ಶುಕ್ರವಾರ, ಸೆಪ್ಟೆಂಬರ್ 25, 2020
26 °C
ನೆರವು ಕೋರಿದ ಲೆಬನಾನ್‌ ಪ್ರಧಾನಿ, ಇರಾನ್ ಅಧ್ಯಕ್ಷರಿಂದ ವೈದ್ಯಕೀಯ ನೆರವಿನ ಭರವಸೆ

ಬೈರೂತ್‌‌ ಸ್ಫೋಟ: 135ಕ್ಕೂ ಅಧಿಕ ಸಾವು

ಎಪಿ/ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಬೈರೂತ್‌‌: ಲೆಬನಾನ್ ರಾಜಧಾನಿ ಬೈರೂತ್‌ನ ಬಂದರಿನ ಗೋದಾಮಿನಲ್ಲಿ ಮಂಗಳವಾರ ಸಂಭವಿಸಿದ ಭಾರಿ ಸ್ಫೋಟಕ್ಕೆ 135ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.

ಸ್ಫೋಟದಿಂದಾಗಿ ಸುಮಾರು 5 ಸಾವಿರ ಮಂದಿ ಗಾಯಗೊಂಡಿರುವುದಾಗಿ ಲೆಬನಾನ್‌ನ ರೆಡ್‌ ಕ್ರಾಸ್‌ ಸಂಸ್ಥೆ ತಿಳಿಸಿದೆ. ಬೈರೂತ್‌ನಲ್ಲಿ ಎರಡು ವಾರ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಗೋದಾಮಿನಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ಸಂಗ್ರಹಿಸಿ ಇಟ್ಟಿದ್ದ  ಸುಮಾರು 2,750 ಟನ್‌ನಷ್ಟು ಅಮೋನಿಯಂ ನೈಟ್ರೇಟ್‌ಗೆ ಬೆಂಕಿ ತಗುಲಿದ ಕಾರಣ ಸ್ಫೋಟ ಸಂಭವಿಸಿದೆ. ಇದರ ತೀವ್ರತೆ ಎಷ್ಟಿತ್ತು ಎಂದರೆ, ಘಟನೆ ನಡೆದ ಸ್ಥಳದಿಂದ 240 ಕಿ.ಮೀ ದೂರದಲ್ಲಿರುವ ಸಿಪ್ರಸ್‌ನಲ್ಲೂ ಸ್ಫೋಟದ ಅನುಭವವಾಗಿದೆ.

ಸ್ಫೋಟಕ್ಕೆ ಇಡೀ ನಗರವೇ ಒಂದು ಕ್ಷಣ ಕಂಪಿಸಿದ್ದು, ಘಟನಾ ಸ್ಥಳದ ಸುತ್ತ ಒಂದು ಮೈಲಿ ವ್ಯಾಪ್ತಿಯಲ್ಲಿ ಕಟ್ಟಡಗಳು ಕುಸಿದು ಅವಶೇಷಗಳ ಅಡಿಯಲ್ಲಿಯೂ ಹಲವು ಜನ ಸಿಲುಕಿದ್ದಾರೆ.

ಬಂದರು ಪ್ರದೇಶದಲ್ಲಿ ಮೊದಲು ಸಣ್ಣ ಪ್ರಮಾಣದ ಸ್ಫೋಟ ಸಂಭವಿಸಿ, ಆಕಾಶದೆತ್ತರಕ್ಕೆ ಹೊಗೆ ಎದ್ದಿತ್ತು. ಇದನ್ನು ಸಾವಿರಾರು ಜನರು ತಮ್ಮ ಮನೆಗಳಿಂದ ಮೊಬೈಲ್‌ ಮುಖಾಂತರ ಸೆರೆ ಹಿಡಿಯುತ್ತಿರುವಾಗಲೇ, ಅಣುಬಾಂಬ್‌ ಸ್ಫೋಟಿಸಿದಂತೆ ಎರಡನೇ ಸ್ಫೋಟ ಘಟಿಸಿದೆ. ಬಾಲ್ಕನಿ, ತಾರಸಿ ಮೇಲೆ ನಿಂತು ವಿಡಿಯೊ ಮಾಡುತ್ತಿದ್ದ ಕೆಲವರು ಸ್ಫೋಟದ ಕಂಪನಕ್ಕೆ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ.

ಹಿರೋಶಿಮಾದಂತೆ ಕಂಡಿತು: ‘ರಸ್ತೆಯಲ್ಲಿ ಜನರು ಕಿರುಚಾಡುತ್ತಾ ಓಡುತ್ತಿದ್ದರು, ಹಿರೋಶಿಮಾದ ಅಣುಬಾಂಬ್‌ ಸ್ಫೋಟಗೊಂಡಂತೆ ಅಥವಾ ಸುನಾಮಿ ಅಪ್ಪಳಿಸಿದಂತೆ  ರಸ್ತೆಗಳು, ಮನೆಗಳು ಛಿದ್ರವಾಗಿದ್ದವು’ ಎಂದು ಬಂದರಿನ ಸಮೀಪವೇ ವಾಸಿಸುತ್ತಿರುವ ಎಲಿ ಜಕಾರಿಯಾ ಅವರು ಭಯಾನಕ ಘಟನೆಯನ್ನು ವಿವರಿಸಿದರು.

3.3 ಮ್ಯಾಗ್ನಿಟ್ಯೂಡ್‌ ಭೂಕಂಪಕ್ಕೆ ಸಮಾನ: ಸ್ಫೋಟವು 3.3 ಮ್ಯಾಗ್ನಿಟ್ಯೂಡ್ ಭೂಕಂಪದಷ್ಟೇ ತೀವ್ರತೆ ಹೊಂದಿತ್ತು ಎಂದು ಭೂ ವಿಜ್ಞಾನಿಗಳು ಹೇಳಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ: ಅಲ್ಲಿನ ಪ್ರಧಾನಿ ಹಸನ್‌ ದಿಯಾಬ್‌ ಅವರು, ‘ನಾವೀಗ ಬಹುದೊಡ್ಡ ದುರಂತಕ್ಕೆ ಸಾಕ್ಷಿಯಾಗಿದ್ದೇವೆ. ಈ ಘಟನೆಗೆ ಕಾರಣವಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳ
ಲಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

ಇರಾನ್‌, ಫ್ರಾನ್ಸ್‌, ಐರೋಪ್ಯ ಒಕ್ಕೂಟ, ಕತಾರ್‌ ಸೇರಿದಂತೆ ಹಲವು ರಾಷ್ಟ್ರಗಳು ಬೈರೂತ್‌ಗೆ ರಕ್ಷಣಾ ತಂಡ, ವೈದ್ಯಕೀಯ ಸಿಬ್ಬಂದಿಯ ತಂಡವನ್ನು ಕಳುಹಿಸಿಕೊಟ್ಟಿದೆ.

ಮೋದಿ ಸಂತಾಪ

ನವದೆಹಲಿ: ಬೈರೂತ್‌‌‌ ಸ್ಫೋಟದಲ್ಲಿ ಸಂಭವಿಸಿದ ಸಾವಿನ ಸುದ್ದಿ ತಿಳಿದು ಆಘಾತವಾಗಿದೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ. ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿರುವ ಮೋದಿ, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಟ್ವೀಟ್‌ ಮುಖಾಂತರ ಹಾರೈಸಿದ್ದಾರೆ.

ಅಮೋನಿಯಂ ನೈಟ್ರೇಟ್ ದಾಸ್ತಾನು

ಪ್ರಧಾನಿಯ ಪರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕ್ತಾರರು, ಬಂದರು ಗೋದಾಮಿನಲ್ಲಿ ಆರು ವರ್ಷಗಳಿಂದ ಸುರಕ್ಷತೆ ಇಲ್ಲದೆ 2,750 ಟನ್ ಅಮೋನಿಯಂ ನೈಟ್ರೇಟ್ ದಾಸ್ತಾನು ಇರಿಸಲಾಗಿತ್ತು. ಇದು ಕ್ಷಮಾರ್ಹವಲ್ಲ ಎಂದು ರಕ್ಷಣಾ ಮಂಡಳಿ ಸಭೆಯಲ್ಲಿ ಪ್ರಧಾನಿ ಹೇಳಿರುವುದಾಗಿ ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶ(ರಾಯಿಟರ್ಸ್‌ ವರದಿ): ನ್ಯಾಯಾಲಯದ ಆದೇಶದ ಕಾರಣ ಗೋದಾಮಿನಲ್ಲಿ ಆರು ವರ್ಷದ ಹಿಂದೆ ಅಮೋನಿಯಂ ನೈಟ್ರೇಟ್‌ ಇರಿಸಲಾಗಿತ್ತು ಎಂದು ಬಂದರಿನ ಪ್ರಧಾನ ವ್ಯವಸ್ಥಾಪಕ ಹಸನ್‌ ಕೊರಾಯ್ಟೆಂ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು