ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಸಿರಿವಂತ ವ್ಯಕ್ತಿಯ ಅಂತರಿಕ್ಷ ಪ್ರಯಾಣ: ತೇಲುವ ಅನುಭವಕ್ಕೆ ಬೆಜೋಸ್ ಸಜ್ಜು

Last Updated 18 ಜುಲೈ 2021, 10:55 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೃತಕ ಗುರುತ್ವ ಬಲದ ಆಧಾರದಲ್ಲಿ ಅಂತರಿಕ್ಷದಲ್ಲಿ ತೇಲುವ ಕಾಲೊನಿಗಳನ್ನು ನಿರ್ಮಿಸಿ, ಅಲ್ಲಿಯೇ ಲಕ್ಷಾಂತರ ಜನರು ನೆಲೆಸುವ ಮತ್ತು ಕಾರ್ಯ ಚಟುವಟಿಕೆಗಳನ್ನು ನಡೆಸುವಂತೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಜೆಫ್‌ ಬೆಜೋಸ್‌ (57) ಸ್ಥಾಪಿಸಿದ ಸಂಸ್ಥೆ ಬ್ಲೂ ಓರಿಜಿನ್‌. ಅದೇ ಸಂಸ್ಥೆಯ ಮೂಲಕ ಬೆಜೋಸ್ ಅಂತರಿಕ್ಷದಲ್ಲಿ ಸಂಚರಿಸಿ ಬರಲು ಈಗ ಸಜ್ಜಾಗಿದ್ದಾರೆ.

ಜಗತ್ತಿನ ಸಿರಿವಂತರು ಶಿಖರಗಳ ಅಗಾಧತೆ, ಸಾಗರ ತಳದ ಸೊಬಗು, ದಂಡಾರಣ್ಯಗಳ ಪ್ರಯಾಣ, ಸಾವಿರಾರು ಅಡಿ ಎತ್ತರಗಳಿಂದ ಜಿಗಿತದಂತಹ ಸಾಹಸಗಳನ್ನು ದಾಟಿ ಅಂತರಿಕ್ಷದತ್ತ ಮುಖ ಮಾಡಿದ್ದಾರೆ. 'ಅಂತರಿಕ್ಷ ಪ್ರವಾಸವನ್ನು' ಉದ್ಯಮವನ್ನಾಗಿ ಮಾಡಿಕೊಳ್ಳಲು ಅದಾಗಲೇ ಹತ್ತಾರು ವರ್ಷಗಳ ಹೂಡಿಕೆ, ಶ್ರಮ ಮತ್ತು ಸಂಶೋಧನೆಗಳನ್ನು ಪೋಷಿಸಿದ್ದಾರೆ. ಬ್ರಿಟಿಷ್ ಕೋಟ್ಯಧಿಪತಿ ರಿಚರ್ಡ್‌ ಬ್ರ್ಯಾನ್ಸನ್‌ ತಮ್ಮದೇ 'ವರ್ಜಿನ್‌ ಗ್ಯಾಲಕ್ಟಿಕ್‌' ಸಂಸ್ಥೆಯ ಮೂಲಕ ಅಂತರಿಕ್ಷ ಮುಟ್ಟಿ ಭೂಮಿಗೆ ಮರಳಿದರು.

ಬೆಜೋಸ್‌ ಅವರ ಬ್ಲೂ ಆರಿಜನ್‌ ಗುರಿಯು ವರ್ಜಿನ್‌ ಗ್ಯಾಲಕ್ಟಿಕ್‌ಗೂ ಹೆಚ್ಚಿನದಾಗಿದೆ. ಮರು ಬಳಕೆ ಮಾಡಬಹುದಾದ ಬ್ಲೂ ಆರಿಜನ್‌ ಬಾಹ್ಯಾಕಾಶ ನೌಕೆ ಸಾಗುವ ಎತ್ತರ ಹಾಗೂ ಭವಿಷ್ಯದ ಯೋಜನೆಗಳು ವರ್ಜಿನ್‌ಗಿಂತಲೂ ಸಾಕಷ್ಟು ಮುಂದಿವೆ. ಜಗತ್ತಿನಲ್ಲೇ ಶ್ರೀಮಂತ ವ್ಯಕ್ತಿ ಬೆಜೋಸ್‌ ಮಂಗಳವಾರ ಗಗನಯಾತ್ರಿಗಳ ಸಾಲಿಗೆ ಸೇರ್ಪಡೆಯಾಗಲು ಅಣಿಯಾಗಿದ್ದಾರೆ.

2000ರಲ್ಲಿ ಸ್ಥಾಪನೆಯಾದ ಬ್ಲೂ ಆರಿಜಿಲ್‌, ಈಗ ಅತ್ಯಂತ ತೂಕದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲ 'ನ್ಯೂ ಗ್ಲೆನ್‌' ರಾಕೆಟ್‌ ಅಭಿವೃದ್ಧಿ ಪಡಿಸುತ್ತಿದೆ, ಹಾಗೇ ಮನುಷ್ಯರನ್ನು ಚಂದ್ರನಲ್ಲಿಗೆ ಹೊತ್ತು ಮರಳಿ ಭೂಮಿಗೆ ಇಳಿಯುವ ನೌಕೆಯನ್ನು ನಾಸಾದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದೆ.

ಇದನ್ನೂ ಓದಿ: ಸ್ಪೇಸ್ ಟೂರಿಸಂ

'ಈಗಾಗಲೇ ಅವರು 15 ಬಾರಿ ಮಾನವ ರಹಿತ 'ನ್ಯೂ ಶೆಫರ್ಡ್' ಅಂತರಿಕ್ಷ ನೌಕೆಯ ಯಶಸ್ವಿ ಹಾರಾಟ ನಡೆಸಿದ್ದಾರೆ. ಮಾನವರನ್ನು ಹೊತ್ತು ಯಾವಾಗ ಹಾರಾಟ ನಡೆಸುತ್ತಾರೆ ಎಂಬುದನ್ನು ಬಹಳಷ್ಟು ಸಮಯದಿಂದ ಎದುರು ನೋಡುತ್ತಿದ್ದೇವೆ' ಎಂದು ಆಸ್ಟ್ರಾಲಿಕ್ಟಿಕಲ್‌ ಸಂಸ್ಥೆಯ ಸಂಸ್ಥಾಪಕಿ ಲಾರಾ ಫಾರ್ಜಿಕ್‌ ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.

ಉತ್ತರ ಅಮೆರಿಕದ ಸೆಂಟ್ರಲ್‌ ಟೈಮ್ ಜೋನ್‌ಗೆ ಅನ್ವಯವಾಗುವಂತೆ ನ್ಯೂ ಶೆಫರ್ಡ್‌ ಅಂತರಿಕ್ಷ ನೌಕೆಯು ಜುಲೈ 20ರಂದು ಬೆಳಿಗ್ಗೆ 8ಕ್ಕೆ ಉಡಾವಣೆಯಾಗಲಿದೆ. ಟೆಕ್ಸಾಸ್‌ ಪಶ್ಚಿಮ ಭಾಗದ ಮರುಭೂಮಿ ಪ್ರದೇಶದಲ್ಲಿರುವ ಲಾಂಚ್‌ ಸೈಟ್‌ ಒನ್‌ನಿಂದ ನ್ಯೂ ಶೆಫರ್ಡ್‌ ಪ್ರಯಾಣ ಆರಂಭಿಸಲಿದೆ. BlueOrigin.com ಸೈಟ್‌ ಮೂಲಕ ಪ್ರಯಾಣದ ದೃಶ್ಯಗಳ ನೇರ ಪ್ರಸಾರ ನಡೆಯಲಿದೆ.

ಬೆಜೋಸ್‌ ಅವರೊಂದಿಗೆ ಹಿರಿಯ ಪೈಲಟ್‌ ವಾಲಿ ಫಂಕ್‌ (82), ಬೆಜೋಸ್‌ ಸೋದರ ಮಾರ್ಕ್‌ ಹಾಗೂ ಖಾಸಗಿ ಪೈಲಟ್‌ ಪರವಾನಗಿ ಹೊಂದಿರುವ ಡಚ್‌ ಮೂಲದ ಹದಿಹರೆಯದ ಓಲಿವರ್‌ ಡೀಮೆನ್‌ (18) ಪ್ರಯಾಣಿಸಲಿದ್ದಾರೆ. ಬ್ಲೂ ಆರಿಜಿನ್‌ ಕಂಪನಿಯು ಅಂತರಿಕ್ಷಕ್ಕೆ ಕೊಂಡೊಯ್ಯಲು ಕರೆದಿದ್ದ 28 ಮಿಲಿಯನ್‌ ಡಾಲರ್‌ ಹರಾಜಿನಲ್ಲಿ ಆಯ್ಕೆಯಾದ ವ್ಯಕ್ತಿಯು (ಕಂಪನಿಯು ಹೆಸರು ಬಹಿರಂಗ ಪಡಿಸಿಲ್ಲ) ಸಮಯದ ಹೊಂದಾಣಿಕೆಯಾಗದ ಕಾರಣಗಳಿಂದ ಈ ಬಾರಿ ಪ್ರಯಾಣಿಸುತ್ತಿಲ್ಲ. ಅವರ ಸ್ಥಾನದಲ್ಲಿ ಓಲಿವರ್‌ಗೆ ಪ್ರಯಾಣಿಸಲು ಅವಕಾಶ ದೊರೆತಿದೆ.

ಭೂಮಿಯ ವಾತಾವರಣ ಮತ್ತು ಅಂತರಿಕ್ಷದ ನಡುವಿನ 'ಕಾರ್ಮನ್‌ ಲೈನ್‌' ವಲಯದಲ್ಲಿ ಗಗನಯಾತ್ರಿಗಳು ಕೆಲವು ನಿಮಿಷಗಳ ವರೆಗೂ ಹಾರಾಟ ನಡೆಸಲಿದ್ದಾರೆ. ಭೂಮಿಯಿಂದ ಸುಮಾರು 100 ಕಿ.ಮೀ. ಎತ್ತರದಲ್ಲಿ ಅಂತರಿಕ್ಷ ನೌಕೆಯು ಹಾರಾಟ ನಡೆಸುವಾಗ ಗಗನಯಾತ್ರಿಗಳು ಹಗುರತನದ (ತೇಲುವ) ಅನುಭವ ಪಡೆಯಲಿದ್ದಾರೆ. ಭೂಮಿಯ ಗೋಳಾಕಾರದ ವಕ್ರತೆಯಯನ್ನು ಅಲ್ಲಿಂದ ಗಮನಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT