ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಯೆನ್ನಾದಲ್ಲಿ ಉಗ್ರರ ದಾಳಿ: ಮೂವರ ಸಾವು, 15 ಮಂದಿಗೆ ಗಾಯ

ಯಹೂದಿಗಳನ್ನು ಗುರಿಯಾಗಿಸಿ ದಾಳಿ ನಡೆದಿರುವ ಸಾಧ್ಯತೆ: ಅಧಿಕಾರಿಗಳ ಶಂಕೆ
Last Updated 3 ನವೆಂಬರ್ 2020, 19:42 IST
ಅಕ್ಷರ ಗಾತ್ರ

ವಿಯೆನ್ನಾ(ಎಪಿ): ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲಿ ಸೋಮವಾರ ರಾತ್ರಿ ವೇಳೆ ಉಗ್ರನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದು,17 ಜನರು ಗಾಯಗೊಂಡಿದ್ದಾರೆ.

ಕೋವಿಡ್‌–19 ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣದಿಂದ ಸೋಮವಾರ ಮಧ್ಯರಾತ್ರಿಯಿಂದ ಒಂದು ತಿಂಗಳು ವಿಯೆನ್ನಾದಲ್ಲಿ ಲಾಕ್‌
ಡೌನ್‌ ಘೋಷಿಸಲಾಗಿತ್ತು. ಹೀಗಾಗಿ
ಜನರು ಹೆಚ್ಚಿನ ಸಂಖ್ಯೆಯಲ್ಲಿ ರೆಸ್ಟೋರೆಂಟ್‌ಗಳು ಹಾಗೂ ಬಾರ್‌ಗಳಲ್ಲಿ ಸೇರಿದ್ದರು. ರಾತ್ರಿ 8 ಗಂಟೆಯ ವೇಳೆಗೆ ಈ ಗುಂಡಿನ ದಾಳಿ ನಡೆದಿದೆ. ‘ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಘಟನೆಯಲ್ಲಿ ಮೃತಪಟ್ಟಿ
ದ್ದಾರೆ. ಶಂಕಿತ ದಾಳಿಕೋರನನ್ನು ಪೊಲೀಸರು ಬೆಳಿಗ್ಗೆ 8.09ರ ವೇಳೆಗೆ ಹೊಡೆದುರುಳಿಸಿದ್ದಾರೆ’ ಎಂದು ಆಂತರಿಕ ಭದ್ರತಾ ಸಚಿವ ಕಾರ್ಲ್‌ ನೆಹಮ್ಮೆರ್‌ ತಿಳಿಸಿದರು.

ದಾಳಿಕೋರನನ್ನು 20 ವರ್ಷದ ಆಸ್ಟ್ರಿಯಾ–ಉತ್ತರ ಮೆಸಡೋನಿಯನ್‌ ಎರಡೂ ರಾಷ್ಟ್ರದ ಪೌರತ್ವ ಹೊಂದಿರುವ ಕುಜ್‌ಟಿಮ್‌ ಫೆಜುಲೈ ಎಂದು ಗುರುತಿಸಲಾಗಿದೆ. ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಯನ್ನು ಸೇರಿಕೊಳ್ಳಲು ಸಿರಿಯಾಗೆ ತೆರಳಲು ಪ್ರಯತ್ನಿಸಿದ್ದ ಕಾರಣ ಈತನಿಗೆ 22 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿತ್ತು. ಬಾಲ ನ್ಯಾಯ ಕಾಯ್ದೆ ಅನ್ವಯ ಕಳೆದ ಡಿಸೆಂಬರ್‌ನಲ್ಲಿ ಈತನನ್ನು ಅವಧಿಪೂರ್ವ ಬಿಡುಗಡೆ ಮಾಡಲಾಗಿತ್ತು.

‘ಪ್ರಾಥಮಿಕ ತನಿಖೆಯ ಮಾಹಿತಿಯಂತೆ ದಾಳಿಕೋರನು ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಯ ಸಹಭಾಗಿಯಾಗಿದ್ದು, ಆತನ ಅಪಾರ್ಟ್‌ಮೆಂಟ್‌ ಹಾಗೂ ಇತರೆ ಪ್ರದೇಶಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹಲವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಹೆಚ್ಚಿನ ಉಗ್ರರು ಭಾಗಿಯಾಗಿದ್ದರೇ? ಅವರು ತಪ್ಪಿಸಿಕೊಂಡಿದ್ದಾರೆಯೇ ಎನ್ನುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ನೆಹಮ್ಮೆರ್‌ ತಿಳಿಸಿದರು.

‘ಘಟನೆಯಲ್ಲಿ ಗಾಯಗೊಂಡ ಏಳು ಜನರ ಸ್ಥಿತಿ ಗಂಭೀರವಾಗಿದೆ ಎಂದು ವಿಯೆನ್ನಾದ ಆಸ್ಪತ್ರೆ ಸೇವಾ ವಿಭಾಗವು ತಿಳಿಸಿದೆ’ ಎಂದು ಆಸ್ಟ್ರಿಯಾದ ಸುದ್ದಿಸಂಸ್ಥೆ ಎಪಿಎ ವರದಿ ಮಾಡಿದೆ.ಗಾಯಗೊಂಡವರಲ್ಲಿ 28 ವರ್ಷದ ಒಬ್ಬರು ಪೊಲೀಸ್‌ ಅಧಿಕಾರಿಯೂ ಸೇರಿದ್ದಾರೆ.

ದಾಳಿಯ 20 ಸಾವಿರಕ್ಕೂ ಅಧಿಕ ವಿಡಿಯೊಗಳನ್ನು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ದಾಳಿಕೋರ ರಸ್ತೆಯಲ್ಲಿ ನಡೆಯುತ್ತಾ, ಮನಬಂದಂತೆ ಜನರತ್ತ ಗುಂಡಿನ ದಾಳಿ ನಡೆಸುತ್ತಿರುವುದು ಈ ವಿಡಿಯೊಗಳಲ್ಲಿ ದಾಖಲಾಗಿದೆ. ‘ಬಹುತೇಕ ಎಲ್ಲ ಬಾರ್‌ಗಳಲ್ಲಿ ಟೇಬಲ್‌ಗಳನ್ನು ಹೊರಭಾಗದಲ್ಲಿ ಹಾಕಿರುತ್ತಾರೆ. ಕನಿಷ್ಠ 100 ಗುಂಡುಗಳನ್ನು ಹಾರಿಸಿರುವುದನ್ನು ನಾನು ನೋಡಿದೆ’ ಎಂದು ಸ್ಥಳೀಯ ನಿವಾಸಿ ರಬ್ಬಿ ಶ್ಕೊಲ್ಮೊ ಹೋಫ್ಮಿಸ್ಟರ್‌ ತಿಳಿಸಿದರು.

ಘಟನೆಯ ನಂತರ ನೂರಾರು ಶಸ್ತ್ರಸಜ್ಜಿತ ಪೊಲೀಸರು, ಉಗ್ರರ ಶೋಧಕಾರ್ಯಕ್ಕೆ ಮುಂದಾಗಿದ್ದಾರೆ. ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿ ಭದ್ರತೆ ಒದಗಿಸುವಂತೆ ಸೇನೆಯನ್ನು ಕೇಳಿರುವುದಾಗಿ ನೆಹಮ್ಮರ್‌ ಹೇಳಿದ್ದಾರೆ. ವಿಯೆನ್ನಾದ ಜನರಿಗೆ ಮನೆಯೊಳಗೆ ಇರುವಂತೆ ಸೂಚಿಸಲಾಗಿದೆ. ಮಕ್ಕಳನ್ನು ಶಾಲೆಗೆಕಳುಹಿಸದಂತೆ ಪೋಷಕರಿಗೆ ತಿಳಿಸಲಾಗಿದೆ.

ಆಸ್ಟ್ರಿಯಾದಲ್ಲಿ ನಡೆದ ಘಟನೆಗೆ ವಿಶ್ವವ್ಯಾಪಿ ಖಂಡನೆ ವ್ಯಕ್ತವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ‘ಮುಗ್ಧ ಜನರ ಮೇಲೆ ನಡೆಯುತ್ತಿರುವ ಇಂಥ ದಾಳಿಗಳು ಕೊನೆಗೊಳ್ಳಬೇಕು. ತೀವ್ರವಾದಿ ಮುಸ್ಲಿಂ ಭಯೋತ್ಪಾದಕರು ಸೇರಿದಂತೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕವು, ಆಸ್ಟ್ರಿಯಾ, ಫ್ರಾನ್ಸ್‌ ಸೇರಿದಂತೆ ಯುರೋಪ್‌ನ ಎಲ್ಲ ರಾಷ್ಟ್ರಗಳ ಜೊತೆ ನಿಲ್ಲುತ್ತದೆ’ ಎಂದು ಟ್ರಂಪ್‌ ಟ್ವೀಟ್‌ ಮೂಲಕ ಉಲ್ಲೇಖಿಸಿದ್ದಾರೆ. ಘಟನೆ ಬೆನ್ನಲ್ಲೇ, ಆಸ್ಟ್ರಿಯಾದಲ್ಲಿರುವ ಭಾರತೀಯರು ಎಚ್ಚರಿಕೆಯಿಂದ ಇರಬೇಕು ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಭಾರತದಲ್ಲಿರುವ ಆಸ್ಟ್ರಿಯಾ ರಾಯಭಾರ ಕಚೇರಿಯನ್ನು ನ.11ರವರೆಗೆ ಮುಚ್ಚಲಾಗಿದೆ.

ಮೋದಿ ಟ್ವೀಟ್‌

ನವದೆಹಲಿ : ವಿಯೆನ್ನಾದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಿಂದ ಮನಸ್ಸಿಗೆ ತೀವ್ರ ಅಘಾತವಾಗಿದೆ. ಇಂಥ ಸಂಕಷ್ಟದ ಸಮಯದಲ್ಲಿ ಭಾರತ, ಆಸ್ಟ್ರಿಯಾದ ಬೆಂಬಲಕ್ಕೆ ನಿಲ್ಲಲಿದೆ‘ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

‘ಈ ದುರಂತ ಸಮಯದಲ್ಲಿ ಭಾರತ ಆಸ್ಟ್ರಿಯಾ ಜತೆಗಿದೆ. ನಾವೆಲ್ಲ ಘಟನೆಯಲ್ಲಿ ಸಂತ್ರಸ್ತರಾದವರು ಮತ್ತು ಅವರ ಕುಟುಂಬಗಳೊಂದಿಗಿದ್ದೇವೆ‘ ಎಂದು ಅವರು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT