ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಳ್ವಿಕೆ: ದೇಶ ಬಿಡಲು ನೂಕುನುಗ್ಗಲು

Last Updated 16 ಆಗಸ್ಟ್ 2021, 20:03 IST
ಅಕ್ಷರ ಗಾತ್ರ

ಕಾಬೂಲ್‌ : ತಾಲಿಬಾನ್‌ ಕೈವಶವಾಗಿರುವ ಅಫ್ಗಾನಿಸ್ತಾನದಿಂದ ಹೇಗಾದರೂ ಪರಾರಿಯಾಗಬೇಕು ಎಂದು ಜನರು ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಸೋಮವಾರ ಅಕ್ಷರಶಃ ಮುತ್ತಿಗೆಯನ್ನೇ ಹಾಕಿದ್ದರು. ನಿಲ್ದಾಣದಿಂದ ಹೊರಡಲು ಸಜ್ಜಾಗಿದ್ದ ಅಮೆರಿಕದ ವಿಮಾನಕ್ಕೆ ಏರಿಕೊಳ್ಳಲು ಎಲ್ಲರೂ ಯತ್ನಿಸಿದ್ದರಿಂದ ಗೊಂದಲ ಪರಿಸ್ಥಿತಿ ನಿರ್ಮಾಣ ಆಗಿತ್ತು. ದೇಶದಿಂದ ಹೊರಗೆ ಹೋಗಲು ಜನರು ಹತಾಶರಾಗಿ ವಿಮಾನಗಳನ್ನು ಹುಡುಕುತ್ತಿದ್ದ ದೃಶ್ಯ ಕಂಡು ಬಂತು.

ವಿಮಾನ ನಿಲ್ದಾಣದ ರನ್‌ವೇಗೆ ಜನರು ನುಗ್ಗಿದ್ದರು. ಈ ಗೊಂದಲ ಪರಿಹಾರಕ್ಕೆ ಅಮೆರಿಕದ ಯೋಧರು ಗಾಳಿಯಲ್ಲಿ ಗುಂಡು ಹಾರಿಸಿದರು. ಇದಾದ ಬಳಿಕ, ಎಲ್ಲ ನಾಗರಿಕ ವಿಮಾನಗಳನ್ನು ರದ್ದುಪಡಿಸಲಾಗಿದೆ.

ಅಮೆರಿಕ ವಾಯುಪಡೆಯು ವಿಮಾನವು ಚಲಿಸಲು ಆರಂಭಿಸುತ್ತಿದ್ದಂತೆಯೇ ನೂರಾರು ಮಂದಿ ವಿಮಾನದ ಜತೆಗೇ ಓಡಿಕೊಂಡು ವಿಮಾನವನ್ನು ಏರಲು ಯತ್ನಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಆಗಲೇ ಕಿಕ್ಕಿರಿದು ತುಂಬಿದ್ದ ವಿಮಾನದ ಮೆಟ್ಟಿಲುಗಳನ್ನು ಏರಲು ನಾಗರಿಕರು ಯತ್ನಿಸುತ್ತಿರುವ ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಇವೆ.

ಮೆಟ್ಟಿಲು ಹತ್ತಿದವರು ಇತರರು ಹತ್ತಲು ನೆರವು ನೀಡಿದ್ದಾರೆ. ಕೆಲವರು ಮೆಟ್ಟಿಲುಗಳನ್ನು ಹಿಡಿದು ನೇತಾಡಿದ್ದಾರೆ.

ತಾಲಿಬಾನ್‌ನ ದಮನಕಾರಿ ಆಳ್ವಿಕೆಯನ್ನು ಅಮೆರಿಕದ ನೇತೃತ್ವದ ಪಡೆಯು ಹೊರದಬ್ಬಿದ ಎರಡು ದಶಕಗಳ ಬಳಿಕ ಅದೇ ತಾಲಿಬಾನ್‌, ದೇಶದ ಆಳ್ವಿಕೆಯನ್ನು ಮರಳಿ ಪಡೆದುಕೊಂಡಿದೆ. ಭಯಭೀತರಾಗಿರುವ ಜನರು, ಮಕ್ಕಳು ಮತ್ತು ಸರಂಜಾಮುಗಳೊಂದಿಗೆ ದೇಶ ತೊರೆಯಲು ಹಾತೊರೆಯುತ್ತಿದ್ದಾರೆ.

‘ನನಗೆ ಭಯವಾಗಿದೆ. ಅವರು ಗಾಳಿಯಲ್ಲಿ ಆಗಾಗ ಗುಂಡು ಹಾರಿಸುತ್ತಿದ್ದಾರೆ’ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

ತಮ್ಮ ಹೆಸರು ಬಹಿರಂಗವಾಗದರೆ ಇಲ್ಲಿ ಬದುಕುವ ಸಾಧ್ಯತೆಯೇ ಕಮರಿ ಹೋಗಬಹುದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ವಿಮಾನ ನಿಲ್ದಾಣ ಪ್ರದೇಶವನ್ನು ನಿಯಂತ್ರಣಕ್ಕೆ ಪಡೆದುಕೊಂಡಿರುವುದಾಗಿ ಅಮೆರಿಕ ಸೇನೆಯು ಹೇಳಿದೆ. ರಾಜತಾಂತ್ರಿಕ ಕಚೇರಿಯಲ್ಲಿ ಕೆಲಸ ಮಾಡಿದವರನ್ನು ತೆರವು ಮಾಡಲು ನಿಲ್ದಾಣವನ್ನು ಬಳಸಿಕೊಳ್ಳಲಾಗುವುದು. 2001ರಲ್ಲಿ ತಾಲಿಬಾನ್‌ ಆಳ್ವಿಕೆಯನ್ನು ಹಿಮ್ಮೆಟ್ಟಿಸಲು ನೆರವಾದ ಅಫ್ಗಾನಿಸ್ತಾನೀಯರನ್ನು ಕೂಡ ದೇಶ ಬಿಟ್ಟು ತೆರಳಲು ಸಹಾಯ ಮಾಡಲಾಗುವುದು ಎಂದು ಅಮೆರಿಕ ಹೇಳಿದೆ.

‘ವಿಮಾನ ನಿಲ್ಧಾಣಕ್ಕೆ ಬರಬೇಡಿ’ ಎಂದು ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಅಮೆರಿಕ ಮತ್ತು ಅಫ್ಗಾನಿಸ್ತಾನ ಪ್ರಜೆಗಳಿಗೆ ಟ್ವೀಟ್‌ ಮೂಲಕ ಸೂಚನೆ ನೀಡಿದೆ. ಹಾಗಿದ್ದರೂ ನೂರಾರು ಜನರು ವಿಮಾನ ನಿಲ್ದಾಣ ಪ್ರದೇಶದಲ್ಲಿ ಜಮಾಯಿಸಿದ್ದಾರೆ. ಟಿಕೆಟ್‌ ಆಗಲಿ, ವೀಸಾ ಆಗಲಿ ಅವರಲ್ಲಿ ಇಲ್ಲ, ದೇಶ ಬಿಟ್ಟು ಹೋಗಲು ಸಾಧ್ಯವಾಗಬಹುದು ಎಂಬ ಭರವಸೆಯಿಂದ ಅವರೆಲ್ಲರೂ ನಿಲ್ದಾಣದತ್ತ ಧಾವಿಸಿದ್ದಾರೆ.

ಅಫ್ಗಾನಿಸ್ತಾನ ಅಧ್ಯಕ್ಷ ಅಶ್ರಫ್‌ ಘನಿ ಅವರು ದೇಶ ತೊರೆದು ಪರಾರಿಯಾದ ಬಳಿಕ, ಕಾನೂನು–ಸುವ್ಯವಸ್ಥೆ ಕಾಯ್ದುಕೊಳ್ಳುವುದಕ್ಕಾಗಿ ನಗರ ಪ್ರವೇಶಿಸುವಂತೆ ತನ್ನ ಸೈನಿಕರಿಗೆ ತಾಲಿಬಾನ್‌ ಆದೇಶಿಸಿತ್ತು. ಅದಾದ ಬಳಿಕ ಜನರು ಭೀತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT