ಶುಕ್ರವಾರ, ಜನವರಿ 22, 2021
21 °C

Covid-19 World Updates: ವಿಶ್ವದಾದ್ಯಂತ ಏರುತ್ತಲೇ ಇರುವ ಕೋವಿಡ್ ಪ್ರಕರಣಗಳು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಒಟ್ಟಾವ: ಕೆನಡಾದ ಕೋವಿಡ್-19 ಪ್ರಕರಣಗಳು ಭಾನುವಾರ ಮಧ್ಯಾಹ್ನದ ವೇಳೆಗೆ 6 ಲಕ್ಷಕ್ಕೆ ಏರಿಕೆಯಾಗಿದ್ದು, ಒಟ್ಟು ಪ್ರಕರಣಗಳು 6,01,653 ರಷ್ಟಾಗಿದೆ. ಇದರಲ್ಲಿ 15,865 ಸಾವುಗಳು ಸೇರಿವೆ ಎಂದು ಸಿಟಿವಿ ವರದಿ ಮಾಡಿದೆ.

ಕೆನಡಾದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಾಂತ್ಯವಾದ ಒಂಟಾರಿಯೊದಲ್ಲಿ 2,964 ಹೊಸ ಪ್ರಕರಣಗಳು ಮತ್ತು ಹೆಚ್ಚುವರಿಯಾಗಿ 25 ಜನರು ಸಾವಿಗೀಡಾಗಿದ್ದಾರೆ.

ಕಳೆದ ವಾರದಲ್ಲಿ ಪ್ರತಿ ದಿನಕ್ಕೆ ಸರಾಸರಿ 2,792 ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದವು ಮತ್ತು ಒಂಟಾರಿಯೊದಲ್ಲಿ ಶನಿವಾರ 3,363 ಪ್ರಕರಣಗಳೊಂದಿಗೆ ಒಂದೇ ದಿನದಲ್ಲಿ ದಾಖಲೆಯ ಏರಿಕೆ ಕಂಡಿದೆ.
ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಒಂಟಾರಿಯೊದಲ್ಲಿನ ಒಟ್ಟು ಪ್ರಕರಣಗಳು 1,90,962ಕ್ಕೆ ತಲುಪಿದೆ.

ಒಂಟಾರಿಯೊ ಸರ್ಕಾರವು ಪೋಷಕರು ಮತ್ತು ಪಾಲಕರಿಗೆ ಭಾನುವಾರ ಬರೆದ ಪತ್ರವೊಂದರಲ್ಲಿ, ಆ ಪ್ರಾಂತ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಜನವರಿ ಮೊದಲ ವಾರದಲ್ಲಿ ಆನ್‌ಲೈನ್ ಮೂಲಕವೇ ಕಲಿಯುತ್ತಾರೆ, ಆದರೆ ಜನವರಿ 11ರಂದು ಶಾಲೆಗೆ ಮರಳುತ್ತಾರೆ ಎಂದು ಹೇಳಿದೆ.

ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನಸಂಖ್ಯೆಯನ್ನು ಹೊಂದಿರುವ ಮತ್ತೊಂದು ಪ್ರಾಂತ್ಯವಾದ ಕ್ಯುಬೆಕ್‌ನಲ್ಲಿ ತನ್ನ ಹೊಸ ವರ್ಷದ ಕೋವಿಡ್ ಪ್ರಕರಣಗಳ ವರದಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ಡಿಸೆಂಬರ್ 31 ರಿಂದ 7,663 ಹೊಸ ಪ್ರಕರಣಗಳು ಮತ್ತು 121 ಜನರು ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿಸಿದೆ.

ಇದನ್ನೂ ಓದಿ: 

ಅರ್ಜೆಂಟೀನಾದಲ್ಲಿ 5,884 ಹೊಸ ಪ್ರಕರಣ

ಕಳೆದ 24 ಗಂಟೆಗಳಲ್ಲಿ ಅರ್ಜೆಂಟೀನಾದಲ್ಲಿ ಹೊಸದಾಗಿ 5,884 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 107 ಜನರು ಸಾವಿಗೀಡಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 16,40,718ಕ್ಕೆ ಏರಿಕೆಯಾಗಿರುವುದಾಗಿ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. ಈವರೆಗೆ 43,482 ಜನರು ಸಾವಿಗೀಡಾಗಿದ್ದು, 3,433 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರ್ಜೆಂಟೀನಾ ಸರ್ಕಾರವು ಜನವರಿ 31ರವರೆಗೆ ಕಡ್ಡಾಯ ಅಂತರ ಪಾಲನೆ ನಿಯಮವನ್ನು ವಿಸ್ತರಿಸಿದೆ.

ಬ್ರೆಜಿಲ್‌ನಲ್ಲಿ 293 ಜನ ಸಾವು

ದೇಶದಾದ್ಯಂತ ಹೊಸದಾಗಿ 293 ಜನರು ಸಾವಿಗೀಡಾಗುವುದರೊಂದಿಗೆ ಒಟ್ಟಾರೆ ಮೃತರ ಸಂಖ್ಯೆಯು 1,96,018ಕ್ಕೆ ಏರಿರುವುದಾಗಿ ಬ್ರೆಜಿಲ್ ಆರೋಗ್ಯ ಸಚಿವಾಲಯವು ಭಾನುವಾರ ತಿಳಿಸಿದೆ.

ಹೊಸದಾಗಿ 17,341 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆಯು 77,33,746ಕ್ಕೆ ತಲುಪಿದೆ. ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಸಾವೊ ಪೊಲೊದಲ್ಲಿ 46,845 ಜನರು ಮೃತಪಟ್ಟಿರುವುದರೊಂದಿಗೆ ಒಟ್ಟಾರೆ 14,71,422 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೊರೊನಾ ವೈರಸ್ ಸೋಂಕಿಗೆ ಬಲಿಯಾದವರ ಪಟ್ಟಿಯಲ್ಲಿ ಅಮೆರಿಕ ಮೊದಲನೇ ಸ್ಥಾನದಲ್ಲಿದ್ದರೆ, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಒಟ್ಟು ಪ್ರಕರಣಗಳ ಪೈಕಿ ಅಮೆರಿಕ ಮತ್ತು ಭಾರತದ ನಂತರದ ಸ್ಥಾನದಲ್ಲಿದೆ.

ಕೊಲಂಬಿಯಾದಲ್ಲಿ 9,412 ಹೊಸ ಪ್ರಕರಣ

ಕಳೆದ 24 ಗಂಟೆಗಳಲ್ಲಿ ಕೊಲಂಬಿಯಾದಲ್ಲಿ 9,412 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಸೋಂಕಿತರ ಸಂಖ್ಯೆ 16,75,820ಕ್ಕೆ ಏರಿದೆ. 200ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದು, ಒಟ್ಟಾರೆ 43,965 ಜನರು ಈವರೆಗೆ ಮೃತಪಟ್ಟಿದ್ದಾರೆ. 15,42,353 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ವಿಶ್ವದಾದ್ಯಂತ 8.55 ಕೋಟಿಗೂ ಅಧಿಕ ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, 18.50 ಲಕ್ಷಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ 6.04 ಕೋಟಿ ಜನರು ಗುಣಮುಖರಾಗಿದ್ದರೆ, 2.32 ಕೋಟಿ ಸಕ್ರಿಯ ಪ್ರಕರಣಗಳಿವೆ ಮತ್ತು 1,06,430 ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ವರ್ಲ್ಡೋಮೀಟರ್ ವರದಿ ಮಾಡಿದೆ.

ಇನ್ನುಳಿದಂತೆ ಅಮೆರಿಕದಲ್ಲಿ 2.11 ಕೋಟಿಗೂ ಅಧಿಕ, ಭಾರತದಲ್ಲಿ 1.03 (1,03,41,291) ಕೋಟಿ, ರಷ್ಯಾದಲ್ಲಿ 32. 36 ಲಕ್ಷ, 26.55 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು