ಸೋಮವಾರ, ಆಗಸ್ಟ್ 15, 2022
20 °C

ಅಭಿವೃದ್ಧಿ ಹೊಂದದ ರಾಷ್ಟ್ರಗಳ ಸಾಲಮನ್ನಾ ಮಾಡುವಂತೆ ಇಮ್ರಾನ್‌ ಖಾನ್‌ ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಕೋವಿಡ್‌–19 ಪಿಡುಗು ಹೆಚ್ಚಿನ ಪರಿಣಾಮ ಬೀರಿದ ರಾಷ್ಟ್ರಗಳು ಮತ್ತು ಕಡಿಮೆ ಆದಾಯ ಇರುವ ರಾಷ್ಟ್ರಗಳು ಪಡೆದುಕೊಂಡ ಸಾಲವನ್ನು ಕೋವಿಡ್‌ ಪಿಡುಗು ಅಂತ್ಯಗೊಳ್ಳುವವರೆಗೂ ಅಮಾನತುಗೊಳಿಸಬೇಕು ಹಾಗೂ ತೀರಾ ಅಭಿವೃದ್ಧಿ ಹೊಂದದ ರಾಷ್ಟ್ರಗಳು ಪಡೆದುಕೊಂಡ ಸಾಲವನ್ನು ಮನ್ನಾ ಮಾಡಬೇಕು ಎಂದು ಅಂತರರಾಷ್ಟ್ರೀಯ ಸಮುದಾಯದ ಬಳಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮನವಿ ಮಾಡಿದ್ದಾರೆ. 

ಕೋವಿಡ್‌–19 ಪಿಡುಗಿನ ಕಾರಣದಿಂದಾಗಿ ಪಾಕಿಸ್ತಾನದ ಆರ್ಥಿಕ ಸ್ಥಿತಿ ಮತ್ತಷ್ಟು ಕುಸಿದಿದ್ದು, ಈ ಸ್ಥಿತಿ ನಿಭಾಯಿಸಲು  ಅಂತರರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಹಲವು ಸಂಸ್ಥೆಗಳಿಂದ ಪಾಕಿಸ್ತಾನವು ಸಾಲವನ್ನು ಪಡೆಯುತ್ತಿದೆ.

ಗುರುವಾರ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕೋವಿಡ್‌–19 ಕುರಿತ ವಿಶೇಷ ಚರ್ಚೆ ವೇಳೆ ಈ ವಿಷಯ ಮಂಡಿಸಿದ ಖಾನ್‌, ‘ಕೆಲ ಅಭಿವೃದ್ಧಿ ಹೊಂದದ ರಾಷ್ಟ್ರಗಳು, ತಾವು ಪಡೆದ ಸಾಲವನ್ನು ಹಿಂದಿರುಗಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿವೆ. ಈ ರಾಷ್ಟ್ರಗಳು ಪಡೆದ ಸಾಲವನ್ನು ಮನ್ನಾ ಮಾಡಬೇಕು’ ಎಂದು ಹೇಳಿದರು. 

‘ಎರಡನೇ ವಿಶ್ವಯುದ್ಧವಾದ ಬಳಿಕ ಜಗತ್ತು ಎದುರಿಸಿದ ಅತ್ಯಂತ ಸಂಕಷ್ಟದ ಸ್ಥಿತಿ ಪ್ರಸ್ತುತ ಇರುವ ಕೋವಿಡ್‌–19 ಪಿಡುಗಾಗಿದೆ. ಈ ಸಂದರ್ಭದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುವ ವ್ಯವಸ್ಥೆಯಾಗಬೇಕಿದ್ದು, ಹಲವು ಜಾಗತಿಕ ಬ್ಯಾಂಕ್‌ಗಳ ಮುಖಾಂತರ ಕಡಿಮೆ ಆದಾಯ ಇರುವ ರಾಷ್ಟ್ರಗಳಿಗೆ ನೀಡುತ್ತಿದ್ದ ರಿಯಾಯಿತಿಯ ಸಾಲದ ವ್ಯವಸ್ಥೆಯೂ ವಿಸ್ತರಣೆ ಆಗಬೇಕು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಾರ್ವಜನಿಕ ವಲಯದ ಸಾಲಕ್ಕೆ ಹೊಸ ರೂಪ ನೀಡಬೇಕಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು