ಮಂಗಳವಾರ, ಆಗಸ್ಟ್ 16, 2022
21 °C

ಭಾರತೀಯ ಸಂಜಾತೆ ಗೀತಾಂಜಲಿ ರಾವ್‌ ‘ಟೈಮ್‌ ಕಿಡ್‌ ಆಫ್‌ ದಿ ಇಯರ್‌’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಅಂತರರಾಷ್ಟ್ರೀಯ ನಿಯತಕಾಲಿಕ ‘ಟೈಮ್‌’ ಇದೇ ಮೊದಲ ಬಾರಿಗೆ ಆರಂಭಿಸಿರುವ ‘ಕಿಡ್‌ ಆಫ್‌ ದಿ ಇಯರ್‌’ ಗೌರವಕ್ಕೆ ಭಾರತೀಯ ಸಂಜಾತೆ, ಯುವವಿಜ್ಞಾನಿ, ಸಂಶೋಧಕಿ 15 ವರ್ಷದ ಗೀತಾಂಜಲಿ ರಾವ್‌ ಅವರು ಪಾತ್ರರಾಗಿದ್ದಾರೆ. 

ತಂತ್ರಜ್ಞಾನದ ಮುಖಾಂತರ ಕಲುಷಿತ ಕುಡಿಯುವ ನೀರಿಗೆ ಪರಿಹಾರ, ಓಪಿಯಾಡ್‌ ಚಟ ಹಾಗೂ ಸೈಬರ್‌ ಬುಲ್ಲಿಯಿಂಗ್‌ನ(ಆನ್‌ಲೈನ್‌ ಮೂಲಕ ಬೆದರಿಕೆ, ಪೀಡನೆ) ಪರಿಹಾರಕ್ಕೆ ಗೀತಾಂಜಲಿ ಅವರ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಈ ಗೌರವಕ್ಕೆ 5 ಸಾವಿರಕ್ಕೂ ಅಧಿಕ ಮಕ್ಕಳು ನಾಮನಿರ್ದೇಶನಗೊಂಡಿದ್ದರು. ಗೌರವಕ್ಕೆ ಪಾತ್ರರಾದ ಗೀತಾಂಜಲಿ ರಾವ್‌ ಅವರನ್ನು ಟೈಮ್‌ ವಿಶೇಷ ನಿಯತಕಾಲಿಕಕ್ಕಾಗಿ ಖ್ಯಾತ ನಟಿ ಆ್ಯಂಜಲೀನ ಜೂಲಿ ಅವರು ಸಂದರ್ಶನ ಮಾಡಿದ್ದಾರೆ. 

ಆನ್‌ಲೈನ್‌ ಮುಖಾಂತರ ನಡೆದ ಈ ಸಂದರ್ಶನದ ವೇಳೆ ವಿಶ್ವದಾದ್ಯಂತ ಇರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಯುವ ಸಂಶೋಧಕರ ಜಾಗತಿಕ ಸಮುದಾಯವನ್ನು ರೂಪಿಸುವ ಕನಸನ್ನು ಗೀತಾಂಜಲಿ ಅವರು ಹಂಚಿಕೊಂಡಿದ್ದಾರೆ. ‘ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಹಿಡಿಯಲು ಹೋಗಬೇಡಿ. ಯಾವುದು ನಿಮಗೆ ಕುತೂಹಲ ಎನಿಸುತ್ತದೆಯೋ ಅವುಗಳನ್ನು ಮೊದಲು ಪರಿಹರಿಸಿ. ನನಗೆ ಮಾಡಲು ಸಾಧ್ಯವೆಂದರೆ, ಯಾರಾದರೂ ಇದನ್ನು ಸಾಧಿಸಬಹುದು’ ಹೀಗೆಂದು ಯುವಜನರಿಗೆ ಸ್ಫೂರ್ತಿದಾಯಕ ಸಂದೇಶ ನೀಡುವ ಗೀತಾಂಜಲಿ ಅವರ ಬುದ್ಧಿಶಕ್ತಿ, ಉತ್ಸಾಹವು ಆನ್‌ಲೈನ್‌ ಸಂದರ್ಶನದಲ್ಲೂ ಕಾಣಿಸಿತು ಎಂದು ಟೈಮ್‌ ಉಲ್ಲೇಖಿಸಿದೆ.

‘ನಮ್ಮ ಪೀಳಿಗೆಯು ಹಿಂದೆಂದೂ ಕಾಣದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಜೊತೆಗೆ ಹಳೆಯ ಸಮಸ್ಯೆಗಳೂ ಮುಂದುವರಿದಿದೆ. ಉದಾಹರಣಗೆ ಕೋವಿಡ್‌ ಎಂಬ ಹೊಸ ಜಾಗತಿಕ ಪಿಡುಗಿನ ನಡುವೆ ನಾವಿದ್ದು, ಜೊತೆಗೆ ಮಾನವ ಹಕ್ಕುಗಳ ಉಲ್ಲಂಘನೆ ಸಮಸ್ಯೆಯೂ ಮುಂದುವರಿಸಿದೆ. ತಂತ್ರಜ್ಞಾನದ ಬಳಕೆಯಿಂದಾಗಿ ಹವಾಮಾನ ಬದಲಾವಣೆ, ಸೈಬರ್‌ ಬುಲ್ಲಿಯಿಂಗ್‌ ಸಮಸ್ಯೆಗಳು ಎದುರಾಗಿದ್ದು, ಇದು ನಮ್ಮ ಪೀಳಿಗೆ ನಿರ್ಮಾಣ ಮಾಡಿದ ಸಮಸ್ಯೆ ಅಲ್ಲ. ಆದರೆ ಇದನ್ನು ಪರಿಹರಿಸಬೇಕಾಗಿದೆ’ ಎಂದು ಗೀತಾಂಜಲಿ ಅವರು ಹೇಳಿದ್ದಾರೆ. 

ವಿಜ್ಞಾನ ನಿಮ್ಮ ಆಸಕ್ತಿಯ ಕ್ಷೇತ್ರ ಎಂದು ಯಾವಾಗ ತಿಳಿಯಿತು ಎಂಬ ಪ್ರಶ್ನೆಗೆ ಉತ್ತರಿಸಿರುವ ಗೀತಾಂಜಲಿ, ‘ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಾಮಾಜಿಕ ಬದಲಾವಣೆಗೆ ಹೇಗೆ ಬಳಸಿಕೊಳ್ಳಬಹುದು ಎನ್ನುವುದರ ಕುರಿತು ಎರಡು ಮತ್ತು ಮೂರನೇ ಗ್ರೇಡ್‌ನಲ್ಲಿ ಇರುವ ಸಂದರ್ಭದಲ್ಲಿ ಯೋಚಿಸಿದ್ದೆ. 10ನೇ ವಯಸ್ಸಿನಲ್ಲಿ ‘ಕಾರ್ಬನ್‌ ನ್ಯಾನೊಟ್ಯೂಬ್‌ ಸೆನ್ಸರ್‌ ತಂತ್ರಜ್ಞಾನ’ದ ಕುರಿತು ಡೆನ್ವರ್‌ ನೀರಿನ ಗುಣಮಟ್ಟ ಸಂಶೋಧನಾ ಪ್ರಯೋಗಾಲಯದಲ್ಲಿ ಸಂಶೋಧನೆ ನಡೆಸಬೇಕು ಎಂದು ಪಾಲಕರಲ್ಲಿ ಕೇಳಿದ್ದೆ’ ಎಂದರು.

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು