ಶುಕ್ರವಾರ, ನವೆಂಬರ್ 27, 2020
24 °C

Covid-19 | ಕ್ವೀನ್ಸ್‌ಲ್ಯಾಂಡ್ ವಿವಿಯ ಲಸಿಕೆ ಸುರಕ್ಷಿತ: ಆಸ್ಟ್ರೇಲಿಯಾ ಸಚಿವ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸಿಡ್ನಿ: ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ವಿಶ್ವವಿದ್ಯಾಲಯ ಹಾಗೂ ಸಿಎಸ್‌ಎಲ್‌ ಲಿಮಿಟೆಡ್‌ ಅಭಿವೃದ್ಧಿಪಡಿಸಿರುವ ಕೋವಿಡ್‌–19 ಲಸಿಕೆಯು ಪ್ರಾಥಮಿಕ ಹಂತದ ಪರೀಕ್ಷೆಗಳಲ್ಲಿ ಸುರಕ್ಷಿತವೆಂದು ಸಾಬೀತಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಗ್ರೆಗ್ ಹಂಟ್‌ ತಿಳಿಸಿದ್ದಾರೆ.

12 ಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿರುವ ಕೋವಿಡ್–19ಗೆ ಪರಿಣಾಮಕಾರಿ ಲಸಿಕೆಯನ್ನು ಅಭಿವೃದ್ಧಿಪಡಿಸಲು ವಿಶ್ವದಾದ್ಯಂತ ಇರುವ ಔಷಧ ಕಂಪೆನಿಗಳು ಪೈಪೋಟಿ ನಡೆಸುತ್ತಿವೆ. ಫಿಜರ್‌ ಇಂಕ್‌ ಮತ್ತು ಅಸ್ಟ್ರಾಜೆನೆಕಾ ಸೇರಿದಂತೆ ಕೆಲವು ಕಂಪೆನಿಗಳು ಅಭಿವೃದ್ಧಿಪಡಿಸಿರುವ ಲಸಿಕೆಗಳ ಕೊನೆಯ ಹಂತದ ಪರೀಕ್ಷೆ ಫಲಿತಾಂಶ ಶೀಘ್ರದಲ್ಲೇ ಪ್ರಕಟವಾಗುವ ನಿರೀಕ್ಷೆಯಿದೆ. ತಾನು ಅಭಿವೃದ್ಧಿಪಡಿಸಿರುವ ಲಸಿಕೆಯು ಕೋವಿಡ್‌–19 ಅನ್ನು ತಡೆಗಟ್ಟುವಲ್ಲಿ ಶೇ 90ರಷ್ಟು ಪರಿಣಾಮಕಾರಿಯಾಗಿದೆ ಎಂಬುದು ಪ್ರಾಥಮಿಕ ಸಂಶೋಧನೆಯಿಂದ ಸ್ಪಷ್ಟವಾಗಿದೆ ಎಂದು ಫೀಜರ್ ಕಳೆದ ವಾರ ಹೇಳಿಕೆ ನೀಡಿತ್ತು.

ಕ್ವೀನ್ಸ್‌ಲ್ಯಾಂಡ್‌ ಮತ್ತು ಸಿಎಸ್‌ಎಲ್‌ ಕಂಪೆನಿಯ ಲಸಿಕೆ ಬಗ್ಗೆ ಮಾತನಾಡಿರುವ ಹಂಟ್, ಇದು ಬೇರೆ ಕಂಪೆನಿಗಳ ಲಸಿಕೆಗಳಿಗಿಂತ ಸ್ವಲ್ಪ ಹಿಂದೆ ಇದ್ದರೂ, ಇದೀಗ ಕೊನೆಯ ಹಂತದ ಪರೀಕ್ಷೆಯನ್ನು ಆರಂಭಿಸಲಿದೆ ಎಂದಿದ್ದಾರೆ.

‘ಲಸಿಕೆಯ ಪ್ರಾಥಮಿಕ ಹಂತದ ಪ್ರಯೋಗಗಳಿಂದ ಸುರಕ್ಷಿತ ಎಂಬುದು ಸಾಬೀತಾಗಿದೆ. ಜೊತೆಗೆ ಸಕಾರಾತ್ಮಕ ಪ್ರತಿಕಾಯ ಪ್ರತಿಕ್ರಿಯೆಯನ್ನು ಉಂಟುಮಾಡಿದೆ’ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ.

‘ಈ ಲಸಿಕೆಯು ವಿಶೇಷವಾಗಿ ಹಿರಿಯರಲ್ಲಿ ಪರಿಣಾಮಕಾರಿಯಾಗಿದೆ. ಕೋವಿಡ್–19ನಿಂದ ವಯಸ್ಸಾದವರು ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಇದು ಮುಖ್ಯವಾದ ಫಲಿತಾಂಶವಾಗಿದೆ’ ಎಂದಿದ್ದಾರೆ. ಎಲ್ಲ ಹಂತದ ಪ್ರಯೋಗಗಳ ಬಳಿಕ ಈ ಲಸಿಕೆಯು 2021ರಲ್ಲಿ ವಿತರಿಸಲು ಲಭ್ಯವಾಗಬಹುದು ಎಂದೂ ತಿಳಿಸಿದ್ದಾರೆ.

ಕ್ವೀನ್ಸ್‌ಲ್ಯಾಂಡ್‌ ವಿವಿಯ ಈ ಲಸಿಕೆಯನ್ನು ಸುಮಾರು 5.1 ಕೋಟಿಯಷ್ಟು ಡೋಸ್‌ ಖರೀದಿಸಲು ಆಸ್ಟ್ರೇಲಿಯಾ ಸರ್ಕಾರ ಈಗಾಗಲೇ ಒಪ್ಪಿಕೊಂಡಿದೆ. ಕೊನೆಯ ಹಂತದ ಪ್ರಯೋಗ ಸಫಲವಾದರೆ ಅಸ್ಟ್ರಾಜೆನೆಕಾ ಲಸಿಕೆಯನ್ನೂ ಖರೀದಿಸಲು ಯೋಜಿಸಿದೆ ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು