90ರ ವೃದ್ಧೆಗೆ ಒಂದೇ ಬಾರಿ ಎರಡೆರಡು ರೂಪಾಂತರಿ ಕೊರೊನಾ ಸೋಂಕು!

ಬೆಲ್ಜಿಯಂ: ಕೋವಿಡ್ 19ರ ಎರಡು ರೂಪಾಂತರಿ ಸೋಂಕುಗಳು 90 ವರ್ಷದ ವೃದ್ಧೆಯಲ್ಲಿ ಕಾಣಿಸಿಕೊಂಡಿವೆ. ಒಂದೇ ಬಾರಿ ಎರಡೆರಡು ರೂಪಾಂತರಿಗಳು ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯರು ದಿಗ್ಬ್ರಾಂತರಾಗಿದ್ದಾರೆ.
ಬ್ರಿಟನ್ನಲ್ಲಿ ಮೊದಲು ಕಾಣಿಸಿಕೊಂಡಿದ್ದ ಆಲ್ಫಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡಿದ್ದ ಬಿಟಾ ರೂಪಾಂತರಿ ಸೋಂಕು ವೃದ್ಧೆಯಲ್ಲಿ ಪತ್ತೆಯಾಗಿವೆ ಎಂದು ಬೆಲ್ಜಿಯಂನ ಸಂಶೋಧಕರು ತಿಳಿಸಿದ್ದಾರೆ.
ಕೋವಿಡ್ನಿಂದ ಮೃತಪಟ್ಟಿರುವ ವೃದ್ಧೆ ಲಸಿಕೆ ಪಡೆದಿರಲಿಲ್ಲ. ಒಬ್ಬಂಟಿಯಾಗಿ ಜೀವಿಸುತ್ತಿದ್ದರು. ಬೆಲ್ಜಿಯಂನ ಆಲ್ಸ್ಟ್ ಎಂಬ ನಗರದ ಒಎಲ್ವಿ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಕೋವಿಡ್ 19 ಸೋಂಕು ತಗುಲಿರುವುದು ತಿಳಿದುಬಂದಿತ್ತು.
ಚಿಕಿತ್ಸೆ ವೇಳೆ ಆಕೆಯ ಆಮ್ಲಜನಕ ಪ್ರಮಾಣ ಚೆನ್ನಾಗಿತ್ತು. ಆದರೆ ಆಕೆಯ ಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ 5 ದಿನಗಳ ನಂತರ ಮೃತಪಟ್ಟಿದ್ದಾರೆ.
ಆಮ್ಲಜನಕ ಕೊರತೆ: ಭಾರತಕ್ಕೆ ಆಪತ್ಭಾಂದವನಾಗಿದ್ದ ಇಂಡೋನೇಷ್ಯಾದಲ್ಲೀಗ ಸಮಸ್ಯೆ
ವೈದ್ಯಕೀಯ ಸಿಬ್ಬಂದಿ ರೂಪಾಂತರಿ ಸೋಂಕು ಪರೀಕ್ಷೆ ನಡೆಸಿದ್ದಾಗ ವೃದ್ಧೆಗೆ ಎರಡು ವಿಭಿನ್ನ ರೂಪಾಂತರಿ ಸೋಂಕುಗಳು ಬಾಧಿಸಿರುವುದು ಕಂಡುಬಂದಿದೆ. ಆಲ್ಫಾ ಸ್ಟ್ರೈನ್ ಹಾಗೂ ಬಿಟಾ ರೂಪಾಂತರಿ ಸೋಂಕುಗಳು ಪತ್ತೆಯಾಗಿದ್ದು, ಏಕಕಾಲಕ್ಕೆ ಎರಡು ಬಗೆಯ ರೂಪಾಂತರಿಗಳು ಬಾಧಿಸಿರುವುದು ವೈದ್ಯರಿಗೆ ಅಚ್ಚರಿಯನ್ನುಂಟು ಮಾಡಿದೆ.
ಇದರಿಂದ ಒಬ್ಬ ವ್ಯಕ್ತಿಗೆ ವಿಭಿನ್ನ ರೂಪಾಂತರಿ ವೈರಾಣುಗಳು ಬಾಧಿಸುವ ಸಂಭವವಿದೆ ಎಂಬುದು ಖಾತರಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಸರ್ಕಾರಿ ನೌಕರಿ ಕಳೆದುಕೊಂಡವರಲ್ಲಿ ಇಬ್ಬರು ಹಿಜ್ಬುಲ್ ಮುಖ್ಯಸ್ಥನ ಪುತ್ರರು!
ವೃದ್ಧೆಗೆ ಸೋಂಕು ತಗುಲಿದ್ದ ಸಂದರ್ಭ ಬೆಲ್ಜಿಯಂನಲ್ಲಿ ಎರಡು ಬಗೆ ರೂಪಾಂತರಿ ವೈರಾಣುಗಳು ಅಸ್ತಿತ್ವದಲ್ಲಿದ್ದವು. ವೃದ್ಧೆಗೆ ಪ್ರತ್ಯೇಕ ವ್ಯಕ್ತಿಗಳಿಂದ ಪ್ರತ್ಯೇಕ ರೂಪಾಂತರಿ ಸೋಂಕು ತಗುಲಿರಬಹುದು ಎಂದು ಒಎಲ್ವಿ ಆಸ್ಪತ್ರೆಯ ತಜ್ಞ ವೈದ್ಯೆ ಅನ್ನೆ ವಾನ್ಕೀರ್ಬರ್ಘೆನ್ ತಿಳಿಸಿದ್ದಾರೆ.
ಬ್ರೆಜಿಲ್ನಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ವಿಭಿನ್ನ ರೂಪಾಂತರಿ ಸೋಂಕುಗಳು ಏಕಕಾಲಕ್ಕೆ ಬಾಧಿಸಿದ್ದರ ಬಗ್ಗೆ ಜನವರಿಯಲ್ಲಿ ವರದಿಯಾಗಿದೆ. ಆದರೆ ಇನ್ನೂ ಅಧಿಕೃತವಾಗಿ ಪ್ರಕಟಣೆಯಾಗಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.