ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಲ್‌ಕೈದಾ ಮುಖ್ಯಸ್ಥ ಆಯ್ಮಾನ್ ಅಲ್‌ ಝವಾಹಿರಿ ಅಫ್ಗಾನಿಸ್ತಾನದಲ್ಲಿ ಹತ್ಯೆ: ಅಮೆರಿಕ

ಫಾಲೋ ಮಾಡಿ
Comments

ವಾಷಿಂಗ್ಟನ್‌: ಅಲ್‌ಕೈದಾ ಉಗ್ರ ಸಂಘಟನೆ ಮುಖ್ಯಸ್ಥ ಆಯ್ಮಾನ್ ಅಲ್‌ ಝವಾಹಿರಿಯನ್ನು ಅಫ್ಗಾನಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ.

ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ ಆಯ್ಮಾನ್ ಅಲ್‌ ಝವಾಹಿರಿ, 2001ರ ಸೆಪ್ಟೆಂಬರ್‌ 11ರಂದು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದಿದ್ದ ದಾಳಿಯ ಪ್ರಮುಖ ಶಂಕಿತ ಸಂಚುಕೋರನೂ ಆಗಿದ್ದಾನೆ.

ಸುದ್ದಿ ವಾಹಿನಿಯಲ್ಲಿ ಮಾತನಾಡಿದ ಬೈಡನ್, ಶನಿವಾರ ಕಾಬೂಲ್‌ನಲ್ಲಿ ನಡೆಸಲಾದ ದಾಳಿಯಲ್ಲಿ ಝವಾಹಿರಿ ಹತನಾಗಿದ್ದಾನೆ ಎಂದು ಹೇಳಿದ್ದಾರೆ.

‘ಆತನ ವಿರುದ್ಧದ ಕಾರ್ಯಾಚರಣೆಗೆ ಅಂತಿಮ ಅನುಮೋದನೆ ನೀಡಿದ್ದೆ. ದಾಳಿಯಲ್ಲಿ ನಾಗರಿಕರ ಹತ್ಯೆಯಾಗಿಲ್ಲ. ಇದೀಗ ನ್ಯಾಯ ಒದಗಿಸಲಾಗಿದೆ. ಉಗ್ರ ಸಂಘಟನೆ ನಾಯಕ ಇನ್ನಿಲ್ಲ’ ಎಂದು ಬೈಡನ್ ಹೇಳಿದ್ದಾರೆ.

ಕಾಬೂಲ್‌ನ ನಿವಾಸದ ಬಾಲ್ಕನಿಯಲ್ಲಿ ಝವಾಹಿರಿಯನ್ನು ಡ್ರೋನ್ ದಾಳಿಯ ಮೂಲಕ ಹತ್ಯೆ ಮಾಡಲಾಗಿದೆ. ಅಫ್ಗಾನಿಸ್ತಾನದಲ್ಲಿ ನಮ್ಮ ಪಡೆಗಳು ಈಗ ಇಲ್ಲ ಎಂದು ಅಮೆರಿಕ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಝವಾಹಿರಿಯು ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಇರುವುದು 2020ರಲ್ಲಿ ದೋಹಾದಲ್ಲಿ ಅಮೆರಿಕದ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಸಂದರ್ಭದಲ್ಲಿ ತಾಲಿಬಾನ್ ಜತೆ ಮಾಡಿಕೊಂಡಿದ್ದ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.

2021ರ ಆಗಸ್ಟ್ 31ರಂದು ಅಮೆರಿಕದ ಪಡೆಗಳು ಅಫ್ಗಾನಿಸ್ತಾನದಿಂದ ವಾಪಸಾದ ಬಳಿಕ ಅಮೆರಿಕವು ಅಲ್ಲಿ ನಡೆಸಿದ ಮೊದಲ ದಾಳಿ ಇದಾಗಿದೆ.

ಮೂಲತಃ ಈಜಿಪ್ಟ್‌ನವನಾಗಿದ್ದ ಝವಾಹಿರಿ ಕೈರೊದಲ್ಲಿ ಬಾಲ್ಯ ಕಳೆದಿದ್ದ. ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕನಾಗಿದ್ದ ಆತ ನಂತರ ಹಿಂಸಾತ್ಮಕ ಮೂಲಭೂತವಾದದಲ್ಲಿ ತೊಡಗಿಕೊಂಡಿದ್ದ. 2001ರ ಸೆಪ್ಟೆಂಬರ್‌ 11ರ ದಾಳಿ ಬಳಿಕ ತಲೆಮರೆಸಿಕೊಂಡಿದ್ದ.

ಒಸಾಮಾ ಬಿನ್ ಲಾಡೆನ್‌ನಲ್ಲಿ ಅಮೆರಿಕದ ವಿಶೇಷ ಪಡೆಗಳು 2011ರಲ್ಲಿ ಹತ್ಯೆ ಮಾಡಿದ ಬಳಿಕ ಅಲ್‌ಕೈದಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಝವಾಹಿರಿ. ಆತನ ಸುಳಿವು ನೀಡಿದವರಿಗೆ 2.5 ಕೋಟಿ ಡಾಲರ್ ಇನಾಮು ಘೋಷಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT