ಗುರುವಾರ , ಫೆಬ್ರವರಿ 25, 2021
28 °C
ಅಮೆರಿಕದಲ್ಲಿ 2 ಲಕ್ಷ ಹೊಸ ಪ್ರಕರಣ

Covid-19 World Update: ನಾರ್ವೆಯಲ್ಲಿ ಫೈಜರ್‌ ಲಸಿಕೆ ಪಡೆದ 29 ವೃದ್ಧರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಪ್ರಪಂಚದಾದ್ಯಂತ ಇದುವರೆಗೆ ಒಟ್ಟು 9.49 ಕೋಟಿ ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 6.77 ಕೋಟಿ ಸೋಂಕಿತರು ಗುಣಮುಖರಾಗಿದ್ದು, 20.30 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವರ್ಲ್ಡೊಮೀಟರ್ ವೆಬ್‌ಸೈಟ್‌ ವರದಿ ಮಾಡಿದೆ.

ವಿಶ್ವದಾದ್ಯಂತ ಶನಿವಾರ ಹೊಸದಾಗಿ 6.41 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು, 12,908 ಜನರು ಮೃತಪಟ್ಟಿದ್ದಾರೆ. ಇದೇ ವೇಳೆ 4.29 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟಾರೆ 2.51 ಕೋಟಿಗೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 1.11 ಲಕ್ಷ ಜನರ ಸ್ಥಿತಿ ಗಂಭೀರವಾಗಿದೆ.

ಅಮೆರಿಕದಲ್ಲಿ 2 ಲಕ್ಷ ಹೊಸ ಪ್ರಕರಣ
ಅತಿಹೆಚ್ಚು (2.43 ಕೋಟಿ) ಸೋಂಕು ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 2.02 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 3,337 ಮಂದಿ ಮೃತಪಟ್ಟಿದ್ದು, 1.14 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಈ ದೇಶದಲ್ಲಿ ಇದುವರೆಗೆ ಒಟ್ಟು 4.05 ಲಕ್ಷ ಸೋಂಕಿತರು ಮೃತಪಟ್ಟಿದ್ದಾರೆ. 1.05 ಕೋಟಿ ಸೋಂಕು ಪ್ರಕರಣಗಳು ವರದಿಯಾಗಿರುವ ಭಾರತದಲ್ಲಿ 1.01 ಕೋಟಿ ಸೋಂಕಿತರು ಗುಣಮುಖರಾಗಿದ್ದು, 1.52 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಇನ್ನೂ 2.12 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ.

ಉಳಿದಂತೆ ಸೋಂಕು ಪ್ರಕರಣಗಳ ಸಂಖ್ಯೆ ಬ್ರೆಜಿಲ್‌ನಲ್ಲಿ 84.56 ಲಕ್ಷ, ರಷ್ಯಾದಲ್ಲಿ 35.44 ಲಕ್ಷ, ಇಂಗ್ಲೆಂಡ್‌ನಲ್ಲಿ 33.57 ಲಕ್ಷ, ಫ್ರಾನ್ಸ್‌ನಲ್ಲಿ 28.94 ಲಕ್ಷ ಪ್ರಕರಣಗಳು ದಾಖಲಾಗಿವೆ.

ನಾರ್ವೆ: ವೃದ್ಧರ ಸಾವಿನ ಸಂಖ್ಯೆ 29ಕ್ಕೆ ಏರಿಕೆ
ಓಸ್ಲೋ (ನಾರ್ವೆ): ನಾರ್ವೆಯಲ್ಲಿ ಫೈಜರ್‌/ಬಯೋಎನ್‌ಟೆಕ್ ಕೋವಿಡ್‌–19 ಲಸಿಕೆ ಹಾಕಿಸಿಕೊಂಡ ಬಳಿಕ ಮೃತಪಟ್ಟ ವೃದ್ಧರ ಸಂಖ್ಯೆ ಇದೀಗ 29ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ನಾರ್ವೆಯಲ್ಲಿ ಫೈಜರ್‌/ಬಯೋಎನ್‌ಟೆಕ್‌ ಲಸಿಕೆ ಮಾತ್ರವೇ ಶುಕ್ರವಾರದ ವರೆಗೆ ಲಭ್ಯವಿತ್ತು ಮತ್ತು ‘ಎಲ್ಲ ಸಾವುಗಳೊಂದಿಗೆ ಈ ಲಸಿಕೆ ಸಂಬಂಧ ಹೊಂದಿದೆ’ ಎಂದು ನಾರ್ವೆಯ ಮೆಡಿಸಿನ್ಸ್ ಏಜೆನ್ಸಿ ಪ್ರತಿಕ್ರಿಯಿಸಿದೆ.

ವೃದ್ಧರ ಸಾವಿನ ಹಿನ್ನೆಲೆಯಲ್ಲಿ ಜನರಿಗೆ ಲಸಿಕೆ ನೀಡುವ ವಿಚಾರದಲ್ಲಿ ವೈದ್ಯರು ತೀವ್ರ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಅಸ್ಟ್ರಾಜೆನೆಕಾ ಲಸಿಕೆ ತುರ್ತು ಬಳಕೆಗೆ ಪಾಕಿಸ್ತಾನ ಅನುಮತಿ
ಇಸ್ಲಾಮಾಬಾದ್‌: ಕೋವಿಡ್–19 ನಿಯಂತ್ರಣದ ಸಲುವಾಗಿ ಅಸ್ಟ್ರಾಜೆನೆಕಾ ಲಸಿಕೆಯ ತುರ್ತು ಬಳಕೆಗೆ ಪಾಕಿಸ್ತಾನ ಆರೋಗ್ಯ ಸಚಿವಾಲಯ ಶನಿವಾರ ಅನುಮತಿ ನೀಡಿದೆ. ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವುದನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.

‘ಪಾಕಿಸ್ತಾನ ಔಷಧ ನಿಯಂತ್ರಣ ಪ್ರಾಧಿಕಾರ ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿಸಿದೆ’ ಎಂದು ಆರೋಗ್ಯ ಸಚಿವ ಫೈಸಲ್‌ ಸುಲ್ತಾನ್‌ ತಿಳಿಸಿದ್ದಾರೆ.

ವರ್ಲ್ಡೋಮೀಟರ್‌ ಮಾಹಿತಿ ಪ್ರಕಾರ ಪಾಕಿಸ್ತಾನದಲ್ಲಿ ಇದುವರೆಗೆ ಒಟ್ಟು 5,16,770 ಸೋಂಕು ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 10,908 ಮಂದಿ ಮೃತಪಟ್ಟಿದ್ದು, 4,72,099 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 33 ಸಾವಿರ ಸಕ್ರಿಯ ಪ್ರಕರಣಗಳು ಇವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು