ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ ಜೊತೆ ಮುಂದೇನು; ತಲೆ ಕೆಡಿಸಿಕೊಂಡಿವೆ ಚೀನಾ, ಪಾಕ್, ರಷ್ಯಾ: ಬೈಡನ್

Last Updated 8 ಸೆಪ್ಟೆಂಬರ್ 2021, 2:52 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ತಾಲಿಬಾನ್‌ ಜೊತೆಗೆ ಮುಂದಿನ ನಡೆಯ ಬಗ್ಗೆ ಚೀನಾ, ಪಾಕಿಸ್ತಾನ, ರಷ್ಯಾ ಹಾಗೂ ಇರಾನ್‌ ಈಗ ತಲೆ ಕೆಡಿಸಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದರು.

ತಾಲಿಬಾನ್‌ ತನ್ನ ಹೊಸ ಸರ್ಕಾರ ರಚನೆಯ ವಿವರವನ್ನು ಪ್ರಕಟಿಸಿದ ಬೆನ್ನಲ್ಲೇ ಮಂಗಳವಾರ ಬೈಡನ್‌ ಪ್ರತಿಕ್ರಿಯಿಸಿದರು.

'ಚೀನಾಗೆ ತಾಲಿಬಾನ್‌ನೊಂದಿಗೆ ಪ್ರಮುಖ ಸಮಸ್ಯೆ ಎದುರಾಗಿದೆ. ಖಂಡಿತವಾಗಿಯೂ ಅವರು ಅದನ್ನು ಪರಿಹರಿಸಿಕೊಳ್ಳಲು ಪ್ರಯತ್ನ ನಡೆಸಲಿದ್ದಾರೆ. ಪಾಕಿಸ್ತಾನ, ರಷ್ಯಾ ಹಾಗೂ ಇರಾನ್‌ ಸಹ ಅದೇ ಹಾದಿಯಲ್ಲಿವೆ' ಎಂದು ಶ್ವೇತ ಭವನದಲ್ಲಿ ಬೈಡನ್‌ ವರದಿಗಾರರಿಗೆ ಹೇಳಿದರು.

ತಾಲಿಬಾನ್‌ ಹೊಸ ಸರ್ಕಾರದ ಕುರಿತ ಪ್ರಶ್ನೆಗೆ ಉತ್ತರಿಸುತ್ತ ಬೈಡನ್‌, 'ಮುಂದೆ ಮಾಡುವುದೇನು ಎಂದು ಅವರೆಲ್ಲರೂ ಯೋಚಿಸುತ್ತಿದ್ದಾರೆ. ಹಾಗಾಗಿ ಕಾದು ನೋಡೋಣ, ಏನೆಲ್ಲ ಆಗುವುದೆಂದು. ಮುಂದಿನದು ಆಸಕ್ತಿದಾಯಕವಾಗಿರಲಿದೆ' ಎಂದರು.

ವಿಶ್ವಸಂಸ್ಥೆಗೆ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಆನ್‌ಲೈನ್‌ ಅಭಿಯಾನ ಆರಂಭಿಸಿದ್ದು, ಆಫ್ಗಾನಿಸ್ತಾನದ ತಾಲಿಬಾನ್‌ ಸರ್ಕಾರವನ್ನು ಮಾನ್ಯ ಮಾಡದಂತೆ ಅಮೆರಿಕದ ಸರ್ಕಾರವನ್ನು ಆಗ್ರಹಿಸಿದ್ದಾರೆ.

'ಆಫ್ಗಾನಿಸ್ತಾನದ ನೂತನ ಗೃಹ ಸಚಿವ ಒಬ್ಬ ಭಯೋತ್ಪಾದಕನಾಗಿದ್ದಾನೆ. ಆತ ಎಫ್‌ಬಿಐಗೆ ಬೇಕಾಗಿರುವ ಉಗ್ರರ ಪಟ್ಟಿಯಲ್ಲಿದ್ದಾನೆ' ಎಂದು ನಿಕ್ಕಿ ಟ್ವೀಟಿಸಿದ್ದಾರೆ.

ವಿಶ್ವ ಸಂಸ್ಥೆಯು ನಿಷೇಧ ಹೇರಿರುವ ಮುಲ್ಲಾ ಮೊಹಮ್ಮದ್‌ ಹಸನ್‌ ಅಕುಂದ್‌ ಅವರನ್ನು ಅಫ್ಗಾನಿಸ್ತಾನದ ಹೊಸ ಸರ್ಕಾರದ ಮುಖ್ಯಸ್ಥ ಎಂದು ತಾಲಿಬಾನ್‌ ಮಂಗಳವಾರ ಘೋಷಿಸಿದೆ. ಭಯೋತ್ಪಾದನೆಗೆ ಕುಖ್ಯಾತವಾದ ಹಖ್ಖಾನಿ ಗುಂಪಿನ ನಾಯಕ ಸಿರಾಜುದ್ದೀನ್‌ ಹಖ್ಖಾನಿಯು ಗೃಹ ಸಚಿವರಾಗಲಿದ್ದಾರೆ. ಈ ವ್ಯಕ್ತಿಯು ತಾಲಿಬಾನ್‌ನ ಉಪ ನಾಯಕನೂ ಹೌದು. ಹಖ್ಖಾನಿಯ ಬಂಧನಕ್ಕೆ ನೆರವಾಗುವ ಮಾಹಿತಿ ಕೊಡುವವರಿಗೆ ಭಾರಿ ಮೊತ್ತದ ಬಹುಮಾನವನ್ನು ಅಮೆರಿಕದ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT