ಗುರುವಾರ , ಮಾರ್ಚ್ 23, 2023
23 °C

‘ಜನರನ್ನು ನಗಿಸುವ ಕೆಲಸ ಮಾಡುತ್ತೀಯಾ‘ ಎಂದು ಹಾಸ್ಯನಟನನ್ನು ಕೊಂದ ತಾಲಿಬಾನಿಗಳು!

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಲ್ಲಿನ ಶೇ 70 ರಷ್ಟು ಪ್ರದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಮುನ್ನುಗ್ಗುತ್ತಿದ್ದಾರೆ.

ಇಸ್ಲಾಂ ಕಟ್ಟಳೆಗಳನ್ನು ಜನರ ಮೇಲೆ ಹೇರಿ ಕ್ರೌರ್ಯ ಮೆರೆಯುತ್ತಿರುವ ತಾಲಿಬಾನಿಗಳು ಯಾವ ಮಟ್ಟಿಗೆ ಜನರಿಗೆ ಹಿಂಸೆ ನೀಡುತ್ತಿದ್ದಾರೆ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿರುವುದು ಬೆಳಕಿಗೆ ಬಂದಿದೆ.

ಅಫ್ಘಾನಿಸ್ಥಾನದ ಜನಪ್ರಿಯ ಹಾಸ್ಯನಟ ಎಂದು ಹೆಸರು ಮಾಡಿದ್ದ ಖಾಶಾ ಜ್ವಾನ್‌ (ನಜರ್ ಮೊಹಮ್ಮದ್) ಅವರನ್ನು ಇಸ್ಲಾಂ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ತಾಲಿಬಾನಿಗಳು ಗುಂಡಿಕ್ಕಿ ಕೊಂದಿದ್ದಾರೆ.

ಕಂದಹಾರ್ ಪ್ರದೇಶದ ತಮ್ಮ ಮನೆಯಿಂದ ಹೊರಗೆ ನಡೆದುಕೊಂಡು ಹೋಗುವಾಗ ಕಾಶನ್ ಅವರನ್ನು ತಾಲಿಬಾನಿಗಳು ಮೊದಲು ಅಪಹರಿಸಿ, ಕಾರ್‌ ಒಂದರಲ್ಲಿ ಕೂರಿಸಿಕೊಂಡು ‘ಇಸ್ಲಾಂನಲ್ಲಿ ಹುಟ್ಟಿ ನೀನು ಜನರನ್ನು ನಗಿಸುವ ಕೆಲಸ ಮಾಡುತ್ತಿಯಾ‘ ಎಂದು ಕಪಾಳಕ್ಕೆ ಹೊಡೆದಿದ್ದಾರೆ. ನಂತರ ಕಾರ್‌ನಿಂದ ಹೊರಗೆಳೆದು ಗುಂಡಿಕ್ಕಿ ಕೊಂದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಈ ಘಟನೆ ಕಳೆದ ಗುರುವಾರ ರಾತ್ರಿ ನಡೆದಿದ್ದು, ತಾಲಿಬಾನಿಗಳ ಮೇಲೆ ಕಾಶನ್ ಮನೆಯವರು ಆರೋಪ ಹೊರಿಸಿದ್ದಾರೆ. ಆದರೆ, ತಮ್ಮ ಮೇಲಿನ ಆರೋಪವನ್ನು ತಾಲಿಬಾನಿಗಳು ನಿರಾಕರಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಅಮೆರಿಕ ಸೇನೆ ಹಾಗೂ ನ್ಯಾಟೊ ಪಡೆಗಳು ಅಫ್ಘಾನಿಸ್ಥಾನದಿಂದ ಹೊರನಡೆದ ನಂತರ ಅಲ್ಲಿ ಮತ್ತೆ ತಾಲಿಬಾನಿಗಳು ಪ್ರಾಬಲ್ಯ ಮೆರೆಯುತ್ತಿದ್ದಾರೆ. ಇಸ್ಲಾಂ ಮೂಲಭೂತವಾದವನ್ನು ಜನರ ಮೇಲೆ ಹೇರಿ ಇಡೀ ದೇಶದಲ್ಲಿ ತಮ್ಮದೇ ಸರ್ಕಾರ ರಚಿಸುವತ್ತ ದಾಪುಗಾಲು ಹಾಕುತ್ತಿದ್ದಾರೆ. ಈ ಬೆಳವಣಿಗೆ ಜಾಗತಿಕವಾಗಿ ಆತಂಕ ತಂದೊಡ್ಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಕೋಚ್‌ ಮದುವೆ ಪ್ರಸ್ತಾಪಕ್ಕೆ ಆನಂದಭಾಷ್ಪ ಸುರಿಸಿದ ಫೆನ್ಸರ್!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು