ಬೀಜಿಂಗ್: ಚೀನಾದಲ್ಲಿ ಈ ವಾರ ಒಂದೇ ದಿನದಲ್ಲಿ ಸುಮಾರು 3.7 ಕೋಟಿ ಜನರು ಕೋವಿಡ್ -19 ಸೋಂಕಿಗೆ ಒಳಗಾಗಿರಬಹುದು. ಇದು, ವಿಶ್ವದಲ್ಲೇ ದಿನವೊಂದರಲ್ಲಿ ವರದಿಯಾದ ಅತ್ಯಧಿಕ ಪ್ರಕರಣ ಎಂದು ಆರೋಗ್ಯ ಪ್ರಾಧಿಕಾರ ಅಂದಾಜು ಮಾಡಿದೆ.
ಡಿಸೆಂಬರ್‌ನ ಮೊದಲ 20 ದಿನಗಳಲ್ಲೇ 24.8 ಕೋಟಿ (ಶೇ. 18) ಜನರಿಗೆ ಸೋಂಕು ತಗುಲಿರಬಹುದಾದ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಬುಧವಾರ ನಡೆದ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಆಂತರಿಕ ಸಭೆಯ ನಂತರ ಈ ಮಾಹಿತಿ ಹೊರಬಿದ್ದಿದೆ.
ಚೀನಾದಲ್ಲಿ ಜನವರಿಯಲ್ಲಿ ದಿನವೊಂದರಲ್ಲಿ 40 ಲಕ್ಷ ಪ್ರಕರಣಗಳು ವರದಿಯಾಗಿದ್ದೇ ಚೀನಾದ ಈ ವರೆಗಿನ ದಾಖಲೆಯಾಗಿತ್ತು. ಒಂದು ವೇಳೆ ಈಗ ಸಿಕ್ಕಿರುವ ಮಾಹಿತಿ ನಿಜವೇ ಆಗಿದ್ದರೆ, ಆ ದಾಖಲೆಗಳೆಲ್ಲವೂ ಅಳಿಸಿಹೋಗಿವೆ ಎಂದೇ ಅರ್ಥ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಕೋವಿಡ್ ಪ್ರಕರಣ ಉಲ್ಬಣದ ಹೊರತಾಗಿಯೂ ಚೀನಾದ ಅಧಿಕಾರಿಗಳು ಮತ್ತು ಕಂಪನಿಗಳು ಕೋವಿಡ್-ಪಾಸಿಟಿವ್ ಇರುವವರೂ ಕೆಲಸಕ್ಕೆ ಬರಬಹುದೆಂದು ಹೇಳಿದೆ! ಆರ್ಥಿಕತೆ ವೇಗವನ್ನು ಉತ್ತಮ ಸ್ಥಿತಿಯಲ್ಲೇ ಮುಂದುವರಿಸಿಕೊಂಡು ಹೋಗುವ ಪ್ರಯತ್ನವಾಗಿ ಹೀಗೆ ಮಾಡಲಾಗುತ್ತಿದೆ.
ಪಾಸಿಟೀವ್ ಇದ್ದೂ, ರೋಗಲಕ್ಷಣಗಳನ್ನು ಹೊಂದಿರದವರು ಕೆಲಸಕ್ಕೆ ಹೋಗಬಹುದು ಎಂದು ಝೆಜಿಯಾಂಗ್ ಪ್ರಾಂತ್ಯದ ಅಧಿಕಾರಿಗಳು ಘೋಷಿಸಿದರು. ಚೀನಾದ ಅತಿದೊಡ್ಡ ನಗರಗಳಲ್ಲಿ ಒಂದಾದ ಮತ್ತು ಪ್ರಮುಖ ಉತ್ಪಾದನಾ ಕೇಂದ್ರವಾದ ಚಾಂಗ್‌ಕಿಂಗ್ ಒಂದು ಹೆಜ್ಜೆ ಮುಂದೆ ಹೋಗಿ, ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವವರು ಪರೀಕ್ಷೆಯಿಲ್ಲದೆ ಕಚೇರಿಗೆ ಮರಳಬಹುದು ಎಂದು ಹೇಳಿರುವುದು ಆಶ್ಚರ್ಯ ಮೂಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.