ಭಾನುವಾರ, ಜೂನ್ 20, 2021
21 °C
50 ಮಂದಿ ಸಾವು; ನೂರಾರು ಕಟ್ಟಡಗಳು ನೆಲಸಮ

ಇಸ್ರೇಲ್‌–ಪಾಲೆಸ್ಟೈನ್‌ ಸಂಘರ್ಷ ಉಲ್ಬಣ: ಯುದ್ಧದ ಭೀತಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೆಲ್‌ ಅವೀವ್‌: ಮೂರು ದಿನಗಳ ಹಿಂದೆ ಗಾಜಾ ಪಟ್ಟಿಯಲ್ಲಿ ಇಸ್ರೇ‌ಲ್‌ ಹಾಗೂ ಪಾಲೆಸ್ಟೈನ್‌ನ ಹಮಾಸ್‌ ಬಂಡುಕೋರರ ನಡುವೆ ಆರಂಭವಾದ ಸಂಘರ್ಷ ತೀವ್ರಗೊಂಡಿದ್ದು, ಎರಡೂ ಕಡೆ ಸೇರಿ 50 ಜನರು ಮೃತಪಟ್ಟಿದ್ದಾರೆ.

ಉಭಯ ದೇಶಗಳ ನಡುವಿನ ಸಂಘರ್ಷ ಪೂರ್ಣಪ್ರಮಾಣದ ಯುದ್ಧದ ಹಂತ ತಲುಪಿದರೆ ಆಶ್ಚರ್ಯ ಇಲ್ಲ ಎಂದು ತಜ್ಞರು ಬುಧವಾರ ಆತಂಕ ವ್ಯಕ್ತಪಡಿಸಿದ್ದಾರೆ.

ಗಾಜಾ ಪಟ್ಟಿ ಮೇಲೆ ಮಂಗಳವಾರ ಇಸ್ರೇಲ್‌ ಸೇನೆ ನಡೆಸಿದ ದಾಳಿಗೆ ಪ್ರತಿಯಾಗಿ, ಪಾಲೆಸ್ಟೈನ್‌ನ ಹಮಾಸ್‌ ಬಂಡುಕೋರರು 1,000 ಹೆಚ್ಚು ರಾಕೆಟ್‌ಗಳಿಂದ ಇಸ್ರೇಲ್‌ ಮೇಲೆ ದಾಳಿ ನಡೆಸಿದ್ದಾರೆ.

ಇಸ್ರೇಲ್‌ ಸಹ ಗಾಜಾಪಟ್ಟಿಯಲ್ಲಿರುವ ಹಮಾಸ್‌ ಬಂಡುಕೋರರು ಹಾಗೂ ಇತರ ಇಸ್ಲಾಮಿಕ್‌ ಗುಂಪುಗಳಿಗೆ ಸೇರಿದ ಸ್ಥಳಗಳನ್ನು ಗುರಿಯಾಗಿಸಿಕೊಂಡು ನೂರಕ್ಕೂ ಅಧಿಕ ಬಾರಿ ವಾಯುದಾಳಿ ನಡೆಸಿದೆ ಎಂದು ಮೂಲಗಳು ಹೇಳಿವೆ.

ಗಾಜಾ ನಗರಲ್ಲಿರುವ ಕೇಂದ್ರೀಯ ಪೊಲೀಸ್‌ ಪಡೆಯ ಕೇಂದ್ರ ಕಚೇರಿ ಇಸ್ರೇಲ್‌ ನಡೆಸಿದ ರಾಕೆಟ್‌ ದಾಳಿಯಲ್ಲಿ ಧ್ವಂಸಗೊಂಡಿದೆ. ಇತರ ಕಟ್ಟಡಗಳಿಗೆ ಭಾರಿ ಹಾನಿಯಾಗಿದೆ ಎಂದೂ ಮೂಲಗಳು ಹೇಳಿವೆ.

ಜೆರುಸಲೇಂನಲ್ಲಿರುವ ಅಲ್‌–ಅಕ್ಸಾ ಮಸೀದಿಯು ಮುಸ್ಲಿಮರು ಹಾಗೂ ಯಹೂದಿಗಳಿಗೆ ಪವಿತ್ರವಾದ ಸ್ಥಳ. ಈ ಮಸೀದಿಯ ಜಾಗದ ವಿಚಾರವಾಗಿ ಉಭಯ ಗುಂಪುಗಳ ನಡುವಿನ ಜಟಾಪಟಿ, ಈಗ ಸಂಘರ್ಷಕ್ಕೆ ತಿರುಗಿದೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಯಹೂದಿಗಳು ಹಾಗೂ ಅರಬರು ವಾಸಿಸುವ ಲಾಡ್‌ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಪಾಲೆಸ್ಟೈನ್‌ ಬಾವುಟಗಳನ್ನು ಹಿಡಿದು ಪ್ರತಿಭಟನೆಗಿಳಿದಿರುವ ಜನರು, ಕಾರುಗಳು ಹಾಗೂ ಕೆಲವು ಸ್ವತ್ತುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಹೂದಿ ಜನರ ಮೇಲೂ ದಾಳಿ ನಡೆಸಿದ್ದು, ಪರಿಸ್ಥಿತಿ ಬಿಗುವಿನಿಂದ ಕೂಡಿದೆ ಎಂದು ಮೂಲಗಳು ಹೇಳಿವೆ.

ಉಭಯ ದೇಶಗಳ ನಡುವಿನ ಸಂಘರ್ಷ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ನಡೆಸಲು ಮುಂದಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು