ಆಡಿಸುತ್ತಾ ಇರಿ. ಎಳೆಪಾಕ ಬಂದ ತಕ್ಷಣ ಹುರಿದಿಟ್ಟುಕೊಂಡ ಗೋಧಿ ಹಿಟ್ಟನ್ನು ಹಾಕಿ ಚೆನ್ನಾಗಿ ಗಂಟುಗಳಾಗದಂತೆ ಕೈ ಆಡಿಸುತ್ತಾ ಇರಿ. ಇದು ರಾಗಿದ್ದೆ ಹದಕ್ಕೆ ಬಂದ ತಕ್ಷಣ ಅದಕ್ಕೆ ತುಪ್ಪ ಹಾಗೂ ದ್ರಾಕ್ಷಿ, ಗೋಡಂಬಿಯನ್ನು ಹಾಗೂ ಏಲಕ್ಕಿ ಪುಡಿ ಹಾಕಿ ಕೈ ಆಡಿಸಿ. ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಲಾಡುವಿನ ಗಾತ್ರದ ಉಂಡೆಗಳನ್ನಾಗಿ ಮಾಡಿರಿ ಸ್ವಲ್ಪ ಆರಿದರೆ ಸ್ವಾದಿಷ್ಟವಾದ ರುಚಿಕರ ಗುಳ್‌ಪಟೆ ತಿನ್ನಲು ರೆಡಿ ಇದು ಎಷ್ಟು ದಿನಗಳಾದರೂ ಕೆಡುವುದಿಲ್ಲ. ಪ್ರವಾಸಕ್ಕೆ ಹೋದಾಗ ಇದನ್ನು ಮಾಡಿಕೊಂಡು ಹೋಗಬಹುದು.

ರಾಗಿ ಖಿಲ್ಸ
ಬೇಕಾಗುವ ಸಾಮಗ್ರಿ: ರಾಗಿ 1 ಪಾವು, ಬೆಲ್ಲ ಪುಡಿಮಾಡಿದ್ದು 2 ಪಾವು, ಏಲಕ್ಕಿ ನಾಲ್ಕೈದು, ತುಪ್ಪ 2 ಚಮಚ.


ವಿಧಾನ: ರಾಗಿಯನ್ನು ಹಿಂದಿನ ದಿನವೇ ರಾತ್ರಿ ನೀರಿನಲ್ಲಿ ನೆನೆಸಿಡಬೇಕು ಸುಮಾರು 15 ಗಂಟೆಗಳ ಕಾಲ ನೆನೆದರೆ ಒಳ್ಳೆಯದು. ಹೀಗೆ ನೆನೆಸಿದ ರಾಗಿಯ ನೀರನ್ನು ಬಸಿದು ಇದನ್ನು ಮಿಕ್ಸಿಯಲ್ಲಿ ಚೆನ್ನಾಗಿ ನುಣ್ಣಗೆ ರುಬ್ಬಬೇಕು 1ಪಾವು ರಾಗಿಗೆ 2 ಪಾವು ನೀರನ್ನು ಹಾಕಿ ರುಬ್ಬಬೇಕು ಹೀಗೆ ರುಬ್ಬಿದ ರಾಗಿಯನ್ನು ಒಂದು ತೆಳು ಬಟ್ಟೆಯ ಮೂಲಕ ಸೋಸಿದರೆ ರಾಗಿ ಸಿಪ್ಪಯ ಚರಟ ಮೇಲೆ ಉಳಿದು ಹಾಲು ಕೆಳಗೆ ಶೇಖರಣೆಯಾಗುತ್ತದೆ.
ಒಂದು ಬಾಣಲೆಯಲ್ಲಿ 2 ಲೋಟ ನೀರನ್ನು ಇಟ್ಟು ಬೆಲ್ಲದ ಪುಡಿಯನ್ನು ಹಾಕಿ ಬೆಲ್ಲ ಕರಗುವವರೆಗೆ ಕೈ ಆಡಿಸುತ್ತಾ ಇರಿ, ಪೂರ್ತಿ ಬೆಲ್ಲ ಕರಗಿದ ಮೇಲೆ ನೀರನ್ನು ಸೋಸಿಕೊಂಡರೆ ಒಳ್ಳೆಯದು ಏಕೆಂದರೆ ಬೆಲ್ಲದಲ್ಲಿ ಸಣ್ಣ ಕಲ್ಲು ಮಣ್ಣು ಇರುತ್ತದೆ. ನಂತರ ಮತ್ತೆ ಈ ಬೆಲ್ಲದ ನೀರನ್ನು ಪಾತ್ರೆಗೆ ಹಾಕಿ ಬೆಲ್ಲದ ನೀರು ಕುದಿಯಲು ಪ್ರಾರಭಿಸಿದ ತಕ್ಷಣ ಮೊದಲೆ ಮಾಡಿಟ್ಟುಕೊಂಡಿದ್ದ ರಾಗಿ ಹಾಲನ್ನು ಹಾಕಿ ಚೆನ್ನಾಗಿ ಕೈ ಆಡಿಸುತ್ತಾ ಇರಿ 1-2 ನಿಮಿಷದಲ್ಲಿ ಇದು ಗಟ್ಟಿಯಾಗಲು ಪ್ರರಂಭಿಸುತ್ತದೆ. ತಕ್ಷಣ ಇದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಗಂಟುಗಳಾಗದಂತೆ ಒಂದೆರಡು ನಿಮಿಷ ಕೈ ಆಡಿಸಿ ನಂತರ ಅದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ ಸಮತಟ್ಟಾಗೆ ಮಾಡಿರಿ. ಅರ್ಧ ಗಂಟೆ ಹಾಗೆಯೇ ಬಿಟ್ಟರೆ ಸ್ವಲ್ಪ ಗಟ್ಟಿಯಾಗುತ್ತದೆ. ನಂತರ ಚೌಕಾಕಾರದ ಚೂರುಗಳನ್ನಾಗಿ ಕತ್ತರಿಸಿದರೆ ಸ್ವಾದಿಷ್ಟ ಖಿಲ್ಸ ತಿನ್ನಲು ರೆಡಿ! ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಇದು ಒಳ್ಳೆಯ ಸ್ವಾದಿಷ್ಟ ಆಹಾರ.

ಜೀರಿಗೆ ಗೊಜ್ಜು

ಬೇಕಾಗುವ ಸಾಮಗ್ರಿ: ಕಾಯಿತುರಿ ಒಂದು ಕಪ್, ಹುರಿಗಡಲೆ ಅರ್ಧ ಕಪ್, ಕೆಂಪು ಮೆಣಸಿನಕಾಯಿ 8ರಿಂದ 10, ಹುಣಸೆ ಹಣ್ಣು ಗೋಲಿ ಗಾತ್ರದಷ್ಟು, ಜೀರಿಗೆ ಎರಡು ಚಮಚ, ಈರುಳ್ಳಿ ಎರಡು ದೊಡ್ಡದು, ಕರಿಬೇವು 8ರಿಂದ 10 ಎಲೆಗಳು, ಕಡಲೆಕಾಯಿ ಎಣ್ಣೆ ಐದು ಚಮಚ, ಸಾಸಿವೆ ಒಂದು ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ತೆಂಗಿನಕಾಯಿ ತುರಿ, ಕೆಂಪು ಮೆಣಸಿನಕಾಯಿ, ಹುರಿಗಡಲೆ, ಹುಣಸೆ ಹಣ್ಣು, ಜೀರಿಗೆ, ಒಂದು ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಮಿಕ್ಸಿಯಲ್ಲಿ ಸ್ವಲ್ಪ ನೀರನ್ನು ಹಾಕಿಕೊಂಡು ಚಟ್ನಿಯ ಹದಕ್ಕೆ ನುಣ್ಣಗೆ ರುಬ್ಬಿರಿ, ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿ ಈರುಳ್ಳಿ, ನೀರನ್ನು ಹಾಕಿ ಗೊಜ್ಜಿನ ಹದಕ್ಕೆ ಕದಡಿಕೊಳ್ಳಿರಿ. ಇದಕ್ಕೆ ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆಯನ್ನು ಹಾಕಿ ಕದಡಿದರೆ ಜೀರಿಗೆ ಗೊಜ್ಜು ರೆಡಿ. ಇದು ಬಿಸಿ ಅನ್ನದೊಂದಿಗೆ ತಿನ್ನಲು ರುಚಿಯಾಗಿರುತ್ತದೆ ಅಲ್ಲದೆ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಾವಿನಕಾಯಿ ನೀರು ಗೊಜ್ಜು
ಬೇಕಾಗುವ ಸಾಮಗ್ರಿ: ಎರಡು ಮಧ್ಯಮ ಗಾತ್ರದ ಮಾವಿನಕಾಯಿ (ಹುಳಿಯಿದ್ದರೆ ರುಚಿ ಹೆಚ್ಚುತ್ತದೆ), ಹಸಿರು ಮೆಣಸಿನಕಾಯಿ ನಾಲ್ಕು ಸಾಸಿವೆ ಒಂದು ಚಮಚ, ಕಡಲೆಕಾಯಿ ಎಣ್ಣೆ ನಾಲ್ಕು ಚಮಚ, ಇಂಗು ಎರಡು ಚಿಟಿಕೆ, ಕರಿಬೇವು 8-10 ಎಲೆ, ಉಪ್ಪು ರುಚಿಗೆ ತಕ್ಕಷ್ಟು.
ವಿಧಾನ: ಎರಡು ಮಾವಿನಕಾಯಿಗಳನ್ನು ತೊಳೆದು ಮಾವಿನಕಾಯಿ ಮುಳುಗುವಷ್ಟು ನೀರು ಹಾಕಿ ಚೆನ್ನಾಗಿ ಬೇಯಿಸಿರಿ. ಮಾವಿನಕಾಯಿ ಕಂದು ಬಣ್ಣಕ್ಕೆ

ತಿರುಗಿದ ಮೇಲೆ ಐದು ನಿಮಿಷ ಬೇಯಿಸಿರಿ. ನಂತರ ಅದನ್ನು ಆರಲು ಬಿಡಿ. ಆರಿದ ಮೇಲೆ ಬೆಂದ ಮಾವಿನಕಾಯಿಯನ್ನು ಚೆನ್ನಾಗಿ ಕಿವುಚಿ ಸಿಪ್ಪೆ ಮತ್ತು ವಾಟೆಯನ್ನು ತೆಗೆದು ತೆಳುವಾದ ಗಂಜಿಯ ರೂಪದ ದ್ರವ ಉಳಿದುಕೊಳ್ಳುತ್ತದೆ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಸಾಸಿವೆ ಹಾಗೂ ಉದ್ದಕ್ಕೆ ಸೀಳಿದ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಬಿಳಿ ಬಣ್ಣಕ್ಕೆ ಬರುವ ವರೆಗೆ ಬಾಡಿಸಿ. ನಂತರ ಕರಿಬೇವಿನ ಸೊಪ್ಪು ಎರಡು ಚಿಟಿಕೆ ಇಂಗು ಹಾಕಿ ಇದನ್ನು ಮೊದಲೆ ಮಾಡಿಟ್ಟುಕೊಂಡ ಮಾವಿನಕಾಯಿ ರಸಕ್ಕೆ ಬೆರೆಸಿರಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮೆಣಸಿನಕಾಯಿಯನ್ನು ಚೆನ್ನಾಗಿ ಕಿವುಚಿ ಕದಡಿದರೆ ಮಾವಿನಕಾಯಿ ನೀರ್ಗೊಜ್ಜು ರೆಡಿ. ಬಿಸಿ ಅನ್ನದ ಜೊತೆ ತಿನ್ನಲು ತುಂಬ ರುಚಿಯಾಗಿರುತ್ತದೆ.

ನಿಂಬೆಹಣ್ಣಿನ ಗೊಜ್ಜು
ಬೇಕಾಗುವ ಸಾಮಗ್ರಿ: ಮೂರು ದೊಡ್ಡ ಗಾತ್ರದ ನಿಂಬೆಹಣ್ಣು, ಕೆಂಪು ಮೆಣಸಿನಕಾಯಿ 5-6, ಹಸಿ ತೆಂಗಿನಕಾಯಿ ತುರಿ ಕಾಲು ಕಪ್, ಸಾಸಿವೆ ಎರಡು ಚಮಚ, ಬೆಲ್ಲ ಗೋಲಿ ಗಾತ್ರ, ಉಪ್ಪು ರುಚಿಗೆ ತಕ್ಕಷ್ಟು ಕಡಲೆಕಾಯಿ ಎಣ್ಣೆ ನಾಲ್ಕು ಚಮಚ, ಇಂಗು ಒಂದು ಚಿಟಿಕೆ, ಕರಿಬೇವು 8-10 ಎಲೆಗಳು.
ವಿಧಾನ: ಮೊದಲು ನಿಂಬೆಹಣ್ಣನ್ನು ಹೆಚ್ಚಿ ಒಂದು ಪಾತ್ರೆಯಲ್ಲಿ ರಸವನ್ನು ತೆಗೆದಿಟ್ಟುಕೊಳ್ಳಿ ಇದಕ್ಕೆ ಎರಡು ಕಾಫಿ ಕಪ್‌ನಷ್ಟು ನೀರನ್ನು ಸೇರಿಸಿರಿ. ತೆಂಗಿನಕಾಯಿ ತುರಿ, ಕೆಂಪುಮೆಣಸಿನಕಾಯಿ, ಒಂದು ಚಮಚ ಸಾಸಿವೆ, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಈ ಮಿಶ್ರಣವನ್ನು ಮೊದಲೆ ಮಾಡಿಟ್ಟುಕೊಂಡಿದ್ದ ನಿಂಬೆ ರಸದ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕದಡಿರಿ. ಈ ಮಿಶ್ರಣಕ್ಕೆ ಸಾಸಿವೆ, ಕರಿಬೇವು ಹಾಗೂ ಇಂಗಿನ ಒಗ್ಗರಣೆ ಕೊಟ್ಟರೆ ರುಚಿಯಾದ ನಿಂಬೆಹಣ್ಣಿನ ಗೊಜ್ಜು ರೆಡಿ. ಇದು ಪಿತ್ತಶಮನ ಮಾಡಲು ಸಹಕಾರಿಯಾಗಿದೆಯಲ್ಲದೆ ವಾರಕ್ಕೊಮ್ಮೆ ತಿನ್ನುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT