ಬೀಜಿಂಗ್: ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ತವರಿಗೆ ಹಿಂತಿರುಗಿರುವ ಭಾರತೀಯ ವಿದ್ಯಾರ್ಥಿಗಳು ತಮ್ಮ ಕಾಲೇಜು, ವಿಶ್ವವಿದ್ಯಾಲಯಗಳೊಂದಿಗೆ ಸಂಪರ್ಕದಲ್ಲಿದ್ದು ಅವರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸುತ್ತಾ, ಆನ್‌ಲೈನ್ ಕೋರ್ಸ್‌ಗಳ ಮೂಲಕಶೈಕ್ಷಣಿಕ ಪ್ರಗತಿಯನ್ನು ಉತ್ತಮಗೊಳಿಸಿಕೊಳ್ಳಬೇಕೆಂದು ಚೀನಾ ಸರ್ಕಾರ ತಿಳಿಸಿದೆ.
ಅಂಕಿ ಅಂಶಗಳ ಪ್ರಕಾರ ಸುಮಾರು 23 ಸಾವಿರ ಭಾರತೀಯ ವಿದ್ಯಾರ್ಥಿಗಳು ಚೀನಾದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ ಕಳೆದ ವರ್ಷ 21 ಸಾವಿರ ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್‌ಗಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ.
ಚೀನಾದಲ್ಲಿ ಕೊರೊನಾ ಸೋಂಕು ವ್ಯಾಪಕವಾಗುತ್ತಿದ್ದು, ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ನಿರ್ಬಂಧ ವಿಧಿಸುವ ಸಂದರ್ಭದಲ್ಲಿ, ಅಂದರೆ ಈ ವರ್ಷದ ಜನವರಿ ತಿಂಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಚೀನಾದಿಂದ ಭಾರತಕ್ಕೆ ಮರಳಿದ್ದಾರೆ.
‘ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ವಿದೇಶಿ ವಿದ್ಯಾರ್ಥಿಗಳು ಚೀನಾ ಪ್ರವೇಶಿಸುವಂತಿಲ್ಲ. ಆದರೆ, ನಮ್ಮ ಸರ್ಕಾರ ವಿದೇಶಿ ವಿದ್ಯಾರ್ಥಿಗಳ ಕಾನೂನು ಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿ ರಕ್ಷಣೆಗೆ ಬದ್ಧವಾಗಿದೆ‘ ಎಂದು ಚೀನಾದ ಶಿಕ್ಷಣ ಸಚಿವಾಲಯ, ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದೆ.
ಇದಕ್ಕೂ ಮುನ್ನ, ‘ಅಧಿಕೃತ ಸೂಚನೆ ನೀಡುವವರೆಗೂ ವಿದೇಶಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಾಲೇಜಿಗೆ ಬರುವಂತಿಲ್ಲ‘ ಎಂದು ಸರ್ಕಾರ ಹೊರಡಿಸಿದ್ದ ಪ್ರಕಟಣೆಯಿಂದ ಭಾರತೀಯ ವಿದ್ಯಾರ್ಥಿಗಳಲ್ಲಾಗಿರುವ ಕಳವಳವನ್ನು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು, ಚೀನಾ ಅಧಿಕಾರಿಗಳಿಗೆ ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಶಿಕ್ಷಣ ಸಚಿವಾಲಯ ‘ಚೀನಾದ ಎಲ್ಲ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಳ್ಳಬೇಕು. ಜತೆಗೆ ವಿದ್ಯಾರ್ಥಿಗಳಿಗೆ ಬೇಕಾದ ಮಾಹಿತಿಗಳನ್ನು ನೀಡುವ ಜತೆಗೆ, ಆನ್‌ಲೈನ್ ಕೋರ್ಸ್‌ಗಳ ಮೂಲಕ, ಅವರ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ವಿದ್ಯಾರ್ಥಿಗಳಿಗೆ ಎದುರಾಗುವ ಪ್ರಾಯೋಗಿಕ ತೊಂದರಗಳ ಪರಿಹಾರಕ್ಕೂ ನೆರವಾಗಬೇಕು‘ ಎಂದು ಶೈಕ್ಷಣಿಕ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.