ಶನಿವಾರ, ಮಾರ್ಚ್ 25, 2023
26 °C
ಲಸಿಕೆ ನೀಡಿಕೆಗೆ ವೇಗ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಮನವಿ

ನಿರಂತರವಾಗಿ ರೂಪಾಂತರಗೊಳ್ಳುವ ಡೆಲ್ಟಾ ತಳಿ ಅಪಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ/ಜಿನೀವಾ: ವಿಶ್ವದಾದ್ಯಂತ ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ತಳಿಯು ವೇಗವಾಗಿ ಮತ್ತು ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ ಜಗತ್ತು ಅಪಾಯದ ಸನ್ನಿವೇಶವನ್ನು ಎದುರಿಸುವಂತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್‌ ಗೆಬ್ರೇಷಿಯಸ್ ಎಚ್ಚರಿಸಿದ್ದಾರೆ.

ಕಡಿಮೆ ಪ್ರಮಾಣದಲ್ಲಿ ಲಸಿಕೆ ನೀಡಿರುವ ರಾಷ್ಟ್ರಗಳಲ್ಲಿ ಆಸ್ಪತ್ರೆಗಳು ಮತ್ತೆ ಕೋವಿಡ್ ರೋಗಿಗಳಿಂದ ಭರ್ತಿಯಾಗುವ ಭಯಾನಕ ದೃಶ್ಯಗಳು ಸಾಮಾನ್ಯವಾ‌ಗುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡೆಲ್ಟಾ ಸೇರಿದಂತೆ ತೀವ್ರವಾಗಿ ಹರಡುವಂತಹ ರೂಪಾಂತರ ತಳಿಗಳು ಹಲವು ರಾಷ್ಟ್ರಗಳಲ್ಲಿ ವ್ಯಾಪಕವಾಗಲಿವೆ. ಈ ತಳಿಯಿಂದಾಗಿ ಕಾಣಿಸಿಕೊಂಡಿರುವ ಕೋವಿಡ್‌–19 ಪಿಡುಗಿನ ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಈಗ ನಾವಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಯಾವ ದೇಶವೂ ಡೆಲ್ಟಾ ರೂಪಾಂತರ ತಳಿಯ ಕಾಟದಿಂದ ಹೊರಬಂದಿಲ್ಲ. ರೂಪಾಂತರಗೊಳ್ಳುತ್ತ, ವೇಗವಾಗಿ ಹರಡುವ ಈ ತಳಿಯ ವಿರುದ್ಧ ಹೋರಾಡಲು ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವುದು ಅಗತ್ಯ’ ಎಂದರು.

‘ಸೋಂಕಿನ ಪರೀಕ್ಷೆ ಹೆಚ್ಚಿಸಬೇಕು. ಆರಂಭದಲ್ಲೇ ಸೋಂಕು ಪತ್ತೆ ಮಾಡುವುದು, ಸೋಂಕಿತರ ಬಗ್ಗೆ ನಿಗಾವಹಿಸುವುದು, ಸೋಂಕಿತರನ್ನು ಪ್ರತ್ಯೇಕಿಸುವುದು ಮತ್ತು ಚಿಕಿತ್ಸೆ ನೀಡುವುದನ್ನು ನಿರಂತರವಾಗಿ ಮುಂದುವರಿಸುವಂತಹ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಬೇಕು. ವ್ಯಕ್ತಿಗತ ಅಂತರ ಕಾಪಾಡುವುದು, ಜನದಟ್ಟಣೆಯಾಗುವುದನ್ನು ತಪ್ಪಿಸುವುದು. ಒಳಾಂಗಣ ಪ್ರದೇಶವನ್ನು ಗಾಳಿಯಾಡುವಂತೆ ನೋಡಿಕೊಳ್ಳುವುದು – ಇಂಥ ಸಾಮಾಜಿಕ ಕ್ರಮಗಳ ಮೂಲಕ ಡೆಲ್ಟಾ ರೂಪಾಂತರ ತಳಿಯ ಅಪಾಯದಿಂದ ರಕ್ಷಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಈ ವರ್ಷಾಂತ್ಯದೊಳಗೆ ಜಗತ್ತಿನ ಶೇ 70ರಷ್ಟು ಮಂದಿಗೆ ಲಸಿಕೆ ನೀಡಬೇಕಿದೆ. ಈ ಸೆಪ್ಟೆಂಬರ್ ಅಂತ್ಯದೊಳಗೆ ಪ್ರತಿ ರಾಷ್ಟ್ರದಲ್ಲೂ ಶೇ 10ರಷ್ಟು ಮಂದಿಗಾದರೂ ಲಸಿಕೆ ನೀಡುವುದನ್ನು ಪೂರ್ಣಗೊಳಿಸುವಂತೆ ವಿಶ್ವದ ಎಲ್ಲ ರಾಷ್ಟ್ರಗಳ ನಾಯಕರಲ್ಲಿ ಟೆಡ್ರೋಸ್‌ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು