ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪ: ಟರ್ಕಿ, ಸಿರಿಯಾದಲ್ಲಿ 23 ಸಾವಿರ ಮಂದಿ ಸಾವು- ಪವಾಡದಂತೆ ಬದುಕಿ ಬಂದವರಿವರು

Last Updated 10 ಫೆಬ್ರುವರಿ 2023, 21:36 IST
ಅಕ್ಷರ ಗಾತ್ರ

ಕಹ್ರಮನ್ಮರಸ್‌, ಟರ್ಕಿ(ಎಎಫ್‌ಪಿ): ಭೂಕಂಪದಿಂದ ಹಾನಿಯಾದ ಟರ್ಕಿ ಮತ್ತು ಸಿರಿಯಾದಲ್ಲಿ ಅವಶೇಷಗಳಡಿ ಸಿಲುಕಿ ಐದು ದಿನಗಳ ನಂತರವೂ ಮಕ್ಕಳು, ವೃದ್ಧರು, ಗಾಯಾಳುಗಳು ಪವಾಡದಂತೆ ಬದುಕುಳಿದಿರುವ ನಿದರ್ಶನಗಳು ಗೋಚರಿಸುತ್ತಿವೆ. ಈ ದುರಂತದಲ್ಲಿ ಇದುವರೆಗೆ ಉಭಯ ರಾಷ್ಟ್ರಗಳಲ್ಲಿ ಮಡಿದವರ ಸಂಖ್ಯೆ ಶುಕ್ರವಾರ 23,000ಕ್ಕೆ ಏರಿದೆ.

ಶತಮಾನದ ಅತ್ಯಂತ ಭೀಕರ ಭೂಕಂಪಕ್ಕೆ ತುತ್ತಾದ ಟರ್ಕಿಯ ಪ್ರಮುಖ ನಗರಗಳಲ್ಲಿ ಒಂದಾದ ಕಹ್ರಮನ್ಮರಸ್‌ನಲ್ಲಿ ಅವಶೇಷ ತೆರವುಗೊಳಿಸಿದಂತೆ ಶವಗಳು ಸಿಗುತ್ತಲೇ ಇವೆ. ಇಲ್ಲಿ ಬೀಸುವ ಗಾಳಿಯಲ್ಲಿ ಕೊಳೆತ ಶವಗಳ ದುರ್ವಾಸನೆ ಬೆರೆತಿರುವುದು ರಕ್ಷಣಾ ಸಿಬ್ಬಂದಿ ಅನುಭವಕ್ಕೆ ಬರುತ್ತಿದೆ.

ದುರಂತದ ನಂತರ ಶೋಧ ಮತ್ತು ರಕ್ಷಣೆಗೆ ಮೊದಲ 72 ಗಂಟೆಗಳು ನಿರ್ಣಾಯಕವಾಗಿದ್ದವು. ಈ ಸಮಯ ಮುಗಿದ ನಂತರವೂ ಕಹ್ರಮನ್ಮರಸ್‌ ನಗರದಲ್ಲಿ ಶುಕ್ರವಾರ ಅವಶೇಷಗಳಡಿ ಚಿಕ್ಕಮಕ್ಕಳು ಪವಾಡದಂತೆ ಬದುಕುಳಿದಿರುವುದು ಪತ್ತೆಯಾಯಿತು. ಸಿಬ್ಬಂದಿ ಈ ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿರುವುದನ್ನು ಟರ್ಕಿ ಮಾಧ್ಯಮಗಳು ವರದಿ ಮಾಡಿವೆ.

ಆಗ್ನೇಯ ನಗರ ಅಂಟಾಕ್ಯಾದಲ್ಲಿ ಭಗ್ನಾವಶೇಷಗಳಡಿ 105 ಗಂಟೆಗಳ ಕಾಲ ಸಿಲುಕಿದ್ದ 18 ತಿಂಗಳ ಯೂಸುಫ್ ಹುಸೆಯಿನ್ ಹೆಸರಿನ ಹಸುಳೆಯನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರ ತಂದರು. ಇದಾದ 20 ನಿಮಿಷಗಳಲ್ಲಿ 7 ವರ್ಷದ ಮುಹಮ್ಮದ್ ಹುಸೆಯಿನ್ ಎಂಬ ಬಾಲಕನನ್ನು ರಕ್ಷಿಸಿದರು ಎಂದು ಎನ್‌ಟಿವಿ ಸುದ್ದಿ ವಾಹಿನಿ ವರದಿ ಮಾಡಿದೆ.

ಅಂಟಾಕ್ಯಾ ನಗರದಲ್ಲೇ, 3 ವರ್ಷದ ಮಗು ಜಿಯೆನೆಪ್ ಎಲಾ ಪಾರ್ಲಾಕ್, ಅದಿಯಮನ್ ಪ್ರಾಂತ್ಯದಲ್ಲಿ 60 ವರ್ಷದ ಐಯುಪ್ ಅಕ್ ಹಾಗೂ ಗಾಝಿಯಾನ್‌ಟೆಪ್‌ನಲ್ಲಿ ಇಬ್ಬರು ಮಕ್ಕಳನ್ನು ರಕ್ಷಿಸಲಾಯಿತು.

‘ಅದಿಯಮನ್‌ನಲ್ಲಿ ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ಅರ್ಧ ತಾಸಿನ ಹಿಂದೆ ತಮ್ಮ ತಂಡಗಳು ಸುರಕ್ಷಿತವಾಗಿ ರಕ್ಷಿಸಿವೆ’ ಎಂದು ಜೆಕ್ ಅಗ್ನಿಶಾಮಕ ಸೇವೆ ಶುಕ್ರವಾರ ಟ್ವೀಟ್ ಮಾಡಿದೆ.

ಭಗ್ನಗೊಂಡ ಹತಾಯ್‌ ಪ್ರಾಂತ್ಯದಲ್ಲಿ 90 ಗಂಟೆಗಳ ಕಾಲ ಅವಶೇಷಗಡಿ ಸಿಲುಕಿದ್ದ 10 ದಿನದ ನವಜಾತ ಗಂಡು ಶಿಶು ಮತ್ತು ತಾಯಿಯನ್ನು ಗುರುವಾರ ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಕಾಪಾಡಿದ್ದಾರೆ ಎಂದು ಟರ್ಕಿ ಅಧಿಕಾರಿಗಳು ತಿಳಿಸಿದ್ದಾರೆ.

ಅದಿಯಮನ್‌ನಲ್ಲಿ ಕುಸಿದ ಮನೆಯ ಅವಶೇಷಗಳಡಿ ಸೈಪ್ರಸ್‌ನ ಏಳು ಮಕ್ಕಳ ಶವ, ಇಬ್ಬರು ಶಿಕ್ಷಕರ ಶವವನ್ನು ಹೊರ ತೆಗೆಯಲಾಯಿತು. 19 ಮಕ್ಕಳು ಒಂದೇ ಸ್ಥಳದಲ್ಲಿ ಅಸುನೀಗಿವೆ ಎಂದು ಮಾಧ್ಯಮ ವರದಿ ಹೇಳಿವೆ.

ಸಿರಿಯಾದ ಬಂಡುಕೋರರ ಹಿಡಿತದ ವಾಯುವ್ಯದ ಜಿಂದಾಯಿರಿಸ್‌ ನಲ್ಲಿ ಅವಶೇಷಗಳಡಿ ಐದು ದಿನಗಳಿಂದ ಸಿಲುಕಿದ್ದ 6 ವರ್ಷದ ಮೂಸಾ ಮ್ಹೆಯಿದಿ ಎಂಬ ಬಾಲಕನನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದರು. ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

ಉಭಯ ರಾಷ್ಟ್ರಗಳಲ್ಲಿ ಸೋಮವಾರ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಪರಿಣಾಮ ಸಾವಿರಾರು ಮನೆ
ಗಳು, ಕಟ್ಟಡಗಳು ನೆಲಸಮವಾಗಿವೆ. ಸಾವಿರಾರು ಜನರು ನೆಲೆ ಕಳೆದುಕೊಂಡಿದ್ದಾರೆ. ಸಂತ್ರಸ್ತರು ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಜೀವ ಹಿಂಡುವ ಚಳಿ, ಆಹಾರ– ನೀರು ಹಾಗೂ ಬೆಚ್ಚನೆಯ ಹೊದಿಕೆಗಳ ಕೊರತೆಯು ಸಂತ್ರಸ್ತರ ಸಂಕಷ್ಟವನ್ನು ಉಲ್ಬಣಿಸುವಂತೆ ಮಾಡಿದೆ.

ಕ್ರೀಡಾಕೂಟಕ್ಕಾಗಿ ಟರ್ಕಿಗೆ ಬಂದಿದ್ದ ಮಕ್ಕಳು ಸಾವು

ಸೈಪ್ರಸ್‌ ದ್ವೀಪದಿಂದ ಶಾಲಾ ಕ್ರೀಡಾಕೂಟಕ್ಕಾಗಿ ಟರ್ಕಿಗೆ ಬಂದಿದ್ದ 11ರಿಂದ 14 ವರ್ಷದ 24 ಮಕ್ಕಳು, ಇವರ 10 ಜನರ ಪೋಷಕರು ಹಾಗೂ ನಾಲ್ವರು ಶಿಕ್ಷಕರು ಹಾಗೂ ಒಬ್ಬರು ವಾಲಿಬಾಲ್‌ ಕೋಚ್‌ ಉಳಿದಿದ್ದ ಹೋಟೆಲ್‌ ಸಂಪೂರ್ಣ ಕುಸಿದಿದೆ. ಇವರೆಲ್ಲರೂ ಜೀವಂತ ಸಮಾಧಿಯಾಗಿದ್ದು, ಎಲ್ಲ ಮೃತದೇಹಗಳನ್ನು ಹೊರತೆಗೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT