ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿದ್ದರು ನನ್ನ ಪಪ್ಪ...

Last Updated 24 ಜುಲೈ 2015, 19:54 IST
ಅಕ್ಷರ ಗಾತ್ರ

ರಾಜ್ಯಕ್ಕೆ ಬೆಳಕು ನೀಡಲು ಶರಾವತಿ ನದಿಗೆ ಅಡ್ಡಲಾಗಿ ಲಿಂಗನಮಕ್ಕಿ ಆಣೆಕಟ್ಟು ನಿರ್ಮಿಸಲು ಪ್ರಾರಂಭವಾಗುತ್ತಿದ್ದಂತೆ, ಹುಟ್ಟಿ ಬೆಳೆದ ಮನೆ, ತೋಟ, ಗದ್ದೆ ಮುಳುಗಡೆಯಾಗುವುದನ್ನು ನೋಡುತ್ತಲೇ ಆ ಊರು ಬಿಟ್ಟು, ಕುಟುಂಬದೊಂದಿಗೆ ನನ್ನಪ್ಪ ಬಂದು ಸೇರಿದ್ದು ಮಲೆನಾಡಿನ ಸಾಗರ ಸಮೀಪದ ಕಾನ್ಲೆಗೆ. ಹೊಸ ಜಾಗದಲ್ಲಿ ಹೊಸ ಬದುಕನ್ನೇ ಪ್ರಾರಂಭಿಸಬೇಕಾದ ಅನಿವಾರ್ಯ.  ಅವರ ಧೈರ್ಯ - ತಾಳ್ಮೆಯೇ ನಮಗೆಲ್ಲಾ ಇಂದಿಗೂ ಸ್ಫೂರ್ತಿ.

ನನ್ನ ಅಪ್ಪ ಕೃಷಿಕ. ಸುಗ್ಗಿಯ ದಿನಗಳಲ್ಲಿ ಆಳುಗಳೊಂದಿಗೆ ತಾವೂ ಕೆಲಸ ಮಾಡುತ್ತಿದ್ದರು. ‘ಬರೀ ಯಜಮಾನಿಕೆ ಮಾಡುವುದಲ್ಲ, ಮೈ ಬಗ್ಗಿ, ಮಣ್ಣು ಮುಟ್ಟಿ, ಬುಟ್ಟಿ ಹೊತ್ತು ಕೆಲಸ ಮಾಡಿದರೇನೇ ಕೆಲಸದ ಅನುಭವ ತಿಳಿಯುವುದು’ ಎನ್ನುತ್ತಿದ್ದರು. ಕೃಷಿ ಬದುಕಿನ ಏರು-ಪೇರು, ಕಷ್ಟನಷ್ಟ, ತೀವ್ರ ಆರ್ಥಿಕ ಒತ್ತಡ ಇತ್ಯಾದಿ ಸಮಸ್ಯೆಗಳಿದ್ದರೂ ಧೃತಿಗೆಡದೇ ನಮಗೆಲ್ಲಾ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ, ಸುಸಂಸ್ಕೃತರನ್ನಾಗಿಸಿದರು.

ಸಂಗೀತ, ಸಾಹಿತ್ಯಾಭಿಮಾನಿಯಾಗಿದ್ದ ಅಪ್ಪ ಪೇಟೆಗೆ ಹೋದಾಗಲೆಲ್ಲಾ ಕೈಯಲ್ಲಿ ವಾರ, ಮಾಸಿಕ ಪತ್ರಿಕೆಗಳನ್ನೆಲ್ಲಾ ತರುತ್ತಿದ್ದರು.  ನನಗೂ ಬರವಣಿಗೆಯ ಆಸಕ್ತಿ ಹುಟ್ಟಿಸಿದ ಅವರು ನನ್ನದೊಂದು ಪುಟ್ಟ ಲೇಖನ ಮೊದಲ ಬಾರಿ ಪ್ರಕಟವಾದಾಗ ಅತೀ ಖುಷಿಗೊಂಡು ‘ಬರಿ, ಬರಿ, ಏನಾದರೂ ಬರೆಯುತ್ತಿರು.  ಅಂಚೆಗೆ ಹಾಕಿ ಬರುವುದು ನನ್ನ ಕೆಲಸ’ ಎನ್ನುತ್ತಿದ್ದರು.  ಸಾಗರದ -ತಾಳಗುಪ್ಪದಲ್ಲಿ ನಡೆಯುತ್ತಿದ್ದ ಯಕ್ಷಗಾನ ಮತ್ತು ನಾಟಕ ನೋಡಲು ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು.  ಅಪ್ಪನೊಂದಿಗೆ ’ಬಂಗಾರದ ಮನುಷ್ಯ’ ಚಿತ್ರವನ್ನು ಎರಡು ಮೂರು ಬಾರಿ ನೋಡಿದ್ದೆವು.  ಡಾ.ರಾಜ್ ಕುಮಾರ್‌, ಉದಯಕುಮಾರ್, ನರಸಿಂಹ ರಾಜು ಅವರ ಅಭಿಮಾನಿ ನನ್ನಪ್ಪ.

ಬೇಸಿಗೆಯಲ್ಲೊಮ್ಮೆ ನಮ್ಮೂರಿನ ರೈತರ ಮನೆಗಳಿಗೆ ಬೆಂಕಿ ತಗುಲಿ ಒಂದು ಕೇರಿಯೇ ಭಸ್ಮವಾಗಿತ್ತು. ಕೊಟ್ಟಿಗೆಯಲ್ಲಿ ಕಟ್ಟಿದ ದನ-ಕರು-, ಎಮ್ಮೆ, ಒಂದಿಷ್ಟು ಪಾತ್ರೆ, ನಮ್ಮ ಕೆಲವು ಬಟ್ಟೆ ಬರೆ, ಕಂಬಳಿ-ಬೆಡ್‌ಷೀಟ್‌ಗಳನ್ನೆಲ್ಲಾ ಆ ರೈತರ ಮನೆಗೆ ಕೊಟ್ಟು ಬಂದರು.  ಸಾಗರದ ಅಡಿಕೆ ಮಂಡಿಯಿಂದ ಹಣ ತಂದು ಅವರೆಲ್ಲರ ಜೀವನಕ್ಕೆ ನೆರವಾದರು. ನಮ್ಮ ಮನೆಯಲ್ಲಿ ನಮ್ಮೊಂದಿಗೆ ವಿದ್ಯಾಭ್ಯಾಸಕ್ಕೆಂದು ಅಪ್ಪನ ಬಂಧುಗಳ ಮಕ್ಕಳನ್ನು ಓದಲು ಇಟ್ಟುಕೊಂಡಿದ್ದರು.  ನಮಗೆ ತೋರಿದ ಪ್ರೀತಿ, ತಂದ ಪುಸ್ತಕ, ಬಟ್ಟೆ - ಬರೆ ಅವರಿಗೂ ಒದಗುತ್ತಿತ್ತು.  ನಾನು ಓದುತ್ತಿದ್ದ ಸರ್ಕಾರಿ ಶಾಲೆಯಲ್ಲಿ ಪ್ರತೀ ವರ್ಷ ಗಣೇಶ ಚೌತಿಯನ್ನು ಗಣೇಶನನ್ನು ಕೂರಿಸುವ ಮೂಲಕ ಆಚರಿಸಲಾಗುತ್ತಿತ್ತು.  ಪೇಟೆಯಿಂದ ಗಣಪತಿ ಮೂರ್ತಿಯನ್ನು ಮಾಸ್ತರರು ತರುತ್ತಿದ್ದರು. ಒಮ್ಮೆ ನನ್ನಪ್ಪ ತಾನೇ ಗಣೇಶಮೂರ್ತಿ ತಯಾರಿಸಿಕೊಡುವುದಾಗಿ ಹೇಳಿ, ಸುಂದರ ಮೂರ್ತಿಯೊಂದನ್ನು ಮಣ್ಣಿನಿಂದ ತಯಾರಿಸಿ ಶಾಲೆಗೆ ಕೊಟ್ಟು ತಮ್ಮ ಕಲಾಪ್ರೌಢಿಮೆಯನ್ನೂ ತೋರಿಸಿದರು.

‘ಸುಧಾ’ ಪತ್ರಿಕೆಯ ಹೆಸರನ್ನು ನೋಡಿ, ಅಪ್ಪ ನನಗೆ ಅದೇ ಹೆಸರನ್ನಿಟ್ಟರು. ಕ್ಯಾನ್ಸರ್ ಕಾಯಿಲೆಯಿಂದಾಗಿ ಅರವತ್ಮೂರನೆಯ ವಯಸ್ಸಿನಲ್ಲಿ ನಮ್ಮೆಲ್ಲ ಅಗಲಿದರು.  ತಾಯಿಯ ಋಣ ತೀರಿಸಲಾಗುವುದಿಲ್ಲವೆಂಬಂತೆ ತಂದೆಯ ಋಣವನ್ನೂ ತೀರಿಸಲಾಗುವುದಿಲ್ಲ.  ಅಪ್ಪನ ಬಗ್ಗೆ ಏನೆಲ್ಲಾ, ಎಷ್ಟೆಲ್ಲಾ ಬರೆದರೂ ಕಡಿಮೆಯೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT