ಸೋಮವಾರ, ಮಾರ್ಚ್ 27, 2023
32 °C

ಕಾಬೂಲ್ ಮೇಲೆ ರಾಕೆಟ್ ದಾಳಿ: ಕಾರ್ಯಾಚರಣೆ ಅಂತ್ಯದ ಹೊತ್ತಿಗೆ ಪ್ರತೀಕಾರ ತೀವ್ರ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಕಾಬೂಲ್‌: ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹಾರಿಸಲಾದ ಐದು ರಾಕೆಟ್‌ಗಳನ್ನು ಅಮೆರಿಕದ ಕ್ಷಿಪಣಿ ತಡೆ ವ್ಯವಸ್ಥೆಯು ಹೊಡೆದು ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕವು ಅಫ್ಗಾನಿಸ್ತಾನದಲ್ಲಿ ನಡೆಸಿದ ಅತ್ಯಂತ ದೀರ್ಘ ಯುದ್ಧದ ಕೊನೆಯ ಹಂತದಲ್ಲಿ ಇದು ನಡೆದಿದೆ. ಅಫ್ಗಾನಿಸ್ತಾನದಿಂದ ಅಮೆರಿಕದ ತೆರವು ಕಾರ್ಯಾಚರಣೆಯು ಮಂಗಳವಾರ ಪೂರ್ಣಗೊಳ್ಳಲಿದೆ. 

ವಾಹನವೊಂದರಿಂದ ರಾಕೆಟ್‌ಗಳನ್ನು ಹಾರಿಸಲಾಗಿದೆ. ರಾಜಧಾನಿ ಕಾಬೂಲ್‌ನ ವಿವಿಧ ಭಾಗಗಳ ಮೇಲೆ ರಾಕೆಟ್‌ಗಳು ಬಿದ್ದಿವೆ ಎಂದು ಸುದ್ದಿ ಸಂಸ್ಥೆ ಪಜ್‌ವೊಕ್‌ ಹೇಳಿದೆ. 

ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ವಿಮಾನ ನಿಲ್ದಾಣದ ಮೇಲೆ ಗುರುವಾರ ನಡೆಸಿದ ದಾಳಿಯಲ್ಲಿ 180ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಅವರಲ್ಲಿ ಅಮೆರಿಕದ 13 ಯೋಧರು ಇದ್ದರು. ದಾಳಿ ನಡೆಸುವ ಯತ್ನವೊಂದು ಭಾನುವಾರವೂ ನಡೆದಿತ್ತು.

ಸೋಮವಾರದ ದಾಳಿಯಿಂದ ಸಾವು ನೋವು ಆಗಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ನಾಗರಿಕರು ದಾಳಿಯಲ್ಲಿ
ಬಲಿಯಾಗಿದ್ದಾರೆಯೇ ಎಂಬ ಬಗ್ಗೆ ಅಮೆರಿಕದ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ. 

ತೆರವು ಕಾರ್ಯಾಚರಣೆಯು ಅಂತಿಮಹಂತದಲ್ಲಿದ್ದು, 1,22,000 ಮಂದಿಯನ್ನು ತೆರವು ಮಾಡಲಾಗಿದೆ. ಇದರಲ್ಲಿ ವಿದೇಶಿಯರು ಮತ್ತು ಅಫ್ಗಾನಿಸ್ತಾನದಲ್ಲಿ ಮುಂದೆ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದ್ದವರು ಸೇರಿದ್ದಾರೆ. 

ಅಫ್ಗಾನಿಸ್ತಾನದಲ್ಲಿರುವ ಅಮೆರಿಕದ ಸಿಬ್ಬಂದಿಯ ರಕ್ಷಣೆಗೆ ಅಗತ್ಯ ಇರುವ ಎಲ್ಲವನ್ನೂ ಮಾಡುವಂತೆ ಅಧ್ಯಕ್ಷ ಜೋ ಬೈಡನ್‌ ಅವರು ಕಮಾಂಡರ್‌ಗಳಿಗೆ ಸೂಚಿಸಿದ್ದಾರೆ. ತೆರವು ಕಾರ್ಯಾಚರಣೆಯು ಯಾವುದೇ ಅಡ್ಡಿ ಇಲ್ಲದೆ ಮುಂದುವರಿದಿದೆ ಎಂಬುದರ ಜತೆಗೆ ಸೋಮವಾರದ ರಾಕೆಟ್‌ ದಾಳಿ ಮಾಹಿತಿಯನ್ನೂ ಬೈಡನ್‌ ಅವರಿಗೆ ನೀಡಲಾಗಿದೆ. 

ತೆರವು ಕಾರ್ಯಾಚರಣೆ ಕೊನೆಯ ಹಂತಕ್ಕೆ ಬಂದಿರುವ ಈ ಹೊತ್ತಿನಲ್ಲಿ ಕಾಬೂಲ್‌ ವಿಮಾನ ನಿಲ್ದಾಣವು ಮತ್ತೆ ದಾಳಿಗೆ ಒಳಗಾಗುವ ಅಪಾಯ ಇದೆ. ಇಂತಹ ದಾಳಿಯ ಬಗ್ಗೆ ನಿರ್ದಿಷ್ಟ ಮಾಹಿತಿ ಇದೆ ಎಂದು ಪೆಂಟಗನ್‌ನ ವಕ್ತಾರ ಜಾನ್‌ ಕಿರ್ಬಿ ಸೋಮವಾರ ಹೇಳಿದ್ದಾರೆ. 

ಹೊಣೆ ಹೊತ್ತ ಐಎಸ್‌
ರಾಕೆಟ್‌ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌–ಖೊರಾಸನ್‌ (ಐಎಸ್‌–ಕೆ) ಗುಂಪು ಹೊತ್ತುಕೊಂಡಿದೆ. ಗುರುವಾರದ ದಾಳಿಯ ಹೊಣೆಯನ್ನೂ ಇದೇ ಸಂಘಟನೆ ವಹಿಸಿಕೊಂಡಿತ್ತು.

ಐಎಸ್‌–ಕೆ ಮತ್ತು ತಾಲಿಬಾನ್‌ ನಡುವೆ ದ್ವೇಷ ಇದೆ. ಈಗ ಅಫ್ಗಾನಿಸ್ತಾನದ ಸಂಪೂರ್ಣ ನಿಯಂತ್ರಣ ತಾಲಿಬಾನ್‌ ಕೈಯಲ್ಲಿ ಇರುವುದರಿಂದ ದೇಶಕ್ಕೆ ಐಎಸ್‌–ಕೆಯ ಅಪಾಯ ಎದುರಾಗಿದೆ. ಮಂಗಳವಾರದ ಗಡುವಿನ ಕಾರಣ ಬಿರುಸಿನಿಂದ ನಡೆಯುತ್ತಿರುವ ತೆರವು ಕಾರ್ಯಾಚರಣೆಗೂ ಐಎಸ್‌–ಕೆ ಬಹುದೊಡ್ಡ ಅಡಚಣೆಯಾಗಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು