ಬುಧವಾರ, ಜನವರಿ 20, 2021
29 °C

ಬಿಕ್ಕಟ್ಟು ಶಮನಕ್ಕೆ ನಿಷ್ಪಕ್ಷಪಾತ ಪ್ರಯತ್ನ: ಚೀನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌ : ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯಲ್ಲಿ(ಎಲ್‌ಎಸಿ) ಉಂಟಾಗಿರುವ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸಲು ಭಾರತ ಮತ್ತು ಚೀನಾ ಪರಸ್ಪರ ಸಂವಹನ ಮತ್ತು ಸಮನ್ವಯದ ಜೊತೆಗೆ ನಿಷ್ಪಕ್ಷಪಾತ ಪ್ರಯತ್ನ ನಡೆಸುತ್ತಿವೆ ಎಂದು ಚೀನಾ ಸೇನೆ ಗುರುವಾರ ತಿಳಿಸಿದೆ.

ಉಭಯ ದೇಶಗಳ ಸೇನಾ ಕಮಾಂಡರ್‌ಗಳ ಮಟ್ಟದ ಎಂಟನೇ ಸುತ್ತಿನ ಮಾತುಕತೆ ನಡೆದ ಬೆನ್ನಲ್ಲೇ ಚೀನಾ ಈ ಹೇಳಿಕೆ ನೀಡಿದೆ.

‘ಹಲವು ಸುತ್ತಿನ ಮಾತುಕತೆಗಳ ನಂತರ ಚೀನಾ ಮತ್ತು ಭಾರತದ ನಡುವಿನ ಗಡಿ ಪ್ರದೇಶದ ಪರಿಸ್ಥಿತಿ ಒಟ್ಟಾರೆ ಸ್ಥಿರವಾಗಿದೆ’ ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

ಉಭಯ ದೇಶಗಳ ನಾಯಕರ ಒಮ್ಮತದ ನಿರ್ಧಾರಗಳನ್ನು ಕಾರ್ಯಗತಗೊಳಿಸಲು, ಮುಂಚೂಣಿಯ ಸೈನಿಕರಲ್ಲಿ ತಪ್ಪು ತಿಳಿವಳಿಕೆ ಮತ್ತು ತಪ್ಪು ಲೆಕ್ಕಾಚಾರಗಳನ್ನು ದೂರಮಾಡಲು ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

ಸೇನೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾ ಭಾರತದ ಜೊತೆ ಸಂವಹನ ನಡೆಸಲು ಸಿದ್ಧವಾಗಿದೆ. ಭಾರತವೂ ಇದಕ್ಕೆ ಸಹಕರಿಸಲಿದೆ ಎಂಬ ವಿಶ್ವಾಸವಿದೆ. ಪ್ರಾಮಾಣಿಕ ಪ್ರಯತ್ನ ಮತ್ತು ಸಕಾರಾತ್ಮಕ ಪ್ರಕ್ರಿಯೆಗಳಿಂದ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಉಭಯ ಸೇನೆಗಳ ನಡುವಣ ಹಲವು ಸುತ್ತಿನ ಮಾತುಕತೆಯ ಹೊರತಾಗಿಯೂ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ಮುಂದುವರಿದಿತ್ತು. ಪಾಂಗಾಂಗ್‌ ಸರೋವರ ಹಾಗೂ ಇತರ ಭಾಗಗಳಲ್ಲಿ ಚೀನಾ ಸೇನೆಯು ಯಥಾಸ್ಥಿತಿ ಉಲ್ಲಂಘಿಸುತ್ತಲೇ ಇತ್ತು. ಹೀಗಾಗಿ ಭಾರತೀಯ ಸೇನೆಯು ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 50,000 ಸೈನಿಕರನ್ನು ನಿಯೋಜಿಸಿತ್ತು. ಚೀನಾ ಕೂಡ ತನ್ನ ಗಡಿ ಭಾಗದಲ್ಲಿ ಇಷ್ಟೇ ಸಂಖ್ಯೆಯ ಸೈನಿಕರನ್ನು ಜಮಾವಣೆಗೊಳಿಸಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು