ಕಾಬೂಲ್/ಪೆಷಾವರ (ಪಿಟಿಐ): ‘ಅಫ್ಗಾನಿಸ್ತಾನದ ಆಂತರಿಕ ವಿಚಾರದಲ್ಲಿ, ಸರ್ಕಾರ ರಚನೆಯಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದೆ’ ಎಂದು ಆರೋಪಿಸಿ ಅಫ್ಗಾನಿಸ್ತಾನದ ಪ್ರಜೆಗಳು ಮಂಗಳವಾರ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯನ್ನು ಹತ್ತಿಕ್ಕಲು ತಾಲಿಬಾನ್ ಗಾಳಿಯಲ್ಲಿ ಗುಂಡು ಹಾರಿಸಿದೆ.
‘ಪಂಜ್‌ಶಿರ್ ಪ್ರಾಂತ್ಯದ ಮೇಲೆ ದಾಳಿ ನಡೆಸಲು ತಾಲಿಬಾನ್‌ಗೆ ಪಾಕಿಸ್ತಾನ ನೆರವು ನೀಡಿದೆ. ತಾಲಿಬಾನ್ ಪರವಾಗಿ ಪಾಕಿಸ್ತಾನದ ವಾಯುಪಡೆಯು ಪಂಜ್‌ಶಿರ್ ಪ್ರಾಂತದ ಮೇಲೆ ವಾಯುದಾಳಿ ನಡೆಸಿದೆ’ ಎಂದು ಆರೋಪಿಸಿ ಅಫ್ಗನ್ ಪ್ರಜೆಗಳು ಮಂಗಳವಾರ ಕಾಬೂಲ್‌ನಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಾಲಿಬಾನ್ ವಿರುದ್ಧ ಹೋರಾಟ ನಡೆಸುತ್ತಿರುವ ಪಂಜ್‌ಶಿರ್ ಪ್ರಾಂತದ ನಾಯಕ ಮತ್ತು ತಾಲಿಬಾನ್ ಪ್ರತಿರೋಧ ಪಡೆಯ ಮುಖಂಡ ಅಹ್ಮದ್ ಮಸೂದ್ ಅವರು ಮಂಗಳವಾರ ಬೆಳಿಗ್ಗೆ ಆಡಿಯೊ ಕ್ಲಿಪ್ ಅನ್ನು ಬಿಡುಗಡೆ ಮಾಡಿದ್ದರು. ‘ನಮ್ಮ ಆಂತರಿಕ ವಿಚಾರದಲ್ಲಿ ಪಾಕಿ
ಸ್ತಾನ ಹಸ್ತಕ್ಷೇಪ ಮಾಡುತ್ತಿದೆ. ಇದನ್ನು ತಡೆಗಟ್ಟಿ’ ಎಂದು ಕರೆ ನೀಡಿದ್ದರು. ಈ ಆಡಿಯೊ ಕ್ಲಿಪ್ ವೈರಲ್ ಆದ ಬೆನ್ನಲ್ಲೇ ಸಾವಿರಾರು ಅಫ್ಗನ್ನರು ಕಾಬೂಲ್‌ನಲ್ಲಿ ಪ್ರತಿಭಟನೆಗೆ ಮುಂದಾದರು. ಮಹಿಳೆ
ಯರು, ಮಕ್ಕಳು ಸಹ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು.
‘ತಾಲಿಬಾನ್‌ಗೆ ಮಾನ್ಯತೆ: ಆತುರ ಬೇಡ’
ಇಸ್ತಾಂಬುಲ್ (ರಾಯಿಟರ್ಸ್/ಎಎಫ್‌ಪಿ/ಎಪಿ): ‘ಅಫ್ಗಾನಿಸ್ತಾನದ ಆಡಳಿತಗಾರನಾಗಿ ತಾಲಿಬಾನ್‌ಗೆ ಮಾನ್ಯತೆ ನೀಡುವಲ್ಲಿ ಆತುರ ತೋರುವ ಅವಶ್ಯಕತೆ ಇಲ್ಲ. ಈ ವಿಚಾರದಲ್ಲಿ ಕಾದುನೋಡುವ ತಂತ್ರವನ್ನು ಅನುಸರಿಸಬೇಕು’ ಎಂದು ಟರ್ಕಿ ಪ್ರತಿಪಾದಿಸಿದೆ.ಟರ್ಕಿಯು ಇನ್ನೂ ಕಾಬೂಲ್‌ನಲ್ಲಿ ತನ್ನ ರಾಯಭಾರ ಕಚೇರಿಯನ್ನು ನಡೆಸುತ್ತಿದೆ.
ಕಾಬೂಲ್ ವಿಮಾನ ನಿಲ್ದಾಣವನ್ನು ನಿರ್ವಹಣೆ ಮಾಡುವ ಸಂಬಂಧ ತಾಲಿಬಾನ್ ನೀಡಿರುವ ಆಹ್ವಾನವನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಅಮೆರಿಕ ಮತ್ತು ಕತಾರ್ ಜತೆಗೆ ಮಾತುಕತೆ ನಡೆಯುತ್ತಿದೆ ಎಂದು ಟರ್ಕಿಯು ಮಂಗಳವಾರ ಹೇಳಿದೆ.
‘ತಾಲಿಬಾನ್‌ಗೆ ಮಾನ್ಯತೆ ನೀಡುವ ಸಂಬಂಧ ಐರೋಪ್ಯ ದೇಶಗಳು ಕಾದು ನೋಡುವ ತಂತ್ರದ ಮೊರೆ ಹೋಗಿವೆ. ಮೂಲಭೂತವಾದಿ ಸಂಘಟನೆಯಾದ ತಾಲಿಬಾನ್‌ಗೆ ಅಂತರರಾಷ್ಟ್ರೀಯ ಸಮುದಾಯವು ತಕ್ಷಣವೇ ಅಧಿಕೃತ ಸರ್ಕಾರದ ಮಾನ್ಯತೆ ನೀಡುವುದು ಅಪಾಯಕಾರಿ. ತಾಲಿಬಾನ್ ಸರ್ಕಾರದ ಮಂತ್ರಿಮಂಡಲದಲ್ಲಿ ಮಹಿಳೆಯರು, ಅಫ್ಗಾನಿಸ್ತಾನದ ಎಲ್ಲಾ ಸಾಂಸ್ಕೃತಿಕ ಸಮುದಾಯಗಳಿಗೂ ಪ್ರಾತಿನಿಧ್ಯವಿರಬೇಕು. ಎಲ್ಲರನ್ನೂ ಒಳಗೊಂಡ ಸರ್ಕಾರ ರಚಿಸಿದರೆ ಮಾತ್ರವೇ ತಾಲಿಬಾನ್‌ಗೆ ಮಾನ್ಯತೆ ನೀಡುವುದನ್ನು ಪರಿಗಣಿಸಬಹುದು’ ಎಂದು ಟರ್ಕಿ ಹೇಳಿದೆ.
‘ಯಾವ ದೇಶವೂ ತಾಲಿಬಾನ್‌ಗೆತಕ್ಷಣವೇ ಮಾನ್ಯತೆ ನೀಡಬಾರದು. ಇದನ್ನು ನಾವು ಬಹಳ ಎಚ್ಚರಿಕೆಯಿಂದ ಹೇಳುತ್ತಿದ್ದೇವೆ. ಈ ವಿಚಾರದಲ್ಲಿ ಅಂತರಾರಾಷ್ಟ್ರೀಯ ಸಮುದಾಯ ತಪ್ಪೆಸಗಬಾರದು. ನಾವೆಲ್ಲರೂ ಒಗ್ಗಟ್ಟಾಗಿರಬೇಕು’ ಎಂದು ಟರ್ಕಿ ಪ್ರತಿಪಾದಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.