ಶನಿವಾರ, ಮೇ 28, 2022
22 °C

ಬೀಜಿಂಗ್‌ನಲ್ಲಿ ಕೋವಿಡ್ ಲಾಕ್‌ಡೌನ್‌ ಭೀತಿ; ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಚೀನಾದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ರಾಜಧಾನಿ ಬೀಜಿಂಗ್‌ನಲ್ಲಿ ಲಾಕ್‌ಡೌನ್‌ ಭೀತಿ ಎದುರಾಗಿದೆ. ಆತಂಕಗೊಂಡ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಗುರುವಾರ ಅಂಗಡಿ, ಸೂಪರ್‌ಮಾರ್ಟ್‌ಗಳಲ್ಲಿ ಸಾಲುಗಟ್ಟಿ ನಿಂತರು. ಶುಕ್ರವಾರದಿಂದ ಮನೆಗಳಿಗೆ ವಸ್ತುಗಳ ಡೆಲಿವರಿ ಸೇವೆಯನ್ನು ನಿರ್ಬಂಧಿಸುವ ಬಗ್ಗೆ ವದಂತಿ ಹರಿದಾಡಿದೆ.

ಬೀಜಿಂಗ್‌ನಲ್ಲಿ ಮೂರು ದಿನಗಳ ಕಠಿಣ ಲಾಕ್‌ಡೌನ್‌ ವಿಧಿಸುವ ಬಗ್ಗೆ ಗಾಳಿ ಸುದ್ದಿ ಹರಡಿದ ಬೆನ್ನಲ್ಲೇ ಜನರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತರು. ಲಾಕ್‌ಡೌನ್‌ ವೇಳೆ ಆಹಾರ, ಅಗತ್ಯ ವಸ್ತುಗಳ ಡೆಲಿವರಿ ಸೇವೆಗಳಿಗೂ ನಿರ್ಬಂಧ ಇರುವುದು ಹಾಗೂ ಕೋವಿಡ್‌–19 ಪರೀಕ್ಷೆಗಾಗಿ ಮಾತ್ರವೇ ಮನೆಯಿಂದ ಹೊರಬರಬಹುದು ಎಂಬ ವದಂತಿ ಹಬ್ಬಿದೆ.

ಸಂಜೆ ವೇಳೆಗಾಗಲೇ ಬಹುತೇಕ ಅಂಗಡಿಗಳು ಹಾಗೂ ತರಕಾರಿ ಮಾರುಕಟ್ಟೆಗಳಲ್ಲಿ ಸಂಗ್ರಹ ಪೂರ್ಣ ಖಾಲಿಯಾಗಿತ್ತು. ಆದರೆ, ಬೀಜಿಂಗ್‌ ಸರ್ಕಾರದ ವಕ್ತಾರರು ಲಾಕ್‌ಡೌನ್‌ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ನಗರದ 2.2 ಕೋಟಿ ಜನರಿಗೆ ಆಹಾರ ಪೂರೈಕೆ ಹಾಗೂ ವಸ್ತುಗಳ ಡೆಲಿವರಿಗಳಿಗೆ ಅಡ್ಡಿಯಾಗುವುದಿಲ್ಲ ಎಂದಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಏಪ್ರಿಲ್‌ನಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆ 1,000ಕ್ಕಿಂತಲೂ ಕಡಿಮೆ ಮಟ್ಟದಲ್ಲಿದೆ. ಆದರೂ ಶಾಂಘೈನಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್‌ನಂತೆ ಬೀಜಿಂಗ್‌ನಲ್ಲೂ ನಿರ್ಬಂಧ ಹೇರುವ ಬಗ್ಗೆ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮುಂದಿನ ಮೂರು ದಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುಂತೆ ಸರ್ಕಾರವು ಸೂಚಿಸಿದೆ.

ಇದನ್ನೂ ಓದಿ–

ನಗರದ ಹಲವು ಭಾಗಗಳಲ್ಲಿ ಟ್ಯಾಕ್ಸಿ ಸೇವೆ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ ಕೋವಿಡ್‌–19 ನಿರ್ಬಂಧಗಳನ್ನು ಕಠಿಣಗೊಳಿಸಲಾಗಿದೆ. ಕೋವಿಡ್‌ ಪ್ರಕರಣ ಹೆಚ್ಚಿರುವ ಹಲವು ಅಪಾರ್ಟ್‌ಮೆಂಟ್‌ ಸಮ್ಮುಚ್ಚಯಗಳನ್ನು ಸೀಲ್‌ ಮಾಡಲಾಗಿದೆ.

ಸಾಮೂಹಿಕವಾಗಿ ಮೂರು ಸುತ್ತು ಕೋವಿಡ್‌ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ–

ಶಾಂಘೈನಲ್ಲಿ ಬುಧವಾರ ಕೋವಿಡ್‌ ದೃಢಪಟ್ಟ 1,305 ಪ್ರಕರಣಗಳು ದಾಖಲಾಗಿವೆ. ಹಾಗೂ ಸೋಂಕಿತರ ಪೈಕಿ 5 ಮಂದಿ ಸಾವಿಗೀಡಾಗಿರುವುದು ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು