ಬುಧವಾರ, ಸೆಪ್ಟೆಂಬರ್ 22, 2021
28 °C

ಭಾರತಕ್ಕೆ 14 ಕಲಾಕೃತಿ ಹಿಂತಿರುಗಿಸಲಿರುವ ಆಸ್ಟ್ರೇಲಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬೊರ್ನ್‌: ಕಂಚು ಮತ್ತು ಕಲ್ಲಿನ ಶಿಲ್ಪಗಳು ಸೇರಿದಂತೆ ಮತ್ತೆ 14 ಮಹತ್ವದ ಕಲಾಕೃತಿಗಳನ್ನು ಭಾರತಕ್ಕೆ ಹಿಂತಿರುಗಿಸಲು ಆಸ್ಟ್ರೇಲಿಯಾ ನಿರ್ಧರಿಸಿದೆ.

ಇವುಗಳಲ್ಲಿ ಆರು ಕಲಾಕೃತಿಗಳನ್ನು ಕಳ್ಳತನದಿಂದ ಮತ್ತು ಕಾನೂನುಬಾಹಿರವಾಗಿ ಭಾರತದಿಂದ ಆಸ್ಟ್ರೇಲಿಯಾಗೆ ಸಾಗಿಸಿರುವ ಸಾಧ್ಯತೆ ಇದೆ ಎಂದು ನ್ಯಾಷನಲ್‌ ಗ್ಯಾಲರಿ ಆಫ್‌ ಆಸ್ಟ್ರೇಲಿಯಾ (ಎನ್‌ಜಿಎ) ತಿಳಿಸಿದೆ.

‘ಏಷ್ಯಾ ಕಲಾಕೃತಿಗಳ ಸಂಗ್ರಹದಲ್ಲಿನ ಈ ಕಲಾಕೃತಿಗಳನ್ನು ಭಾರತ ಸರ್ಕಾರಕ್ಕೆ ಹಿಂತಿರುಗಿಸಲಾಗುವುದು’ ಎಂದು ಎನ್‌ಜಿಎ ತಿಳಿಸಿದೆ.

ಭಾರತದ ಕಲಾಕೃತಿಗಳ ಡೀಲರ್‌ ಸುಭಾಷ್‌ ಕಪೂರ್‌ ಅವರಿಗೆ ಸಂಬಂಧಿಸಿದ 13 ಕಲಾಕೃತಿಗಳು ಮತ್ತು ಇನ್ನೊಬ್ಬ ಕಲಾಕೃತಿಗಳ ಡೀಲರ್‌ ವಿಲ್ಲಿಯಂ ವಾಲ್ಫ್‌ ಅವರಿಂದ ವಶಪಡಿಸಿಕೊಂಡಿದ್ದ ಒಂದು ಕಲಾಕೃತಿ ಇವುಗಳಲ್ಲಿ ಸೇರಿವೆ. ಇವುಗಳನ್ನೇ ಈಗ ಹಿಂತಿರುಗಿಸಲಾಗುತ್ತಿದೆ.

ಕಪೂರ್‌ ಅವರಿಂದ ಖರೀದಿಸಲಾಗಿದ್ದ ಕಲಾಕೃತಿಗಳನ್ನು ಭಾರತಕ್ಕೆ ಹಿಂತಿರುಗಿಸುತ್ತಿರುವುದು ನಾಲ್ಕನೇ ಬಾರಿಯಾಗಿದೆ. 2014, 2016 ಮತ್ತು 2019ರಲ್ಲಿಯೂ ಆಸ್ಟ್ರೇಲಿಯಾ ಕಲಾಕೃತಿಗಳನ್ನು ಹಿಂತಿರುಗಿಸಿತ್ತು.

 ಕಲಾಕೃತಿಗಳ ಅಕ್ರಮ ಸಾಗಣೆಯ ಆರೋಪಕ್ಕಾಗಿ ಕಪೂರ್‌ ಭಾರತದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಇನ್ನು ಮುಂದೆ ಕಪೂರ್‌ ಅವರಿಂದ ಪಡೆದುಕೊಳ್ಳಲಾದ ಯಾವುದೇ ಕಲಾಕೃತಿಗಳನ್ನು ನ್ಯಾಷನಲ್‌ ಗ್ಯಾಲರಿಯಲ್ಲಿ ಇರುವುದಿಲ್ಲ.

ಹಲವು ವರ್ಷಗಳಿಂದ ಕಪೂರ್‌ ಅವರ ‘ಆರ್ಟ್‌ ಆಫ್‌ ದ ಪಾಸ್ಟ್‌’ ಗ್ಯಾಲರಿಯಿಂದ 22 ಕಲಾಕೃತಿಗಳನ್ನು ಎನ್‌ಜಿಎ 1.07 ಕೋಟಿ ಡಾಲರ್‌ಗೆ (₹79.51 ಕೋಟಿ) ಖರೀದಿಸಿತ್ತು. ಇದರಲ್ಲಿ ಆಕರ್ಷಕವಾದ 11ನೇ ಶತಮಾನದ ಚೋಳರ ಕಾಲದ ಶಿವ ನಟರಾಜನ ಕಂಚಿನ ಶಿಲ್ಪವು ಸೇರಿತ್ತು. 2008ರಲ್ಲಿ ಈ ಶಿಲ್ಪವನ್ನು 50 ಲಕ್ಷ ಡಾಲರ್‌ಗೆ (37.15 ಕೋಟಿ ) ಖರೀದಿಸಿತ್ತು.

‘ನೈತಿಕವಾಗಿ ಮತ್ತು ಪಾರದರ್ಶಕ ವ್ಯವಸ್ಥೆಯಲ್ಲಿ ಪಡೆದ ಕಲಾಕೃತಿಗಳನ್ನು ಗ್ಯಾಲರಿಯಲ್ಲಿಡಲಾಗುವುದು’ ಎಂದು ನ್ಯಾಷನಲ್‌ ಗ್ಯಾಲರಿ ಆಫ್‌ ಆಸ್ಟ್ರೇಲಿಯಾ ನಿರ್ದೇಶಕ ನಿಕ್‌ ಮಿಟ್‌ಝೆವಿಕ್‌ ತಿಳಿಸಿದ್ದಾರೆ.

ನ್ಯಾಷನಲ್‌ ಗ್ಯಾಲರಿ ನಿರ್ಧಾರವನ್ನು ಆಸ್ಟ್ರೇಲಿಯಾದಲ್ಲಿನ ಭಾರತದ ಹೈಕಮಿಷನರ್‌ ಮನ್‌ಪ್ರೀತ್‌ ವೊಹ್ರಾ ಸ್ವಾಗತಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು