ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುರಿಯಾಳಾಗಲು ರುಚಿಕರ ಹುರಿಹಿಟ್ಟು

ನಮ್ಮೂರ ಊಟ
Last Updated 27 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಗೋದಿ ಹುರಿಹಿಟ್ಟು
ಸಾಮಗ್ರಿ: ಗೋದಿಹಿಟ್ಟು 1 ಪಾವು, ಬೆಲ್ಲ ಪುಡಿ ಮಾಡಿದ್ದು ಅರ್ಧ ಪಾವು, ಏಲಕ್ಕಿ 4-5, ಕೊಬ್ಬರಿ ತುರಿ ಅರ್ಧ ಕಪ್, ತುಪ್ಪ 25 ಗ್ರಾಂ.

ವಿಧಾನ: ಒಂದು ಬಾಣಲೆಗೆ 2 ಚಮಚ ತುಪ್ಪ ಹಾಕಿ ನಂತರ ಗೋದಿಹಿಟ್ಟನ್ನು ಹಾಕಿ, ಸಣ್ಣ ಉರಿಯಲ್ಲಿ ಹುರಿಯಿರಿ. ಕಂದು ಬಣ್ಣಕ್ಕೆ ತಿರುಗಲಾರಂಭಿಸಿದ ತಕ್ಷಣ ಒಲೆಯಿಂದ ಇಳಿಸಿಬಿಡಿ. ಇನ್ನೊಂದು ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿ ತುರಿದ ಒಣಕೊಬ್ಬರಿ ತುರಿಯನ್ನು ಹಾಕಿ ಸ್ವಲ್ಪ ಕಂದುಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಹುರಿದ ಕೊಬ್ಬರಿ ತುರಿ, ಏಲಕ್ಕಿ ಪುಡಿ, ಪುಡಿ ಮಾಡಿದ ಬೆಲ್ಲವನ್ನು ಮೊದಲೆ ಹುರುದಿಟ್ಟುಕೊಂಡು ಗೋದಿಹಿಟ್ಟಿಗೆ ಹಾಕಿ ಚೆನ್ನಾಗಿ ಬೆರೆಸಿರಿ. ಬೆಲ್ಲವನ್ನು ಕುಟ್ಟಿ ಪುಡಿಮಾಡುವುದಕ್ಕಿಂತ ತುರಿದು ಬೆರೆಸಿದರೆ ಚೆನ್ನಾಗಿ ಮಿಶ್ರವಾಗುತ್ತದೆ ಹಾಗೂ ಸ್ವಾದಿಷ್ಟ ರುಚಿಕರ ಗೋದಿ ಹುರಿಹಿಟ್ಟು ತಿನ್ನಲು ರೆಡಿ. ಇದನ್ನು ಹಾಗೆಯೇ ತಿನ್ನಬಹುದು, ಬೇಕಾದರೆ ಹಾಲನ್ನು ಹಾಕಿ ಕಲೆಸಿಕೊಂಡು ತಿಂದರೆ ಇನ್ನು ರುಚಿಯಾಗಿರುತ್ತದೆ.

ಅಕ್ಕಿ ಹುರಿಹಿಟ್ಟು
ಸಾಮಗ್ರಿ:
ಅಕ್ಕಿ ಹಿಟ್ಟು 1ಪಾವು (ಸೋನಾ ಮಸುರಿ ಅಕ್ಕಿ ಹಿಟ್ಟೂ ಒಳ್ಳೆಯದು) ಬೆಲ್ಲ ಪುಡಿ ಮಾಡಿದ್ದು 1 ಪಾವು, ಏಲಕ್ಕಿ 4-5, ಹಸಿ ತೆಂಗಿನಕಾಯಿ ತುರಿ 1ಕಪ್, ತುಪ್ಪ 25ಗ್ರಾಂ, ಗೋಡಂಬಿ, ದ್ರಾಕ್ಷಿ 25 ಗ್ರಾಂ,

ವಿಧಾನ; ಒಂದು ಬಾಣಲೆಗೆ 2-3 ಚಮಚ ತುಪ್ಪ ಹಾಕಿ ಅಕ್ಕಿ ಹಿಟ್ಟು ಹಾಗೂ 1 ಕಪ್ ಹಸಿ ತೆಂಗಿನ ಕಾಯಿ ತುರಿಯನ್ನು ಹಾಗೂ ಗೋಡಂಬಿ, ದ್ರಾಕ್ಷಿ ಹಾಕಿ ಸಣ್ಣ ಉರಿಯಲ್ಲಿ ಹುರಿಯುತ್ತಿರಬೇಕು. ಸ್ವಲ್ಪ ಕಂದು ಬಣ್ಣಕ್ಕೆ ಬಂದ ಕೂಡಲೆ ತೆಗೆದುಬಿಡಿ ಹಾಗೂ ಆರಲು ಬಿಡಿ ತೆಂಗಿನಕಾಯಿಯ ತುರಿ ಕೂಡ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಲಾರಂಭಿಸುತ್ತದೆ. ಆಗ ತೆಗೆದು ಬಿಡಬೇಕು ಆರಿದ ನಂತರ ಇದಕ್ಕೆ ಏಲಕ್ಕಿ ಪುಡಿ ಹಾಗೂ ಪುಡಿ ಮಾಡಿದ ಅಥವಾ ತುರಿದ ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣವನ್ನು ಬೆರೆಸಿದರೆ ಅಕ್ಕಿ ಹುರಿಹಿಟ್ಟು ತಿನ್ನಲು ರೆಡಿ.

ರಾಗಿ ಹುರಿ ಹಿಟ್ಟು
ಸಾಮಗ್ರಿ: ರಾಗಿ ಹುರಿಹಿಟ್ಟು 1ಲೋಟ, ಹಾಲು 1 ಲೋಟ, ಬೆಲ್ಲ ಸಣ್ಣದು ನಾಲ್ಕು ಅಥವಾ 4 ಚಮಚ ಸಕ್ಕರೆ, ಏಲಕ್ಕಿ 2, ಹಸಿ ಕಾಯಿತುರಿ ಅರ್ಧ ಕಪ್.

ವಿಧಾನ: ಹಂತ 1: ಮೊದಲು 1ಕೆ.ಜಿ ಅಥವ ಅಗತ್ಯಕ್ಕೆ ತಕ್ಕಷ್ಟು ರಾಗಿಯನ್ನು ತೊಳೆದು ನೀರಿನಲ್ಲಿ 1 ರಾತ್ರಿ ನೆನೆಸಿಡಬೇಕು. ರಾಗಿ ಹಳೆಯದಾಗಿದ್ದರೆ ಉತ್ತಮ. ಹೀಗೆ ನೆನೆಸಿದ ರಾಗಿಯ ನೀರನ್ನು ಬಸಿದು 1 ಪಂಚೆಯ ಮೇಲೆ ನೆರಳಲ್ಲಿ 2 ದಿನ ಒಣಗಿಸಬೇಕು.

ನೀರಿನಂಶವೆಲ್ಲ ಪೂರ್ತಿ ಹೋಗಿದೆ ಎಂದು ಖಾತ್ರಿಯಾದರೆ ಒಂದೊಂದೆ ಲೋಟ ರಾಗಿಯನ್ನು ಸಣ್ಣ ಒಲೆಯ ಮೇಲೆ ಬಾಣಲೆಯಲ್ಲಿ ಹುರಿಯಿರಿ. ಹೀಗೆ ಹುರಿದಾಗ ರಾಗಿ ಚಿಟಪಟ ಎಂದು ಅರಳಲು ಪ್ರಾರಂಭಿಸಿ ಬಿಳಿಬಿಳಿಯ ಚಿಕ್ಕ ಚಿಕ್ಕ ಅರಳಿನಂತಾಗುತ್ತದೆ. ಹೀಗೆ ಪೂರ್ತಿ ಹುರಿದ ರಾಗಿಯನ್ನು ಹಿಟ್ಟಿನಗಿರಣಿಯಲ್ಲಿ ಸಣ್ಣಗೆ ನುಣ್ಣಗೆ ಬೀಸಿಸಿಕೊಂಡು ಬರಬೇಕು ಇದನ್ನು ಒಂದು ಡಬ್ಬಿಯಲ್ಲಿ ಶೇಖರಿಸಿಡಬಹುದು.

ಹಂತ 2: ಮೇಲೆ ತಯಾರಿಸಿದ ರಾಗಿ ಹುರಿಹಿಟ್ಟಿಗೆ 1 ಲೋಟಕ್ಕೆ ಎರಡು ಸಣ್ಣ ಉಂಡೆ ಗಾತ್ರದ ಬೆಲ್ಲ ಅಥವಾ ನಾಲ್ಕು ಚಮಚ ಸಕ್ಕರೆ, 2 ಏಲಕ್ಕಿ ಪುಡಿ, ಅರ್ಧ ಕಪ್ ಹಸಿ ಕಾಯಿ ತುರಿ ಹಾಕಿ ಚೆನ್ನಾಗಿ ಮಿಶ್ರಣಮಾಡಿ ಇದಕ್ಕೆ ನಿಧಾನವಾಗಿ ಕಾದು ಆರಿದ ಹಾಲನ್ನು ಹಾಕಿ ಕಲಸಬೇಕು.

ಉಂಡೆ ಮಾಡುವ ಹದಕ್ಕೆ ಬಂದ ಮೇಲೆ ಸಣ್ಣ ಉಂಡೆಗಳಾಗಿ ಮಾಡಿ ನಂತರ ಅದನ್ನು ಸ್ವಲ್ಪ ಹೊತ್ತು ಅಂದರೆ 5-10 ನಿಮಿಷ ಹಾಗೆಯೇ ಬಿಡಬೇಕು. ಈ ಉಂಡೆಗಳು ಗಾತ್ರದಲ್ಲಿ ಸ್ವಲ್ಪ ಹಿಗ್ಗುತ್ತದೆ /ಅರಳುತ್ತದೆ. ಅದಕ್ಕೆ ಇದನ್ನು ರಾಗಿ ಅರಳಿಟ್ಟು ಎಂದು ಕರೆಯುತ್ತಾರೆ. ಹೀಗೆ ಹಿಗ್ಗಿದ ರಾಗಿ ಹುರಿಹಿಟ್ಟು ತಿನ್ನಲು ರೆಡಿ ಇದು ಸ್ವಾದಿಷ್ಟ ಆರೋಗ್ಯದಾಯಕ ವಾಗಿದ್ದು, ದೆಹಕ್ಕೆ ತಂಪಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT