ಭಾನುವಾರ, ಸೆಪ್ಟೆಂಬರ್ 26, 2021
24 °C

ಅಮೆರಿಕ ಮೋಸ ಮಾಡಿತು: ಅಫ್ಗನ್‌ ತೊರೆಯಲಾಗದವರ ನೋವು

ಎಪಿ Updated:

ಅಕ್ಷರ ಗಾತ್ರ : | |

ಕಾಬೂಲ್‌: ಆ.31ಕ್ಕೆ ಅಮೆರಿಕದ ಕಡೆಯ ವಿಮಾನ ಆಫ್ಗಾನಿಸ್ತಾನದಿಂದ ಹೊರಟ ಬಳಿಕವೂ ಅಮೆರಿಕದ ಪೌರತ್ವ ಇರುವ ನೂರಾರು ಮಂದಿ ಮತ್ತು ಗ್ರೀನ್‌ ಕಾರ್ಡ್‌ ಹೊಂದಿರುವವರು ಅಫ್ಗಾನಿಸ್ತಾನದಲ್ಲೇ ಸಿಲುಕಿದ್ದಾರೆ. ಅಮೆರಿಕ ತಮಗೆ ಮೋಸ ಮಾಡಿತು ಎಂದು ನೊಂದುಕೊಳ್ಳುತ್ತಿದ್ದಾರೆ.

‘ನಾನು, ನನ್ನ ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಅಮೆರಿಕಕ್ಕೆ ಕರೆಸಿಕೊಳ್ಳುವುದಾಗಿ ಅಮೆರಿಕ ಸರ್ಕಾರ ಈ–ಮೇಲ್‌ ಮೂಲಕ ಭರವಸೆ ನೀಡುತ್ತಲೇ ಇತ್ತು. ಜೊತೆಗೆ, ಮನೆಯಲ್ಲೇ ಸುರಕ್ಷಿತವಾಗಿ ಇರಲು ಹೇಳಿತ್ತು. ಆದರೆ ಸೋಮವಾರ ಅಮೆರಿಕದ ಕಡೆಯ ವಿಮಾನ ಕಾಬೂಲ್‌ನಿಂದ ಹೊರಟಿತು. ತಾಲಿಬಾನ್ ವಿಜಯೋತ್ಸವ ನಡೆಸಿದ ಸದ್ದು ಕೇಳಿದಾಗಲೇ ಅಮೆರಿಕ ಸುಳ್ಳು ಹೇಳಿರುವುದು ನಮಗೆ ತಿಳಿಯಿತು’ ಎಂದು ಅಮೆರಿಕದ ಪ್ರಜೆ ಜಾವೇದ್‌ ಹಬೀಬಿ ಹೇಳಿದ್ದಾರೆ.

ಹಬೀಬಿ 2015ರಿಂದ ಅಮೆರಿಕದ ರಿಚ್‌ಮಂಡ್‌ನಲ್ಲಿ ನೆಲೆಸಿದ್ದಾರೆ. ಅವರು ಜೂನ್‌ 22ರಂದು ಕುಟುಂಬದ ಜೊತೆ ಅಫ್ಗಾನಿಸ್ತಾನಕ್ಕೆ ಬಂದಿದ್ದರು. ‘ನಮ್ಮ ಕುಟುಂಬವನ್ನು ತೆರವುಗೊಳಿಸುವುದಾಗಿ ಆ.18ರಂದು ಅಮೆರಿಕ ಸರ್ಕಾರ ಈ–ಮೇಲ್‌ ಮಾಡಿತ್ತು. ಬಳಿಕ ಎರಡು ಬಾರಿ ಕುಟುಂಬದ ಎಲ್ಲರೂ ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಹೋದೆವು. ನಿಲ್ದಾಣದಲ್ಲಿ ನೂಕುನುಗ್ಗಲು ಇದ್ದ ಕಾರಣ ನಿಲ್ದಾಣದ ಗೇಟ್‌ ಬಳಿ ಹೋಗಲು ಸಾಧ್ಯವಾಗಲಿಲ್ಲ. ಈ ಕುರಿತು ಸರ್ಕಾರಕ್ಕೆ ನಾವು ಈ–ಮೇಲ್‌ ಮಾಡಿದ್ದೆವು. ಆ.25ರಿಂದ ಈಚೆಗೆ ಈ–ಮೇಲ್ ಬದಲಾಗಿ ಫೋನ್‌ ಕರೆಗಳು ಬಂದವು. ಸರ್ಕಾರಕ್ಕೆ ನೀವಿರುವ ಜಾಗ ತಿಳಿದಿದೆ. ಮನೆಯಲ್ಲಿಯೇ ಸುರಕ್ಷಿತವಾಗಿ ಇರಿ ನಿಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯಲಾಗುವುದು ಎಂದು ಹೇಳಲಾಯಿತು. ಆದರೆ ಈ ವರೆಗೆ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ಹಬೀಬಿ ಮಗಳು ಮದೀನಾ ಹೇಳಿದ್ದಾರೆ.

ಅಜ್ಮಲ್‌ ಎಂಬುವವರು ಕೂಡ ಇಂಥದ್ದೇ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಅವರು ಸೇರಿ ಅವರ ಕುಟುಂಬದ 16 ಜನರಿಗೆ ತುರ್ತು ವಲಸಿಗ ವೀಸಾವನ್ನು ನೀಡಲಾಗಿದೆ. ಅವರ ಮತ್ತೊಬ್ಬ ಸಹೋದರ ವರ್ಜೀನಿಯಾದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದರೂ ಅವರಿನ್ನೂ ಅಫ್ಗಾನಿಸ್ತಾನದಲ್ಲೇ ಸಿಲುಕಿದ್ದಾರೆ.

ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಬರುವಂತೆ ಅಮೆರಿಕ ಸರ್ಕಾರದಿಂದ ನಮಗೆ ಈ–ಮೇಲ್‌ ದೊರಕಿತ್ತು. ಅದರಂತೆ ವಿಮಾನ ನಿಲ್ದಾಣಕ್ಕೆ ಹೋದರೆ ತಾಲಿಬಾನ್‌ ಗುಂಡು ಹಾರಿಸುತ್ತಿತ್ತು. ಒಳಗೆ ಹೋಗಲಾರದೇ ವಾಪಸ್‌ ಬಂದೆವು ಎಂದರು.

ಕಳೆದ 24 ಗಂಟೆಗಳಲ್ಲಿ ಅಫ್ಗಾನಿಸ್ತಾನದಲ್ಲಿ ಸಿಲುಕಿರುವ ಹಲವಾರು ಅಮೆರಿಕನ್ನರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಮುಂದೆ ಮಾಡಲಿರುವ ವ್ಯವಸ್ಥೆಗಳನ್ನು ನೋಡಿಕೊಂಡು ಅವರಿಗೆ ಮಾಹಿತಿ ನೀಡಲಾಗುವುದು ಎಂದು ಅಮೆರಿಕದ ರಾಜಕೀಯ ವ್ಯವಹಾರಗಳ ಉಪ ಕಾರ್ಯದರ್ಶಿ ವಿಕ್ಟೋರಿಯಾ ನುಲ್ಯಾಂಡ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು