ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೊವೇವ್ ಎಂಬ ಮಾಯಾಪೆಟ್ಟಿಗೆ

Last Updated 6 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

`ಮೈಕ್ರೋವೇವ್~ ಎಂದ ಕೂಡಲೆ ಥಳ ಥಳ ಹೊಳೆಯುವ ಗಾಜಿನ ಬಾಗಿಲಿನ ಪುಟ್ಟ ಪೆಟ್ಟಿಗೆ ನೆನಪಾಗುತ್ತದೆಯಲ್ಲವೇ? ಆದರೆ `ಮೈಕ್ರೋವೇವ್~ ಎಂದರೆ ಸೂಕ್ಷ್ಮ ತರಂಗಗಳು ಎಂದರ್ಥ.  ಸೂಕ್ಷ್ಮ ತರಂಗಗಳನ್ನು ಬಳಸಿಕೊಂಡು ಆಹಾರವನ್ನು ಬಿಸಿ ಮಾಡಲು ಅಥವಾ ಬೇಯಿಸಲು ಅಡುಗೆಮನೆಯಲ್ಲಿ ಬಳಸುವ ಪುಟ್ಟ ಪೆಟ್ಟಿಗೆಯೇ ಮೈಕ್ರೋವೇವ್ ಓವನ್. 

 ಅಮೆರಿಕದ ಪರ್ಸಿ ಸ್ಪೆನ್ಸರ್ 1945ರಲ್ಲಿ  ಸೂಕ್ಷ್ಮ ತರಂಗಗಗಳು ಶಾಖವನ್ನು ಉಂಟುಮಾಡುತ್ತದೆ ಎನ್ನುವ ಅಂಶವನ್ನು ಆಕಸ್ಮಿಕವಾಗಿ ಕಂಡುಹಿಡಿದನು.  ಈ ಮೂಲ ತತ್ವವನ್ನು ಆಧರಿಸಿ 1947ರಲ್ಲಿ ಪ್ರಥಮ ಮೈಕ್ರೋವೇವ್ ಓವನ್ ಅನ್ನು ಸೃಷ್ಟಿಸಲಾಯಿತು.

 5.9 ಅಡಿ ಎತ್ತರದ ಈ ಒಲೆ 340 ಕಿಲೋಗ್ರಾಂ ತೂಗುತ್ತಿತ್ತು!  ಇಂದಿನ ರೂಪದ ಮೈಕ್ರೋವೇವ್‌ಅನ್ನು 1967ರಲ್ಲಿ ಪ್ರಥಮವಾಗಿ ತಯಾರಿಸಲಾಯಿತು.

ಆಗ ಅದರ ಅಂದಿನ ಬೆಲೆ 495 ಅಮೆರಿಕನ್ ಡಾಲರ್‌ಗಳಾಗಿತ್ತು. ಬೇರೆ ಒಲೆಗಳಂತೆ ಅಡುಗೆ ಮನೆಯನ್ನು ಶಾಖದ ಕುಲುಮೆಯನ್ನಾಗಿಸದ ಮೈಕ್ರೋವೇವ್ ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಜನಪ್ರಿಯತೆಯನ್ನು ಗಳಿಸತೊಡಗಿದೆ. 

ಇಂದು ಮಾರುಕಟ್ಟೆಯಲ್ಲಿ ಹಲವಾರು ಬ್ರ್ಯಾಂಡ್‌ಗಳ ಮೈಕ್ರೋವೇವ್ ಲಭ್ಯವಿದ್ದು ಅದರ ಬೆಲೆ ರೂ.5000ದಿಂದ ರೂ. 16,000ಗಳಾಗಿವೆ. 

ಕೆಲಸ ಮಾಡುವ ಬಗೆ
ಪ್ರಖರವಾದ ವಿದ್ಯುತ್ತು ವಿದ್ಯುದೈಸ್ಕಾಂತ ಶಕ್ತಿಯ ಅಲೆಗಳಾಗಿ ಪರಿವರ್ತಿತವಾದಾಗ ಮೈಕ್ರೋವೇವ್ ಅರ್ಥಾತ್ ಸೂಕ್ಷ್ಮ ತರಂಗಗಳು ಕೆಲಸಮಾಡುತ್ತದೆ.

ಸೂಕ್ಷ್ಮತರಂಗಗಳು ಆಹಾರ ಪದಾರ್ಥದಲ್ಲಿನ ಕಣಗಳಲ್ಲಿ ಉಂಟುಮಾಡುವ ಕಂಪನ ಮತ್ತು ಹೊಯ್ದೊಟಗಳಿಂದಾಗಿ ಶಾಖ ಉತ್ಪತ್ತಿಯಾಗುತ್ತದೆ.
 
ಈ ಪ್ರಕ್ರಿಯೆ, ಒಲೆಯನ್ನು ಬಿಸಿಯಾಗಿಸದೆ ಆಹಾರ ಪದಾರ್ಥವನ್ನು ಮಾತ್ರ ಬೇಯಿಸುತ್ತದೆ.  ಇದೇ ಕಾರಣದಿಂದಾಗಿ ಹೆಚ್ಚಿನ ನೀರಿನ ಅಂಶ ಹೊಂದಿರುವ ಹಣ್ಣು ಮತ್ತು ತರಕಾರಿಗಳು ಬೇಗ ಬೇಯುತ್ತವೆ. 

ಕೊಬ್ಬು ಮತ್ತು ಸಕ್ಕರೆ ಅಂಶಗಳನ್ನು ಹೊಂದಿರುವ  ಪದಾರ್ಥಗಳು ಸಹಾ ತ್ವರಿತವಾಗಿ ಬೇಯುತ್ತವೆ.  ಸೂಕ್ಷ್ಮ ತರಂಗಗಳು ಗಾಜು, ಪ್ಲಾಸ್ಟಿಕ್ ಮತ್ತು ಕಾಗದದ ಮೂಲಕ ಹಾಯ್ದು ಹೋದರೆ, ಲೋಹದ ಮೇಲೆ ಬಿದ್ದಾಗ ಪ್ರತಿಫಲಿಸುತ್ತದೆ. 

ಶಾಖವು ನೇರವಾಗಿ ಆಹಾರದಲ್ಲಿ ಉತ್ಪತ್ತಿಯಾದರೂ, ಸೂಕ್ಷ್ಮತರಂಗಗಳು ಆಹಾರವನ್ನು ಒಳಗಿನಿಂದ ಬೇಯಿಸುವುದಿಲ್ಲ.  ಮಾಂಸ ಮುಂತಾದ ಘನ ಪದಾರ್ಥಗಳು ಹೊರ ಪದರದಿಂದ ಒಳಮುಖವಾಗಿ ಬೇಯತೊಡಗುತ್ತದೆ.

ಉಪಯೋಗಗಳು

-ಆಹಾರ ಪದಾರ್ಥವನ್ನು ಬೇಯಿಸುವುದರಲ್ಲಿ ಸಮಯದ ಉಳಿತಾಯ
-ಮಾಡಿರುವ ಅಡುಗೆಯನ್ನು  ತ್ವರಿತವಾಗಿ ಬಿಸಿ ಮಾಡುವುದು

-ಸೂಪರ್ ಮಾರ್ಕೆಟ್‌ನಿಂದ ಕೊಂಡು ತರುವ ಪ್ರಿ-ಕುಕ್ಡ್ ಅಂದರೆ ಮೊದಲೇ ಬೇಯಿಸಲ್ಪಟ್ಟಿರುವ ಆಹಾರವನ್ನು ಬಿಸಿ ಮಾಡಲು

-“ಫ್ರೋಜನ್ ಫುಡ್‌“ ಎಂದರೆ ತೇವಾಂಶವನ್ನು ತೆಗೆದು ಘನೀಕರಿಸಿದ ಆಹಾರ ಪದಾರ್ಥವನ್ನು ಕ್ಷಣ ಮಾತ್ರದಲ್ಲಿ ಡಿ-ಫ್ರಾಸ್ಟ್ ಮಾಡುವುದು

-ಬೆಣ್ಣೆಯನ್ನು ಕರಗಿಸಿ ತುಪ್ಪ ಮಾಡುವುದು ಚಾಕೋಲೇಟ್ ಕರಗಿಸುವುದು
-ಉಪ್ಪಿನಕಾಯಿ/ಹಣ್ಣಿನ ರಸ ಮುಂತಾದವುಗಳನ್ನು ಶೇಖರಿಸಿಡುವುದಕ್ಕಾಗಿ ಗಾಜಿನ ಶೀಶೆಯನ್ನು ತೇವಾಂಶವಿಲ್ಲದಂತೆ ಒಣಗಿಸುವುದು

-ಬ್ರೆಡ್/ಬಿಸ್ಕತ್/ಚಿಪ್ಸ್ ಗಳನ್ನು ತಾಜಾಗೊಳಿಸುವುದು
-ಮುಸುಕಿನ ಜೋಳವನ್ನು ಬೇಯಿಸುವುದು

-ಹುಣಿಸೆಹಣ್ಣನ್ನು ಗಾಜಿನ ಬಟ್ಟಲಿನಲ್ಲಿ ಹಾಕಿ ನೀರನ್ನು ಸೇರಿಸಿ 5 ನಿಮಿಷ ಮೈಕ್ರೋವೇವ್ ನಲ್ಲಿಟ್ಟರೆ ನಿಮಿಷಗಳಲ್ಲಿ  ರಸ ತೆಗೆಯಬಹುದು

-ಬಾದಾಮಿ/ಗೋಡಂಬಿ ಮುಂತಾದ ಬೀಜಗಳನ್ನು ಹುರಿಯುವುದು
-ಬದನೆಕಾಯಿ ತುಂಬುಗಾಯಿ, ಬೆಂಡೆಕಾಯಿ ಪಲ್ಯ, ಮುಸುಕಿನ ಜೋಳದ ಕೋರ್ಮ, ಪಾಪ್‌ಕಾರ್ನ್ ಮುಂತಾದ ಭಾರತೀಯ ಅಡುಗೆಗಳನ್ನು ಸುಲಭವಾಗಿ ತಯಾರಿಸಬಹುದು

ಪೋಷಕಾಂಶಗಳ ಪರಿಣಾಮ

ಆಹಾರ ಪದಾರ್ಥಗಳಲ್ಲಿನ ಪೋಷಕಾಂಶಗಳ ಸಂರಕ್ಷಣೆ ಅಡುಗೆ ಮಾಡುವಾಗ ಎಷ್ಟು ನೀರನ್ನು ಬಳಸಲಾಗಿದೆ, ಎಷ್ಟು ಹೊತ್ತು ತ್ತು ಎಷ್ಟು ಉಷ್ಣಾಂಶದಲ್ಲಿ ಬೇಯಿಸಲಾಗಿದೆ ಎನ್ನುವುದರ ಮೇಲೆ ಆಧಾರಿತವಾಗಿದೆ. 

ಈ ಅಂಶಗಳು ಹೆಚ್ಚಾದಷ್ಟೂ ಹೆಚ್ಚಿನ ಪೋಷಕಾಂಶಗಳು ನಷ್ಟಗೊಳ್ಳುತ್ತವೆ. ಸಾಧಾರಣ ಒಲೆಯಲ್ಲಿ ಬೇಯಿಸಿದಾಗ ಸ್ಪಿನ್ಯಾಚ್ (ಸೊಪ್ಪು)ನಲ್ಲಿರುವ ಫೋಲೇಟ್ ಅಂಶ 77% ನಷ್ಟು ನಾಶವಾದರೆ, ಮೈಕ್ರೋವೇವ್ ನಲ್ಲಿ ಬೇಯಿಸಿದಾಗ ಸಂಪೂರ್ಣವಾಗಿ ಉಳಿಯುತ್ತದೆ. ಮೈಕ್ರೋವೇವ್, ವಿಟಮಿನ್ ಬಿ12 ಅನ್ನು 30 ರಿಂದ 40% ರಷ್ಟು ನಾಶಗೊಳಿಸುತ್ತದೆ.

ಮುಂಜಾಗ್ರತೆ
-ಮೈಕ್ರೋವೇವ್‌ನಿಂದ ಹೊರತೆಗೆದ ಪದಾರ್ಥಗಳು ಬಹಳ ಬಿಸಿಯಾಗಿರುತ್ತವೆ.  ಆದ್ದರಿಂದ ಪಾತ್ರೆಯನ್ನು ಬರಿಗೈಯಿಂದ ತೆಗೆಯಬೇಡಿ.

-ಆಹಾರ ಪದಾರ್ಥವನ್ನು ಬೇಯಲಿಟ್ಟಿರುವ ಪಾತ್ರೆಯನ್ನು ಈಚೆ ತೆಗೆದು ಮುಚ್ಚಳವನ್ನು ಹೊರತೆಗೆದಾಗ ಸಂಗ್ರಹವಾಗಿರುವ ಆವಿ ಹೊರಬಂದು ಮುಖ, ಕೈಗಳನ್ನು ಸುಡುವುದನ್ನು ತಪ್ಪಿಸಲು  ಮುಚ್ಚಳವನ್ನು ಸಂಪೂರ್ಣವಾಗಿ ಮುಚ್ಚದೆ ಸಂದಿಬಿಡಿಸಿ.

-ಶಾಖವು ಬೇಯಲಿಟ್ಟಿರುವ ಪದಾರ್ಥದಲ್ಲಿ ಸಮನಾಗಿ ಹರಡಿ ನಂತರ ಆಚೆ ಹೋಗುವಂತೆ ಮಾಡುವುದಕ್ಕಾಗಿ ಮೈಕ್ರೋವೇವ್‌ನಿಂದ ಆಚೆ ತೆಗೆದ ಪಾತ್ರೆಯಲ್ಲಿ ಕೂಡಲೇ ಕೈಯ್ಯೊಡಿಸಬಾರದು. ಸ್ವಲ್ಪ ಸಮಯ ಹಾಗೇ ಇಟ್ಟಿರಬೇಕು. 

-ಅಡುಗೆ ಮಾಡುವ ಪ್ರಕ್ರಿಯೆಯಲ್ಲಿ ಕಲಕುವುದಕ್ಕೆ ಮತ್ತು ಪಾತ್ರೆಯನ್ನು ಚಕ್ರಾಕಾರವಾಗಿ ತಿರುಗಿಸುವುದಕ್ಕೆ ಕೊಟ್ಟಿರುವ ಸೂಚನೆಯನ್ನು ತಪ್ಪದೆ ಪಾಲಿಸಿ.

-ಅಡುಗೆ ಮಾಡಲು ಲೋಹದ ಪಾತ್ರೆಯನ್ನೇ ಬಳಸಬೇಕೆಂಬ ಸೂಚನೆಯಿದ್ದರೆ ಮಾತ್ರ ಬಳಸಿ.

-ಗಾಜು, ಪ್ಲಾಸ್ಟಿಕ್, ಯಾವುದೇ ಆಗಲಿ, “ಮೈಕ್ರೋವೇವ್ ಸೇಫ್‌“ ಎಂದು ಗುರುತಿಸಲ್ಪಟ್ಟಿರುವ ಪಾತ್ರೆಯನ್ನು ಮಾತ್ರ ಬಳಸಿ.

-ನೀರು ಮತ್ತು ಇತರ ನೀರಾದ ಪದಾರ್ಥಗಳನ್ನು ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ಮೈಕ್ರೋವೇವ್‌ನಲ್ಲಿ ಇಡಬೇಡಿ.  ನೀರನ್ನು ಶುದ್ಧವಾದ ಬಟ್ಟಲಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಮಯ ಕಾಸಿದರೆ ನೀರು “ಸೂಪರ್ ಹೀಟ್‌“ಆಗುವ ಸಾಧ್ಯತೆಯಿರುತ್ತದೆ. 

ಸೂಪರ್ ಹೀಟ್ ಆದಾಗ ಬಟ್ಟಲಿನಲ್ಲಿನ ನೀರು ನೋಡಲು ನಿರುಪದ್ರವಿಯಾಗಿ ಕಂಡರೂ, ಹೊರತೆಗೆದಾಗ ಬಟ್ಟಲಿನಿಂದಾಚೆಗೆ ಅಕ್ಷರಶಃ ಸ್ಫೋಟಗೊಳ್ಳಬಹುದು. 

ನೀರನ್ನು ಎರಡು ಬಾರಿ ಬಿಸಿಮಾಡಿದಾಗಲೂ ಸೂಪರ್‌ಹೀಟ್ ಆಗಬಹುದು.  ಸಕ್ಕರೆ ಅಥವಾ ಕಾಫಿ ಕಣಗಳನ್ನು ಸೇರಿಸುವ ಮೂಲಕ ಈ ಸಮಸ್ಯೆಯನ್ನು ತಪ್ಪಿಸಬಹುದು.

-ಮೈಕ್ರೋವೇವ್‌ನ ಬಾಗಿಲು ಹಾಳಾಗಿದ್ದರೆ ಅಥವಾ ಭದ್ರವಾಗಿ  ಮುಚ್ಚುತ್ತಿಲ್ಲದಿದ್ದರೆ ಮೈಕ್ರೋವೇವನ್ನು ಉಪಯೋಗಿಸಬೇಡಿ.

-ಖಾಲಿ ಮೈಕ್ರೋವೇವನ್ನು ಚಾಲು ಮಾಡಬೇಡಿ.  ಇದರಿಂದ ಬೆಂಕಿ ಉಂಟಾಗುವ ಸಾಧ್ಯತೆಯಿರುತ್ತದೆ.

-ಮೈಕ್ರೋವೇವ್‌ಅನ್ನು ಚಾಲು ಮಾಡಿರುವಾಗ ಮುಂಜಾಗ್ರತಾ ಕ್ರಮವಾಗಿ 3-4 ಅಡಿ ದೂರವೇ ಇದ್ದರೆ ಒಳ್ಳೆಯದು.

-ಸಂಕೀರ್ಣ ಸಾಧನವಾದ ಮೈಕ್ರೋವೇವ್‌ಅನ್ನು ನೀವೇ ದುರಸ್ತಿಗೊಳಿಸಲು ಪ್ರಯತ್ನಿಸಬೇಡಿ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT