ಶುಕ್ರವಾರ, ಫೆಬ್ರವರಿ 3, 2023
25 °C

ಪ್ರತಿಭಟನೆಗಳ ನಡುವೆಯೂ ಕಠಿಣ ಲಾಕ್‌ಡೌನ್ ಹೇರಿಕೆ ಸಮರ್ಥಿಸಿಕೊಂಡ ಚೀನಾ

ಪಿಟಿಐ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಬೀಜಿಂಗ್‌/ಶಾಂಘೈ: ದೇಶದಲ್ಲಿ ಕೋವಿಡ್‌ ಹೊಸ ಪ್ರಕರಣಗಳು ಉಲ್ಬಣಿಸುತ್ತಿರುವ ನಡುವೆ ಕಠಿಣ ಲಾಕ್‌ಡೌನ್‌ ವಿರೋಧಿಸಿ ನಾಗರಿಕರು ಅಧ್ಯಕ್ಷ ಷಿ ಜಿನ್‌ಪಿಂಗ್‌ ಆಡಳಿತದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗಳು ತಣ್ಣಗಾಗಿಲ್ಲ. ಆದರೂ ನಾಗರಿಕರ ಒತ್ತಡಕ್ಕೆ ಮಣಿಯದ ಸರ್ಕಾರ, ಕಠಿಣ ಲಾಕ್‌ಡೌನ್‌ ಹೇರಿಕೆಯನ್ನು ಸಮರ್ಥಿಸಿಕೊಂಡಿದೆ.

ಕಠಿಣ ಲಾಕ್‌ಡೌನ್‌ ಹೇರಿದ್ದ ಷಿನ್‌ಜಿಯಾಂಗ್ ಪ್ರಾಂತೀಯ ರಾಜಧಾನಿ ಉರುಮ್ಕಿ ನಗರದಲ್ಲಿ ಅ‍ಪಾರ್ಟ್‌ಮೆಂಟ್‌ವೊಂದರಲ್ಲಿ ಕಳೆದ ವಾರ ಬೆಂಕಿ ಕಾಣಿಸಿ, 10 ಜನರು ‌ಮೃತಪಟ್ಟಿದ್ದರು. ಹಾನ್ ಚೀನಿ ಪ್ರಜೆಗಳು ಮತ್ತು ಉಯಿಗರ್‌ ಮುಸ್ಲಿಮರು ಒಟ್ಟಾಗಿ ಚೀನಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. ಉರುಮ್ಕಿ ನಗರದಲ್ಲಿ ವ್ಯಾಪಕವಾಗಿದ್ದ ಪ್ರತಿಭಟನೆ ಬೀಜಿಂಗ್‌, ಶಾಂಘೈ ಹಾಗೂ ಮತ್ತಷ್ಟು ನಗರಗಳಿಗೂ ವಿಸ್ತರಿಸಿದೆ.

ಕಠಿಣ ಲಾಕ್‌ಡೌನ್‌ ತೆರವಿಗೆ ಒತ್ತಾಯಿಸಿ, ಮಾಧ್ಯಮ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳ ವಿರುದ್ಧ ಚೀನಿಯರ ಪ್ರತಿಭಟನೆ ಬೆಂಬಲಿಸಿ ವಿಶ್ವದಾದ್ಯಂತ ಒಂದು ಡಜನ್ ನಗರಗಳಲ್ಲಿ ಒಗ್ಗಟ್ಟಿನ ಪ್ರದರ್ಶನ ನಡೆದಿದೆ. ವಿದ್ಯಾರ್ಥಿಗಳು ಮತ್ತು ವಲಸಿಗರ ನೇತೃತ್ವದಲ್ಲಿ ಲಂಡನ್, ಪ್ಯಾರಿಸ್, ಟೋಕಿಯೊ ಮತ್ತು ಸಿಡ್ನಿ ಸೇರಿ ಯುರೋಪ್, ಏಷ್ಯಾ ಮತ್ತು ಉತ್ತರ ಅಮೆರಿಕದ ನಗರಗಳಲ್ಲಿ ಸಣ್ಣದಾಗಿ ಪ್ರತಿಭಟನೆಗಳು ನಡೆದಿವೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳನ್ನು ಶೂನ್ಯಕ್ಕಿಳಿಸಲು ಹೇರಿರುವ ಕಠಿಣ ಲಾಕ್‌ಡೌನ್‌ಗೆ ವ್ಯಕ್ತವಾಗುತ್ತಿರುವ ಪ್ರತಿಭಟನೆ, ಜನಾಕ್ರೋಶದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ‘ನೀವು ಉಲ್ಲೇಖಿಸುತ್ತಿರುವ ರೀತಿಯಲ್ಲಿ ದೇಶದಲ್ಲಿ ಅಂತಹದ್ದೇನು ಸಂಭವಿಸಿಲ್ಲ. ಸೋಂಕು ನಿರ್ಮೂಲನೆಗೆ ವಸ್ತುಸ್ಥಿತಿ ಆಧರಿಸಿ ದೇಶವು ಪರಿಣಾಮಕಾರಿಯಾದ ನೀತಿ ಅನುಸರಿಸುತ್ತಿದೆ. ಷಿ ಜಿನ್‌ಪಿಂಗ್‌ ಅವರ ನಾಯಕತ್ವ ಮೇಲೆ ಜನತೆ ಬೆಂಬಲವಿಟ್ಟಿರುವ ನಂಬಿಕೆ ಇದೆ. ನಮ್ಮ ಹೋರಾಟ ಏನಿದ್ದರೂ ಕೋವಿಡ್‌ ವಿರುದ್ಧ’ ಎಂದು ಪ್ರತಿಕ್ರಿಯಿಸಿದರು.

ಶಾಂಘೈನಲ್ಲಿ ಪ್ರತಿಭಟನೆ ಸುದ್ದಿ ವರದಿ ಮಾಡುತ್ತಿದ್ದ ಬಿಬಿಸಿಯ ಪತ್ರಕರ್ತ ಎಡ್‌ ಲಾರೆನ್ಸ್‌ ಅವರನ್ನು ಬಂಧಿಸಿ, ಬಿಡುಗಡೆ ಮಾಡಿರುವ ಕ್ರಮವನ್ನು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಹೊ ಲಿಜಿಯನ್‌ ಸಮರ್ಥಿಸಿಕೊಂಡಿದ್ದಾರೆ. ತಮ್ಮ ವರದಿಗಾರನ ಮೇಲೆ ಚೀನಿ ಪೊಲೀಸರು ಹಲ್ಲೆ ನಡೆಸಿ, ಬಂಧಿಸಿದ್ದಾರೆಂದು ಬಿಬಿಸಿ ಆರೋಪಿಸಿದೆ.

ಉರುಮ್ಕಿಯಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಉರುಮ್ಕಿಯಲ್ಲಿ ಉಯಿಗರ್‌ ಮುಸ್ಲಿಮರ ಪ್ರತಿಭಟನೆಗೆ ಹೊರಗಿನ ಶಕ್ತಿಗಳ ಕುಮ್ಮಕ್ಕಿದೆ ಎಂದೂ ಅವರು ದೂರಿದರು. ಪ್ರತಿಭಟನೆಗೆ ಸಂಬಂಧಿಸಿದ ಎಲ್ಲ ಸುದ್ದಿ, ಚಿತ್ರಗಳನ್ನು ಚೀನಾದ ಸಾಮಾಜಿಕ ಮಾಧ್ಯಮಗಳಿಂದ ಸರ್ಕಾರ ತೆರವುಗೊಳಿಸಿದೆ.

ಸೋಮವಾರ ದೇಶದಾದ್ಯಂತ ಲಕ್ಷಣ ರಹಿತ 36,304 ಪ್ರಕರಣಗಳು ಸೇರಿ 40,052 ಹೊಸ ಪ್ರಕರಣಗಳು ದಾಖಲಾಗಿರುವುದಾಗಿ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು