ಶನಿವಾರ, ಜನವರಿ 16, 2021
24 °C

ಕೋವಿಡ್-19 ಲಸಿಕೆ ಸುಳ್ಳು ಮಾಹಿತಿಗೆ ಆಕ್ಷೇಪ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಆಸ್ಟ್ರಾಜೆನೆಕಾ ಕಂಪನಿಯು ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆಯ ಪರಿಣಾಮದ ಬಗ್ಗೆ ನೀಡಿದ್ದ ಮಾಹಿತಿ ತಪ್ಪಾಗಿದೆ ಎಂಬ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ಕಂಪನಿಯು ಪರಿಷ್ಕೃತ ಮಾಹಿತಿಯನ್ನು ಬಹಿರಂಗಪಡಿಸಿದ ನಂತರ ವ್ಯಾಪಕ ಚರ್ಚೆ ನಡೆಯುತ್ತಿದೆ. ಕಂಪನಿ ನಡೆದುಕೊಂಡ ರೀತಿಯ ಬಗ್ಗೆ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ನಾವು ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯ ಅರ್ಧ ಡೋಸ್  ಶೇ 90ರಷ್ಟು ಪರಿಣಾಮಕಾರಿ, 2 ಪೂರ್ಣ ಡೋಸ್‌ ಶೇ 70ರಷ್ಟು ಪರಿಣಾಮಕಾರಿ’ ಎಂದು ಕಂಪನಿಯು ಮಾಧ್ಯಮ ಪ್ರಕಟಣೆಯಲ್ಲಿ ಸೋಮವಾರ ತಿಳಿಸಿತ್ತು. ಆದರೆ ಬುಧವಾರ ಕಂಪನಿಯ ಅಧಿಕಾರಿಯೊಬ್ಬರು, ‘1 ಪೂರ್ಣ ಡೋಸ್‌ ನೀಡಿದ 28 ದಿನಗಳ ನಂತರ ಅರ್ಧ ಡೋಸ್‌ ನೀಡಲಾಗಿತ್ತು. ಒಟ್ಟು ಒಂದೂವರೆ ಡೋಸ್‌ ಪಡೆದವರಲ್ಲಿ ಲಸಿಕೆಯ ಪರಿಣಾಮವು ಶೇ 90ರಷ್ಟು ಇತ್ತು’ ಎಂದು ಹೇಳಿದ್ದರು.

ಕಂಪನಿ ಮೊದಲು ನೀಡಿದ್ದ ಮಾಹಿತಿ ಪ್ರಕಾರ, ಅರ್ಧ ಡೋಸ್‌ನಷ್ಟು ಲಸಿಕೆಯು ಶೇ 90ರಷ್ಟು ಪರಿಣಾಮಕಾರಿಯಾಗಿತ್ತು. ಆದರೆ ಈಗ ಒಂದೂವರೆ ಡೋಸ್‌ನಷ್ಟು ಲಸಿಕೆ ಪಡೆದಾಗ ಮಾತ್ರ ಶೇ 90ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ.

ಕಂಪನಿಯು ಬ್ರಿಟನ್ ಮತ್ತು ಬ್ರೆಜಿಲ್‌ನಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಿತ್ತು. ಎರಡೂ ದೇಶಗಳಲ್ಲಿ ನಡೆಸಿದ ಟ್ರಯಲ್‌ನ ವಿಧಾನ ಬೇರೆ-ಬೇರೆಯಾಗಿತ್ತು. ಆದರೆ ಎರಡೂ ಟ್ರಯಲ್‌ಗಳ ಫಲಿತಾಂಶಗಳನ್ನು ಸಂಯೋಜಿಸಿ, ಒಂದೇ ಫಲಿತಾಂಶವನ್ನು ನೀಡಲಾಗಿದೆ. ಇದಕ್ಕೂ ಆಕ್ಷೇಪ ವ್ಯಕ್ತವಾಗಿದೆ.

‘ಲಸಿಕೆಯ ಮನುಷ್ಯನ ಮೇಲಿನ ಪ್ರಯೋಗದ ಎಲ್ಲಾ ನಿಯಮಗಳನ್ನು ಕಂಪನಿ ಗಾಳಿಗೆ ತೂರಿದೆ. ಭಿನ್ನ ಪ್ರಮಾಣದ ಡೋಸ್‌ಗಳನ್ನು ನೀಡಿ ಪ್ರಯೋಗ ನಡೆಸುವಾಗ ಅನುಸರಿಸುವ ನಿಯಮಗಳನ್ನು ಕಡೆಗಣಿಸಲಾಗಿದೆ’ ಎಂದು ತಜ್ಞರು ಹೇಳಿದ್ದಾರೆ.

‘ಪ್ರಯೋಗದ ಫಲಿತಾಂಶವನ್ನು ತಜ್ಞರ ಸಮಿತಿಯ ಪರಿಶೀಲನೆಯ ನಂತರ, ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟಿಸಬೇಕು. ಆದರೆ ಆಸ್ಟ್ರಾಜೆನೆಕಾಕಂಪನಿಯು ಫಲಿತಾಂಶದ ವರದಿಯನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸಿದೆ. ತಜ್ಞರ ಸಮಿತಿಯ ಪರಿಶೀಲನೆ ಇಲ್ಲದೆಯೇ ಫಲಿತಾಂಶ ಪ್ರಕಟಿಸಲಾಗಿದೆ’ ಎಂದು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಮನುಷ್ಯನ ಮೇಲಿನ ಪ್ರಯೋಗವು‌ ನಿಯಮಾನುಸಾರವಾಗಿ ನಡೆದಿಲ್ಲ. ಹೀಗಿದ್ದಾಗ, ಲಸಿಕೆ ಪರಿಣಾಮಕಾರಿ ಎಂಬುದನ್ನು ಹೇಗೆ ನಂಬುವುದು. ಲಸಿಕೆಯನ್ನು ಬಳಸುವುದಾದರೂ ಹೇಗೆ’ ಎಂದು ತಜ್ಞರು ಪ್ರಶ್ನಿಸಿದ್ದಾರೆ.

ಲಸಿಕೆ ಡೋಸ್‌ ಮಾಹಿತಿಯಲ್ಲಿ ತಪ್ಪಾಗಿದೆ. ಆದರೆ ಲಸಿಕೆ ಪರಿಣಾಮಕಾರಿ ಎಂಬುದು ಸಾಬೀತಾಗಿದೆಯಲ್ಲ. ಇದರಿಂದ ಒಳ್ಳೆಯದೇ ಆಗಿದೆ. ಮಾಹಿತಿ ನೀಡುವಲ್ಲಿ ಆಗಿರುವ ಲೋಪವು ಉದ್ದೇಶಪೂರ್ವಕವೇ ಅಥವಾ ಆಕಸ್ಮಿಕವೇ ಎಂಬುದು ಮುಖ್ಯವಲ್ಲ ಎಂದು ಆಸ್ಟ್ರಾಜೆನೆಕಾ ಕಂಪನಿ ಹೇಳಿದೆ.

*

ಆಸ್ಟ್ರಾಜೆನೆಕಾ ಕಂಪನಿಯ ಕೋವಿಡ್‌ ಲಸಿಕೆಯ ಸಫಲತೆಯ ಬಗ್ಗೆ ವಿಶ್ವಾಸ ಮೂಡಿತ್ತು. ಈಗ ಲಸಿಕೆಯ ವಿಶ್ವಾಸಾರ್ಹತೆ ಕುಡಿಮೆಯಾಗಿದೆ.
-ಫ್ಲಾರಿಡಾ ವಿಶ್ವವಿದ್ಯಾಲಯದ ವೈರಾಣು ವಿಜ್ಞಾನ ವಿಭಾಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು