ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆಯಿಂದ ಮಹಿಳೆಯರು ಗಡ್ಡಧಾರಿಗಳು, ಜನ ಮೊಸಳೆಗಳಾಗಬಹುದು: ಬ್ರೆಜಿಲ್‌ ಅಧ್ಯಕ್ಷ

‘ಫೈಜರ್’ ಲಸಿಕೆಯ ಒಪ್ಪಂದ ಉಲ್ಲೇಖಿಸಿ ಕೋವಿಡ್ ಲಸಿಕೆಗಳ ವಿರುದ್ಧ ಟೀಕೆ
Last Updated 19 ಡಿಸೆಂಬರ್ 2020, 2:00 IST
ಅಕ್ಷರ ಗಾತ್ರ

ಬ್ರೆಸಿಲಿಯಾ: ಕೊರೊನಾ ವೈರಸ್ ಸೋಂಕು ತಡೆಯುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳ ವಿರುದ್ಧ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ವಾಗ್ದಾಳಿ ನಡೆಸಿದ್ದಾರೆ. ‘ಫೈಜರ್ ಮತ್ತು ಬಯೋಎನ್‌ಟೆಕ್’ ಅಭಿವೃದ್ಧಿಪಡಿಸಿದ ಲಸಿಕೆಯು ಜನರನ್ನು ಮೊಸಳೆಯನ್ನಾಗಿ ಮತ್ತು ಗಡ್ಡವಿರುವ ಮಹಿಳೆಯನ್ನಾಗಿ ಪರಿವರ್ತಿಸಲಿದೆ ಎಂದು ಟೀಕಿಸಿದ್ದಾರೆ.

ಕಳೆದ ವರ್ಷ ಕೊರೊನಾ ವೈರಸ್ ಸಾಂಕ್ರಾಮಿಕ ಹರಡಲು ಆರಂಭವಾದಾಗಲೂ ಆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಬಲಪಂಥೀಯ ನಾಯಕ ಬೋಲ್ಸನಾರೊ, ಇದೊಂದು ಸಣ್ಣ ಜ್ವರವಷ್ಟೇ ಎಂದಿದ್ದರು.

ಈ ವಾರ ದೇಶದ ಸಾಮೂಹಿಕ ಲಸಿಕೆ ಹಾಕಿಸುವಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡುವಾಗಲೂ ತಾನು ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದರು.

‘ಫೈಜರ್’ ಲಸಿಕೆಯ ಒಪ್ಪಂದದಲ್ಲಿಯಂತೂ ಈ ವಿಚಾರ ಸ್ಪಷ್ಟವಾಗಿದೆ. ಯಾವುದೇ ಅಡ್ಡ ಪರಿಣಾಮಗಳಿಗೆ ನಾವು ಜವಾಬ್ದಾರರಲ್ಲ. ನೀವು ಮೊಸಳೆಯಾಗಿ ಪರಿವರ್ತನೆಗೊಂಡರೆ ಅದು ನಿಮ್ಮದೇ ಸಮಸ್ಯೆ ಎಂದು ಹೇಳಲಾಗಿದೆ ಎಂದು ಬೋಲ್ಸನಾರೊ ತಿಳಿಸಿದ್ದಾರೆ.

ಈ ಲಸಿಕೆಯ ಬಗ್ಗೆ ಬ್ರೆಜಿಲ್‌ನಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಈಗಾಗಲೇ ಬಳಕೆಗೆ ಅನುಮತಿ ನೀಡಲಾಗಿದೆ.

‘ನೀವು ಅತಿಮಾನುಷರಾದರೆ, ಮಹಿಳೆಯರಲ್ಲಿ ಗಡ್ಡ ಬೆಳೆಯಲು ಆರಂಭವಾದರೆ ಅಥವಾ ಪುರುಷನು ಸ್ತ್ರೀಯ ಧ್ವನಿಯಲ್ಲಿ ಮಾತನಾಡಲು ಶುರು ಮಾಡಿದರೆ ಅವರಿಗೆ (ಲಸಿಕೆ ಉತ್ಪಾದಕರಿಗೆ) ಇದರೊಂದಿಗೆ ಸಂಬಂಧವಿರುವುದಿಲ್ಲ’ ಎಂದು ಬೋಲ್ಸನಾರೊ ಹೇಳಿದ್ದಾರೆ.

ಈ ಮಧ್ಯೆ, ‘ಜನರ ಮೇಲೆ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡಬಾರದು. ಆದರೂ ಲಸಿಕೆ ನೀಡಿಕೆ ಕಡ್ಡಾಯವಾಗಿದೆ’ ಎಂದು ಅಲ್ಲಿನ ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಲಸಿಕೆ ಹಾಕಿಸಿಕೊಳ್ಳದ ಜನರ ಮೇಲೆ ಅಧಿಕಾರಿಗಳು ದಂಡ ವಿಧಿಸುವ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಟಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ.

ಬ್ರೆಜಿಲ್‌ನಲ್ಲಿ ಈವರೆಗೆ 71 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದು, 1.85 ಲಕ್ಷಕ್ಕೂ ಹೆಚ್ಚು ಸೋಂಕಿತರು ಮೃತಪಟ್ಟಿದ್ದಾರೆ.

***

ನಾನು ಕೆಟ್ಟ ಉದಾಹರಣೆ ನೀಡುತ್ತಿದ್ದೇನೆ ಎಂದು ಕೆಲವರು ಹೇಳುತ್ತಾರೆ. ಆದರೆ ಹೀಗೆ ಹೇಳುವವರು ಮೂರ್ಖರು. ನನಗೆ ಈಗಾಗಲೇ ವೈರಸ್‌ ಸೋಂಕು ತಗುಲಿದೆ. ನನ್ನಲ್ಲಿ ಪ್ರತಿಕಾಯಗಳಿವೆ. ಮತ್ತೆ ನಾನ್ಯಾಕೆ ಲಸಿಕೆ ಹಾಕಿಸಿಕೊಳ್ಳಬೇಕು?

–ಜೈರ್ ಬೋಲ್ಸನಾರೊ, ಬ್ರೆಜಿಲ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT